For Quick Alerts
  ALLOW NOTIFICATIONS  
  For Daily Alerts

  ಗೌರವ ಕೊಟ್ಟು ಮರಳಿ ಪಡೆಯಿರಿ: ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಬಗ್ಗೆ ಸುದೀಪ್ ಪ್ರತಿಕ್ರಿಯೆ!

  |

  ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ವಿವಾದ ಉಂಟು ಮಾಡಿರುವ ವಿಷಯವೆಂದರೆ ಅದು ನಟ ಚಾಲೆಂಜಿಂಗ್ ಸ್ಟಾರ್ ದರ್ಶ್ನನ್ ಮೇಲೆ ಹೊಸಪೇಟೆಯಲ್ಲಿ ಕಿಡಿಗೇಡೆಯೋರ್ವ ಚಪ್ಪಲಿ ಎಸೆದಿರುವುದು. ಹೌದು, ಇಂತಹ ಹೀನ ಕೃತ್ಯ ಕಳೆದ ಭಾನುವಾರ ಕ್ರಾಂತಿ ಚಿತ್ರದ ಎರಡನೇ ಹಾಡು ಬಿಡುಗಡೆ ಸಮಾರಂಭದಲ್ಲಿ ನಡೆದಿದೆ. ತಮ್ಮ ಮೇಲೆ ಚಪ್ಪಲಿ ಎಸೆದರೂ ಸಹ ದರ್ಶನ್ ಪರವಾಗಿಲ್ಲ ಚಿನ್ನ ತಪ್ಪೇನಿಲ್ಲ ಎಂದು ದೊಡ್ಡತನ ತೋರಿದ್ದಾರೆ.

  ಹೀಗೆ ದರ್ಶನ್ ಮೇಲೆ ಚಪ್ಪಲಿ ಎಸೆದದ್ದರ ಕುರಿತು ದರ್ಶನ್ ಅಭಿಮಾನಿಗಳು ಕಿಡಿಕಾರಿದ್ದು, ಇದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮಾಡಿರುವ ಕೆಲಸವೇ ಎಂದು ಆರೋಪಿಸಿದ್ದಾರೆ. ಇನ್ನೂ ಕೆಲವರು ಹೊಸಪೇಟೆಯಲ್ಲಿದ್ದ ಪುನೀತ್ ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ಫ್ಯಾನ್ ವಾರ್‌ನ ಅನುಕೂಲ ಪಡೆದ ಮೂರನೇ ವ್ಯಕ್ತಿ ಈ ಕೆಲಸವನ್ನು ಮಾಡಿದ್ದಾನೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಇದರ ಹಿಂದೆ ರಾಜಕೀಯ ಕೈವಾಡವೂ ಸಹ ಇದೆ ಎಂಬ ಮಾತುಗಳೂ ಸಹ ಕೇಳಿ ಬರುತ್ತಿವೆ.

  ಇನ್ನು ದರ್ಶನ್ ಮೇಲೆ ಚಪ್ಪಲಿ ಎಸೆದದ್ದರ ಕುರಿತು ಚಿತ್ರರಂಗದ ದಿಗ್ಗಜ ನಟರಾದ ಶಿವರಾಜ್‌ಕುಮಾರ್, ಜಗ್ಗೇಶ್ ಸೇರಿದಂತೆ ಬಹುತೇಕ ಎಲ್ಲಾ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ದರ್ಶನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಈ ಸಾಲಿಗೆ ಇದೀಗ ಮತ್ತೋರ್ವ ಸ್ಟಾರ್ ನಟ ಕಿಚ್ಚ ಸುದೀಪ್ ಕೂಡ ಸೇರಿಕೊಂಡಿದ್ದಾರೆ. ತಮ್ಮ ಗೆಳೆಯ ದರ್ಶನ್ ಬಗ್ಗೆ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  ವಿಡಿಯೊ ಬಗ್ಗೆ ಕಿಚ್ಚ ಹೇಳಿದ್ದಿಷ್ಟು

  ವಿಡಿಯೊ ಬಗ್ಗೆ ಕಿಚ್ಚ ಹೇಳಿದ್ದಿಷ್ಟು

  ಮೂರು ಪುಟಗಳ ಪೋಸ್ಟ್ ಹಂಚಿಕೊಂಡಿರುವ ನಟ ಕಿಚ್ಚ ಸುದೀಪ್ ನಮ್ಮ ನಾಡು, ಭಾಷೆ ಹಾಗೂ ಸಂಸ್ಕೃತಿ ಎಲ್ಲವೂ ಸಹ ಪ್ರೀತಿ ಹಾಗೂ ಗೌರವವನ್ನು ಪ್ರತಿನಿಧಿಸುತ್ತೆ, ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಆ ಪರಿಹಾರವನ್ನು ಕಂಡುಕೊಳ್ಳಲು ಹಲವಾರು ಮಾರ್ಗಗಳಿವೆ. ಪ್ರತಿಯೊಬ್ಬ ವ್ಯಕ್ತಿಯನ್ನು ಘನತೆಯಿಂದ ಕಾಣಬೇಕು ಹಾಗೂ ಯಾವುದೇ ಸಮಸ್ಯೆಯನ್ನಾದರೂ ಸಹ ಶಾಂತತೆಯಿಂದ ಪರಿಹರಿಸಬಹುದು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ದರ್ಶನ್ ಮೇಲೆ ಚಪ್ಪಲಿ ಎಸೆದ ವಿಡಿಯೊ ಬಗ್ಗೆ ಬರೆದಿರುವ ಕಿಚ್ಚ "ನಾನು ನೋಡಿದ ಆ ವಿಡಿಯೊ ಮನಸ್ಸನ್ನು ಕೆಡಿಸಿತ್ತು, ಘಟನೆಗೆ ಸಂಬಂಧವೇ ಇಲ್ಲದ ಚಿತ್ರದ ನಾಯಕಿ ಹಾಗೂ ಇನ್ನಿತರು ವೇದಿಕೆ ಮೇಲಿದ್ದರು. ಅವರನ್ನು ಅವಮಾನಿಸಿದ್ದು ಕನ್ನಡಿಗರು ಇಷ್ಟು ನ್ಯಾಯಸಮ್ಮತವಲ್ಲದ ರೀತಿ ನಡೆದುಕೊಳ್ಳುತ್ತಾರಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದ" ಎಂದು ಬರೆದಿದ್ದಾರೆ.

  ಇದನ್ನು ಪುನೀತ್ ಒಪ್ತಾ ಇದ್ರಾ?

  ಇದನ್ನು ಪುನೀತ್ ಒಪ್ತಾ ಇದ್ರಾ?

  ಇನ್ನು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ದರ್ಶನ್ ನಡುವೆ ಅಲ್ಲಿ ಸರಿ ಇಲ್ಲ ಎನ್ನುವಂತಹ ಪರಿಸ್ಥಿತಿ ಇತ್ತೇನೋ ಎಂದಿರುವ ಕಿಚ್ಚ ಈ ರೀತಿ ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಈ ಪ್ರತಿಕ್ರಿಯೆಯನ್ನು ಪುನೀತ್ ಒಪ್ಪುತ್ತಿದ್ರಾ ಹಾಗೂ ಬೆಂಬಲಿಸುತ್ತಿದ್ರಾ? ಇದಕ್ಕೆ ಉತ್ತರ ಅವರ ಪ್ರತಿಯೊಬ್ಬ ಪ್ರೀತಿಯ ಅಭಿಮಾನಿಗಳಿಗೂ ಗೊತ್ತಿದೆ. ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ಎಸಗಿದ ಬೇಜವಾಬ್ದಾರಿ ಕೃತ್ಯದಿಂದ ಪುನೀತ್ ಅಭಿಮಾನಿಗಳಿಗಿರುವ ಘನತೆ ಹಾಗೂ ಗೌರವವನ್ನು ಹಾಳು ಮಾಡಬಾರದು ಎಂದು ಸುದೀಪ್ ಉಲ್ಲೇಖಿಸಿದ್ದಾರೆ.

  ದರ್ಶನ್ ಹಾಗೂ ತನ್ನ ನಡುವಿನ ಬಿರುಕು ತನ್ನನ್ನು ತಡೆಯುವುದಿಲ್ಲ ಎಂದ ಕಿಚ್ಚ

  ದರ್ಶನ್ ಹಾಗೂ ತನ್ನ ನಡುವಿನ ಬಿರುಕು ತನ್ನನ್ನು ತಡೆಯುವುದಿಲ್ಲ ಎಂದ ಕಿಚ್ಚ

  ಇನ್ನೂ ಮುಂದುವರಿದು ಮಾತನಾಡಿದ ಕಿಚ್ಚ ಸುದೀಪ್ "ದರ್ಶನ್ ಕನ್ನಡ ಚಲನಚಿತ್ರರಂಗಕ್ಕೆ ಹಾಗೂ ಕನ್ನಡಕ್ಕೆ ಅಪಾರ ಕೊಡುಗೆಗಳನ್ನು ನೀಡಿದವರು. ದರ್ಶನ್ ಬಗ್ಗೆ ನನಗಿರುವ ನಿಜವಾದ ಭಾವನೆಯ ಕುರಿತು ಹೇಳುವುದನ್ನು ನಮ್ಮಿಬ್ಬರ ನಡುವಿನ ವೈಮನಸ್ಸಿನಿಂದ ತಡೆಯಲಾಗುವುದಿಲ್ಲ. ಆತನಿಗೆ ಈ ರೀತಿ ಮಾಡುವುದು ಖಂಡಿತ ತಪ್ಪು ಹಾಗೂ ಅದು ನನಗೂ ಸಹ ನೋವನ್ನು ಉಂಟುಮಾಡಿದೆ" ಎಂದು ಬರೆದಿದ್ದಾರೆ.

  ಗೌರವ ಕೊಟ್ಟು ಮರಳಿ ಪಡೆಯಿರಿ

  ಗೌರವ ಕೊಟ್ಟು ಮರಳಿ ಪಡೆಯಿರಿ

  "ಕನ್ನಡ ಚಿತ್ರರಂಗ ಹಾಗು ಕನ್ನಡಿಗರು ಒಳ್ಳೆತನಕ್ಕೆ ಹೆಸರುವಾಸಿ, ಇಂತಹ ಕೃತ್ಯಗಳಿಂದ ಕೆಟ್ಟ ಸಂದೇಶವನ್ನು ರವಾನಿಸಬಾರದು, ಯಾವುದಕ್ಕೂ ರೋಷಾವೇಶದ ಪ್ರತಿಕ್ರಿಯೆಯನ್ನು ನೀಡಬಾರದು, ಪ್ರತಿ ನಟರು ಮತ್ತು ಅಭಿಮಾನಿಗಳಲ್ಲಿ ವ್ಯತ್ಯಾಸವಿರುತ್ತದೆ ಎಂಬುದು ತಿಳಿದಿದೆ ಹಾಗೂ ಇಬ್ಬರ ನಡುವೆ ಬಂದು ಮಾತನಾಡಲು ನಾನು ಯಾರೂ ಅಲ್ಲ. ಆದರೆ ಪುನೀತ್ ಹಾಗೂ ದರ್ಶನ್ ಇಬ್ಬರ ಜತೆಗೂ ಆಪ್ತತೆ ಹೊಂದಿದ್ದ ಮತ್ತು ಅವರ ಜೀವನದಲ್ಲಿ ಒಳ್ಳೆ ಸ್ಥಾನವನ್ನು ಗಳಿಸಿದ್ದ ನಾನು ಮಾತನಾಡುವ ಸ್ವಾತಂತ್ಯ ಹೊಂದಿದ್ದು, ನನ್ನ ಭಾವನೆಗಳನ್ನು ಬರೆದಿದ್ದೇನೆ. ಹೇಳಬೇಕಿದ್ದಕ್ಕಿಂತ ಹೆಚ್ಚು ಹೇಳಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ. ಚಿತ್ರರಂಗದಲ್ಲಿ 27 ವರ್ಷದ ಪಯಣದಲ್ಲಿ ಒಂದು ವಿಷಯ ನನಗೆ ಅರ್ಥವಾಗಿದೆ. ಯಾವದೂ ಹಾಗೂ ಯಾರೂ ಸಹ ಶಾಶ್ವತವಲ್ಲ. ಪ್ರೀತಿ ಹಾಗೂ ಗೌರವವನ್ನು ಕೊಟ್ಟು ಮರಳಿ ಪಡೆಯಿರಿ. ಇದೊಂದೇ ಯಾರನ್ನು ಬೇಕಾದರೂ ಯಾವ ಸಂದರ್ಭದಲ್ಲಾದರೂ ಗೆಲ್ಲಲು ಇರುವ ಮಾರ್ಗ" ಎಂದು ಸುದೀಪ್ ಸಂದೇಶ ರವಾನಿಸಿದ್ದಾರೆ.

  English summary
  Kichcha Sudeep reacted about slipper throw on Darshan incident.
  Tuesday, December 20, 2022, 10:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X