ಮಹದಾಯಿ ಹೋರಾಟದ ಹಿನ್ನಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯಲ್ಲಿ ಅಧ್ಯಕ್ಷ ಸಾ ರಾ ಗೋವಿಂದು ನೇತೃತ್ವದಲ್ಲಿ ಸುದ್ದಿಗೋಷ್ಟಿ ನಡೆಸಲಾಯಿತು. ನಟ ಜಗ್ಗೇಶ್, ಪ್ರಥಮ್ , ನಟಿ ಶ್ರುತಿ, ಶಿವರಾಜ್ ಕುಮಾರ್, ಹಾಗೂ ನಿರ್ಮಾಪಕ ಶ್ರೀಕಾಂತ್ ಸುದ್ದಿಗೋಷ್ಟಿಯಲ್ಲಿ ಭಾಗಿಯಾಗಿದ್ದರು.
ಮೊದಲಿಗೆ ಮಾತನಾಡಿದ ಶೃತಿ ಹಾಗೂ ಜಗ್ಗೇಶ್ ನಿನ್ನೆ ನಟ ಚೇತನ್ ನೀಡಿದ್ದ ಹೇಳಿಕೆಯನ್ನ ಖಂಡಿಸಿದರು. "ಮಹದಾಯಿ ಹೋರಾಟವನ್ನ ಕರ್ನಾಟಕದ ಹೋರಾಟ ಎಂದು ಭಾವಿಸಿದ್ದೇವೆ, ಡಾ ರಾಜ್ ಕುಮಾರ್ ಅವರು ನಮಗೆಲ್ಲಾ ಒಳ್ಳೆ ಸಂಸ್ಕಾರವನ್ನ ತಿಳಿಸಿಕೊಟ್ಟಿದ್ದಾರೆ. ನಾವು ಯಾವತ್ತಿಗೂ ಕನ್ನಡದ ಹೋರಾಟದ ಪರವಾಗಿ ನಿಂತಿದ್ದೇವೆ, ಮುಂದಕ್ಕೂ ನಿಲ್ಲುತ್ತೇವೆ. ಆದಷ್ಟು ಬೇಗ ಈ ಹೋರಾಟ ಮುಗಿಯಲಿ ಕರ್ನಾಟಕಕ್ಕೆ ಜಯ ಸಿಗಲಿ" ಎಂದು ಶೃತಿ ಮನವಿ ಮಾಡಿಕೊಂಡರು.
ಮಹದಾಯಿ ಹೋರಾಟದ ಬಗ್ಗೆ ಚೇತನ್ ಕೊಟ್ಟ ಹೇಳಿಕೆಗೆ ತಿರುಗಿ ಬಿದ್ದ ಚಿತ್ರರಂಗ
ನಟ ಜಗ್ಗೇಶ್ ಮಾತನಾಡಿ "ವಾಣಿಜ್ಯ ಮಂಡಳಿಗೆ ಬಂದರೆ ನಾವು ಯಾವುದೇ ಪಕ್ಷಕ್ಕೆ ಮೀಸಲಾಗಿಲ್ಲ. ಉತ್ತರ, ದಕ್ಷಿಣ, ಆಕಾಶ, ಭೂಮಿ ಯಾವುದೇ ಇದ್ದರೂ ಕನ್ನಡಿಗರೆಲ್ಲರೂ ನಮ್ಮವರು. ದಾರಿ ಬೀದಿಯಲ್ಲಿ ಮಾತನಾಡುವ ವ್ಯಕ್ತಿಗೂ, ಮಾತಿಗೂ ವಾಣಿಜ್ಯ ಮಂಡಳಿ ಉತ್ತರ ನೀಡಬಾರದು. ಎಲ್ಲಾ ಕನ್ನಡಿಗರ ನೋವು ನಮ್ಮ ನೋವು. ನೀವು ಫೇಮಸ್ ಆಗಲು ಹಿರಿಯರ ಮರ್ಯಾದೆಯನ್ನ ಕಳೆಯಬೇಡಿ. ಇದು ಉತ್ತರ ಕರ್ನಾಟಕದ ಸಮಸ್ಯೆ ಎಂದು ಯಾರು ಭಾವಿಸಿಲ್ಲ ನಿಮ್ಮ ಹೋರಾಟದಲ್ಲಿ ನಾವಿದ್ದೇವೆ" ಎಂದರು.
ಇದೇ ಸಮಯದಲ್ಲಿ ಮಾತನಾಡಿದ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ ರಾ ಗೋವಿಂದು "ಜನ ಕರೆದ ಎಲ್ಲಾ ಕಡೆ ಬರಲು ಕಲಾವಿದರಿಗೆ ಕಷ್ಟವಾಗಿತ್ತೆ. ಒಂದೇ ವೇದಿಕೆಯಲ್ಲಿ ಬಂದು ಹೋರಾಟ ಮಾಡಲು ಸಿದ್ದವಾಗಿದ್ದೇವೆ. ಸಿನಿಮಾರಂಗದಿಂದ ನಾವೆಲ್ಲರೂ ರಾಜಕೀಯ ರಹಿತವಾಗಿ ಹೋರಾಟ ಮಾಡುತ್ತೇವೆ. ಚಿತ್ರರಂಗ ಯಾವುದೇ ಪಕ್ಷದ ಪರವಾಗಿಲ್ಲ ನಮಗೂ ಜವಾಬ್ದಾರಿ ಇದೆ . ಯಾಕೆ ಪ್ರತಿಭಟನೆಯಲ್ಲಿ ಭಾಗಿ ಆಗಿಲ್ಲ ಅನ್ನೋ ಪ್ರಶ್ನೆ ಮಾಡೋದು ಸರಿ ಇಲ್ಲ. ರೈತರು ಕರೆದಾಗ ಹೋಗಲು ನಾವು ಸಿದ್ದವಾಗಿದ್ದೇವೆ". ಎಂದರು.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.