»   » ಶ್ರೀಶಾಂತ್ ಬಿಗ್ ಪಿಕ್ಚರ್ ಎಂಟ್ರಿ ಫಿಕ್ಸ್

ಶ್ರೀಶಾಂತ್ ಬಿಗ್ ಪಿಕ್ಚರ್ ಎಂಟ್ರಿ ಫಿಕ್ಸ್

Posted By:
Subscribe to Filmibeat Kannada

ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಶ್ರೀಶಾಂತ್ ಈಗೇನು ಮಾಡುತ್ತಿದ್ದಾರೆ. ತಿಹಾರ್ ಜೈಲಿನಿಂದ ಹೊರಬಿದ್ದ ಶ್ರೀಶಾಂತ್ ನೇರ ತನ್ನ ತವರೂರಿಗೆ ತೆರಳಿದ್ದರು ಅಲ್ಲಿ ಅವರಿಗೆ ಭರ್ಜರಿ ಸ್ವಾಗತವೂ ಸಿಕ್ಕಿತ್ತು. ಮೊದಲಿನಿಂದಲೂ ಕೇರಳದ ಬಹುಪಾಲು ಜನತೆ ಶ್ರೀಶಾಂತ್ ನಿರ್ದೋಷಿ ಎಂದು ಬೆಂಬಲಿಸುತ್ತಾ ಬಂದಿರುವ ವಿಷಯ ಗುಟ್ಟಾಗೇನು ಉಳಿದಿಲ್ಲ.

ಮನೆ ಸೇರಿದ ಶ್ರೀಶಾಂತ ಒಂದು ಸುತ್ತು ಕೇರಳ ಹಾಗೂ ಕರ್ನಾಟಕದ ಗಡಿಭಾಗದ ದೇಗುಲಗಳಿಗೆ ವಿಸಿಟ್ ಹಾಕಿದ್ದಾರೆ. ಹಣ್ಣಿನ ತುಲಾಭಾರ ಸೇರಿದಂತೆ ಹಲವು ಹರಕೆ, ಸೇವೆ ತೀರಿಸಿಕೊಂಡಿದ್ದಾರೆ. ನಂತರ ಮತ್ತೆ ಕ್ರಿಕೆಟ್ ಚೆಂಡು ಶ್ರೀಶಾಂತ್ ಕೈ ಸೇರಿದೆ. ಮೈದಾನಕ್ಕಿಳಿದು ಅಭ್ಯಾಸ ಮಾಡುತ್ತಿದ್ದಂತೆ ಅತ್ತ ಇಂಗ್ಲೆಂಡಿನಲ್ಲಿ ಟೀಂ ಇಂಡಿಯಾ ಅಮೋಘವಾಗಿ ಚಾಂಪಿಯನ್ಸ್ ಟ್ರೋಫಿ ಕಪ್ ಎತ್ತಿದ ಸುದ್ದಿ ಸಿಕ್ಕಿದೆ.

Sreesanth to try his luck with Big Picture

ಈ ನಡುವೆ ಕ್ರಿಕೆಟ್ ಜೊತೆಗೆ ಡ್ಯಾನ್ಸಿಂಗ್ ಹುಚ್ಚು ಹತ್ತಿಸಿಕೊಂಡಿರುವ ಶ್ರೀಶಾಂತ್ ಗೆ ಮದುವೆ ಆಫರ್ ಬಂದಿದ್ದು ಎಲ್ಲರಿಗೂ ಗೊತ್ತೇ ಇದೆ. ಇದರ ಜೊತೆಗೆ ಈಗ ದ್ವಿಭಾಷಾ ಚಿತ್ರವೊಂದರಲ್ಲಿ ಶ್ರೀಶಾಂತ್ ನಟಿಸುತ್ತಿದ್ದಾರಂತೆ. ಅದು ಪೋಷಕ ಪಾತ್ರವಲ್ಲ. ಹೀರೋ ರೋಲ್ ಸಿಕ್ಕಿದೆಯಂತೆ.

ಲಭ್ಯ ಮಾಹಿತಿ ಪ್ರಕಾರ ಪಿ ಬಾಲಚಂದ್ರ ಕುಮಾರ್ ಅವರ ನಿರ್ದೇಶನ ಚಿತ್ರದಲ್ಲಿ ಶ್ರೀಶಾಂತ್ ಹೀರೋ ಆಗಿ ನಟಿಸಲಿದ್ದಾರೆ. ಉಳಿದ ಪ್ರಮುಖ ಪಾತ್ರಗಳಲ್ಲಿ ಪ್ರಕಾಶ್ ರಾಜ್ ಹಾಗೂ ಪ್ರಭುದೇವ ನಟಿಸುವ ಸಾಧ್ಯತೆಯಿದೆ. ಇಂಗ್ಲೆಂಡ್, ದುಬೈ, ಚೆನ್ನೈ ಹಾಗೂ ಕೊಚ್ಚಿಯಲ್ಲಿ ಚಿತ್ರೀಕರಣ ನಡೆಯಲಿದೆ. ಮಲೆಯಾಳಂ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ.

ಸಾಧ್ಯವಾದರೆ ಹಿಂದಿಯಲ್ಲೂ ಚಿತ್ರವನ್ನು ಡಬ್ ಮಾಡಿ ರಿಲೀಸ್ ಮಾಡುವ ಆಲೋಚನೆ ಬಿಗ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಗೆ ಬಂದಿದೆ. ಸ್ಪಾಟ್ ಫಿಕ್ಸಿಂಗ್ ವಿವಾದಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ. ವಿವಾದದಿಂದ ಈ ಚಿತ್ರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ನಿರ್ದೇಶಕ ಬಾಲಚಂದ್ರ ಹೇಳಿದ್ದಾರೆ.

ಸಂಜಯ್ ದತ್ ಜೈಲಿನಲ್ಲಿದ್ದರೂ ಆತನ ಬಗ್ಗೆ ಅಭಿಮಾನ ಹೇಗೆ ಕಡಿಮೆಯಾಗಿಲ್ಲವೋ ಅದೇ ರೀತಿ ಕೇರಳದಲ್ಲಿ ಶ್ರೀಶಾಂತ್ ಈಗಲೂ ರೋಲ್ ಮಾಡೆಲ್ ಎಂದು ಬಾಲಚಂದ್ರ ಬಲವಾಗಿ ನಂಬಿದ್ದಾರೆ.

ಅಂದಹಾಗೆ, ಚಿತ್ರದ ಹೀರೋಯಿನ್ ಬಗ್ಗೆ ಯಾವುದೇ ಸುದ್ದಿ ಇಲ್ಲ. ಬೆಳಗಾವಿ ಬೆಡಗಿ ಲಕ್ಷ್ಮಿ ರೈ ಏನಾದರೂ ಮತ್ತೊಮ್ಮೆ ಶ್ರೀಶಾಂತ್ ಜೊತೆ ಕುಣಿಯಲು ಬಯಸುತ್ತಾರೋ ಕಾದು ನೋಡಬೇಕಿದೆ. ಶ್ರೀಶಾಂತ್ ಸಿನಿಮಾದಲ್ಲಿ ನಟಿಸಲು ಕೋರ್ಟ್ ಯಾವುದೇ ಆಕ್ಷೇಪಣೆ ಮಾಡುವುದಿಲ್ಲ. ಆದರೆ, ಶ್ರೀಶಾಂತ್ ಪಾಸ್ ಪೋರ್ಟ್ ಹಾಗೂ ಪೂರಕ ದಾಖಲೆಗಳು ಇನ್ನೂ ಪೊಲೀಸರ ವಶದಲ್ಲಿದೆ.

English summary
Tainted cricketer will play the lead in a bilingual film Big Picture. cricketer Sreesanth, who was slapped with spot fixing charges by the Delhi Police and jailed, has bounced right back.
Please Wait while comments are loading...