»   » ಕವಿಯೊಬ್ಬರಿಂದ ಹುಚ್ಚ ವೆಂಕಟ್ ಗಾಗಿ ಒಂದು ಕವನ.!

ಕವಿಯೊಬ್ಬರಿಂದ ಹುಚ್ಚ ವೆಂಕಟ್ ಗಾಗಿ ಒಂದು ಕವನ.!

By: ಶುಶ್ರುತ ದೊಡ್ಡೇರಿ
Subscribe to Filmibeat Kannada

ಎಲ್ಲಿ ನೋಡಿದ್ರೂ ಹುಚ್ಚ ವೆಂಕಟ್ ಹವಾ ಇರುವ ಈಗಿನ ಸೆನ್ಸೇಷನ್ ಗೆ ತಕ್ಕಂತೆ ಕವಿ ಶುಶ್ರುತ ದೊಡ್ಡೇರಿ ಒಂದು ಕವನ ಬರೆದಿದ್ದಾರೆ. ಹುಚ್ಚ ವೆಂಕಟನ ಹುಚ್ಚುತನಕ್ಕೆ ಪುರಾಣ ಪುಣ್ಯ ಕಾಲದಲ್ಲಿನ ಕೋಪ ಲಿಂಕ್ ಮಾಡಿ ರಚಿಸಿರುವ ಕವನ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗುತ್ತಿದೆ. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಫೇಸ್ ಬುಕ್, ಟ್ವಿಟ್ಟರ್ ಮತ್ತು ವಾಟ್ಸ್ ಆಪ್ ನಲ್ಲಿ 'ಹುಚ್ಚ ವೆಂಕಟ್ ಗಾಗಿ' ಬರೆದಿರುವ ಕವನ ಶೇರ್ ಆಗುತ್ತಿದೆ. ಕವನದ ಬಗ್ಗೆ ನೀವು ಕಾಮೆಂಟ್ ಮಾಡುವ ಮುನ್ನ ಒಮ್ಮೆ ಓದಿ ಎಂಜಾಯ್ ಮಾಡಿ.....

huccha-venkat

''ಹುಚ್ಚ ವೆಂಕಟ್‌ಗೆ......
ನಿನ್ನ ಕೆದರಿದ ತಲೆಗೂದಲು
ರಕ್ತ ತುಂಬಿದ ಕೆಂಗಣ್ಣು
ನೀಲಿಯಂಗಿಯ ವೇಷ
ಉಕ್ಕುಕ್ಕಿ ಬರುವ ಆವೇಶ
ಕ್ಯಾಮರಾದ ಎದೆಯೊಡೆಯುವಂತೆ ದುರುಗುಟ್ಟುವ ಆ ನೋಟ
ಚೂರೇ ಬಾಗಿದ ಕತ್ತು
ಕುಡಿಯುವೆಯೆನ್ನುವ ಲೋಕಲ್ ವಿಸ್ಕಿ

ನಿನ್ನ ಹಳೆಯ ಪ್ರೇಮಕಥೆಗಳು
ಸಿನಿಮಾದೆಡೆಗಿನ ಅಪಾರ ಮೋಹ
ಯಾರನ್ನೂ ಎದುರಿಸುವ ಕಿಚ್ಚು
ಮೇಲೇರೆರಗಿಹೋಗುವ ತಾಕತ್ತು
ಹೃದಯದೊಳಗೆ ತುಂಬಿಕೊಂಡಿರುವ ಕಣ್ಣೀರು

ನಿನ್ನ ಮೇಲೆ ನಿನಗೇ ಇರುವ ವಿಷಾದ
ಲೋಕದೆಡೆಗಿನ ಅತಾರ್ಕಿತ ಭ್ರಮೆಗಳು
ಕುಲುಮೆಯಿಂದೀಗಷ್ಟೆ ತಂದ ಕತ್ತಿಯಲಗಿನಂಥ ಮಾತುಗಳು
ಹೆಣ್ಮಕ್ಕಳ ಕಾಲಿಗೆ ಬೀಳುವೆನೆನ್ನುವ ಗುಣ
ಕಂಬಳಿಹುಳುವಿನ ಹಾರುವ ಕನಸು
ಗಳಿಗೆಗೊಮ್ಮೆ ಗುಟುಕರಿಸುವ ಚಹಾ

ಪುರಾಣದಲ್ಲಿ ಕಥೆಗಳು:
ಉಗ್ರನಾಗಿದ್ದ ನರಸಿಂಹನ ಕೋಪಶಮನ ಮಾಡಲು
ಲಕ್ಷ್ಮಿಯೇ ಪ್ರಾರ್ಥಿಸಿ ಅವನ ಜತೆಯಾದಳಂತೆ.....
ಸೊಕ್ಕಿನಿಂದ ಮುನ್ನುಗ್ಗಿ ಹರಿಯುತ್ತಿದ್ದ ಗಂಗೆಯನ್ನು
ಆಪೋಶನ ತೆಗೆದುಕೊಂಡನಂತೆ ಜಹ್ನು ಮಹರ್ಷಿ.....
ದೂರ್ವಾಸರ ಕೋಪಶಮನ ಮಾಡಲು
ಲಕ್ಷ್ಮಣ ಸಾವನ್ನೇ ಸ್ವೀಕರಿಸಿದನಂತೆ.....

ನರಸಿಂಹ, ದೂರ್ವಾಸರ ಕೋಪಗಳಿಗೂ ಕಥೆಯಿದೆ, ಕಾರಣವಿದೆ ಪುರಾಣದಲ್ಲಿ.
ವೆಂಕಟ್, ಹಾಗೇ ನಿನ್ನ ಕೋಪ, ತಾಪ, ಪ್ರತಾಪಗಳಿಗೂ ವ್ಯತ್ಯಾಸ ಇಷ್ಟೇ:
ಇಲ್ಲಿ ನಿನ್ನನ್ನು ರಕ್ಷಿಸಲು
ಯಾವ ಲಕ್ಷ್ಮಿಯೂ ಇಲ್ಲ, ಜಹ್ನುವೂ ಇಲ್ಲ,
ತ್ಯಾಗಕ್ಯಾರೂ ಸಿದ್ಧರಿಲ್ಲ.

ಮಥನದಲುದ್ಭವಿಸುವ ಹಾಲಾಹಲದ ಹಾಹಾಕಾರ
ನಮಗೆಲ್ಲ ರುಚಿಯೆನಿಸುವ ಹೊತ್ತಿನಲ್ಲಿ ನೀಲಕಂಠನಿಗೇನು ಕೆಲಸ.
ನರಕಾಸುರ, ಶಂಬರಾಸುರ, ಕಂಸ, ಶಿಶುಪಾಲರ
ರಾಜ್ಯಭಾರವನ್ನೊಪ್ಪಿಕೊಂಡ ಮೇಲೆ ಕೃಷ್ಣನ ಸುದರ್ಶನ ಚಕ್ರಕಿಲ್ಲ ತಾವು
ಅತ್ಯಾಚಾರ, ಕೊಲೆ, ಸುಲಿಗೆಗಳ ನೋಡಿ ಸುಮ್ಮನಿರುವ ನಮಗೆ
ದುಷ್ಟಸಂಹಾರೀ ರಾಮನ ಅವಶ್ಯಕತೆಯಿಲ್ಲ ಬಿಡು.

ನಿನ್ನ ನೋವು, ನಿರಾಶೆ, ವಿಷಾದ, ಕೋಪಗಳನ್ನು ಹೀರಲು
ಇಲ್ಯಾರೂ ಅವತರಿಸುವುದಿಲ್ಲ. ನೀನು ಬಲಿಪಶು.
ನಾನು ಕೊಲೆಗಾರ.''

English summary
A Poem written on YouTube Star Huccha Venkat goes viral in Social Networking Sites. Read the poem here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada