»   » ಹದಗೆಟ್ಟ ಆರೋಗ್ಯ: ನಟ ಸಿ ಆರ್ ಸಿಂಹ ಸ್ಥಿತಿ ಗಂಭೀರ

ಹದಗೆಟ್ಟ ಆರೋಗ್ಯ: ನಟ ಸಿ ಆರ್ ಸಿಂಹ ಸ್ಥಿತಿ ಗಂಭೀರ

Posted By:
Subscribe to Filmibeat Kannada

ಕನ್ನಡದ ಹಿರಿಯ ನಟ, ನಾಟಕಕಾರ, ರಂಗಭೂಮಿ ಕಲಾವಿದ ಮತ್ತು ಪ್ರಣಯರಾಜ ಶ್ರೀನಾಥ್ ಸಹೋದರ ಸಿ ಆರ್ ಸಿಂಹ ಗುರುವಾರ (ಫೆ 27) ಆಸ್ಪತ್ರೆಗೆ ದಾಖಲಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಅವರನ್ನು ಬೆಂಗಳೂರಿನ ಬನಶಂಕರಿಯ ಬಳಿ ಇರುವ ಸೇವಾಕ್ಷೇತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಾಸ್ಟೇಟ್ ಕ್ಯಾನ್ಸರಿಂದ ಬಳಲುತ್ತಿರುವ ಸಿ ಆರ್ ಸಿಂಹ (ಚನ್ನಪಟ್ಟಣ ರಾಮಸ್ವಾಮಿ ಶಾಸ್ತ್ರಿ ಸಿಂಹ) ಕಳೆದ ಒಂದು ವರ್ಷದಿಂದ ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಬೆಳಗ್ಗೆ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ಸೇವಾಕ್ಷೇತ್ರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಪ್ರಭಾತ್ ಕಲಾವಿದರು ತಂಡದ ಮೂಲಕ ರಂಗಭೂಮಿ ವೃತ್ತಿ ಜೀವನ ಆರಂಭಿಸಿದ ಸಿ ಆರ್ ಸಿಂಹ, 1972ರಲ್ಲಿ 'ನಟರಂಗ' ಎನ್ನುವ ನಾಟಕ ತಂಡವನ್ನು ಹುಟ್ಟು ಹಾಕಿದರು. ಸಂಸ್ಕಾರ, ಸಂಕಲ್ಪ, ಚಿತೆಗೂ ಚಿಂತೆ, ಕಾಕನಕೋಟೆ, ತುಘಲಕ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಸಿ ಆರ್ ಸಿಂಹ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. (ಸಿಂಹ ಅಂತ ಹೆಸರಿಟ್ಟು ನಾಯಿಗೆ ಹೆದರೋದಾ)

Noted Actor C R Simha hospitalized, suffering from Cancer

<>2003ರಲ್ಲಿ ಸಿಂಹ ಅವರಿಗೆ ಭಾರತ ಸರಕಾರ 'ಸಂಗೀತ್ ನಾಟಕ ಅಕಾಡೆಮಿ ಪ್ರಶಸ್ತಿ' ನೀಡಿ ಗೌರವಿಸಿತ್ತು. ರಾಜ್ಯ ಸರಕಾರದ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಕಾಕನ ಕೋಟೆ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡಾ ಅವರಿಗೆ ಲಭಿಸಿತ್ತು.

ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜು ವಿದ್ಯಾರ್ಥಿಯಾಗಿರುವ ಸಿ ಆರ್ ಸಿಂಹ ಅವರ 'ಬಹದ್ದೂರ್ ಗಂಡ' ಮತ್ತು 'ಮನವೆಂಬ ಮರ್ಕಟ' ನಾಟಕ ಭಾರೀ ಜನಪ್ರಿಯತೆ ಪಡೆದಿತ್ತು. ಸಿ ಆರ್ ಸಿಂಹ ಸ್ಥಿತಿ ಗಂಭೀರವಾಗಿದೆ ಎಂದು ಅವರ ಸಹೋದರ ಶ್ರೀನಾಥ್ ಹೇಳಿದ್ದಾರೆ.

ಹಿರಿಯ ನಟನ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸಲಿದೆ ಎಂದು ಸಚಿವ ರೋಷನ್ ಬೇಗ್ ಹೇಳಿದ್ದಾರೆ. ಸಿ ಆರ್ ಸಿಂಹ ಅವರ ಆರೋಗ್ಯ ವಿಚಾರಿಸಲು ಚಿತ್ರರಂಗದ ಯಾವುದೇ ಗಣ್ಯರು ಇದುವರೆಗೆ ಆಸ್ಪತ್ರೆಗೆ ಭೇಟಿ ನೀಡಲಿಲ್ಲ.

ಸಿ ಆರ್ ಸಿಂಹ ಆದಷ್ಟು ಬೇಗ ಗುಣಮುಖರಾಗಲಿ ಎಂದು ಒನ್ ಇಂಡಿಯಾ ಕನ್ನಡ ಹಾರೈಸುತ್ತದೆ.

'ಶ್ರೀಮಂತ ಕಲಾವಿದರ ಆಸ್ಪತ್ರೆಯ ವೆಚ್ಚವನ್ನು ಸರಕಾರ ಭರಿಸುವುದು ಸೂಕ್ತವೇ' ಈ ಪೋಲಿನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ಕಿಸಿ

(ಚಿತ್ರಕೃಪೆ - ಕಣಜ)

English summary
Senior actor, director, dramatist and play wrighter C R Simha admitted in Sevakshetra hospital, Bangalore. Simha suffering from Cancer. His brother Srinath says, his condition is critical. &#13;

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada