ಸಂಗೊಳ್ಳಿ ರಾಯಣ್ಣ ಟಿಕೆಟ್ ದರ ಐದು ರೂಪಾಯಿ ಏರಿಕೆ!

ಕನ್ನಡ ಚಿತ್ರರಂಗದಲ್ಲೇ ಅದ್ದೂರಿ ಚಿತ್ರ ಎಂಬ ಹಿರಿಮೆಗೂ ಪಾತ್ರವಾಗಿರುವ ಈ ಚಿತ್ರವನ್ನು ಕರ್ನಾಟಕದಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಕಲ ಸಿದ್ದತೆಗಳನ್ನು ನಡೆಸುತ್ತಿದೆ.
ಹಾಗೇ ಟಿಕೇಟ್ ದರ ಕೂಡ ಎಂದಿಗಿಂತ 5 ರೂ. ಜಾಸ್ತಿ ಮಾಡಲು ನಿರ್ಮಾಪಕರಾದ ಆನಂದ ಅಪ್ಪುಗೋಳ್ ಹಾಗೂ ವಿತರಕ ಹೆಚ್.ಡಿ.ಗಂಗರಾಜು ನಿರ್ಧರಿಸಿದ್ದಾರೆ.
ಈಗಾಗಲೇ ಚಿತ್ರತಂಡ ಘೋಷಿಸಿದ್ದ ಪ್ರಕಾರ ಮುಂದಿನ ವಾರ ಅಂದರೆ ಅಕ್ಟೋಬರ್ 12ರಂದು ಚಿತ್ರ ತೆರೆಕಾಣಬೇಕಿತ್ತು. ಇದೀಗ ಕಾರಣಾಂತರಗಳಿಂದ ಚಿತ್ರ ಬಿಡುಗಡೆಯನ್ನು ಮತ್ತೆ ಮುಂದೂಡಲಾಗಿದೆ.
ಆದರೆ ಈ ಬಾರಿ ಡೇಟ್ ಹೇಳಿಲ್ಲ. ಹೀಗಾಗಿ ದರ್ಶನ್ ಅಭಿಮಾನಿಗಳು ಮತ್ತಷ್ಟು ದಿನಗಳು ಕಾಯುವುದು ಅನಿವಾರ್ಯ.
ದರ್ಶನ್, ಶಶಿಕುಮಾರ್, ಜಯಪ್ರದಾ, ರಮೇಶ್ ಭಟ್, ಅವಿನಾಶ್, ಶಿವಕುಮಾರ್, ವಿಜಯಲಕ್ಷ್ಮಿ ಸಿಂಗ್ ಹಾಗೂ ನಿಖಿತಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಂಗೊಳ್ಳಿ ರಾಯಣ್ಣ' ಚಿತ್ರದ ಆಡಿಯೋ ಸೇಲ್ ಚೆನ್ನಾಗಿದೆ ಎನ್ನುವ ಸುದ್ದಿ ಕೂಡಾ ಬರುತ್ತಿದೆ.
ಚಿತ್ರ ಬಿಡುಗಡೆಯ ದಿನದಂದು ಚಿತ್ರತಂಡ ರಾಜ್ಯದಲ್ಲಿರುವ ಎಲ್ಲಾ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಲಿದೆ. ಹಾಗೇ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ನರ್ತಕಿ ಚಿತ್ರಮಂದಿರದವರೆಗೆ ತೆರೆದ ವಾಹದಲ್ಲಿ ಮೆರವಣಿಗೆ ಮಾಡಲು ಯೋಜನೆ ಹಾಕಿಕೊಂಡಿದೆ.
ಚಿತಕ್ಕೆ ಆ್ಯಕ್ಷನ್ -ಕಟ್ ಹೇಳಿರುವುದು ನಾಗಣ್ಣ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯಕ್ಕೆ ಕೇಶವಾದಿತ್ಯ ಪೆನ್ನು ಹಿಡಿದಿದ್ದಾರೆ. ಚಿತ್ರಕ್ಕೆ ಕ್ಯಾಮೆರಾ ಸ್ಪರ್ಷ ನೀಡಿರುವುದು ಛಾಯಾಗ್ರಾಹಕ ರಮೇಶ್ ಬಾಬು.
ಮೂವತ್ತು ಕೋಟಿ ಬಜೆಟ್ ನ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರ ಗೆದ್ದರೂ ಸೋತರೂ ನಾನಂತೂ ತಲೆಕೆಡಿಸಿಕೊಳ್ಳಲಾರೆ.
ಚಿತ್ರದಿಂದ ನೂರು ಕೋಟಿ ಬಂದರೆ ನಾನು ಖುಷಿಯಾಗಲಾರೆ, ಗೋತಾ ಹೊಡೆದರೂ ಚಿಂತೆ ಮಾಡಲಾರೆ. ಚಿತ್ರ ನಿರ್ಮಿಸುವ ಏಕೈಕ ಕನಸಿತ್ತು, ನಿರ್ಮಿಸಿದ್ದೇನೆ ಎಂದಿದ್ದರು.


Click it and Unblock the Notifications











