»   » ಅಪಘಾತ: ಸಹನಟ ಅಶೋಕ್ ದುರ್ಮರಣ

ಅಪಘಾತ: ಸಹನಟ ಅಶೋಕ್ ದುರ್ಮರಣ

Posted By:
Subscribe to Filmibeat Kannada
Kannada Serial actor killed in a road accident Basavanagudi
ಮುಕ್ತ ಮುಕ್ತ, ಪಲ್ಲವಿ ಅನುಪಲ್ಲವಿ, ಕ್ಲಾಸ್ ಮೇಟ್ ಮುಂತಾದ ಧಾರಾವಾಹಿಯಲ್ಲಿ ನಟಿಸಿದ್ದ ಸಹನಟ ಅಶೋಕ್ ಕುಮಾರ್ (55) ಎಂಬುವರು ಭಾನುವಾರ ಮುಂಜಾನೆ ಬಸವನಗುಡಿ ರಾಮಕೃಷ್ಣ ಆಶ್ರಮ ಬಳಿಯ ಕೊಹಿನೂರ್ ಗ್ರೌಂಡ್ ಹತ್ತಿರ ಇರುವ ಗುಂಡಿಗೆ ಬಿದ್ದು ಮೃತಪಟ್ಟಿದ್ದಾರೆ. ಹನುಮಂತನಗರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಒಳ ಚರಂಡಿ ಪೈಪ್ ಸೋರಿಕೆ ರಿಪೇರಿಗಾಗಿ ಬೆಂಗಳೂರಿನ ಜಲಮಂಡಳಿಯವರು ತೋಡಿದ್ದ ಗುಂಡಿಗೆ ಅಶೋಕ್ ಅವರು ಇಂದು ಮುಂಜಾನೆ 2 ರಿಂದ 3 ಗಂಟೆ ಸುಮಾರಿಗೆ ಬಿದ್ದಿದ್ದಾರೆ. ಬೆಳಗ್ಗೆ 9 ಗಂಟೆ ತನಕ ಈ ಘಟನೆ ಯಾರ ಅರಿವಿಗೂ ಬಂದಿರಲಿಲ್ಲ. ಮುಂಜಾನೆ ಶವವನ್ನು ಹೊರತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಯಮಹಾ ಬೈಕ್ ನೋಂದಣಿ ಸಂಖ್ಯೆ ಮೂಲಕ ಶವದ ಗುರುತು ಪತ್ತೆ ಹಚ್ಚಲು ಬಸವನಗುಡಿ ಪೊಲೀಸರು ತೊಡಗಿದ್ದರು.

ಇಂದು ಮಧ್ನಾಹ್ನದ ವೇಳೆಗೆ ಮೃತಪಟ್ಟ ಬೈಕ್ ಸವಾರ ಇಟ್ಟಮಡು ನಿವಾಸಿ, ಕಿರುತೆರೆ ನಟ ಅಶೋಕ್ ಎಂದು ದೃಢಪಟ್ಟಿದೆ. ಶಿವರಾಜ್ ಕುಮಾರ್ ಅಭಿನಯದ ಶಿವ, ಮಾಲಾಶ್ರೀ ಅಭಿನಯದ ಎಲೆಕ್ಷನ್ ಸೇರಿದಂತೆ ಕೆಲ ಚಲನಚಿತ್ರಗಳಲ್ಲೂ ಅಶೋಕ್ ನಟಿಸಿದ್ದರು.

ಶನಿವಾರ ಹೊಸದುರ್ಗದಲ್ಲಿ ಸೀರಿಯಲ್ ಶೂಟಿಂಗ್ ಇತ್ತು. ಅದನ್ನು ಮುಗಿಸಿಕೊಂಡು ವಾಪಸ್ ಬಂದಿದ್ದಾರೆ. ಚಾಮರಾಜಪೇಟೆಯಲ್ಲಿ ನಿಲ್ಲಿಸಿದ್ದ ಬೈಕ್ ತೆಗೆದುಕೊಂಡು ಗವಿಪುರಂ ಬಡಾವಣೆ ಕಡೆಗೆ ಬರುತ್ತಿದ್ದಾಗ ಯಮರೂಪಿ ಗುಂಡಿ ಎದುರಾಗಿದೆ. ಆಶೋಕ್ ಅವರು ನಿದ್ದೆ ಮಂಪರಿನಲ್ಲಿ ಗುಂಡಿಗೆ ಬಿದ್ದರೆ? ಅಥವಾ ಅಪಘಾತವಾಯಿತೇ? ಗುಂಡಿ ಸುತ್ತಾ ಸುರಕ್ಷಿತ ಬ್ಯಾರಿಕೇಡ್ ಹಾಕಿರಲಿಲ್ಲವೇ? ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಈ ನಡುವೆ ಘಟನಾ ಸ್ಥಳಕ್ಕೆ ಬಿಬಿಎಂಪಿ ಹಾಗೂ ಬಿಡಬ್ಲ್ಯೂಎಸ್ಎಸ್ ಬಿ ಅಧಿಕಾರಿಗಳು ಧಾವಿಸಿಬಂದಿದ್ದಾರೆ. ಎರಡು ಸಂಸ್ಥೆಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದು, ಗುಂಡಿ ತೋಡಿದ್ದು ಜಲಮಂಡಳಿ ಎಂದು ಬಿಬಿಎಂಪಿ ವಾದಿಸಿದೆ. ಬ್ಯಾರಿಕೇಡ್ ಹಾಕಲಾಗಿತ್ತು, ಕೆಂಪು ಪಟ್ಟಿ ಗುಂಡಿ ಸುತ್ತ ಇದೆ ಹೀಗಾಗಿ ನಮ್ಮ ತಪ್ಪು ಇಲ್ಲ ಎಂದು ಜಲ ಮಂಡಳಿ ವಾದಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸ್ಥಳೀಯ ಕಾರ್ಪೋರೇಟರ್ ಟಿಎಂ ಸದಾಶಿವ ಹೇಳಿದ್ದಾರೆ. ಒಟ್ಟಾರೆ, ಸಹನಟ ಅಶೋಕ್ ಅವರು ಸಾವನ್ನಪ್ಪಿದ್ದು ಹೇಗೆ ಎಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ಅಶೋಕ್ ಅವರ ಸಾವಿಗೆ ಕಿರುತೆರೆ ಹಾಗೂ ಚಿತ್ರರಂಗದ ಗಣ್ಯರು ಕಂಬಿನಿ ಮಿಡಿದಿದ್ದಾರೆ.

ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ನಟ ಅನಿಲ್ ಕುಮಾರ್ ಅವರ ಬೈಕ್ ಮಲ್ಲೇಶ್ವರಂನಲ್ಲಿ ರಸ್ತೆ ಬದಿ ಬಿದ್ದಿದ್ದ ವೈರ್ ಗಳ ರಾಶಿಗೆ ಸಿಲುಕಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Kannada Serial actor Ashok who acted in Pallavi Anupallavi serial killed in a road accident near Kohinoor ground, Basavanagudi in the wee hours today(Dec.15). Actor Ashok along with his bike found in a huge hole dug up by BWSSB and BBMP in Gavipuram Extenstion

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada