»   » ಬೆಟ್ಟಿಂಗ್ ನಿಂದ ರೌಡಿಯಾದ 'ಸಿದ್ದಾಪುರ' ಹುಡುಗ

ಬೆಟ್ಟಿಂಗ್ ನಿಂದ ರೌಡಿಯಾದ 'ಸಿದ್ದಾಪುರ' ಹುಡುಗ

Posted By:
Subscribe to Filmibeat Kannada

ಲಾಲ್ ಬಾಗ್ ಹತ್ತಿರ ಇರುವ 'ಸಿದ್ದಾಪುರ' ಒಂದು ಕಾಲದಲ್ಲಿ ರೌಡಿಸಂಗೆ ಹೆಸರಾದ ಸ್ಥಳ. ಹಲವಾರು ರೌಡಿಗಳು ಅಲ್ಲಿ ಮೆರೆದಾಡಿದ್ದಾರೆ. ಈಗ ಅದೇ ಸ್ಥಳದಲ್ಲಿ ನಡೆದಂಥ ಘಟನೆಯೊಂದನ್ನು ಇಟ್ಟುಕೊಂಡು ನಿರ್ದೇಶಕ ಕೃಷ್ಣ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಈ ಚಿತ್ರದ ಹೆಸರು ಕೂಡ 'ಸಿದ್ದಾಪುರ' ಆಗಿದ್ದು ಕಳೆದ ಶನಿವಾರ (ಅ.4) ವಿಜಯದಶಮಿಯ ಶುಭ ದಿನದಂದು ಕಂಠೀರವ ಸ್ಟುಡಿಯೊದಲ್ಲಿ ಮುಹೂರ್ತ ನಡೆಯಿತು.

ಈ ಹಿಂದೆ ದೆಹಲಿ ಅತ್ಯಾಚಾರ ಪ್ರಕರಣ ಆಧಾರಿತ 'ಜಾಸ್ಮಿನ-5' ಎಂಬ ಚಿತ್ರವನ್ನು ನಿರ್ದೇಶಸಿದ್ದ ಕೃಷ್ಣ ತಮ್ಮ 2ನೇ ಚಿತ್ರಕ್ಕೂ ನೈಜ ಘಟನೆಯನ್ನು ಆಧರಿಸಿ ಕಥೆ ಮಾಡಿಕೊಂಡಿದ್ದಾರೆ. ಕೆಲ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದ ರಾಮ್ ಈ ಚಿತ್ರದ ಮೂಲಕ ನಾಯಕನಾಗುತ್ತಿದ್ದಾರೆ. 'ಜಾಸ್ಮಿನ್-5' ಚಿತ್ರಕ್ಕೆ ಸಂಗೀತ ಮಾಡಿದ್ದ ಶ್ರೀ ಹರ್ಷ ಈ ಚಿತ್ರಕ್ಕೂ ಸಂಗೀತ ನಿರ್ದೇಶಕರು.


ಮುಹೂರ್ತದ ನಂತರ ಮಾತನಾಡಿದ ಕೃಷ್ಣ, "ನಾನು ಸಿದ್ದಾಪುರದಲ್ಲೇ ಹುಟ್ಟು ಬೆಳೆದಿದ್ದರಿಂದ 2 ದಶಕಗಳ ಹಿಂದೆ ಅಲ್ಲೇ ನಡೆದಂತ ಕಥೆಯನ್ನು ತೆರೆಯ ಮೇಲೆ ತರುತ್ತಿದ್ದೇನೆ. ಮಧ್ಯಮ ವರ್ಗದ ಹುಡುಗನೊಬ್ಬ ಕ್ರಿಕೆಟ್ ಬೆಟ್ಟಿಂಗ್ ಹುಚ್ಚಗೆ ಬಿದ್ದು ಸಾಲ ಮಾಡಿಕೊಳ್ಳುತ್ತಾನೆ. ಸಾಲ ಹೆಚ್ಚಾದಾಗ ಅನಿವಾರ್ಯವಾಗಿ ರೌಡಿಸಂ ಫೀಲ್ಡಿಗೆ ಇಳಿಯುತ್ತಾನೆ...

"ಈಗಿನ ಐ.ಪಿ.ಎಲ್. ಬೆಟ್ಟಿಂಗ್ ಜೊತೆಗೆ ಲವ್ ಸ್ಟೋರಿ ಸೇರಿಸಿ ಸ್ಕ್ರಿಪ್ಟ್ ಮಾಡಿದ್ದು ಕೊನೆಯಲ್ಲಿ ಒಂದು ಮೆಸೇಜ್ ಇಟ್ಟಿದ್ದೇನೆ. ಈ ಘಟನೆಗೆ ಸಂಬಂಧಿಸಿದ ಕೆಲ ವ್ಯಕ್ತಿಗಳು ಈಗಲೂ ಇದ್ದಾರೆ. ಅವರಿಗೆ ತಿಳಿಸಿಯೇ ಈ ಚಿತ್ರ ಮಾಡುತ್ತಿದ್ದೇನೆ. ಅವರು ಕೂಡ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ನಾಯಕ ತಾನು ಪ್ರೀತಿಸಿದ ಹುಡುಗಿ ಸಿಗದಿದ್ದಾಗ, ಇನ್ನೊಬ್ಬಳ ಪ್ರೀತಿ ಬಯಸುತ್ತಾನೆ. ಆಕೆಯಾದರೂ ಸಿಗುತ್ತಾಳಾ, ಇಲ್ವಾ ಅನ್ನೊದನ್ನು ಚಿತ್ರದಲ್ಲಿ ಹೇಳುತ್ತೇನೆ" ಎಂದು 'ಸಿದ್ದಾಪುರ'ದ ಬಗ್ಗೆ ಬಹುತೇಕ ಮಾಹಿತಿಗಳನ್ನು ಹೇಳಿದರು.

ಚಿತ್ರದ ನಾಯಕ ರಾಮ್ ಮಾತನಾಡಿ, "ಹೀರೋ ಆಗಿ ಇದು ನನ್ನ ಮೊದಲ ಚಿತ್ರ. ಹೇಳಿದವರ ಮಾತು ಕೇಳದ ಹಠಮಾರಿ ಹುಡುಗ. ಕ್ರಿಕೆಟ್ ಬೆಟ್ಟಿಂಗ್ ಮಾಫಿಯಾ ಸುಳಿಗೆ ಸಿಲುಕಿ ರೌಡಿಯಾಗುತ್ತಾನೆ. ಬಯಸಿದ ಪ್ರೀತಿಯೂ ಸಿಗದೆ ಜೀವನದಲ್ಲಿ ಒಳ್ಳೆ ದಾರಿಯಲ್ಲೂ ಹೋಗದೆ ಅಂತ್ಯದಲ್ಲಿ ನಾನು ಏನಾಗುತ್ತೇನೆ. ಅನ್ನೋದನ್ನು ನಿದೇಶಕ ಕೃಷ್ಣ ತುಂಬಾ ಸೊಗಸಾಗಿ ನಿರೂಪಿಸಿದ್ದಾರೆ. ಪರಿಣಾಮಕಾರಿ ಸಂಭಾಷಣೆಗಳು ಈ ಚಿತ್ರದಲ್ಲಿವೆ ಎಂದು ಹೇಳಿದರು.

ನಾಯಕಿಯರಲ್ಲೊಬ್ಬಳಾದ ನವ್ಯಾ ಮಾತನಾಡಿ ಈ ಹಿಂದೆ 'ಗುಂಡ್ರಗೋವಿ'ಯಲ್ಲಿ ಅಭಿನಯಿಸಿದ್ದೆ, ಪ್ರಥಮಾರ್ಧದಲ್ಲಿ ಕಾಲೇಜು ಹುಡುಗಿಯಾಗಿದ್ದರೂ ದ್ವಿತೀಯಾರ್ಧದಲ್ಲಿ ಬೇರೆ ಥರದ ಪಾತ್ರವಿದೆ ಎಂದರು. ಇನ್ನೊಬ್ಬ ನಾಯಕಿ ಅನುಶೆಟ್ಟಿ ಮಾತನಾಡಿ ಮಧ್ಯಮ ವರ್ಗದ ಹುಡುಗಿ, ಸುಸಂಸ್ಕೃತ ಪಾತ್ರ ನನ್ನದು. ಹಿಂದೆ ಪ್ರೀತಿ ಮಾಡು ತಪ್ಪೇನಿಲ್ಲ. ಮಲ್ಲಿಗೇಪುರ ಚಿತ್ರಗಳಲ್ಲಿ ಅಭಿನಯಸಿದ್ದು ಇದು 3ನೇ ಚಿತ್ರ ಎಂದರು.

ಚಿತ್ರದ ನಿರ್ಮಾಪಕರಾದ ಶ್ರೀನಿವಾಸ್ ಕಳೆದ ನಾಲ್ಕೈದು ವರ್ಷಗಳಿಂದ ಸಹಕಲಾವಿದರನ್ನು ಸರಬರಾಜು ಮಾಡುತ್ತಾ ಚಿತ್ರರಂಗದಲ್ಲಿ ತೊಡಗಿಕೊಂಡವರು. ಮೊದಲ ಬಾರಿಗೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಕಥೆಗೆ ಏನು ಬೇಕೋ ಅದನ್ನೆಲ್ಲ ಒದಗಿಸಲು ಸಿದ್ದರಾಗಿ ನಿಂತಿದ್ದಾರೆ. ಕಲ್ಯಾಣ ಮಸ್ತು ಹಾಗೂ ಇತರ ಚಿತ್ರಗಳಿಗೆ ಕೆಲಸ ಮಾಡಿರುವ ಸಿದ್ದಾರ್ಥ ಈ ಚಿತ್ರಕ್ಕೆ ಕ್ಯಾಮರಾ ಹಿಡಿಯಲಿದ್ದಾರೆ.

ಮೈಸೂರು, ಬೆಂಗಳೂರು ಸುತ್ತಮುತ್ತ ಹಾಗೂ ಸಿದ್ದಾಪುರದಲ್ಲಿ ಹೆಚ್ಚಿನಭಾಗದ ಶೂಟಿಂಗ್ ನಡೆಯಲಿದ್ದು. ತಬಲಾನಾಣಿ, ಸಾಧುಕೋಕಿಲ, ರಾಮಕೃಷ್ಣ, ಸುಧಾರಾಣಿ ಉಳಿದ ತಾರಾಬಳಗದಲ್ಲಿದ್ದಾರೆ. ಅರುಂಧತಿನಾಗ್ ಅವರನ್ನು ನಾಯಕನ ತಾಯಿ ಪಾತ್ರಕ್ಕಾಗಿ ಸಂಪರ್ಕಿಸಲಾಗಿದ್ದು, ಕಥೆ ಪಾತ್ರದ ಬಗ್ಗೆ ಹೇಳಲಾಗಿದೆ ಅವರು ಖಂಡಿತ ಒಪ್ಪುತ್ತಾರೆ ಎಂದು ನಿರ್ದೇಶಕ ಕೃಷ್ಣ ಹೇಳಿದರು. (ಫಿಲ್ಮಿಬೀಟ್ ಕನ್ನಡ)

English summary
Kannada commercial mass entertainer Siddapura launched on 4th October. It is a story of a common man who turns in to a rowdy in the locality and gets in trouble with IPL betting. Major shoot of the film will be held in Madikeri, Chickmagalur and Mysore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada