For Quick Alerts
  ALLOW NOTIFICATIONS  
  For Daily Alerts

  ಅಜಯ್ ರಾವ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಾಪಕ ಗುರು ದೇಶ್‌ಪಾಂಡೆ

  |

  'ಲವ್ ಯು ರಚ್ಚು' ಸಿನಿಮಾದ ನಾಯಕ ಅಜಯ್ ರಾವ್ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ನಡುವೆ ಮನಸ್ತಾಪ ಉಂಟಾಗಿದ್ದು, ಈ ಮನಸ್ತಾಪದ ಪರಿಣಾಮ ಸಿನಿಮಾದ ಮೇಲಾಗುತ್ತಿದೆ.

  ಕೆಲವು ದಿನಗಳ ಹಿಂದಷ್ಟೆ 'ಲವ್ ಯು ರಚ್ಚು' ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಧ್ರುವ ಸರ್ಜಾ ಆಗಮಿಸಿದ್ದರು. ಆದರೆ ಕಾರ್ಯಕ್ರಮದಲ್ಲಿ ನಟ ಅಜಯ್ ರಾವ್ ಇರಲಿಲ್ಲ. ಇದು ಎಲ್ಲರ ಅನುಮಾನಕ್ಕೆ ಕಾರಣವಾಯಿತು. ಅಜಯ್‌ ರಾವ್‌ಗೆ ಆರೋಗ್ಯ ಸರಿ ಇಲ್ಲವೆಂದು ನಿರ್ಮಾಪಕ ಗುರು ದೇಶಪಾಂಡೆ ಸ್ಪಷ್ಟನೆ ನೀಡಿದರಾದರೂ ಒಳಗಿನ ಕತೆ ಬೇರೆಯದ್ದೇ ಇತ್ತು.

  ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ನಟ ಅಜಯ್ ರಾವ್, ನಿರ್ಮಾಪಕ ಗುರು ದೇಶಪಾಂಡೆಯಿಂದ ನನಗೆ ಅವಮಾನವಾಗಿದೆ, ನನಗೆ ಆತ್ಮ ಗೌರವವಿದೆ ಹಾಗಾಗಿ ನಾನು ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಹೋಗಿಲ್ಲ ಎಂದಿದ್ದಾರೆ. ಅಜಯ್ ರಾವ್ ಆರೋಪಕ್ಕೆ ನಿರ್ಮಾಪಕ ಗುರು ದೇಶಪಾಂಡೆ ಇದೀಗ ಸ್ಪಷ್ಟನೆ ನೀಡಿದ್ದಾರೆ.

  ಮಾಧ್ಯಮದೊಟ್ಟಿಗೆ ಮಾತನಾಡಿರುವ ಗುರು ದೇಶ್‌ಪಾಂಡೆ, ''ಒಂದು ತಂಡ ಎಂದಮೇಲೆ ಸಣ್ಣ-ಪುಟ್ಟ ಜಗಳಗಳು ಬರುವುದು ಸಾಮಾನ್ಯ. ನಾಲ್ಕು ಜನರಿರುವ ಕುಟುಂಬದಲ್ಲಿಯೇ ಸಮಸ್ಯೆ ಬಂದಮೇಲೆ, 150 ಕ್ಕೂ ಹೆಚ್ಚು ಜನರಿರುವ ತಂಡದಲ್ಲಿ ಮನಸ್ತಾಪ ಬರುವುದಿಲ್ಲವೇ, ಅದನ್ನು ದೊಡ್ಡದು ಮಾಡುವ ಅವಶ್ಯಕತೆ ಏನಿದೆ?'' ಎಂದು ಗುರು ದೇಶಪಾಂಡೆ ಪ್ರಶ್ನೆ ಮಾಡಿದ್ದಾರೆ.

  ''ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ನಾನು ಸಿದ್ಧವಿದ್ದೇನೆ. ನಿನ್ನೆ ಸಹ ನಾನೇ ಅಜಯ್ ರಾವ್‌ಗೆ ಕರೆ ಮಾತನಾಡಿದೆ. 25 ನೇ ತಾರೀಖು ನಡೆಯಲಿರುವ ಪತ್ರಿಕಾಗೋಷ್ಠಿಗೆ, ಡಿಸೆಂಬರ್ 29 ರಂದು ನಡೆಯಲಿರುವ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ'' ಎಂದರು ಗುರು ದೇಶಪಾಂಡೆ.

  ನೀವು ಅಜಯ್‌ ರಾವ್‌ಗೆ ಅಪಮಾನ ಮಾಡಿದ್ದೀರಂತಲ್ಲ? ಎಂಬ ಆರೋಪಕ್ಕೆ ಉತ್ತರಿಸಿದ ಗುರು ದೇಶಪಾಂಡೆ, ಹಾಗೇನೂ ಇಲ್ಲ. ಒಟ್ಟಿಗೆ ಒಂದು ಸಿನಿಮಾಕ್ಕಾಗಿ ಕೆಲಸ ಮಾಡುವಾಗ ಸಿನಿಮಾ ಗುಣಮಟ್ಟದಿಂದ ಬರುವ ಕಾರಣಕ್ಕೆ ಕೆಲವು ಭಿನ್ನಾಭಿಪ್ರಾಯಗಳು ಬಂದಿವೆ ಅಷ್ಟೆ, ಅಪಮಾನ ಮಾಡಿದ್ದು ನಿಜವಲ್ಲ ಎಂದಿದ್ದಾರೆ.

  ''ಲವ್ ಯು ರಚ್ಚು' ಸಿನಿಮಾವನ್ನು ನೀವೇ ನಿರ್ದೇಶನ ಮಾಡಿಬಿಟ್ಟಿದ್ದೀರಿ ಎಂಬ ಕಾರಣಕ್ಕೆ ಅಜಯ್‌ ರಾವ್‌ಗೂ ನಿಮಗೂ ಜಗಳವಾಯಿತಂತಲ್ಲ'' ಎಂಬ ಪ್ರಶ್ನೆಗೆ, ನಾನು ಸಿನಿಮಾದ ನಿರ್ದೇಶಕ ಅಲ್ಲ ಆದರೆ ನಾನು ಕ್ರಿಯೇಟಿವ್ ಹೆಡ್‌, ನಾನು ಸಹ ಒಬ್ಬ ನಿರ್ದೇಶಕ ಆಗಿರುವ ಕಾರಣ ನನ್ನ ಕ್ರಿಯಾಶೀಲತೆಯನ್ನು, ಕ್ರಿಯೇಟಿವಿಟಿಯನ್ನು ಅಗತ್ಯ ಇರುವ ಕಡೆ ನೀಡುತ್ತೇನೆ. ಸಿನಿಮಾದ ಟೈಟಲ್‌ ಕಾರ್ಡ್‌ನಲ್ಲಿ ಸಹ ನನ್ನ ಹೆಸರು, ನಿರ್ಮಾಪಕ ಹಾಗೂ ಕ್ರಿಯೇಟಿವ್ ಹೆಡ್ ಎಂದೇ ಇರುತ್ತದೆ. ನನ್ನ ಜೊತೆಗೆ ಸಹಾಯಕ ನಿರ್ದೇಶಕರಾಗಿ ಈ ಮುಂಚೆ ಕೆಲಸ ಮಾಡಿದವರಿಗೆ ನಾನು ಈಗ ಸಿನಿಮಾಗಳನ್ನು ನೀಡುತ್ತಿದ್ದೇನೆ, ಹಾಗಾಗಿ ಅವರು ನನ್ನನ್ನು ಸಲಹೆ ಕೇಳುವುದು ಸಾಮಾನ್ಯ, ನಾನೂ ಸಹ ನಿರ್ದೇಶನಕ್ಕೆ ಸಂಬಂಧಿಸಿದಂತೆ ಸಲಹೆ ಕೊಡುತ್ತೇನೆ'' ಎಂದಿದ್ದಾರೆ.

  'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣದ ವೇಳೆ ಅವಘಡ ನಡೆದು ವಿವೇಕ್ ಸಾವಿಗೀಡಾದ ಘಟನೆಯಿಂದ ನಿಮ್ಮಿಬ್ಬರ ನಡುವೆ ಮನಸ್ತಾಪ ಬಂದಿತೆ? ಎಂಬ ಪ್ರಶ್ನೆಗೆ ಉತ್ತರಿಸಿದ ಗುರು ದೇಶಪಾಂಡೆ, ''ಒಂದು ತಂಡ ಎಂದ ಮೇಲೆ ಒಂದು ನಿರ್ಣಯದ ಮೇಲೆ ಒಂದು ಮಾತಿನ ಮೇಲೆ ಇರಬೇಕು. ಇಡೀ ತಂಡವೇ ಒಂದು ಹೇಳುತ್ತಿದ್ದಾಗ ಇವರೊಬ್ಬರೇ ಇನ್ನೊಂದು ಹೇಳುತ್ತಿದ್ದರೆ ಅದು ಸರಿ ಹೋಗದು, ಅದು ಅವರ ಸಂಸ್ಕೃತಿಯನ್ನು, ಅವರ ಬೆಳವಣಿಗೆಯನ್ನು ತಿಳಿಸುತ್ತದೆ'' ಎಂದು ಮಾರ್ಮಿಕವಾಗಿ ಹೇಳಿದರು ಗುರು ದೇಶಪಾಂಡೆ.

  ''ಒಬ್ಬ ನಟ, ನಿರ್ದೇಶಕ, ನಟಿ ಯಾರೇ ಆಗಲಿ ಒಂದು ಸಿನಿಮಾದ ಬಳಿಕ ಮತ್ತೊಂದು ಸಿನಿಮಾದ ಕಡೆಗೆ ಹೋಗಿಬಿಡುತ್ತಾರೆ. ಆದರೆ ನಿರ್ಮಾಪಕ ಹಾಗಲ್ಲ, ಅವನಿಗೆ ಆ ಸಿನಿಮಾ ಗೆದ್ದರಷ್ಟೆ ಮುಂದಿನ ಸಿನಿಮಾದ ಕಡೆಗೆ ಹೋಗಲು ಸಾಧ್ಯ. ನಟನಿಗೆ ಒಂದು ಸಿನಿಮಾ ಸೋತರು ಮತ್ತೊಂದು ಸಿನಿಮಾದಲ್ಲಿ ಅವಕಾಶ ದೊರಕುತ್ತದೆ. ಆದರೆ ನಿರ್ಮಾಪಕನಿಗೆ ಸಿನಿಮಾ ಸೋತರೆ ರಸ್ತೆಗೆ ಬಂದು ಬಿಡುತ್ತಾನೆ. ಹಾಗಾಗಿ ನನ್ನ ಎಚ್ಚರಿಕೆಯಲ್ಲಿ ನಾನಿರುತ್ತೇನೆ. ನನ್ನ ಸಿನಿಮಾವನ್ನು ಗೆಲ್ಲಿಸಿಕೊಳ್ಳಲು ಏನೇನು ಮಾಡಬೇಕೊ ಅದನ್ನೆಲ್ಲ ಮಾಡುತ್ತೇನೆ'' ಎಂದಿದ್ದಾರೆ ಗುರು ದೇಶಪಾಂಡೆ.

  English summary
  Love You Rachu movie producer Guru Deshpande reaction to actor Ajay Rao's allegations against him. Ajay Rao said Guru Deshpande disrespect him.
  Wednesday, December 22, 2021, 9:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X