ಎಸ್.ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಮತ್ತಷ್ಟು ಕ್ಷೀಣ: ಆಸ್ಪತ್ರೆಗೆ ಕಮಲ್ ಹಾಸನ್ ಭೇಟಿ
ಕಳೆದ ಒಂದು ತಿಂಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲೆಜೆಂಡರಿ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಕಳೆದ ಕೆಲವು ದಿನಗಳಿಂದ ಸುಧಾರಿಸಕೊಳ್ಳುತ್ತಿದ್ದ ಎಸ್ ಪಿ ಬಿ ಆರೋಗ್ಯ ಇನ್ನಷ್ಟು ಬಿಗಡಾಯಿಸಿದೆ ಎಂದು ಚೆನ್ನೈನ ಎಂಜಿಎಂ ಆಸ್ಪತ್ರೆಯ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.
ಕಳೆದ 24ಗಂಟೆಯಿಂದ ಎಸ್ ಪಿ ಬಿ ಆರೋಗ್ಯ ಕ್ಷೀಣಿಸುತ್ತಿದ್ದು. ಹೆಚ್ಚು ಲೈಫ್ ಸಪೊರ್ಟ್ ಸಾಧನಗಳನ್ನು ಬಳಕೆ ಮಾಡಲಾಗುತ್ತಿದೆ. ಎಂ ಜಿ ಎಂ ಆಸ್ಪತ್ರೆಯ ನುರಿತ ತಜ್ಞರು ಖ್ಯಾತ ಗಾಯಕನ ಆರೋಗ್ಯದ ಮೇಲೆ ನಿಗಾ ಇರಿಸಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಎಸ್ ಪಿ ಬಿ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ಗೊತ್ತಾಗುತ್ತಿದ್ದಂತೆ ಖ್ಯಾತ ನಟ ಕಮಲ್ ಹಾಸನ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದಾರೆ. ರಾತ್ರಿ ಎಂಜಿಎಂ ಆಸ್ಪತ್ರೆಗೆ ಭೇಟಿ ನೀಡಿ ಎಸ್ ಪಿ ಬಿ ಆರೋಗ್ಯದ ಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಗಾನ ಗಾರುಡಿಗ ಗುಣಮುಖರಾಗುತ್ತಿದ್ದಾರೆ ಎಂದು ಕೋಟ್ಯಂತರ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿತ್ತು. ಆದರೆ ಮತ್ತೆ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ಸುದ್ದಿ ಕೇಳಿ ಆತಂಕ ಮನೆ ಮಾಡಿದೆ.

ಎಸ್ ಪಿ ಬಿಗೆ ಕೊರೊನಾ ಸೋಂಕು ದೃಡಪಟ್ಟಿದ್ದ ಕಾರಣ ಆಗಸ್ಟ್ 5ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದ ಅವರ ಆರೋಗ್ಯದಲ್ಲಿ ಏರುಪೇರು ಆಗುತ್ತಲೇ ಇದೆ. ವೆಂಟಿಲೇಟರ್ ಮೂಲಕ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಕಳೆದ ಬುಧವಾರ ತಂದೆಯ ಆರೋಗ್ಯ ಸ್ಥಿತಿ ಬಗ್ಗೆ ಪುತ್ರ ಎಸ್ ಪಿ ಚರಣ್ ಮಾಹಿತಿ ನೀಡಿ ಇದೀಗ ಸುಧಾರಿಸಿಕೊಳ್ಳುತ್ತಿದ್ದು, ಅವರು ಶೀಘ್ರದಲ್ಲೇ ಮನೆಗೆ ಮರಳು ಕಾಯುತ್ತಿದ್ದಾರೆ ಎಂದು ಇನ್ಸ್ಟಾಗ್ರಾಮ್ ಮೂಲಕ ಹೇಳಿದ್ದರು.


Click it and Unblock the Notifications











