»   » ಕರಾವಳಿಯ ಜನರಿಗೆ ಸಿನಿಮಾ ನೋಡಲು ಸಂಕಷ್ಟ ಶುರುವಾಯಿತು

ಕರಾವಳಿಯ ಜನರಿಗೆ ಸಿನಿಮಾ ನೋಡಲು ಸಂಕಷ್ಟ ಶುರುವಾಯಿತು

By: ಮಂಗಳೂರು ಪ್ರತಿನಿಧಿ
Subscribe to Filmibeat Kannada

ಕರಾವಳಿಯ ಜನರಿಗೆ ನಾಲ್ಕೂವರೆ ದಶಕಗಳಿಂದ ಮನರಂಜನೆ ಒದಗಿಸುತ್ತಾ ಬಂದಿದ್ದ ಮಂಗಳೂರು ನಗರದ ಹಲವು ಚಲನಚಿತ್ರ ಮಂದಿರಗಳು ಈಗ ಮುಚ್ಚುತ್ತಿವೆಯಂತೆ.

ಮಂಗಳೂರು ನಗರದ ಫಳ್ನೀರ್ ರಸ್ತೆಯಲ್ಲಿರುವ ಅತ್ಯಂತ ಹಳೆಯ ಸಿನಿಮಾ ಥಿಯೇಟರ್ ಈ ತಿಂಗಳ ಕೊನೆಗೆ ಯುಗಾಂತ್ಯ ಹಾಡುತ್ತಿದೆ. ಫಳ್ನೀರ್‌ ಚಿತ್ರಮಂದಿರದಲ್ಲಿ ಈ ತಿಂಗಳ ಅಂತ್ಯದಿಂದ ಯಾವುದೇ ಚಿತ್ರಗಳು ತೆರೆ ಕಾಣುವುದಿಲ್ಲ.

ಕರಾವಳಿ ಭಾಗದ ಸಿನಿ ಪ್ರಿಯರು ಯಾವ ಯಾವ ಸಿನೆಮಾ, ಯಾವ ಯಾವ ಚಿತ್ರಮಂದಿರದಲ್ಲಿ ಇದೆ ಎಂಬುದನ್ನು ಮಾಧ್ಯಮದ ಅಥವಾ ಪ್ರಕಟಣೆಯ ಮೂಲಕ ನೋಡುತ್ತಿದ್ದ ಕಾಲವೊಂದಿತ್ತು. ಆದರೆ ಇದೀಗ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಪ್ರವೇಶ ಹಾಗೂ ಅಂತರ್ಜಾಲದ ಆಕರ್ಷಣೆ ಹೀಗೆ ಹಲವಾರು ಮನರಂಜನೆ ಮಾರ್ಗಗಳು ಹೆಚ್ಚಿದ ಕಾರಣ ಹಳೆಯ ಚಿತ್ರಮಂದಿರಗಳಿಗೆ ಹಾನಿ ಉಂಟಾಗಿದೆ.

Movie theaters on verge of shutting down at coastal side

ಕರಾವಳಿ ಭಾಗದಲ್ಲಿ ಇಲ್ಲಿಯವರೆಗೆ ಅಂತ್ಯ ಕಂಡ ಚಿತ್ರಮಂದಿರಗಳು
ಮಂಗಳೂರಿನ ಅಮೃತ್ ಚಲನ ಚಿತ್ರ ಮಂದಿರ ಈಗಾಗಲೇ ಮುಚ್ಚಿದೆ. ತೊಕ್ಕೋಟಿನ ಕೃಷ್ಣಾ ಚಿತ್ರಮಂದಿರ, ಕಾಸರಗೋಡಿನ ಗೀತಾ ಚಿತ್ರ ಮಂದಿರ ಮುಚ್ಚಿದ್ದು, ಚಿತ್ರಮಂದಿರಗಳು ಇದ್ದ ಸ್ಥಳದಲ್ಲೇ ಬೃಹತ್ ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ. ಇದಲ್ಲದೆ ಮುಳ್ಳೇರಿಯಾದ ಚಿತ್ರಮಂದಿರ, ಕುಂಬಳೆಯ ಗೋಪಾಲಕೃಷ್ಣ, ದೇವಿ ಚಿತ್ರಮಂದಿರಗಳು ಕಲ್ಯಾಣ ಮಂಟಪಗಳಾಗಿ ಪರಿವರ್ತನೆಯಾಗಿವೆ. ಕಾಂಜ್ಞಂಗಾಡ್ ನ ಕೈಲಾಸ ಚಿತ್ರಮಂದಿರ ಕೂಡಾ ಕೆಲ ತಿಂಗಳ ಹಿಂದೆ ಮುಚ್ಚಿದೆ.

ಏನಪ್ಪಾ ಈ ರೀತಿ ಎಲ್ಲಾ ಚಿತ್ರಮಂದಿರಗಳು ಒಂದರ ಹಿಂದೆ ಒಂದು ಯುಗಾಂತ್ಯ ಕಂಡರೆ ಚಲನಚಿತ್ರದ ಪಾಡೇನು ಎಂಬ ಪ್ರಶ್ನೆ ಮೂಡುವುದು ಸಾಮಾನ್ಯ. ಮುಚ್ಚಿದ ಚಿತ್ರಮಂದಿರಗಳ ಮಾಲೀಕರು "ಆದಾಯ ಇಲ್ಲ, ಈಗಾಗಲೇ ನಗರದಾದ್ಯಂತ ಆಧುನಿಕ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿದ್ದು. ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದ ದಿನಗಳು ಕಡಿಮೆ ದರದಲ್ಲಿ ಸಿನೆಮಾ ನೋಡಲು ಅವಕಾಶ ಒದಗಿಸಿರುವುದು ಸಾಮಾನ್ಯ ಚಿತ್ರಮಂದಿರಗಳಿಗೆ ಇನ್ನಷ್ಟು ಹೊಡೆತ ನೀಡಿವೆ" ಎಂದು ಅಳಲು ತೋಡಿಕೊಂಡಿದ್ದಾರೆ.

ತುಳು ಚಲನಚಿತ್ರಗಳಿಗೆ ದೊಡ್ಡ ಹೊಡೆತ
ಇತ್ತೀಚಿನ ದಿನಗಳಲ್ಲಿ ತುಳು ಚಲನಚಿತ್ರಗಳು ಸಾಕಷ್ಟು ಸಂಖ್ಯೆಯಲ್ಲಿ ಬಿಡುಗಡೆಗೊಳ್ಳುತ್ತಿವೆ. ಆದರೆ ಇದೀಗ ಸಾಮಾನ್ಯ ಚಿತ್ರಮಂದಿರಗಳು ಮುಚ್ಚಿರುವುದರಿಮದ ಸಾಮಾನ್ಯ ಬಜೆಟ್‌ನಲ್ಲಿ ಸೀಮಿತ ಪ್ರದೇಶದ ಜನರನ್ನು ಅವಲಂಬಿಸಿ ನಿರ್ಮಾಣವಾಗುತ್ತಿರುವ ತುಳು ಚಿತ್ರಗಳಿಗೆ ಒಳ್ಳೆಯ ಸುದ್ದಿಯಿಲ್ಲ. ಈಗಾಗಲೇ ಅನೇಕ ತುಳು ಚಿತ್ರಗಳು ಚಿತ್ರಮಂದಿರಗಳ ಸಮಸ್ಯೆ ಎದುರಿಸಿವೆ.

ಇದಲ್ಲದೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಇದೆ. ಹೀಗಾದರೆ ತುಳು ಚಿತ್ರ ನಿರ್ಮಾಪಕರ ಬದುಕು ಅಯೋಮಯವಾಗಬಹುದು. ತುಳು ಚಿತ್ರರಂಗವನ್ನು ನಂಬಿಕೊಂಡ ಎಲ್ಲ ಕಲಾವಿದರ ಮೇಲೆ ಕೆಟ್ಟ ಪರಿಣಾಮ ಬೀಳುವುದಂತೂ ಅಕ್ಷರಶಃ ಸತ್ಯ.

English summary
Increasing of Multiplex theatres in Mangaluru is causing local movie theaters to run out of Business. Owners of local movie theatres are now in distress.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada