For Quick Alerts
  ALLOW NOTIFICATIONS  
  For Daily Alerts

  ''ಕನಸುಗಳನ್ನು ಕೊಲ್ಲಬೇಡಿ, ಪಿಆರ್‌ಕೆ ಮುಂದುವರೆಯುತ್ತದೆ''

  |

  ಪುನೀತ್ ರಾಜ್‌ಕುಮಾರ್ ಅವರಿಗಿದ್ದ ಹಲವು ಕನಸುಗಳಲ್ಲಿ ಪ್ರಮುಖವಾಗಿದ್ದಿದ್ದು ಪಿಆರ್‌ಕೆ ಪ್ರೊಡಕ್ಷನ್‌ ಮೂಲಕ ಒಳ್ಳೊಳ್ಳೆ ವಿಶ್ವದರ್ಜೆಯ ಸಿನಿಮಾಗಳನ್ನು ಹೊರಗೆ ತರಬೇಕು, ಹೊಸ ಕಲಾವಿದರು, ತಂತ್ರಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸಬೇಕು ಎಂಬುದು.

  ಆದರೆ ಇದೀಗ ಪುನೀತ್ ಅಕಾಲಿಕವಾಗಿ ಎಲ್ಲರನ್ನೂ ಅಗಲಿದ್ದಾರೆ. ಅವರ ಅಗಲಿಕೆ ಹೊಸ ಕಲಾವಿದರಿಗೆ, ತಂತ್ರಜ್ಞರಿಗಂತೂ ಶೂನ್ಯ ಭಾವ ಸೃಷ್ಟಿಸಿದೆ. ಆದರೆ ಅವರು ನಿರಾಶರಾಗಬೇಕಿಲ್ಲ, ಪುನೀತ್ ಹೋದರೂ ಪಿಆರ್‌ಕೆ ನಿಂತಿಲ್ಲ.

  ಪಿಆರ್‌ಕೆ ಪ್ರೊಡಕ್ಷನ್ ನಿನ್ನೆಯಷ್ಟೆ ಟ್ವೀಟ್ ಮಾಡಿದ್ದು, ''ನಮಗೆ ಹಿಂದಿನದ್ದನ್ನು ಬದಲಾಯಿಸುವುದು ಅಸಾಧ್ಯವಾಗಿದೆ. ಆದರೆ ಪುನೀತ್ ರಾಜ್‌ಕುಮಾರ್ ಅವರು ನಮಗೆ ನೀಡಿರುವ ಉತ್ಸಾಹ ಹಾಗೂ ಸ್ಪೂರ್ತಿಯೊಂದಿಗೆ ಪಿಆರ್‌ಕೆ ಪ್ರೊಡಕ್ಷನ್ ಮತ್ತು ಪಿಆರ್‌ಕೆ ಆಡಿಯೋದ ಮೂಲಕ ಉಜ್ವಲ ಭವಿಷ್ಯವನ್ನು ರಚಿಸಲು ಎದುರು ನೋಡುತ್ತೇವೆ. ನಮ್ಮ ಪ್ರಯಾಣವನ್ನು ಪುನರಾರಂಭಿಸುತ್ತಾ, ಅವರ ಕನಸುಗಳನ್ನು ನನಸಾಗಿಸುವಲ್ಲಿ ನಿಮ್ಮ ಬೆಂಬಲವನ್ನು ನಿರೀಕ್ಷಿಸುತ್ತೇವೆ'' ಎಂದಿದ್ದಾರೆ.

  ಪುನೀತ್ ಅಗಲಿಕೆಯ ಬಳಿಕ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪಿಆರ್‌ಕೆಯ ಜವಾಬ್ದಾರಿಯನ್ನು ಹೆಗಲಿಗೆ ಏರಿಸಿಕೊಂಡಿದ್ದಾರೆ. ಪತಿಯ ಕನಸನ್ನು ನನಸು ಮಾಡಲು ಯತ್ನಿಸುತ್ತಿದ್ದಾರೆ. ಪಿಆರ್‌ಕೆ ಜೊತೆ ಅಶ್ವಿನಿ ಅವರು ಈ ಹಿಂದೆಯೂ ತುಸು ತೊಡಗಿಕೊಂಡಿದ್ದರು. ಆದರೆ ಅಪ್ಪು ಇಲ್ಲದ ಈ ಹೊತ್ತಿನಲ್ಲಿ ಅಶ್ವಿನಿ ಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

  ಪಿಆರ್‌ಕೆ ಪ್ರೊಡಕ್ಷನ್, ಪುನೀತ್ ರಾಜ್‌ಕುಮಾರ್ ಅವರ ಕನಸಿನ ಕೂಸಾಗಿತ್ತು. ಕನ್ನಡಕ್ಕೆ ಭಿನ್ನ ಮಾದರಿಯ ಸಿನಿಮಾಗಳನ್ನು, ಹೊಸ-ಹೊಸ ಕಲಾವಿದರನ್ನು ನೀಡುವ ಅದಮ್ಯ ಬಯಕೆಯಿಂದ ತಮ್ಮ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಹೆಸರಿನಲ್ಲಿ ಪಿಆರ್‌ಕೆ ಪ್ರಾರಂಭಿಸಿದ್ದರು ಪುನೀತ್.

  ಆರಂಭದ ಸಿನಿಮಾಗಳಲ್ಲಿಯೇ ಭಿನ್ನ ಸಿನಿಮಾಗಳನ್ನು ಪಿಆರ್‌ಕೆ ಮೂಲಕ ಪುನೀತ್ ನೀಡಿದ್ದರು. 'ಕವಲುದಾರಿ', 'ಫ್ರೆಂಚ್ ಬಿರಿಯಾನಿ', ಮಹಿಳಾ ಪ್ರಧಾನ ಸಿನಿಮಾ 'ಲಾ', 'ಮಾಯಾಬಜಾರ್' ಸಿನಿಮಾಗಳನ್ನು ಈಗಾಗಲೇ ನಿರ್ಮಿಸಿದ್ದರು. ಪ್ರಸ್ತುತ 'ಫ್ಯಾಮಿಲಿ ಪ್ಯಾಕ್' ಹೆಸರಿನ ಕೌಟುಂಬಿಕ ಹಾಸ್ಯ ಸಿನಿಮಾ, 'ರಾಮಾ ರಾಮಾ ರೇ' ಖ್ಯಾತಿಯ ಸತ್ಯ ನಿರ್ದೇಶಿಸುತ್ತಿರುವ 'ಮ್ಯಾನ್ ಆಫ್ ದಿ ಮ್ಯಾಚ್' ಹೆಸರಿನ ಸಿನಿಮಾ, ರಾಘವ್ ನಾಯಕ್, ಪ್ರಶಾಂತ್ ರಾಜ್ ನಿರ್ದೇಶನದ 'ಓ2' ಹೆಸರಿನ ಭಿನ್ನ ಕತೆಯುಳ್ಳ ಸಿನಿಮಾಗಳು ನಿರ್ಮಾಣ ಹಂತದಲ್ಲಿದ್ದವು ಅಷ್ಟರಲ್ಲಿ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದರು.

  ಪುನೀತ್ ಅಗಲಿಕೆ ಹೊಸ ಪ್ರತಿಭಾವಂತರಿಗೆ ಬಹುದೊಡ್ಡ ನಷ್ಟ ಎಂದು ಚಿತ್ರರಂಗದ ಗಣ್ಯರೇ ಹಲವರು ಹೇಳಿದ್ದುಂಟು, ''ಯಾರೊ ಕಂಡ ಕನಸಿಗೆ ಯಾರು ಹಣ ತೊಡಗಿಸುತ್ತಾರೆ. ಅಂಥಹಾ ವಿಶಾಲ ಹೃದಯ ಇದ್ದದ್ದು ಅಪ್ಪು ಒಬ್ಬರಿಗೇ'' ಎಂದು ಪುನೀತ್ ನಿಧನದ ಬಳಿಕ ಯುವ ನಿರ್ದೇಶಕರೊಬ್ಬರು ಹೇಳಿದ್ದರು. ಆದರೆ ಅಪ್ಪು ಪತ್ನಿ ಅಶ್ವಿನಿ ತಾವು ಪಿಆರ್‌ಕೆ ಮುನ್ನಡೆಸುವುದಾಗಿ ನಿಶ್ಚಯಿಸಿದ್ದು, ಹೊಸ ಪ್ರತಿಭಾವಂತರು ತಮ್ಮ ಕನಸು ಕೊಲ್ಲುವ ಅವಶ್ಯಕತೆ ಇಲ್ಲ.

  English summary
  PRK productions and PRK audio companies will continue work. Ashwini Puneeth Rajkumar will handle PRK productions.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X