Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾರ್ನಾಡ್, ಕಾರಂತ್, ವಿಂಡ್ಸರ್‌ಮ್ಯಾನರ್, ಕೊಳ್ಳೆಗಾಲ: ಬೆಂಗಳೂರಲ್ಲಿ ಹಳೆಯ ನೆನಪುಗಳಿಗೆ ಜಾರಿದ ಕಮಲ್
ಕಮಲ್ ಹಾಸನ್‌ಗೂ ಕನ್ನಡ ಸಿನಿಮಾರಂಗಕ್ಕೂ ಇರುವ ನಂಟು ಕನ್ನಡ ಸಿನಿಪ್ರೇಮಿಗಳು ಮರೆವಂತಿಲ್ಲ. ಕಮಲ್ ಹಾಸನ್, ಕನ್ನಡದಲ್ಲಿ ನಟಿಸಿರುವುದು ಕೆಲವೇ ಸಿನಿಮಾಗಳಾದರೂ, ದಶಕಗಳು ಕಳೆದರೂ ನೆನಪುಳಿವ ಸಿನಿಮಾಗಳವು. ''ಪುಷ್ಪಕ ವಿಮಾನ' ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ವಿಂಡ್ಸರ್ ವೃತ್ತದ ಆ ವಿಂಡ್ಸರ್ ಮ್ಯಾನರ್ ಸೇತುವೆಯ ಮೇಲೆ ನಿಂತು ಕೈಬೀಸುವ ಕಮಲ್ ಅನ್ನು ಕನ್ನಡ ಸಿನಿ ಪ್ರೇಮಿಗಳು ಮರೆಯುವುದುಂಟೆ.
ಕನ್ನಡ ಚಿತ್ರರಂಗ ವಿಶೇಷ ಪ್ರೀತಿ ಇರಿಸಿಕೊಂಡಿರುವ ಕಮಲ್ ಹಾಸನ್ ಇಂದು ಬೆಂಗಳೂರಿಗೆ ಬಂದಿದ್ದರು. ತಮ್ಮ 'ವಿಕ್ರಂ' ಸಿನಿಮಾದ ಪ್ರಚಾರಕ್ಕೆಂದು ಆಗಮಿಸಿದ್ದ ಕಮಲ್ ಹಾಸನ್, ಸಿನಿಮಾಕ್ಕಿಂತಲೂ ಹೆಚ್ಚಿಗೆ ಬೆಂಗಳೂರಿನೊಟ್ಟಿಗೆ ತಮಗ್ಗೆ ಇರುವ ನಂಟು, ತಾವು ಇಲ್ಲಿ ಕಳೆದ ದಿನಗಳು, ತಮಗೆ ಕರ್ನಾಟಕದಿಂದ ಸಿಕ್ಕ ಗುರುಗಳ ಬಗ್ಗೆ ಮಾತನಾಡಿದರು.
ಅವರ ಮಾತಿನಲ್ಲಿ ವಿಂಡ್ಸರ್ ವೃತ್ತ, ಕೆಂಪೇಗೌಡ ಸರ್ಕಲ್, ಕೊಳ್ಳೆಗಾಲ, ಪರಾಗ್ ಹೋಟೆಲ್, ಬಿವಿ ಕಾರಂತ, ಗಿರೀಶ್ ಕಾರ್ನಾಡ್, ಡಾ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಎಲ್ಲವೂ ಬಂದು ಹೋದವು. ಅಭಿಮಾನಿಗಳ ಅಕ್ಕರೆಯ ಕಿರುಚಾಟದ ಮಧ್ಯೆಯೂ ಎಲ್ಲರನ್ನೂ ನೆನಪು ಮಾಡಿಕೊಂಡರು, ಕರ್ನಾಟಕ ಹಲವು ಗುರುಗಳನ್ನು ನನಗೆ ನೀಡಿದೆ ಎಂದು ಕೈಮುಗಿದರು.

ಕೊಳ್ಳೆಗಾಲದಲ್ಲಿ ಚಿತ್ರೀಕರಣ
''ನಾನು ಬಹಳ ಸಣ್ಣ ನಟನಾಗಿದ್ದಾಗ 'ಪದಿನಾರು ವಯತಿನೇಲ್' ಸಿನಿಮಾದ ಚಿತ್ರೀಕರಣವನ್ನು ಕರ್ನಾಟಕದ ಕೊಳ್ಳೆಗಾಲದಲ್ಲಿ ಮಾಡಿದ್ದೆ'' ಎಂದು ನೆನಪಿಸಿಕೊಂಡ ಕಮಲ್ ಹಾಸನ್, ಬೆಂಗಳೂರಿನಲ್ಲಿ ನಾನು ಕನ್ನಡ ಸಿನಿಮಾ 'ಕೋಕಿಲ'ದಲ್ಲಿ ನಟಿಸಿದ್ದೆ ಎಂದರು. ಆ ಸಿನಿಮಾ ಬಿಡುಗಡೆ ಆಗಿದ್ದು 1977. ಆಗಿನಿಂದಲೂ ಕಮಲ್‌ಗೆ ಕರ್ನಾಟಕದೊಂದಿಗೆ ನಂಟು ಹಾಗೆಯೇ ಇದೆ.

ಪುಟ್ಟಣ್ಣ ಕಣಗಾಲ್ ಸಿನಿಮಾ ನೋಡಲು ಬರುತ್ತಿದ್ದ ಕಮಲ್
ಪುಟ್ಟಣ್ಣ ಕಣಗಾಲ್ ಅವರನ್ನು ನೆನಪಿಸಿಕೊಂಡ ಕಮಲ್ ಹಾಸನ್, ''ಪುಟ್ಟಣ್ಣ ಕಣಗಾಲ್ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದರೆ ನಿರ್ದೇಶಕ ಬಾಲಚಂದರ್ (ಕಮಲ್ ಹಾಸನ್ ಗುರು) ಕಾರು ಮಾಡಿಕೊಂಡು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದರು. ನಾನು ಅವರೊಟ್ಟಿಗೆ ಬಂದು ಬಿಡುತ್ತಿದ್ದೆ. ಅವರೊಬ್ಬ ಅದ್ಭುತ ನಿರ್ದೇಶಕ'' ಎಂದು ನೆನಪು ಮಾಡಿಕೊಂಡರು ಕಮಲ್ ಹಾಸನ್.

ನಾನು ಗಿರೀಶ್ ಕಾರ್ನಾಡ್ ಅಭಿಮಾನಿ: ಕಮಲ್
ಅದು ಮಾತ್ರವೇ ಅಲ್ಲ, ಕೆಲವು ಅದ್ಭುತ ಬರಹಗಾರರು ಕರ್ನಾಟಕದಲ್ಲಿ ಇದ್ದಾರೆ, ನನ್ನ ಹಲವು ಬರಹಗಾರ ಗೆಳೆಯರು ಕರ್ನಾಟಕದವರೇ ಆಗಿದ್ದಾರೆ. ನಾನು ಚೆನ್ನೈನಿಂದ ಬಿವಿ ಕಾರಂತರನ್ನು ಭೇಟಿಯಾಗಲೆಂದು ಬರುತ್ತಿದ್ದೆ. ಅವರನ್ನು ಕಂಡು ಮಾತನಾಡಿ ಸಿನಿಮಾ ಬಗ್ಗೆ ಇನ್ನಷ್ಟು ಕಲಿತು ಹೋಗುತ್ತಿದ್ದೆ. ನಾನು ಗಿರೀಶ್ ಕಾರ್ನಾಡ್ ಅವರ ದೊಡ್ಡ ಅಭಿಮಾನಿ, ಎಂಥಹಾ ಅದ್ಭುತ ವ್ಯಕ್ತಿ ಅವರು, ಅವರು ಬದುಕಿರುವ ವರೆಗೆ ಅವರ ದೊಡ್ಡತನ ನಮಗೆ ಅರ್ಥವಾಗುವುದಿಲ್ಲ'' ಎಂದರು ಕಮಲ್ ಹಾಸನ್.

''ನಾನು ಉಳಿಯುತ್ತಿದ್ದುದು ಪರಾಗ್ ಹೋಟೆಲ್‌ನಲ್ಲಿ''
ನಾನು ಬೆಂಗಳೂರನ್ನು ಬಹಳ ನೋಡಿದ್ದೇನೆ. ನಾನು ಹಳೆಯ ಬೆಂಗಳೂರು ನೋಡಿದ್ದೇನೆ. ನಾನು ಇಲ್ಲಿ ಜಾಗಿಂಗ್ ಮಾಡುತ್ತಿದ್ದ ದಾರಿಗಳು ನನಗೆ ಇನ್ನೂ ನೆನಪಿವೆ. ಆದರೆ ಈಗ ಬೆಂಗಳೂರು ಸಾಕಷ್ಟು ಬೆಳೆದಿದೆ. ಈಗ ನನ್ನನ್ನು ಕೆಂಪೇಗೌಡ ಸರ್ಕಲ್‌ನಲ್ಲಿ ಬಿಟ್ಟುಬಿಟ್ಟರೆ ನನಗೆ ಎಲ್ಲಿ ಹೋಗುವುದು ಗೊತ್ತಾಗುವುದಿಲ್ಲ. ನಾನು ಈಗ ಬರಬೇಕಾದರೆ ನನ್ನ ಕಾರಿನ ಡ್ರೈವರ್ ಹೇಳುತ್ತಿದ್ದ, 'ಸರ್ ನಾನು ಪ್ರತಿಬಾರಿ ಈ ವಿಂಡ್ಸರ್ ಸರ್ಕಲ್ ಕಡೆ ಬಂದಾಗ ನಿಮ್ಮ ನೆನಪಾಗುತ್ತದೆ ಎಂದು'' ಎಂದು ಬೆಂಗಳೂರಿನೊಟ್ಟಿಗಿನ ನಂಟು ನೆನಪು ಮಾಡಿಕೊಂಡರು ಕಮಲ್ ಹಾಸನ್. ಅದು ಮಾತ್ರವೇ ಅಲ್ಲದೆ, ಡಾ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಬಗ್ಗೆಯೂ ಹಲವಾರು ನೆನಪುಗಳನ್ನು ಕಮಲ್ ಹಾಸನ್ ಹಂಚಿಕೊಂಡರು. ಕರ್ನಾಟಕ ನನಗೆ ಹಲವಾರು ಗುರುಗಳನ್ನು ನೀಡಿದೆ ಎಂದರು.