For Quick Alerts
  ALLOW NOTIFICATIONS  
  For Daily Alerts

  ಡಾ.ವಿಷ್ಣು ನೆನಪಲ್ಲಿ 'ಕನ್ನಡ ಮಾಣಿಕ್ಯ' ಮಾಸಪತ್ರಿಕೆ

  By ವೀರಕಪುತ್ರ ಶ್ರೀನಿವಾಸ
  |

  ಸಾಹಸಸಿಂಹ ಡಾ.ವಿಷ್ಣುವರ್ಧನ ಅವರು ನಮ್ಮನ್ನಗಲಿ 5 ವರುಷಗಳೇ ಸಂದಿದ್ದರೂ, ಅವರ ಹೆಸರಿನಲ್ಲಿ ನಡೆಯುತ್ತಿರುವ ಕೆಲಸಗಳಿಗೇನು ಬರವಿಲ್ಲ. ಹಾಗಂತ ಸರ್ಕಾರವೋ, ಅಕಾಡೆಮಿಗಳೋ ಈ ಕೆಲಸಗಳನ್ನು ಮಾಡುತ್ತಿರಬಹುದು ಎಂದು ಅಂದಾಜಿಸಿದರೆ ಖಂಡಿತ ಅದು ತಪ್ಪು.

  ಏಕೆಂದರೆ ಸರ್ಕಾರಗಳು, ಅಕಾಡೆಮಿಗಳು, ವಾಣಿಜ್ಯ ಮಂಡಳಿ ಮತ್ತು ಗಾಂಧಿನಗರದವರು ವಿಷ್ಣು ಅವರನ್ನು ಸಾಂಸ್ಕೃತಿಕ ರಾಯಭಾರಿ ರೀತಿ ಯಾವತ್ತು ನಡೆಸಿಕೊಂಡಿವೆ ಹೇಳಿ? ಅವರು ಬದುಕಿದ್ದಾಗಲೇ ಅವರಿಗೋಸ್ಕರ ಏನೂ ಮಾಡದ ಇವರು ಅವರಿಲ್ಲವಾದ ಮೇಲೆ ಏನಾದರೂ ಮಾಡುತ್ತಾರೆ ಎಂದರೆ ನಂಬುವುದಾದರೂ ಹೇಗೆ? ಅವರನ್ನು ಸದಾ ನೆನಪಿಸಿಕೊಳ್ಳುವುದು ಅವರಿಗೋಸ್ಕರ ಅಗತ್ಯವಿರುವ ಕೆಲಸಗಳನ್ನು ನಿರ್ವಹಿಸುವಂತಹ ಮಹತ್ತರ ಕೆಲಸಗಳನ್ನು ಮಾಡುತ್ತಿರುವುದು ಅವರ ಅಭಿಮಾನಿಗಳು ಮತ್ತು ಕುಟುಂಬದವರು ಮಾತ್ರ.

  ಕಳೆದ ವರುಷ 14.5 ಕಿ.ಮಿ ರಸ್ತೆ ಡಾ.ವಿಷ್ಣುವರ್ಧನ ರಸ್ತೆ ಎಂದು ನಾಮಕರಣಗೊಳ್ಳಲು ಶ್ರಮಿಸಿದ ಕುಟುಂಬ ಮತ್ತು ಅಭಿಮಾನಿಗಳು ಮೊನ್ನೆ ಮೊನ್ನೆ 'ಖೈದಿ' ಚಿತ್ರ ಮರುಬಿಡುಗಡೆಗೊಳಿಸಿದ ಸಂದರ್ಭದಲ್ಲಿ ದಾಖಲೆಯ ಹಾರ ಹಾಕಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಮಾಡಿದರು. ಈಗ ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಪತ್ರಿಕೆಯನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. [ಗಿನ್ನಿಸ್ ದಾಖಲೆಯತ್ತ ಸಾಹಸಸಿಂಹ 'ಖೈದಿ' ಕಟೌಟ್]

  ಡಾ.ವಿಷ್ಣುವರ್ಧನ ಸೇನಾ ಸಮಿತಿಯ ಸಾರಥ್ಯದಲ್ಲಿ "ಕನ್ನಡ ಮಾಣಿಕ್ಯ" ಎಂಬ ಮಾಸಪತ್ರಿಕೆಯನ್ನು ಹೊರತರುತ್ತಿದ್ದಾರೆ. ಈ ಪತ್ರಿಕೆಯ ಪ್ರಧಾನ ಸಂಪಾದಕರು ಚಿತ್ರ ಸಾಹಿತಿಗಳಾದ ಡಾ.ವಿ.ನಾಗೇಂದ್ರ ಪ್ರಸಾದ್ ಅವರಾದರೆ, ಸಂಪಾದಕರಾಗಿ ಡಾ.ಸಂತೋಷ್ ಸು.ಹಾನಗಲ್ ಅವರು ಕಾರ್ಯನಿರ್ವಹಿಸಲಿದ್ದಾರೆ. ಈ ಪತ್ರಿಕೆಯು ಯುವ ಮನಸುಗಳು ಕೂಡಿ ಸಿದ್ಧಪಡಿಸುತ್ತಿರುವ ಕೌಟುಂಬಿಕ ಪತ್ರಿಕೆಯಾಗಿರುತ್ತದೆ.

  ಈ ಹಿಂದೆಯೂ ಡಾ.ವಿಷ್ಣು ಅವರಿಗೆ ಸಂಬಂಧಿಸಿದ ಪತ್ರಿಕೆಗಳು ಬಂದಿದ್ದವಾದರೂ ಅವೆಲ್ಲವೂ ವ್ಯಾಪಾರದ ಅಡಿಯಲ್ಲಿಯೇ ರೂಪುಗೊಂಡಿದ್ದಂತಹವು. ಆದರೆ 'ಕನ್ನಡ ಮಾಣಿಕ್ಯ' ಪತ್ರಿಕೆಯು ವ್ಯಾಪಾರೀ ಮನೋಭಾವದಿಂದ ರೂಪುಗೊಳ್ಳದೇ ಅಭಿಮಾನದಿಂದ, ಅಭಿಮಾನಕ್ಕಾಗಿ ರೂಪಗೊಂಡಿದೆ. ಈ ಪತ್ರಿಕೆಯು ಡಾ.ವಿಷ್ಣು ಅವರ ವಿಷಯಗಳನ್ನು ಒಳಗೊಂಡಿದ್ದರೂ ಅವರಿಗೇ ಸೀಮಿತವಾಗಿಲ್ಲ ಎಂಬುದು ವಿಶೇಷ.

  ಕನ್ನಡ ಚಳವಳಿ, ಸಾಹಿತ್ಯ, ಕ್ರೀಡೆ, ಕಥೆ, ಧಾರಾವಾಹಿ, ಸಿನಿಮಾ, ಜ್ಞಾನ, ಮನೋಲ್ಲಾಸ, ವ್ಯಕ್ತಿತ್ವ ವಿಕಸನದಂತಹ ವಿಷಯಗಳ ಜೊತೆಗೆ ಡಾ.ವಿಷ್ಣು ಅವರ ಜೀವನಾದರ್ಶಗಳನ್ನು ಸಹ ಒಳಗೊಂಡಿರುವ ಈ ಪತ್ರಿಕೆಯು ಗೃಹಿಣಿಯರನ್ನು ಮತ್ತು ಯುವ ಮನಸುಗಳನ್ನು ತಲುಪುವ ಉದ್ದೇಶವನ್ನಿಟ್ಟುಕೊಂಡಿದೆ. ಆ ಮೂಲಕ ಮುಂದಿನ ತಲೆಮಾರಿಗೆ ಡಾ.ವಿಷ್ಣು ಅವರ ತತ್ವಾದರ್ಶಗಳನ್ನು ತಲುಪಿಸುವ ಗುರುತರ ಹೊಣೆಯನ್ನು ಈ ಪತ್ರಿಕೆ ಹೊಂದಿದೆ.

  ಈ ಪತ್ರಿಕೆಯಿಂದ ಬರುವ ಹಣದಲ್ಲಿ ಡಾ.ವಿಷ್ಣು ಅವರ ಒಂದು ಕಿರುಸ್ಮಾರಕವನ್ನು 30‌x40 ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಿಸಿ ಅಲ್ಲಿ 25 ಅಡಿ ಎತ್ತರದ ಡಾ.ವಿಷ್ಣು ಪ್ರತಿಮೆಯನ್ನು ಅನಾವರಣಗೊಳಿಸುವುದು, ಬೆಂಗಳೂರಿನಲ್ಲಿ ಡಾ.ವಿಷ್ಣು ಕನ್ನಡ ಭವನವನ್ನು ನಿರ್ಮಿಸುವುದು, ಡಾ.ವಿಷ್ಣು ಅವರ ವ್ಯಕ್ತಿಚಿತ್ರವನ್ನು ಕಟ್ಟಿಕೊಡುವ ಕಿರುಹೊತ್ತಿಗೆಗಳನ್ನು ಪ್ರಕಟಿಸುವುದು, ಪ್ರತಿ ಜಿಲ್ಲೆಯಲ್ಲೂ ಡಾ.ವಿಷ್ಣು ಅವರ ಹೆಸರನ್ನು ಪ್ರಮುಖ ರಸ್ತೆಗಳಿಗೆ ಇಡುವಂತೆ ಒತ್ತಡ ಏರುವುದು ಮುಂತಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

  ಈ ಮಹತ್ತರ ಕೆಲಸಕ್ಕೆ ಸಾಕಷ್ಟು ಅಭಿಮಾನಿಗಳು ಜೊತೆಯಾಗಿದ್ದಾರೆ. ವಿಷ್ಣುಪ್ರಕಾಶ್, ಮಂಜುಮಾಣಿಕ್ಯ, ವಿಷ್ಣುಪ್ರತಾಪ್, ಆನಂದ್ ರಾಚ್, ಯದುನಂದನ ಗೌಡ, ಅರ್ಜುನ್, ಜಗದೀಶ್, ಡಾ.ಚಂದ್ರಶೇಖರ್, ಮಂಜು ಸಿಂಹಗರ್ಜನೆ, ಕೆ.ಎನ್.ಸುಪ್ರೀತ್, ಶಶಿವರ್ಧನ್, ವಿಷ್ಣುಸಂದೀಪ್, ಕಿರಣ್ ಕುಮಾರ್, ಸಂತೋಷ್, ಸೂಲಿಕುಂಟೆ ಪ್ರತಾಪ್ ಮತ್ತು ಚಿಕ್ಕಮಗಳೂರು ಹರ್ಷ ಮುಂತಾದವರು ಈ ಪತ್ರಿಕೆಯ ಹಿಂದಿರುವ ಶಕ್ತಿಗಳು. ನೀವೂ ಸಹ ಈ ಮಹತ್ತರ ಯೋಜನೆಯಲ್ಲಿ ಭಾಗಿಗಳಾಗಬೇಕಾದರೆ ಸಂಪರ್ಕಿಸಿ: 98442 52172 (ಸಂಪಾದಕರು, ಕನ್ನಡ ಮಾಣಿಕ್ಯ ಮಾಸಪತ್ರಿಕೆ)

  English summary
  A new cinema monthly magazine 'Kannada Maanikya' all set to hit market soon. The family magazine purely meant for Kannada movies, sports, Kannada campaigns, stories, entertainment and many more. V Nagendra Prasad is the Editor in Chief of the magazine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X