»   » ಸಾಹಸಸಿಂಹ ಡಾ.ವಿಷ್ಣುವರ್ಧನ್ ಜೊತೆಗಿನ ನನ್ನ ಬಾಲ್ಯದ ನೆನಪು

ಸಾಹಸಸಿಂಹ ಡಾ.ವಿಷ್ಣುವರ್ಧನ್ ಜೊತೆಗಿನ ನನ್ನ ಬಾಲ್ಯದ ನೆನಪು

By ಜನಾರ್ಧನ ರಾವ್ ಸಾಳಂಕೆ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  1978ನೇ ಇಸವಿಯಲ್ಲಿ ನಾನು 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದೆ. ಆಗ ನಾನು ವ್ಯಾಸಂಗ ಮಾಡುತ್ತಿದ್ದ ಜಯನಗರ ಪೋಷಕರ ಸಂಘ (ಜೆ.ಪಿ.ಎ) ಎಂಬ ಶಾಲೆ, ಡಾ.ವಿಷ್ಣುವರ್ಧನ್ ಅವರ ಮನೆಯ ಹಿಂಬದಿಯ ರಸ್ತೆಯಲ್ಲಿ ಇತ್ತು.

  ಆಗ ನಮಗೇನಿದ್ದರೂ ಸಿನಿಮಾ ವೀಕ್ಷಣೆಯೇ ಪ್ರಮುಖ ಮನರಂಜನೆ. ಟೂರಿಂಗ್ ಟಾಕೀಸ್ (ಟೆಂಟ್) ಗಳಲ್ಲಿ ಕನ್ನಡ ಚಿತ್ರಗಳನ್ನು ನೋಡುವುದೇ ಒಂದು ಹಬ್ಬ. [ಸಾಹಸಸಿಂಹ ಡಾ.ವಿಷ್ಣುವರ್ಧನ್ ಬರೆದ ಒಂದು ಪತ್ರ]

  ವಿಷ್ಣು ಅವರ ಮನೆಯ ಹತ್ತಿರ ಇದ್ದದ್ದು ವೀನಸ್ ಚಿತ್ರಮಂದಿರ. ಹೆಚ್ಚಾಗಿ ತಮಿಳು ಚಿತ್ರ ಪ್ರದರ್ಶನವಾಗುತಿತ್ತು. ಇನ್ನೂ ಸ್ವಲ್ಪ ದೂರದಲ್ಲಿ ಇದ್ದದ್ದು ಸ್ವಾಗತ್ ಥಿಯೇಟರ್. ಹಬ್ಬ ಹರಿದಿನಗಳಲ್ಲಿ ವೀನಸ್ ಚಿತ್ರಮಂದಿರದಲ್ಲಿ ಕನ್ನಡ ಚಿತ್ರ ಪ್ರದರ್ಶನವಾಗುತಿತ್ತು. ಅದರಲ್ಲೂ ವಿಷ್ಣು ಚಿತ್ರಗಳಿಗೆ ಟೆಂಟ್ ತುಂಬಿ ತುಳುಕುತ್ತಿತ್ತು. ಕಲೆಕ್ಷನ್ ಕೂಡ ಜೋರಾಗಿತ್ತು. [ವಿಷ್ಣುವರ್ಧನ್ ಸ್ಮಾರಕದ ಕಥೆ ಹೇಳುವೆ, ನಿನ್ನ ಕಥೆ ಹೇಳುವೆ!]

  ಆ ವರ್ಷದಲ್ಲಿ ವಿಷ್ಣು ಅವರ 15 ಚಿತ್ರಗಳು ತೆರೆಕಂಡು ಬಹಳ ಉತ್ತುಂಗ ಸ್ಥಾನದಲ್ಲಿದ್ದ ಕಾಲ. ಪ್ರತಿದಿನ ನಮ್ಮ ತರಗತಿಯ ಮಕ್ಕಳೆಲ್ಲಾ ಪ್ರಾರ್ಥನೆ ಮಾಡಲು ವಿಷ್ಣು ಮನೆ ಮುಂದೆ ಇರುವ ಮೈದಾನಕ್ಕೆ ಬರಬೇಕಿತ್ತು. ಆ ಕಾಲದಲ್ಲಿ ಆ ಮೈದಾನಕ್ಕೆ ಸುದರ್ಶನ್ ಗ್ರೌಂಡ್ ಎಂದು ಕರೆಯುತ್ತಿದ್ದರು. ಇತ್ತೀಚಿಗೆ ಇದಕ್ಕೆ ಡಾ.ವಿಷ್ಣುವರ್ಧನ್ ಉದ್ಯಾನವನ ಎಂದು ಬಿ.ಬಿ.ಎಂ.ಪಿ ನಾಮಕರಣ ಮಾಡಿದೆ.

  ನಾವೆಲ್ಲ ಪ್ರಾರ್ಥನೆ ಮತ್ತು ಪಿ.ಟಿ ಮಾಡಲು ಇದೇ ಮೈದಾನಕ್ಕೆ ಬರುತ್ತಿದ್ದೆವು. ವಿಷ್ಣು ಅವರ ಮನೆ ಬಳಸಿಕೊಂಡೆ ನಾವು ಬರಬೇಕಿತ್ತು. ಅವರ ಮನೆಯ ಮುಂದಿನ ರಸ್ತೆಯಲ್ಲಿ ಸಾಗುವಾಗ ಕೆಲವೊಮ್ಮೆ ಮುಖ್ಯದ್ವಾರ (ಬೃಹತ್ ಗೇಟ್) ತೆರೆದು ಕಾರು ಹೊರಬರುವುದು ಅಥವಾ ಒಳ ಹೋಗುವುದು ಸಾಮಾನ್ಯವಾಗಿತ್ತು. ದಾದಾ ಅವರು ಕಾರಿನ ಹಿಂದೆ ಸದಾ ಹುಲಿ ಮೈಬಣ್ಣ ಹೋಲುವ ಎರಡು ವೃತ್ತಾಕಾರದ ದಿಂಬುಗಳನ್ನು ಇಟ್ಟಿದ್ದರು. ನೋಡಲು ಕಾರು ಬಹಳ ಸುಂದರವಾಗಿತ್ತು. ಎಷ್ಟೋ ಸಲ ನಾವೆಲ್ಲಾ ರಸ್ತೆ ದಾಟುವುದನ್ನು ಕಂಡೊಡನೆ ಕಾರನ್ನು ನಿಲ್ಲಿಸಿ, ನಾವೆಲ್ಲ ಸಾಗಿದ ಮೇಲೆ ಮುಂದೆ ಹೋಗುತ್ತಿದ್ದರು. [ವಿಡಿಯೋ: ಕಟ್ಟಕಡೆಯ ಸಂದರ್ಶನದಲ್ಲಿ ಡಾ.ವಿಷ್ಣುವರ್ಧನ್ ಹೇಳಿದ್ದೇನು?]

  ನಾವೆಲ್ಲ ವಿಷ್ಣು ಅವರನ್ನು ಕಂಡೊಡನೆ "ಹಾಯ್" ಅಥವಾ "ಗುಡ್ ಮಾರ್ನಿಂಗ್ ಸರ್" ಎಂದು ಒಕ್ಕೊರಲಿನಿಂದ ಕೂಗಿ ಅವರ ಕಾರನ್ನು ಹೂವಿಗೆ ಜೇನುನೊಣ ಮುತ್ತುವಂತೆ ಮುತ್ತುತ್ತಿದ್ದೆವು.

  ವಿಷ್ಣು ಅವರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಕಾರಿನ ಗಾಜನ್ನು ಸರಿಸಿ ವಿಷ್ಣು ನಮ್ಮೆಲ್ಲರ ಕೈ ಕುಲುಕಿ "ನೀವೆಲ್ಲಾ ಚೆನ್ನಾಗಿ ಓದಿ, ಬುದ್ಧಿವಂತರಾಗಿ ಮತ್ತು ನಿಮ್ಮ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ" ಎಂಬ ಕಿವಿಮಾತನ್ನು ಹೇಳಲು ಮರೆಯುತ್ತಿರಲಿಲ್ಲ.

  ಮನೆಯ ಮುಂದೆ ಯಾವಾಗಲು ಅಭಿಮಾನಿಗಳು ಜಮಾಯಿಸುತ್ತಿದ್ದರು. ಕಾರಣ ವಿಷ್ಣು ಅವರನ್ನು ಕಂಡು ಮಾತನಾಡುವುದಕ್ಕೋ, ಫೋಟೋ ತೆಗೆಸಿಕೊಳ್ಳುವುದಕ್ಕೋ ಅಥವಾ ಆಟೋಗ್ರಾಫ್ ಪಡೆಯಲು ಬಯಸುತ್ತಿದ್ದರು. ಕೆಲವೊಮ್ಮೆ ಚಿತ್ರನಟರು ಸಹ ಮನೆಗೆ ಬರುತ್ತಿದ್ದರು. ಬಂದವರು ಒಳ ಹೋಗುತ್ತಿದ್ದಂತೆ ಬೃಹತ್ ಗೇಟ್ ಮುಚ್ಚಿಬಿಡುತ್ತಿದ್ದರು.

  ಸಾಯಂಕಾಲ ಶಾಲೆ ಬಿಟ್ಟ ಮೇಲೆ ನಾವೆಲ್ಲಾ ವಿಷ್ಣು ಮನೆಯ ಕಾಂಪೌಂಡ್ ನಲ್ಲಿ ಯಾರು ಇದ್ದಾರೆ ಎಂದು ಕುತೂಹಲದಿಂದ ನೋಡಲು ಹಾತೊರೆಯುತ್ತಿದ್ದೆವು. ಮನೆಯ ಬಲಬದಿಯಲ್ಲಿ ಸೈಟ್ ಖಾಲಿ ಇದ್ದು ನಾವೆಲ್ಲಾ ಇಟ್ಟಿಗೆಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ಅದರ ಮೇಲೆ ಹತ್ತಿ ಇಣುಕಿ ನೋಡುತ್ತಿದ್ದೆವು. ಇಟ್ಟಿಗೆ ಸರಿದು ಬಿದ್ದು ಕೈಕಾಲು ತರಚಿದ ಸಂದರ್ಭಗಳು ಅನೇಕ.

  ಪ್ರತಿ ವರ್ಷ ನಮ್ಮ ಶಾಲೆಯ ಸ್ಕೂಲ್ ಡೇ ಮೂರು ದಿನ ಇದೇ ಮೈದಾನದಲ್ಲಿ ನಡೆಯುತ್ತಿತ್ತು. ಕೆಲವು ಬಾರಿ ವಿಷ್ಣು ಅವರನ್ನು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರೆಸಬೇಕೆಂದು ಪ್ರಯತ್ನಿಸಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಸಾಧ್ಯವಾಗುತ್ತಿರಲಿಲ್ಲ.

  ವಿಷ್ಣು ಮನೆಯಲ್ಲಿ ವಿವಿಧ ಪ್ರಭೇದ ನಾಯಿಗಳು ಇದ್ದವು. ಅವುಗಳನ್ನು ವಾಯುವಿಹಾರಕ್ಕೆಂದು ಹೊರತಂದಾಗ ನಮಗೆ ಅವುಗಳನ್ನು ಹಿಂಬಾಲಿಸುವುದೇ ಒಂದು ಮೋಜು.

  ಬೆಳಗ್ಗೆ ಮತ್ತು ಸಂಜೆಯ ಹೊತ್ತು ವಿಷ್ಣು ಅವರ ತಾಯಿ ಶ್ರೀಮತಿ ಕಾಮಾಕ್ಷಮ್ಮನವರಿಗೆ ವಾಕಿಂಗ್ ಮಾಡುವುದು ಅಭ್ಯಾಸವಿತ್ತು. ಮನೆಯ ಸಹಾಯಕರೊಬ್ಬರು ಅವರ ಜೊತೆಯಲ್ಲಿ ಬರುತ್ತಿದ್ದರು. ನಿಧಾನವಾಗಿ ಮಾತನಾಡುತ್ತ ಎದುರುಗಡೆ ಇದ್ದ ಮೈದಾನದಲ್ಲಿ ಸುತ್ತು ಹಾಕುತ್ತಿದ್ದರು. ಇದನ್ನು ನಾನು ದೂರದಿಂದಲೇ "ನೋಡ್ರೋ ನಮ್ ವಿಷ್ಣು ಅವರ ತಾಯಿ ವಾಕಿಂಗ್ ಮಾಡುತ್ತಿದ್ದಾರೆ" ಎಂದು ಕೂಗುತ್ತಿದ್ದೆ.

  ದಾದಾ ಅವರೊಂದಿಗಿನ ಇಂತಹ ಹಲವಾರು ಬಾಲ್ಯದ ನೆನಪುಗಳು ಇನ್ನು ನನ್ನ ಸ್ಮೃತಿ ಪಟಲದಲ್ಲಿ ಅಚ್ಚಹಸಿರಾಗಿ ಉಳಿದುಕೊಂಡಿದೆ. ಈಗ ಆ ದಿನಗಳು ಎಲ್ಲಿ ? ಕಾಲಚಕ್ರ ಹಿಮ್ಮುಖವಾಗಿ ತಿರುಗಿಸುವ ಅವಕಾಶ ಇದ್ದಿದ್ದರೆ ಮತ್ತೊಮ್ಮೆ ನಮ್ಮ ಬಾಲ್ಯದ ದಿನಗಳಿಗೆ ಹೋಗಲು ಇಚ್ಚಿಸುತ್ತಿದ್ದೆ.

  ಅಂದ್ಹಾಗೆ, ತಮ್ಮ ಬಾಲ್ಯದ ಅನುಭವಗಳನ್ನು ಇಷ್ಟೊತ್ತು ಹಂಚಿಕೊಂಡಿದ್ದು ಪತ್ರಕರ್ತರಾದ ಜನಾರ್ಧನ ರಾವ್ ಸಾಳಂಕೆ. ಈಗಾಗಲೇ ಇವರು ಡಾ.ವಿಷ್ಣುವರ್ಧನ್ ರವರ ಕುರಿತಾಗಿ ಸುಮಾರು 6 ಪುಸ್ತಕಗಳನ್ನು ಬರೆದಿದ್ದಾರೆ.

  English summary
  Janardhana Rao Salanke, Media Journalist and a hardcore fan of Dr.Vishnuvardhan, remembers his childhood days spent with 'Sahasa Simha'.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more