»   » ಹಿರಿಯ ನಟಿ ಲೀಲಾವತಿ ಕಣ್ಣೀರೊರೆಸುವವರು ಯಾರೂ ಇಲ್ವೇ?

ಹಿರಿಯ ನಟಿ ಲೀಲಾವತಿ ಕಣ್ಣೀರೊರೆಸುವವರು ಯಾರೂ ಇಲ್ವೇ?

Posted By:
Subscribe to Filmibeat Kannada

ಕನ್ನಡದ ಹಿರಿಯ ನಟಿ ಲೀಲಾವತಿ ಮತ್ತು ಅವರ ಮಗ ವಿನೋದ್ ರಾಜ್ ಮಾನಸಿಕವಾಗಿ ಆಘಾತಕ್ಕೊಳಗಾಗುವ ಘಟನೆಗಳು ಕೆಲವು ವರ್ಷಗಳಿಂದ ನಡೆಯುತ್ತಲೇ ಬರುತ್ತಿದೆ.

ಮಾಧ್ಯಮದ ಮುಂದೆ, ಸರಕಾರದ ಮುಂದೆ ಇವರು ನೋವು ತೋಡಿಕೊಂಡರೂ, ಕಣ್ಣೀರಿಟ್ಟರೂ ಇವರ ನೋವಿಗೆ ಸ್ಪಂದಿಸುವವರು ಯಾರೂ ಇಲ್ಲದಂತಾಗಿದೆ. (ಲೀಲಾವತಿ, ವಿನೋದ್ ರಾಜ್ ಮೇಲೆ ದಾಳಿ)

ಲೀಲಾವತಿ ಅವರ ನೆಲಮಂಗಲದ ಮೈಲಾನಹಳ್ಳಿಯಲ್ಲಿರುವ ತೋಟಕ್ಕೆ ದುಷ್ಕರ್ಮಿಗಳು ಮತ್ತೆ ಬೆಂಕಿಯಿಟ್ಟಿದ್ದಾರೆ. ತೋಟದಲ್ಲಿ ಬೆಳೆಸಲಾಗಿದ್ದ ತೆಂಗು, ಆಡಿಕೆ, ಸಪೋಟ, ಬಾಳೆ ಗಿಡಗಳು ನಾಶವಾಗಿದೆ. ಇಂತಹ ಘಟನೆಗಳು ಇದೇ ಮೊದಲಲ್ಲ. ಹಲಾವರು ಬಾರಿ ಲೀಲಾವತಿ ಕುಟುಂಬ ಈ ರೀತಿಯ ಆಘಾತಕ್ಕೊಳಗಾಗಿದೆ.

ಸೋಜಿಗದ ಸಂಗತಿ ಏನಂದರೆ ಮರುಕಳಿಸುತ್ತಿರುವ ಈ ಘಟನೆಯ ಹಿಂದಿನ ದುಷ್ಟಶಕ್ತಿಗಳಿಗೆ ಪಾಠ ಕಲಿಸಲು ನೆಲಮಂಗಲ ಪೊಲೀಸರು ವಿಫಲರಾಗಿರುವುದು ಅಥವಾ ದುಷ್ಕರ್ಮಿಗಳು ಯಾರೆಂದು ಗೊತ್ತಿದ್ದರೂ ಸುಮ್ಮನಾಗಿದ್ದಾರಾ ಎನ್ನುವುದೇ ಇಲ್ಲಿ ಪ್ರಶ್ನೆ?

ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿ ಜನಿಸಿದ ಲೀಲಾವತಿ ಚಿತ್ರರಂಗದಲ್ಲಿ ನೆಲೆಕಾಣುವ ತನಕ ಪಟ್ಟ ಬವಣೆಗಳು ಒಂದಾ ಎರಡಾ? ಇತ್ತೀಚೆಗೆ ಅವರಿಗೆ ಅರಣ್ಯ ಇಲಾಖೆಯಿಂದ ನೋಟೀಸ್ ಕೂಡಾ ಜಾರಿಯಾಗಿದೆ. ಮುಂದೆ ಓದಿ..

ಹಿರಿಯ ನಟಿ ಲೀಲಾವತಿ ಬಗ್ಗೆ

ಸುಬ್ಬಯ್ಯ ನಾಯ್ಡು ರಂಗಭೂಮಿ ಸಂಸ್ಥೆಯಲ್ಲಿ ಕಲಾವಿದೆಯಾಗಿದ್ದ ಲೀಲಾವತಿ ನಾಗಕನ್ನಿಕ ಚಿತ್ರದಲ್ಲಿ ಸಹನಟಿಯ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಅರವತ್ತರಿಂದ ಎಪ್ಪತ್ತರ ದಶಕದವರೆಗೆ ಕನ್ನಡ ಚಿತ್ರೋದ್ಯಮದ ನಾಯಕನಟಿಯರಲ್ಲಿ ಮಂಚೂಣಿಯಲ್ಲಿದ್ದ ಲೀಲಾವತಿ, ನಂತರ ಪೋಷಕ ಪಾತ್ರದಲ್ಲಿ ನಟಿಸಲಾರಂಭಿಸಿದರು. ಇತ್ತೀಚಿನ ದಿನಗಳಲ್ಲಿ ಅವರು ಬಣ್ಣ ಹಚ್ಚಿದ ಸುದ್ದಿಯೇ ಇಲ್ಲ.

ಮಗನಿಗೂ ಅವಕಾಶವಿಲ್ಲ

ದ್ವಾರಕೀಶ್ ನಿರ್ಮಾಣದ ಡ್ಯಾನ್ಸ್ ರಾಜ ಡ್ಯಾನ್ಸ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ವಿನೋದ್ ರಾಜ್ ಕನ್ನಡ ಚಿತ್ರೋದ್ಯಮದಲ್ಲಿ ಕಡೆಗಣಿಸಲ್ಪಟ್ಟ ಪ್ರಮುಖ ಹೆಸರಲ್ಲೊಂದು. ಅದ್ಭುತ ನೃತ್ಯಪಟು ಮತ್ತು ರಕ್ತಗತವಾಗಿ ಬಂದ ನಟನಾ ಶಕ್ತಿಯಿದ್ದರೂ ವಿನೋದ್ ರಾಜ್ ಅವರನ್ನು ಕೇಳುವವರೇ ಇಲ್ಲದಂತಾಗಿದೆ. ತಮ್ಮ ಸ್ವಂತ ನಿರ್ಮಾಣದ ಯಾರದು (2009) ಚಿತ್ರದ ನಂತರ ಇವರ ಯಾವ ಚಿತ್ರವೂ ಸೆಟ್ಟೇರಲಿಲ್ಲ.

ಅರಣ್ಯ ಇಲಾಖೆಯ ವಿರುದ್ದ ಹೋರಾಟ

ನೆಲಮಂಗಲದ ಸೊರದೇವನಹಳ್ಳಿಯಲ್ಲಿ ಲೀಲಾವತಿ ಅವರು 7.14 ಎಕರೆ ಜಮೀನು ಹೊಂದಿದ್ದಾರೆ. ಅವರ ಜಮೀನು ಸೇರಿದಂತೆ 998.16 ಎಕರೆ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಅಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಮತ್ತು ಲೀಲಾವತಿಗೆ ಅರಣ್ಯ ಇಲಾಖೆಯಿಂದ ನೋಟಿಸ್‌ ಜಾರಿಯಾಗಿದೆ.

ಮಹಾರಾಜರು ನೀಡಿದ್ದ ಜಾಗ

1907ಕ್ಕೆ ಆಥವಾ ಅದಕ್ಕಿಂತ ಮುಂಚೆ ಮಹಾರಾಜರು ಅರಣ್ಯ ಇಲಾಖೆಗೆ ಕೊಟ್ಟಿದ್ದ ಜಮೀನು ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಾದ. ನೋಟೀಸ್ ವಿರೋಧಿಸಿ ರೈತರ ನಿಯೋಗದೊಂದಿಗೆ ಲೀಲಾವತಿ ಮತ್ತು ವಿನೋದ್ ರಾಜ್ ಸಚಿವ ಟಿ ಬಿ ಜಯಚಂದ್ರ ಅವರನ್ನು ಭೇಟಿ ಮಾಡಿ ನೋವು ತೋಡಿಕೊಂಡಿದ್ದಾರೆ. ಎಂದಿನಂತೆ ಸರಕಾರದಿಂದ ಭರವಸೆಯೂ ಸಿಕ್ಕಿದೆ.

ಕೊಲೆಗೆ ಯತ್ನ

07.02.2009ರ ಬೆಳಿಗ್ಗೆ ಲೀಲಾವತಿ ಮತ್ತು ವಿನೋದ್ ರಾಜ್ ಅವರ ಹತ್ಯೆಗೆ ಯತ್ನ ನಡೆಸಲಾಗಿತ್ತು. ಆದರೆ, ಅವರಿಬ್ಬರೂ ಅಪಾಯದಿಂದ ಪಾರಾಗಿದ್ದರು. ಬೆಂಗಳೂರು ಉಪ್ಪಾರಪೇಟೆ ಪೋಲಿಸ್ ಠಾಣೆಯ ವ್ಯಾಪ್ತಿಯ ಶಾಂತಲಾ ಸಿಲ್ಕ್ ಜಂಕ್ಷನ್ ಬಳಿ ಲೀಲಾವತಿ ಮತ್ತು ವಿನೋದ್ ರಾಜ್ ಅವರಿದ್ದ ಕಾರಿನ ಮೇಲೆ ದಾಳಿ ನಡೆಸಲಾಗಿತ್ತು ಎಂದು ವರದಿಯಾಗಿತ್ತು. ನಂತರ ಗುಂಡಿನ ದಾಳಿ ನಡೆದಿಲ್ಲ ಎಂದು ಆಗಿನ ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿ ಸ್ಪಷ್ಟಪಡಿಸಿದ್ದರು.

ಚೆನ್ನೈನಲ್ಲೂ ಅವಮಾನ

ಚೆನ್ನೈನಲ್ಲಿ ನಡೆದ ಸಿನೆಮಾ ನೂರರ ಸಂಭ್ರಮದಲ್ಲೂ ಲೀಲಾವತಿ ಅವಮಾನಕ್ಕೊಳಗಾಗಿದ್ದರು. ನನ್ನನ್ನು ಬೀದಿ ನಾಯಿ ಎಂದುಕೊಂಡು ಚೆನ್ನೈನ ಬೀದಿಯಲ್ಲಿ ಅವಮಾನ ಮಾಡಿದ್ದಾರೆ ಎಂದು ಲೀಲಾವತಿ ಮಾಧ್ಯಮದ ನೋವು ತೋಡಿಕೊಂಡಿದ್ದರು.

English summary
Fire broke out incident repeated in senior actress Leelavathi farm house in Nelamangala, Bengaluru outskirts.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada