»   » ಮಂಗಳೂರಲ್ಲಿ ಬಣ್ಣಬದಲಾಯಿಸಿದ ಸದಾನಂದಗೌಡ

ಮಂಗಳೂರಲ್ಲಿ ಬಣ್ಣಬದಲಾಯಿಸಿದ ಸದಾನಂದಗೌಡ

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಶನಿವಾರ (ಡಿ.15) ಮಂಗಳೂರಿನಲ್ಲಿ ಮತ್ತೊಮ್ಮೆ ಕೋಲ್ಗೇಟ್ ನಗೆ ಬೀರಿದ್ದಾರೆ. ಅಯ್ಯೋ ಸದಾನಂದಗೌಡ ಏನಾದರು ಕೋಲ್ಗೇಟ್ ಜಾಹೀರಾತಿಗೆ ಅಪ್ಪಿತಪ್ಪಿ ಸಹಿ ಹಾಕಿಬಿಟ್ಟರಾ ಏನು ಎಂದು ಗಾಬರಿಯಾಗಬೇಡಿ.

ಅವರು ಕೋಲ್ಗೇಟ್ ಟೂತ್ ಪೇಸ್ಟ್ ಗೂ ಸಹಿಹಾಕಿಲ್ಲ ಗೋಪಾಲ್ ಹಲ್ಲುಪುಡಿಗೂ ಹಾಕಿಲ್ಲ. ಅವರು ಸಹಿ ಹಾಕಿರುವುದು 'ಚೆಲ್ಲಾಪಿಲ್ಲಿ' ಎಂಬ ಕನ್ನಡ ಚಿತ್ರಕ್ಕೆ. ಚಿತ್ರದಲ್ಲಿ ಸದಾನಂದಗೌಡ ಅಭಿನಯಿಸುತ್ತಾರೆ ಎಂಬ ಸುದ್ದಿ ಬಂದ ತಕ್ಷಣ ಅವರು ಅಲ್ಲಗಳೆದಿದ್ದರು.

Sadananda Gowda in Challa Pilli

ತಾವು ಈಗಾಗಲೆ ರಾಜಕಾರಣದಲ್ಲಿದ್ದುಕೊಂಡೇ ಸಾಕಷ್ಟು ಆಕ್ಟಿಂಗ್ ಮಾಡಿದ್ದೇನೆ. ಸಿನಿಮಾದಲ್ಲಿ ಆಕ್ಟಿಂಗ್ ಮಾಡುವ ಯಾವುದೇ ಇರಾದೆ ನನಗಿಲ್ಲ. 'ಚೆಲ್ಲಾಪಿಲ್ಲಿ' ಚಿತ್ರದ ಉದ್ಘಾಟನೆಗೆ ಹೋಗಿದ್ದು ನಿಜ. ಆದರೆ ಆ ಚಿತ್ರದಲ್ಲಿ ತಾವು ಯಾವುದೇ ಪಾತ್ರವನ್ನು ಪೋಷಿಸಿಲ್ಲ ಎಂದಿದ್ದರು 'ಬಹುಶಃ' ಖ್ಯಾತಿಯ ಗೌಡರು. ಈಗ ಪ್ಲೇಟ್ ಬದಲಾಯಿಸಿ ಬಣ್ಣ ಹಚ್ಚಿದ್ದಾರೆ. ಹೋಗ್ಲಿ ಬಿಡಿ ಅಂತೂ ಇಂತೂ ಅವರು ಬೆಳ್ಳಿತೆರೆಗೆ ಬಂದರಲ್ಲ ಅದೇ ದೊಡ್ಡ ವಿಷಯ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಕೆಜೆಪಿ ಹೊಸ ಪಕ್ಷ ಕಟ್ಟಿದ ಮೇಲೆ ಸದಾನಂದಗೌಡರ ಬೆಂಬಲಿಗರು ಚೆಲ್ಲಾಪಿಲ್ಲಿಯಾಗಿ ಚದುರಿಹೋಗಿದ್ದರು. ಆದರೆ ಚದುರಿದ ಚಿತ್ರಗಳಿಗೂ ಈ ಚೆಲ್ಲಾಪಿಲ್ಲಿ ಚಿತ್ರಕ್ಕೂ ಎಳ್ಳಷ್ಟೂ ಸಂಬಂಧವಿರಲ್ಲ.

ತಮ್ಮ ಎಂದಿನ ರಾಜಕೀಯ ಜಂಜಾಟಗಳ ನಡುವೆ ಸ್ವಲ್ಪ ರೀಲೀಪ್ ಆದಂತೆ ಕಂಡ ಸದಾನಂದ ಗೌಡರು, ಮಂಗಳೂರಿನ ಸಿಟಿ ಸೆಂಟ್ರಲ್ ಮಾಲ್ ನಲ್ಲಿ ಬಣ್ಣಹಚ್ಚಿಕೊಂಡು ಕ್ಯಾಮೆರಾ ಮುಂದೆ ಡೈಲಾಗ್ ಹೊಡೆದರು.

ವಿಜಯ ರಾಘವೇಂದ್ರ, ಐಶ್ವರ್ಯಾ ನಾಗ್, ಶೋಭಾರಾಜ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಗೌಡರು ಮಾಜಿ ಸಿಎಂ ಪಾತ್ರವನ್ನು ಪೋಷಿಸಿದ್ದಾರೆ. ನಿರ್ದೇಶಕ ಸಾಯಿಕೃಷ್ಣ ಕುಡ್ಲ ಅವರ ಆಣತಿಯಂತೆ ಅವರು ಅಭಿನಯಿಸಿದರು.

ಶಿನೆಸಿಟಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುದೀಶ್ ಭಂಡಾರಿ, ಸುಕೇಶ್ ಭಂಡಾರಿ ನಿರ್ಮಿಸುತ್ತಿರುವ ಚಿತ್ರವಿದು. ಈ ಚಿತ್ರ ಔಟ್ ಅಂಡ್ ಔಟ್ ಮನರಂಜನಾತ್ಮಕವಾಗಿರುತ್ತದೆ. "Laughter is the best Medicine" ಎಂಬ ಆಂಗ್ಲ ನಾಣ್ಣುಡಿಗೆ ಅನ್ವರ್ಥವಾಗಿ ಈ ಚಿತ್ರ ಇರುತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು. (ಒನ್ಇಂಡಿಯಾ ಕನ್ನಡ)

English summary
Karnataka former Chief Minister DV Sadananda Gowda finally forays into stardom. He acted in Kannada film 'Chella Pilli', plays a former CM role in the film. Sadananda Gowda has given his consent to act in the film starring VijayRaghavendra, Aishwarya Nag, Shobraj in lead.
Please Wait while comments are loading...