For Quick Alerts
  ALLOW NOTIFICATIONS  
  For Daily Alerts

  'ತ್ರಿವಿಕ್ರಮ' ವಿಮರ್ಶೆ: 'ಅಸಹನೆಯ ಕರೆ'ಗೆ ಸಮಾಧಾನಕರ ಉತ್ತರ...

  |

  ಇವರು ಕನ್ನಡದ ಶ್ರೇಷ್ಠ ನಟ, ತಂತ್ರಜ್ಞ, ನಿರ್ಮಾಪಕ, ಕನ್ನಡ ಜನರಿಗೆ 'ಪ್ರೇಮಲೋಕ' ತೋರಿಸಿದ ಕ್ರೇಜಿ ಸ್ಟಾರ್. ನಟ ರವಿಚಂದ್ರನ್ ಸಿನೆಮಾ ಜರ್ನಿ ಬಲ್ಲವರಿಗೆ ಅವರ ಬಗ್ಗೆ ಹೊಸತಾಗಿ ಹೇಳಲು ಏನೂ ಇರುವುದಿಲ್ಲ. ಅಂತಹದೊಂದು ಕ್ರಿಯಾಶೀಲತೆಯ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ರವಿಚಂದ್ರನ್ ಎರಡನೇ ಪುತ್ರನ ಸಿನೆಮಾ ಸೆಟ್ಟೇರಿದಾಗ ಸಹಜವಾದ ಕುತೂಹಲ ಇದ್ದೇ ಇತ್ತು.

  ವಿಶೇಷ ಅಂದರೆ, ನಟನಾಗಿ ಸಿನೆಮಾಗೆ ಕಾಲಿಡಲು ಹೊರಟಿದ್ದ ಕ್ರೇಜಿಸ್ಟಾರ್ ಪುತ್ರ ವಿಕ್ರಂ ರವಿಚಂದ್ರನ್ ಮೊದಲ ಸಿನೆಮಾದ ಕೆಲಸ ಆರಂಭವಾಗಿದ್ದು, ಸುಮಾರು ಮೂರು ವರ್ಷಗಳ ಹಿಂದೆ. ಸಿನೆಮಾ ತಂಡದ ಕರೆಯ ಹಿನ್ನೆಲೆಯಲ್ಲಿ ಚಿತ್ರೀಕರಣದ ಸ್ಥಳಕ್ಕೂ ಒಮ್ಮೆ ಭೇಟಿ ನೀಡಿದ್ದೆ. ಇದೆಲ್ಲಾ ನಡೆದಿದ್ದು, ಕೊರೊನಾ ಮೊದಲು. ಅದಾಗಿ ಸುಮಾರು ಮೂರು ವರ್ಷಗಳ ಅಂತರದಲ್ಲಿ 'ತ್ರಿವಿಕ್ರಮ' ಹೆಸರಿನ ಸಿನೆಮಾ ಮೊನ್ನೆ ಶುಕ್ರವಾರ ತೆರೆ ಕಂಡಿತು. ಸೂಪರ್ ಸ್ಟಾರ್ ರವಿಚಂದ್ರನ್ ಕುಟುಂಬದ ಕುಡಿಯೊಂದು ಕನ್ನಡ ಸಿನೆಮಾ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆ ಇಡಲು ಈ ಸಿನೆಮಾ ಸಹಾಯಕವಾಗಬಹುದಾ ಎಂಬ ಪ್ರಶ್ನೆ ಇಟ್ಟುಕೊಂಡೇ ಚಿತ್ರದ ರಿಪೋರ್ಟ್‌ಗಳನ್ನು ಗಮನಿಸಲು ಆರಂಭಿಸಿದ್ದೆ. ಸಿನೆಮಾ ನೋಡಿ, ಅದನ್ನು ವಿಮರ್ಶೆ ಮಾಡುವ ಅಸೈನ್‌ಮೆಂಟ್ ನನಗೆ ಇರಲಿಲ್ಲ.

  ದಾವಣಗೆರೆಯಲ್ಲಿ 'ತ್ರಿವಿಕ್ರಮ'ನ ಜೊತೆ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿನಿಯರು!ದಾವಣಗೆರೆಯಲ್ಲಿ 'ತ್ರಿವಿಕ್ರಮ'ನ ಜೊತೆ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿನಿಯರು!

  ಹೀಗಿರುವಾಗಲೇ ಮೂರು ದಿನ ಕಳೆಯಿತು. ವೀಕೆಂಡ್ ಮುಗಿಸಿ ಸೋಮವಾರ (ಜೂನ್ 27)ರಂದು ಕಚೇರಿ ಬಂದವಳಿಗೆ ಅವತ್ತಿನ ಬೆಳವಣಿಗೆಗಳನ್ನು ವರದಿ ಮಾಡುವ ಹೊಣೆಗಾರಿಕೆ ಇತ್ತು. ಕ್ರೇಜಿಸ್ಟಾರ್ ಪುತ್ರನ ಮೊದಲ ಸಿನೆಮಾ ಹೇಗಿರಬಹುದು? ಜನ ಹೇಗೆಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ? ವಾರಾಂತ್ಯದಲ್ಲಿ ಸಿನೆಮಾ ಥಿಯೇಟರ್‌ಗಳಲ್ಲಿನ ದಟ್ಟಣೆ ಹೇಗಿತ್ತು? ಅಂತೆಲ್ಲಾ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಉತ್ತರ ಹುಡುಕಲು ಹೊರಟಿದ್ದೆ. ಪರಿಣಾಮ, ಈಗ ಸಿನೆಮಾ ನಿರ್ದೇಶಕ ಮಹಾನುಭಾವ ಜನರ ಅವಗಾಹನೆಗೆ ತಂದಿರುವ ನಮ್ಮ ನಡುವೆ ನಡೆದ ದೂರವಾಣಿ ಸಂಭಾಷಣೆ. ಅದನ್ನು ಸಂಭಾಷಣೆ ಅನ್ನುವುದಕ್ಕಿಂತ, ಆತ ತೋಡಿಕೊಂಡ ಆಕ್ರೋಶ ಅನ್ನಬಹುದು. ಇರಲಿ...

  ಇಷ್ಟಕ್ಕೂ ಅವತ್ತು ನಡೆದಿದ್ದು ಏನು? ಸಿನೆಮಾದ ನಿರ್ದೇಶಕ ಹೇಗೆಲ್ಲಾ ಅದನ್ನು ತಿರುಚಿದ? ಮತ್ತು, ಅಂತಿಮವಾಗಿ 'ತ್ರಿವಿಕ್ರಮ' ದ ಪರಾಕ್ರಮ ಹೊರಗೆ ಹೇಗಿದೆ? ಎಂಬ ವಿವರಗಳನ್ನು ನಿಮ್ಮ ಮುಂದಿಡುವ ಕಾರಣಕ್ಕೆ ಈ ವರದಿಯನ್ನು ಮುಂದಿಡುತ್ತಿದ್ದೇನೆ. ಅಸಹನೆ ಹೊಂದಿರುವ ಎಲ್ಲರಿಗೂ ಇಲ್ಲಿ ಸಮಾಧಾನಕರ ಉತ್ತರ ಸಿಗಬಹುದು ಎಂಬ ಭರವಸೆ ನನಗಿದೆ.

  ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ 'ತ್ರಿವಿಕ್ರಮ'

  ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ 'ತ್ರಿವಿಕ್ರಮ'

  ಹಾಗೆ ನೋಡಿದರೆ, ಬಾಕ್ಸ್‌ ಆಫೀಸ್‌ ಗಳಿಕೆ ವಿಚಾರದಲ್ಲಿ ಇತರೆ ಸಿನೆಮಾ ಇಂಡ್ರಸ್ಟ್ರಿಗಳು ಸಾಕಷ್ಟು ವೃತ್ತಿಪರತೆಯನ್ನು ಅಳವಡಿಸಿಕೊಂಡಿವೆ. ಆದರೆ, ಸ್ಯಾಂಡಲ್‌ವುಡ್‌ನಲ್ಲಿ ಈವರೆಗೆ ಒಂದು ಶಿಸ್ತು, ಬದ್ಧತೆಯನ್ನು ಯಾವ ನಿರ್ಮಾಪಕರೂ, ನಿರ್ದೇಶಕರು ತೋರಿಸಿದ ಉದಾಹರಣೆ ಇಲ್ಲ. ಹೀಗಿದ್ದು ಸಿನೆಮಾ ಪತ್ರಕರ್ತರಿಗೆ ತಮ್ಮ ಸುದ್ದಿಮೂಲಗಳ (ಸಿನೆಮಾ ವಿತರಕರು, ಪ್ರದರ್ಶಕರು, ಥಿಯೇಟರ್ ಮಾಲೀಕರು) ಕಡೆಯಿಂದ ಯಾವುದೇ ಸಿನೆಮಾ ಇರಲಿ, ಒಂದಷ್ಟು ಕಲೆಕ್ಷನ್ ರಿಪೋರ್ಟ್‌ ಸಿಕ್ಕೇ ಸಿಗುತ್ತದೆ. 'ತ್ರಿವಿಕ್ರಮ' ಸಿನೆಮಾ ವಿಚಾರದಲ್ಲೂ ನನಗೆ ಆರಂಭದಲ್ಲಿ ಮಾಹಿತಿ ಸಿಕ್ಕಿದ್ದು ಇಂತಹದ್ದೇ ಮೂಲಗಳಿಂದ.

  ಸಿನೆಮಾ ತೆರೆಗೆ ಬಂದು ಮೂರು ದಿನಗಳಾದರೂ ಜನ ದೊಡ್ಡ ಮಟ್ಟದಲ್ಲಿ ಸ್ಪಂದನೆ ತೋರಿಸಿರಲಿಲ್ಲ. ಈ ಬಗ್ಗೆ ಮಾತನಾಡಿದ ಥಿಯೇಟರ್ ಮಾಲೀಕರೊಬ್ಬರು, "ಸಿನೆಮಾಗೆ ಜನ ಬರ್ತಿಲ್ಲ, ಇನ್ನೊಂದೆರಡು ದಿನಗಳಲ್ಲಿ ತೆಗೆದು ಬೇರೆ ಹಾಕ್ತೀವಿ,'' ಅಂತಲೂ ಅಂದರು. ರವಿಚಂದ್ರನ್ ಕರ್ನಾಟಕದಲ್ಲಿ ಸೃಷ್ಠಿಸಿದ್ದ ಕ್ರೇಜ್, ಉತ್ತರ ಕರ್ನಾಟಕ ಭಾಗದಲ್ಲಿ ಸಂಪಾದಿಸಿರುವ ದೊಡ್ಡ ಅಭಿಮಾನಿ ಬಳಗದ ಆಚೆಗೂ, ಮಗನ ಮೊದಲ ಸಿನೆಮಾ ಹೀಗೊಂದು ಪ್ರತಿಕ್ರಿಯೆ ಪಡೆದುಕೊಂಡಿದ್ದು ವರದಿ ಮಾಡದೆ ಇರಲು ಹೇಗೆ ಸಾಧ್ಯ?

  ಬುಕ್‌ಮೈ ಶೋ ತೆಗೆದು ನೋಡಿದರೆ, ಎಲ್ಲಾ ಥಿಯೇಟರ್‌ಗಳು ಖಾಲಿ ಖಾಲಿ. ಬುಕ್‌ ಆಗಿರುವ ಸೀಟುಗಳು ಎಂದರೆ, ಕೊರೊನಾ ಕಾರಣಕ್ಕೆ ಸಾಮಾಜಿಕ ಅಂತರಕ್ಕಾಗಿ ಬಿಟ್ಟ ಸೀಟುಗಳು ಅಷ್ಟೆ. ನನ್ನ ವರದಿಗೆ ಬೇಕಾದ ಆಧಾರಗಳು ಸಿಕ್ಕಿದ್ದವು. ಮೊದಲ ಸಿನೆಮಾದ ಹಿನ್ನಡೆ ವಿಚಾರದಲ್ಲಿ ವಿಕ್ರಮ್ ರವಿಚಂದ್ರನ್ ಮುಂದಿನ ನಡೆ ಏನಾಗಿರಬಹುದು? ಎಂಬುದು ವರದಿಯ ಸಾರಾಂಶವಾಯಿತು.

  'ವಿಕ್ರಂ' ರವಿಚಂದ್ರನ್ ಮೊದಲ ಹೆಜ್ಜೆಯಲ್ಲೇ ಸೋಲು: ಮುಂದಿನ ನಡೆ ಏನು?'ವಿಕ್ರಂ' ರವಿಚಂದ್ರನ್ ಮೊದಲ ಹೆಜ್ಜೆಯಲ್ಲೇ ಸೋಲು: ಮುಂದಿನ ನಡೆ ಏನು?

  ನಿರ್ದೇಶಕನ ಆಕ್ರೋಶ, ಕಾಲ್ ರೆಕಾರ್ಡ್

  ನಿರ್ದೇಶಕನ ಆಕ್ರೋಶ, ಕಾಲ್ ರೆಕಾರ್ಡ್

  ಮೇಲಿನ ವರದಿ ಹೊರಬಿದ್ದ ಸ್ವಲ್ಪ ಹೊತ್ತಿಗೆ ಅನಾಮದೇಯ ನಂಬರ್‌ನಿಂದ ಕರೆಯೊಂದು ಬಂತು. ಅದು 'ತ್ರಿವಿಕ್ರಮ' ಸಿನೆಮಾದ ನಿರ್ದೇಶಕರದ್ದಾಗಿತ್ತು. ಆರಂಭದಿಂದಲೇ ತಮ್ಮ ಅಸಹನೆಯನ್ನು ಪ್ರದರ್ಶಿಲು ಮುಂದಾದ ಸಿನೆಮಾದ ಸೂತ್ರದಾರ. ಕೊನೆಗೆ ಯೂ-ಟ್ಯೂಬರ್‌ಗಳಿಗೆ ಸಿನೆಮಾ ಮಾಡಿ ಎಂದು ಚಾಲೆಂಜ್‌ ಬೇರೆ ಹಾಕಿದರು. ಜರ್ನಲಿಸಂ ಎಥಿಕ್ಸ್‌ ಪಾಠ ಒಪ್ಪಿಸಿದರು. ಸಾಲದು ಎಂಬಂತೆ, ಮುಂದಿನ ತಮ್ಮ ಹಾಗೂ ತಮ್ಮ ನಿರ್ಮಾಪಕರ ಸಿನೆಮಾಗಳಿಗೆ ಮಾಧ್ಯಮಗಳ ಅಗತ್ಯವಿಲ್ಲ ಎಂದು ಘೋಷಿಸಿದರು. ಇದೇ ನಿರ್ಮಾಪಕರು ಮತ್ತೆ ಇವರನ್ನು ನಂಬಿಕೊಂಡು ಬಂಡವಾಳ ಹಾಕಲು ಮುಂದಾಗುತ್ತಾರಾ? ಗೊತ್ತಿಲ್ಲ. ಪತ್ರಕರ್ತರಿಗೆ ಸಿನೆಮಾ ಮಾಡಿ ಎಂದು ಚಾಲೆಂಜ್ ಹಾಕಿದ ಹಾಗೆ, ನಾವೂ ಕೂಡ- "ಮೊದಲು ಒಂದು ಪತ್ರಿಕೆ ಮಾಡಿ ತೋರಿಸಿ," ಎಂದು ಸಿನೆಮಾ ವಿಚಾರದಲ್ಲಿ ಕ್ರಿಯೇಟಿವ್ ಆಗಿರುವ ನಿರ್ದೇಶಕರಿಗೆ ಸವಾಲು ಎಸೆದರೆ ಅದು ನ್ಯಾಯವೇ? ಯಾವ ಪ್ರತಿಕ್ರಿಯೆಗೂ ಆಸ್ಪದ ಇಲ್ಲದೆ, "ನೋಟಿಸ್ ಕಳುಹಿಸುತ್ತೇನೆ,'' ಎಂಬ ಧಮಕಿಯೊಂದಿಗೆ ಕರೆ ಕಡಿತಗೊಂಡಿತು. ನಾನು ಕಚೇರಿನಲ್ಲಿ ನನ್ನ ಮೇಲ್ವಿಚಾರಕರಿಗೆ ಸುದ್ದಿ ಮುಟ್ಟಿಸಿದೆ.

  'ಸಮಾಧಾನ ಆಗಿರಬಹುದು ಬಿಡಿ...'

  'ಸಮಾಧಾನ ಆಗಿರಬಹುದು ಬಿಡಿ...'

  "ಅದು ಒಳ್ಳೆಯ ಸಿನೆಮಾನೋ, ಕೆಟ್ಟ ಸಿನೆಮಾನೋ- ಸಿನೆಮಾ ಅಷ್ಟೆ. ಅದನ್ನು ಹೆಣೆದವರಿಗೆ ಅದರ ಕಷ್ಟ ಗೊತ್ತಿರುತ್ತೆ. ಸಿನೆಮಾ ಬಿಡುಗಡೆಗೊಂಡ ದಿನವೇ, ಯಾವುದೇ ಮುಖ ಮೂತಿ ನೋಡದೆ, ಟೈಮ್ಸ್ ಆಫ್‌ ಇಂಡಿಯಾ ವಿಮರ್ಶೆ ಬರೆದಿದ್ದಾರೆ. ಅದರ ಜತೆಗೆ ನೀವು ತಳಮಟ್ಟದ ವರದಿಯನ್ನೂ ಬರೆದಿದ್ದೀರಿ. ಸಹಜವಾಗಿ ನಿರ್ದೇಶಕ ಆಕ್ರೋಶಗೊಂಡಿದ್ದಾನೆ. ಈಗ ಆತನಿಗೆ ಸಮಾಧಾನ ಸಿಕ್ಕಿರಬಹುದು. ವಿಷಯ ಬಿಟ್ಟಾಕಿ,'' ಎಂಬುದು ನನಗೆ ಕಚೇರಿಯಲ್ಲಿ ಸಿಕ್ಕ ಪ್ರತಿಕ್ರಿಯೆಯಾಗಿತ್ತು.

  ಕರ್ನಾಟಕದಲ್ಲಿ ಪ್ರತಿ ವರ್ಷ ಸರಾಸರಿ 300 ಸಿನಿಮಾಗಳು ಬಿಡುಗಡೆಯಾಗುತ್ತವೆ. ಇವುಗಳಲ್ಲಿ ಶೇ.10ರಷ್ಟು ಸಿನೆಮಾಗಳು ಮಾತ್ರವೇ ವಿಮರ್ಶೆ ಮಾಡಿಸಿಕೊಳ್ಳುವ ಯೋಗ್ಯತೆ ಹೊಂದಿರುತ್ತವೆ. ಉಳಿದವು ಹಾಗೆ ಬಂದು ಹೀಗೆ ಹೋಗುತ್ತವೆ. ಒಂದು ಸಿನೆಮಾ ಸೋತ ಕಾರಣಕ್ಕೆ ಜನರ ಭವಿಷ್ಯ ಹಾಳಾಗುವುದಾದರೆ ಇಷ್ಟೊತ್ತಿಗೆ ಅದೆಷ್ಟು ಜನ ಗಾಂಧಿನಗರ ಬಿಟ್ಟು ಹೋಗಿರಬೇಕಿತ್ತು. ಹಾಗೆಲ್ಲಾ ನಡೆಯದೇ ಸಿನೆಮಾ ಪ್ರೀತಿಯ ಕಾರಣಕ್ಕೆ ಅದೆಷ್ಟು ಹೋರಾಟಗಳ ನಂತರವೂ ಕ್ರೀಯಾಶೀಲ ವ್ಯಕ್ತಿಗಳು ಸ್ಯಾಂಡಲ್‌ವುಡ್‌ ಕಟ್ಟಿದ್ದಾರೆ, ಕಟ್ಟುತ್ತಿದ್ದಾರೆ. ಹೀಗಿರುವಾಗ, ಈ ನಿರ್ದೇಶಕನ ಅಸಹನೆಯನ್ನು ಸಹಿಸಿಕೊಳ್ಳುವುದು ಸೂಕ್ತ ಅಂತ ನನಗೂ ಅನ್ನಿಸಿತು.

  ರವಿಚಂದ್ರನ್ ಬರ್ತ್‌ಡೇಗೆ ಪುತ್ರ 'ತ್ರಿ'ವಿಕ್ರಮನ ಸಾಂಗ್ ರಿಲೀಸ್ : ಶಿವಣ್ಣ ಸಾಥ್ರವಿಚಂದ್ರನ್ ಬರ್ತ್‌ಡೇಗೆ ಪುತ್ರ 'ತ್ರಿ'ವಿಕ್ರಮನ ಸಾಂಗ್ ರಿಲೀಸ್ : ಶಿವಣ್ಣ ಸಾಥ್

  ಹೊರಬಿದ್ದ ರೆಕಾರ್ಡ್‌, ತಿರುಚಿದ ಸತ್ಯ

  ಹೊರಬಿದ್ದ ರೆಕಾರ್ಡ್‌, ತಿರುಚಿದ ಸತ್ಯ

  ಹಾಗೆ, ಅಷ್ಟಕ್ಕೆ ಮುಗಿದು ಹೋಗಬೇಕಾದ ಪ್ರಕರಣ ಈಗ ಸಾರ್ವಜನಿಕ ಅವಗಾಹನೆಗೆ ಲಭ್ಯವಾಗಿದೆ. ನಮ್ಮ ನಡುವೆ ನಡೆದ ದೂರವಾಣಿ ಮಾತುಕತೆ ಮೊದಲು ಸಿನೆಮಾ ಪತ್ರಕರ್ತರ ವಲಯದಲ್ಲಿ ಹಂಚಿಕೆ ಮಾಡಲಾಗುತ್ತದೆ. ನಂತರ ಕೆಲವೊಂದು ಟ್ರಾಲ್‌ ಪೇಜ್‌ಗಳಿಗೆ ಆಹಾರವಾಗಿ ಉಣಬಡಿಸಲಾಗುತ್ತದೆ. ಜನರನ್ನು ತಪ್ಪು ಹಾದಿಗೆ ಎಳೆಯುವ ಪ್ರಯತ್ನವೊಂದು ಕಾಣಿಸುತ್ತದೆ.

  ನನಗೆ ಈವರೆಗೂ 'ಫಿಲ್ಮಿಬೀಟ್‌'ನಲ್ಲಿ ಸಿನೆಮಾ ಕಮರ್ಶಿಲ್ ತನ್ನಿ ಎಂಬ ಮಾತು ಯಾವುತ್ತೂ ಕೇಳಿಬಂದಿಲ್ಲ. ಒಳ್ಳೆಯ ಕಂಟೆಂಟ್ ಕೊಡಿ, ಪ್ರತಿಭೆಗಳಿಗೆ ವೇದಿಕೆಯಾಗಿ, ಸತ್ಯ ಹೇಳಲು ಹೆದರಬೇಡಿ ಎಂಬುದು ನಮಗಿರುವ ಸ್ಟ್ಯಾಂಡಿಗ್ ಇನ್‌ಸ್ಟ್ರಕ್ಷನ್. ಬಹುಶಃ ಈ ಕಾರಣಕ್ಕೆ, ಈ ಪ್ರಕ್ರರಣದಲ್ಲಿ ನಿಜಕ್ಕೂ ನಡೆದಿದ್ದು ಏನು ಎಂಬುದನ್ನು ಈ ಮೂಲಕ ನಿಮ್ಮ ಮುಂದಿಡುತ್ತಿದ್ದೇನೆ.

  ಇದು ಸಿನೆಮಾ ನೋಡಿ ಬರೆದ ರಿವ್ಯೂ

  ಇದು ಸಿನೆಮಾ ನೋಡಿ ಬರೆದ ರಿವ್ಯೂ

  ಅಂದಹಾಗೆ, ಒಟ್ಟಾರೆ ವಿವಾದದ ಮೂಲ ಇರುವುದು, ಸಿನೆಮಾ ನೋಡದೆ ವಿಮರ್ಶೆ ಹೇಗೆ ಬರೆದಿದ್ದೀರಾ ಎಂಬುದು. ಸೋಮವಾರ ನಾನು ಬರೆದದ್ದು 'ತ್ರಿವಿಕ್ರಮ' ಸಿನೆಮಾದ ಬಾಕ್ಸ್ ಆಫೀಸ್‌ ವಿಚಾರ. ಆದರೆ, ಈಗ ಒಟ್ಟು 8 ಜನರಿದ್ದ ಥಿಯೇಟರ್‌ನಲ್ಲಿ ನಾನೂ ಒಬ್ಬಳು ಪ್ರೇಕ್ಷಕಳಾಗಿ ಸಿನೆಮಾ ನೋಡಿಕೊಂಡು ಬಂದು ಕುಳಿತಿದ್ದೀನಿ. 'ತ್ರಿವಿಕ್ರಮ' ಬಗೆಗಿನ ನನ್ನ ವಿಮರ್ಶೆ ಹೀಗಿದೆ:

  "ರವಿಚಂದ್ರನ್ ಪುತ್ರ ವಿಕ್ರಂ ರವಿಚಂದ್ರನ್ ಮೊದಲ ಸಿನಿಮಾ ಇದು. 'ತ್ರಿವಿಕ್ರಮ' ಸಿನಿಮಾ ಒಂದು ಲವ್ ಸ್ಟೋರಿಯನ್ನು ಹೇಳುವ ಪ್ರಯತ್ನ. ಈ ಲವ್ ಸ್ಟೋರಿ ಅಂದ್ಮೇಲ್ ಬ್ರೇಕಪ್, ಪ್ಯಾಚಪ್ ಎಲ್ಲವೂ ಇರೋದು ಸಹಜ. ಅದು ಈ ಚಿತ್ರದಲ್ಲೂ ಕೂಡ ಇದೆ. ಫೈಟ್ ಸೀನ್ ಮೂಲಕ ಹೀರೊ ಎಂಟ್ರಿ ಆಗುತ್ತೆ. ವಿಕ್ರಂ ಮಾಸ್ ಲುಕ್‌ನಲ್ಲಿ ಕಿಕ್ ಕೊಡ್ತಾರೆ. ಪಕ್ಕಾ ಲೋಕಲ್ ಮತ್ತು ರಗಡ್ ಹುಡುಗ ತ್ರಿವಿಕ್ರಮ ಕಣ್ಣಿಗೆ ನಾಯಕಿ ಬೀಳುತ್ತಾಳೆ. ಲವ್ ಅಟ್ ಫಸ್ಟ್ ಸೈಟ್ ಆಗುತ್ತೆ. ಇವಳೇ ನನ್ನವಳು ಎಂದು ಹೀರೊ ಫಿಕ್ಸ್ ಆಗುತ್ತಾನೆ.

  ನಮ್ ಹೀರೊ ಸಿಕ್ಕಾಪಟ್ಟ ಮಾಸ್, ಆದರೆ ಹೀರೊಯಿನ್ ಸಿಕ್ಕಾಪಟ್ಟೆ ಕ್ಲಾಸ್. ನಾಯಕ 'ದಂಡಂ ದಶಗುಣಂ' ಅಂದರೆ, ನಾಯಕಿಗೆ ಹಿಂಸೆ ಎಂದರೆ ಆಗೋದೇ ಇಲ್ಲ. ಹೀಗಿದ್ದರೂ ನಾಯಕನ ಮೇಲೆ ನಟಿಗೆ ಪ್ರೀತಿ ಆಗುತ್ತದೆ. ಆದರೆ ಹೀರೊನ ಇನ್ನೊಂದು ಮುಖ ನೋಡಿದ ಮೇಲೆ ಬ್ರೇಕಪ್ ಆಗುತ್ತದೆ. ಆದರೆ ಈ ಜೋಡಿ ಮತ್ತೆ ಒಂದಾಗುತ್ತಾ ಇಲ್ವಾ, ಅದಕ್ಕಾಗಿ ಏನೆಲ್ಲಾ ಆಗುತ್ತೆ ಎನ್ನುವುದನ್ನು ಚಿತ್ರದಲ್ಲಿ ನೋಡ್ಬೇಕು. ಇನ್ನು ಫಸ್ಟ್ ಹಾಫ್ ಒಂದಷ್ಟು ಕುತೂಹಲಗಳನ್ನು ಹುಟ್ಟು ಹಾಕಿದರೂ ಹೆಚ್ಚು ಕಾಲ ಜನರನ್ನು ಹಿಡಿದಿಡುವುದಿಲ್ಲ. ಸೆಕೆಂಡ್ ಹಾಫ್‌ನಲ್ಲಿ ಒಂದಷ್ಟು ಕಡೆ ಬೋರ್ ಹೊಡೆದರೂ, ಕ್ಲೈಮ್ಯಾಕ್ಸ್ ಅನಿರೀಕ್ಷಿತ ಎಂದು ಹೇಳಬಹುದು.

  ಇನ್ನು ನಟ ವಿಕ್ರಂ ವಿಚಾರಕ್ಕೆ ಬರುವುದಾದರೆ; ಉತ್ತಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಇನ್ನು ಕೆಲವು ಭಾವನಾತ್ಮಕ ಸನ್ನಿವೇಶಗಳಲ್ಲಿ ವಿಕ್ರಂ ಅಭಿನಯ ಉತ್ತಮ ಎನಿಸುತ್ತದೆ. ವಿಕ್ರಂ ಡ್ಯಾನ್ಸ್ ಸೂಪರ್ ಎನಿಸುತ್ತೆ. ಚಿತ್ರದ ಹಾಡುಗಳಲ್ಲಿ ವಿಕ್ರಂ ಡ್ಯಾನ್ಸ್ ಗಮನ ಸೆಳೆದಿದೆ. ಅಪ್ಪು ಡ್ಯಾನ್ಸ್ ಪರಿಯನ್ನು ವಿಕ್ರಂ ನೆನಪಿಸುತ್ತಾರೆ. ಉಳಿದಂತೆ ಇನ್ನು ಈ ಸಿನೆಮಾ ಬಗ್ಗೆ ಹೇಳಲು ಹೆಚ್ಚಿನದ್ದೇನೂ ಸಿಗುವುದಿಲ್ಲ.

  English summary
  FBK reporter Reply to Vikram Ravichandran Starrer Trivikrama Movie Review and audio Controversy,Read on

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X