»   » ವಿವಾದಗ್ರಸ್ತ ಕನ್ನಡ ಚಲನಚಿತ್ರ ಶೀರ್ಷಿಕೆಗಳು

ವಿವಾದಗ್ರಸ್ತ ಕನ್ನಡ ಚಲನಚಿತ್ರ ಶೀರ್ಷಿಕೆಗಳು

Posted By:
Subscribe to Filmibeat Kannada

ಚಲನಚಿತ್ರಗಳಿಗೂ ಮತ್ತು ಶೀರ್ಷಿಕೆ ವಿವಾದಗಳಿಗೂ ಅವಿನಾಭಾವ ನಂಟು, ಈ ವಿವಾದಗಳು ಬರೀ ಕನ್ನಡ ಚಿತ್ರಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಂಥಹ ವಿವಾದಗಳು ಕೆಲವೊಮ್ಮೆ ಪಬ್ಲಿಸಿಟಿಗಾಗಿ ನಡೆಯುತ್ತಿರುವ ತಂತ್ರಗಳಾಗುತ್ತಿರುವುದು ಮುಚ್ಚಿಡುವ ಸಂಗತಿಯಾಗಿ ಉಳಿದಿಲ್ಲ.

ಚಿತ್ರಕ್ಕೆ ಹೆಸರಿಡುವ ಮುನ್ನ ಕರ್ನಾಟಕ ಚಲನಚಿತ್ರ ಮಂಡಳಿಯಲ್ಲಿ ಚಿತ್ರದ ಟೈಟಲ್ ನೊಂದಾಯಿಸುವುದು ಪದ್ದತಿ. ಅದಕ್ಕೆಂದೇ ಇರುವ ಟೈಟಲ್ ಸಮಿತಿ ಹೆಸರನ್ನು ಅಂತಿಮಗೊಳಿಸುತ್ತದೆ. ಚಿತ್ರದ ಹೆಸರು ವಿವಾದಕ್ಕೆ ಎಡೆ ಮಾಡಿಕೊಡಬಹುದು ಎಂದಾದರೆ ಚರ್ಚಿಸಿ ನಿರ್ಧಾರಕ್ಕೆ ಬರುತ್ತದೆ.

ಈ ಪದ್ದತಿ ನಮ್ಮಲ್ಲೂ ಜಾರಿಯಲ್ಲಿದ್ದರೂ ಕೂಡಾ ಟೈಟಲ್ ವಿವಾದಗಳಿಂದ ಬಹಳಷ್ಟು ಚಿತ್ರಗಳು ತಮ್ಮ ಟೈಟಲ್ ಚೇಂಜ್ ಮಾಡಿರುವ ಉದಾಹರಣೆಗಳಿವೆ. ಎಷ್ಟೇ ವಿವಾದದ ನಡುವೆಯೂ ಅದೇ ಹೆಸರು ಉಳಿಸಿಕೊಂಡ ಉದಾಹರಣೆಗಳನ್ನೂ ಕೊಡಬಹುದು.

ಉಪೇಂದ್ರ ಅಭಿನಯದ, ಶ್ರೀನಿವಾಸರಾಜು ನಿರ್ದೇಶನದ ಬಸವಣ್ಣ ಚಿತ್ರ ಇದಕ್ಕೆ ಹೊಸ ಸೇರ್ಪಡೆ. ಈ ಚಿತ್ರದ ಟೈಟಲ್ ವಿವಾದಕ್ಕೆ ರಾಜಕೀಯ ಬಣ್ಣ ಬಳೆದು ಈಗ ತೀವ್ರ ವಿವಾದಕ್ಕೆ ಗುರಿಯಾಗುತ್ತಿದೆ. ಚಿತ್ರದ ಶೀರ್ಷಿಕೆ ವಿವಾದಕ್ಕೆ ಅಂತಿಮ ತೆರೆ ಇನ್ನೂ ಬಿದ್ದಿಲ್ಲ.

ಈ ಮಧ್ಯೆ, ಶೀರ್ಷಿಕೆ ವಿವಾದಕ್ಕೊಳಗಾದ ಚಿತ್ರಗಳನ್ನು ಪಟ್ಟಿ ಮಾಡಲು ಹೊರಟರೆ ಅದು ಸಾಗುತ್ತಲೇ ಇರುತ್ತವೆ. ಆದರೂ, ಈ ವಿವಾದಕ್ಕೊಳಗಾದ ಇತ್ತೀಚಿನ ಕೆಲವು ಚಿತ್ರಗಳ ಬಗ್ಗೆ ಸ್ಲೈಡಿನಲ್ಲಿ ತಿಳಿದುಕೊಳ್ಳೋಣ.

ಕಿರಿಕಿರಿ ಮಾಡಿದ್ದ ಹಾಟ್, ಬೋಲ್ಡ್ ಪೋಸ್ಟರ್ಸ್

ಮಸ್ತಿ

ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿದ್ದ ಈ ಚಿತ್ರಕ್ಕೆ 'ಮಾಸ್ತಿ' ಎಂದು ಹೆಸರಿಡಲಾಗಿತ್ತು. ರೌಡಿ ಕಥಾನಕ ಹಂದರದ ಈ ಚಿತ್ರಕ್ಕೆ ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಹೆಸರು ಯಾಕಿಡ ಬೇಕು ಎಂದು ಪ್ರತಿಭಟನೆ ಶುರುವಾದಾಗ ಚಿತ್ರದ ಹೆಸರನ್ನು ಮಸ್ತಿ ಎಂದು ಬದಲಾಯಿಸಲಾಯಿತು.

ವಿಷ್ಣುವರ್ಧನ

ದ್ವಾರಕೀಶ್ ನಿರ್ಮಾಣದ ಸುದೀಪ್ ಪ್ರಮುಖ ಭೂಮಿಕೆಯಲ್ಲಿರುವ ಚಿತ್ರದ ಟೈಟಲ್ ಭಾರೀ ಗದ್ದಲ ಮಾಡಿತ್ತು. ದಿವಂಗತ ಸಾಹಸಸಿಂಹ ವಿಷ್ಣುವರ್ಧನ್ ಹೆಸರು ಇಡಬಾರದೆಂದು ವಿಷ್ಣು ಪತ್ನಿ ಭಾರತಿ ಚೇಂಬರ್ ಮೆಟ್ಟಲೇರಿದ್ದರು. ಕೆಲವು ತಿಂಗಳುಗಳ ಕಾಲ ನಡೆದ ವಾದ ವಿವಾದಗಳಿಗೆ ಪರಿಹಾರ ಸಿಗಲಿಲ್ಲ. ಚಿತ್ರ ಅದೇ ಹೆಸರಿನಲ್ಲಿ ಬಿಡುಗಡೆಯಾಯಿತು.
(ವಿಷ್ಣುವರ್ಧನ ಚಿತ್ರ ವಿಮರ್ಶೆ)

ಮಂಜುನಾಥ BALLB

ಸೆಪ್ಟೆಂಬರ್ 2012ರಂದು ಬಿಡುಗಡೆಯಾದ ನವರಸ ನಾಯಕ ಜಗ್ಗೇಶ್ ಅಭಿನಯದ 'ಮಂಜುನಾಥ ಬಿಎಎಲ್ಎಲ್ ಬಿ' ಚಿತ್ರದ ನಿರ್ಮಾಪಕ ಎ ಸುರೇಶ್, ಕೇಂದ್ರ ಸರ್ಕಾರ ಹಾಗೂ ಸೆನ್ಸಾರ್ ಬೋರ್ಡಿಗೆ ಹೈಕೋರ್ಟ್ ನಿಂದ ತುರ್ತು ನೋಟಿಸ್ ಜಾರಿಮಾಡಿತ್ತು. ಶೀರ್ಷಿಕೆಯಲ್ಲಿ 'ಬಿಎ ಎಲ್ ಎಲ್ ಬಿ' ಎಂಬ ಪದವನ್ನು ಕಿತ್ತುಹಾಕುವಂತೆ ಸೂಚಿಸಿ ಎನ್ ಕೆ ವಿಜಯ್ ಕುಮಾರ್ ಎನ್ನುವವರು ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ಚಿತ್ರದ ಟೈಟಲ್ ಚೇಂಜ್ ಆಗಲಿಲ್ಲ.
(ಮಂಜುನಾಥ BALLB ಚಿತ್ರ ವಿಮರ್ಶೆ)

ಪ್ರೇಮ್ ಅಡ್ಡ

'ಅಡ್ಡ' ಎಂಬ ಶೀರ್ಷಿಕೆ ಬಿ.ಕೆ. ಶ್ರೀನಿವಾಸ್ ಎನ್ನುವವರ ಕೈಯಲ್ಲಿತ್ತು, ಅದೇ ಶೀರ್ಷಿಕೆಯನ್ನು ಪ್ರೇಮ್ ನಾಯಕತ್ವದ ಚಿತ್ರಕ್ಕೆ ಕೊಡಲಾಗದು ಎಂದು ವಾಣಿಜ್ಯ ಮಂಡಳಿ ಹೇಳಿತ್ತು. ಆಗ ಓಕೆ ಎಂದಿದ್ದ ಪ್ರೇಮ್, 'ಪ್ರೇಮ್ ಅಡ್ಡ' ಎಂದು ತನ್ನ ಚಿತ್ರಕ್ಕೆ ಹೆಸರಿಟ್ಟಿದ್ದರು. ಇದನ್ನು ಚಲನ ಚಿತ್ರ ವಾಣಿಜ್ಯ ಮಂಡಳಿ ಒಪ್ಪಿರಲಿಲ್ಲ. ಪ್ರೇಮ್ ಮತ್ತು ಅಡ್ಡ ಇವುಗಳನ್ನು ಒಂದೇ ಗಾತ್ರದಲ್ಲಿ ಪ್ರಕಟಿಸಬೇಕು ಎಂದು ಷರತ್ತು ನೀಡಿತ್ತು. ಆದರೆ ಆದರೆ ಚಿತ್ರತಂಡ ಅವರ ಷರತ್ತಿಗೆ ವಿರುದ್ಧವಾಗಿ ಪ್ರೇಮ್ ಎಂಬುದನ್ನು ಚಿಕ್ಕದಾಗಿ ಹಾಗೂ ಅಡ್ಡ ಎಂಬುದನ್ನು ದೊಡ್ಡದಾಗಿ ಮುದ್ರಿಸಿತ್ತು. ಇದಕ್ಕೆ ಕೆ ಎಫ್ ಸಿಸಿ ಕ್ಯಾತೆ ತೆಗೆದಿತ್ತು. ಕೊನೆಗೆ ಮಣಿದ ಚಿತ್ರತಂಡ ಮಂಡಳಿ ಆದೇಶಕ್ಕೆ ತಲೆಬಾಗಿತ್ತು.
(ಪ್ರೇಮ್ ಅಡ್ಡ ಚಿತ್ರ ವಿಮರ್ಶೆ)

ಈ ಶತಮಾನದ ವೀರಮದಕರಿ

ಚಿತ್ರದುರ್ಗದ ಪಾಳೇಗಾರ ಮದಕರಿ ಹೆಸರಿನಲ್ಲಿ ಕಮರ್ಷಿಯಲ್ ಚಿತ್ರ ಮಾಡುವುದಕ್ಕೆ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಸುದೀಪ್ ಅಭಿನಯದ ಈ ಚಿತ್ರದ ಹೆಸರನ್ನು ಕೊನೆಗೆ "ಈ ಶತಮಾನದ ವೀರಮದಕರಿ" ಎಂದು ಬದಲಾಯಿಸಲಾಯಿತು.
(ಈ ಶತಮಾನದ ವೀರಮದಕರಿ ಚಿತ್ರ ವಿಮರ್ಶೆ)

ಕನ್ನಡದ ಕಿರಣ್ ಬೇಡಿ

ದೆಹಲಿಯ ದಕ್ಷ ಪೋಲೀಸ್ ಅಧಿಕಾರಿಣಿ ಕಿರಣ್ ಬೇಡಿ ಹೆಸರನ್ನಿಡುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಮಾಲಾಶ್ರೀ ಅಭಿನಯದ ಈ ಚಿತ್ರಕ್ಕೆ ಕೊನೆಗೆ ಕನ್ನಡದ ಕಿರಣ್ ಬೇಡಿ ಎಂದು ಮರು ನಾಮಕರಣ ಮಾಡಲಾಗಿತ್ತು.

ನಮ್ಮ ಬಸವ

ಪುನೀತ್ ರಾಜಕುಮಾರ್ ಅಭಿನಯದ ಚಿತ್ರಕ್ಕೆ ಮೊದಲು ಬಸವ ಎಂದು ಹೆಸರಿಡಲಾಗಿತ್ತು. ನಿರೀಕ್ಷೆಯಂತೆ ಟೈಟಲ್ ವಿವಾದಕ್ಕೊಳಗಾದಾಗ ಹೆಸರನ್ನು 'ನಮ್ಮ ಬಸವ' ಎಂದು ಚೇಂಜ್ ಮಾಡಲಾಯಿತು.

ಓಬವ್ವ

ಲೇಡಿ ಬ್ರೂಸ್ಲಿ ಖ್ಯಾತಿಯ ಆಯೇಷಾ ಮುಖ್ಯಭೂಮಿಕೆಯಲ್ಲಿದ್ದ ಚಿತ್ರ 'ಓಬವ್ವ'. ಈ ಹಿಂದೆ ಈ ಚಿತ್ರಕ್ಕೆ 'ಒನಕೆ ಓಬವ್ವ' ಎಂದು ಹೆಸರಿಡಲಾಗಿತ್ತು. ಈ ಶೀರ್ಷಿಕೆಗೆ ನಾಡಿನಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶೀರ್ಷಿಕೆಯನ್ನು 'ಓಬವ್ವ' ಎಂದು ಬದಲಾಯಿಸಲಾಗಿತ್ತು.

ದಂಡುಪಾಳ್ಯ

ಹೊಸಕೋಟೆ ಸಮೀಪವಿರುವ ಊರಿನ ಹೆಸರು ದಂಡುಪಾಳ್ಯ, ಚಿತ್ರಕ್ಕೆ ಆ ಹೆಸರಿಡ ಬಾರದೆಂದು ಊರಿನ ಗ್ರಾಮಸ್ಥರೂ ಸೇರಿ ಪ್ರತಿಭಟನೆ ವ್ಯಕ್ತವಾಗಿತ್ತು. ಈ ಪ್ರತಿಭಟನೆಗೆ ಜಪ್ಪಯ್ಯ ಅನ್ನದ ಚಿತ್ರತಂಡ ಟೈಟಲ್ ಚೇಂಜ್ ಮಾಡುವ ಗೋಜಿಗೆ ಹೋಗಲಿಲ್ಲ.

ಯಾರಿವನು

ಈ ಚಿತ್ರಕ್ಕೆ ಮೊದಲು ಸತ್ಯಾನಂದ ಎಂದು ಹೆಸರಿಡಲಾಗಿತ್ತು. ಆದರೆ ಕೋರ್ಟ್ ಆಕ್ಷೇಪ ಪಡಿಸಿದ ನಂತರ ಯಾರಿವನು ಎಂದು ಬದಲಾಯಿತು. 'ಸತ್ಯಾನಂದ' ಎಂಬ ಶೀರ್ಷಿಕೆಯನ್ನು ಬದಲಾಯಿಸಿ ಎಂದು ಕರ್ನಾಟಕ ಹೈಕೋರ್ಟ್ ಸೂಚಿಸಿತ್ತು.
(ಯಾರಿವನು ಚಿತ್ರ ವಿಮರ್ಶೆ)

ಸಿಲ್ಕ್ ಸಖತ್ ಹಾಟ್ ಮಗಾ..

ಕನ್ನಡದ ಡರ್ಟಿ ಪಿಚ್ಚರ್ ಎನ್ನುವ ಹೆಸರಿಗೆ ಏಕ್ತಾ ಕಪೂರ್ ಕೋರ್ಟಿನಿಂದ ತಡೆಯಾಜ್ಞೆ ತಂದ ನಂತರ ಚಿತ್ರದ ಟೈಟಲ್ ಸಿಲ್ಕ್ ಸಖತ್ ಹಾಟ್ ಮಗಾ ಎಂದು ಬದಲಾಯಿತು.

ಭೀಮಾ ತೀರದಲ್ಲಿ

'ಭೀಮಾ ತೀರದಲ್ಲಿ' ಚಿತ್ರ ಭಾರೀ ವಿವಾದವನ್ನು ಸೃಷ್ಟಿಸಿತ್ತು. ತಮ್ಮ ಕೃತಿ 'ಭೀಮಾ ತೀರದ ಹಂತಕರು' ಕತೆಯನ್ನು ಕದ್ದು ಚಿತ್ರವನ್ನು ತೆರೆಗೆ ತಂದಿದ್ದಾರೆ ಎಂದು 'ಹಾಯ್ ಬೆಂಗಳೂರು' ವಾರ ಪತ್ರಿಕೆ ಸಂಪಾದಕ ರವಿ ಬೆಳೆಗೆರೆ ನೇರಾನೇರವಾಗಿ ಆರೋಪಿಸಿದ್ದರು.

ಮಠ

ಮಠಾಧೀಶರಿಂದ ಮತ್ತು ಕೆಲವರಿಂದ ಚಿತ್ರದ ಹೆಸರಿನ ಬಗ್ಗೆ ಬೇಸರ ವ್ಯಕ್ತವಾಗಿತ್ತು. ಮಠ ಎನ್ನುವುದು ಪವಿತ್ರವಾದ ಸ್ಥಳ, ಹಾಗಾಗಿ ಆ ಹೆಸರಿಡಬಾರದೆಂದು ಗುರುಪ್ರಸಾದ್ ಅವರ ಬಳಿ ಅಸಾಮಧಾನ ವ್ಯಕ್ತ ಪಡಿಸಿದ್ದರು. ನಿರ್ದೇಶಕರ ಸ್ಪಷ್ಟನೆಯ ನಂತರ ಚಿತ್ರ ಅದೇ ಟೈಟಲ್ ನಲ್ಲಿ ಬಿಡುಗಡೆಯಾಯಿತು.

ಅದ್ವೈತ

ಗಿರಿರಾಜ್ ನಿರ್ದೇಶನದ ಈ ಚಿತ್ರದ ಟೈಟಲಿಗೂ ವಿರೋಧ ವ್ಯಕ್ತವಾಗಿತ್ತು. ಹಲವರು ಟೈಟಲ್ ಅನ್ನು ಪ್ರಶ್ನಿಸಿದ್ದರು. ಆದರೆ ಚಿತ್ರದ ಟೈಟಲ್ ಬದಲಾಗಲಿಲ್ಲ.

ಕರ್ನಾಟಕದ ಅಯೋಧ್ಯಪುರಂ

ಕರ್ನಾಟಕದ ಅಯೋಧ್ಯಪುರಂ ಶೀರ್ಷಿಕೆ ಕುರಿತ ವಿವಾದಕ್ಕೆ ರಾಜ್ಯ ಚಲನಚಿತ್ರ ಮಂಡಳಿ ಚಿತ್ರದ ನಿರ್ಮಾಪಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ಬಾಜ್ಮ್-ಎ-ಕಾಜ್ಮಿ ಸಂಘಟನೆ ಆಯೋಗಕ್ಕೆ ದೂರು ಸಲ್ಲಿಸಿತ್ತು. ಆದರೆ ಯಾವುದೇ ಕಾರಣಕ್ಕೆ ಟೈಟಲ್ ಬದಲಿಸುವುದಿಲ್ಲ ಎಂದು ನಿರ್ದೇಶಕರು ಸ್ಪಷ್ಟ ಪಡಿಸಿದ್ದಾರೆ.

ಬಸವಣ್ಣ

ಶ್ರೀನಿವಾಸರಾಜು ನಿರ್ದೇಶನದ, ಉಪೇಂದ್ರ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ಶೀರ್ಷಿಕೆ ವಿವಾದ ತೀವ್ರವಾಗುತ್ತಿದೆ, ರಾಜಕೀಯ ಬಣ್ಣ ಕೂಡಾ ಬೆರೆಯುತ್ತಿದೆ. ಟೈಟಲ್ ಬದಲಿಸುವ ಲಕ್ಷಣಗಳು ಕಾಣಿಸಿ ಕೊಳ್ಳುತ್ತಿದೆ.

ಕುರಿಗಳು ಸಾರ್ ಕುರಿಗಳು

ರಮೇಶ್, ಎಸ್ ನಾರಾಯಣ್, ಮೋಹನ್ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರದ ಶೀರ್ಷಿಕೆಗೆ ಕವಿ ನಿಸಾರ್ ಅಹಮದ್ ಆಕ್ಷೇಪ ವ್ಯಕ್ತ ಪಡಿಸಿದ್ದರು. ಆದರೆ ಚಿತ್ರದ ಟೈಟಲ್ ಬದಲಾಗಲಿಲ್ಲ.

English summary
Title issues in film industry is common now a days. Upendra starrer Basavanna is the latest movie. Here is some of the Kannada movies faced title controversies. 
Please Wait while comments are loading...