»   » ತಮಿಳಿನಲ್ಲಿ ಪತ್ರಕರ್ತೆಯಾದ ಸುಮನ್ ರಂಗನಾಥ್

ತಮಿಳಿನಲ್ಲಿ ಪತ್ರಕರ್ತೆಯಾದ ಸುಮನ್ ರಂಗನಾಥ್

Posted By:
Subscribe to Filmibeat Kannada
"ಬುದ್ಧಿವಂತ' ಚಿತ್ರದಲ್ಲಿ ಚಿತ್ರಾನ್ನ ಚಿತ್ರಾನ್ನ ಎಂದು ಉಪೇಂದ್ರ ಜೊತೆ ಕುಣಿದು ಪಡ್ಡೆಗಳಿಗೆ ಕಣ್ಣಿಗೆ ರಸದೌತಣ ನೀಡಿದ ಕನ್ನಡದ ಹುಡುಗಿ ಸುಮನ್ ರಂಗನಾಥ್ ಈಗ ತಮಿಳಿನಲ್ಲಿ ಪತ್ರಕರ್ತೆ. ಆದರೆ ಅಂತಿಂತಹ ಪತ್ರಕರ್ತೆಯಲ್ಲ ಮನೋಹರವಾದ ಜರ್ನಲಿಸ್ಟ್!

ಪೋಷಕ ಪಾತ್ರಗಳಲ್ಲಿ ಸುಮನ್ ಮಿಂಚುತ್ತಿದ್ದರೂ ಆರಕ್ಕೇರದೆ ಮೂರಕ್ಕಿಳಿಯದೆ ಅಲ್ಲಲ್ಲೇ ಸೈಕಲ್ ಹೊಡೆಯುತ್ತಿದ್ದರು. ಏತನ್ಮಧ್ಯೆ 'ಸಿದ್ಲಿಂಗು' ಚಿತ್ರದಲ್ಲಿ ಪೋಷಿಸಿದ ರೊಮ್ಯಾಂಟಿಕ್ ಟೀಚರ್ ಪಾತ್ರ ಪಡ್ಡೆಗಳ ಪಾಲಿಗೆ ಪಂಚಾಮೃತವನ್ನೇ ಬಡಿಸಿತ್ತು.

ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಶಿವ' ಚಿತ್ರದಲ್ಲಿ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ ಸುಮನ್. ಅದುಬಿಟ್ಟರೆ ಸುಮನ್ ರ ಖಾತೆಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಚಿತ್ರವಿಲ್ಲ.

ಇಂತಿಪ್ಪ ಸುಮನ್ ಗೆ ತಮಿಳಿನಲ್ಲಿ ಒಂದು ವಿಭಿನ್ನ ಪಾತ್ರವೊಂದು ಹುಡುಕಿಕೊಂಡು ಬಂದಿದೆ. ಈ ಚಿತ್ರದಲ್ಲಿ ಆಕೆ ಪತ್ರಕರ್ತೆಯಾಗಿ ಕಾಣಿಸಲಿದ್ದಾರೆ. ಅವರ ಪಾತ್ರದ ಹೆಸರು ರಮ್ಯಾ. ಆದರೆ ನಮ್ಮ ಗೋಲ್ಡನ್ ಗರ್ಲ್ ರಮ್ಯಾಗೂ ಈ ಪಾತ್ರಕ್ಕೂ ಎತ್ತಣಿಂದ ಎತ್ತ ಸಂಬಂಧವೂ ಇಲ್ಲ.

ಇನ್ನೂ ಹೆಸರಿಡದ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಜಿತ್ ಹಾಗೂ ನಯನತಾರಾ ಇದ್ದಾರೆ. ಈ ಚಿತ್ರದ ನಿರ್ದೇಶಕರು ವಿಷ್ಣುವರ್ಧನ್. 'ಬಿಲ್ಲಾ' ಚಿತ್ರದ ಬಳಿಕ ಈ ಮೂವರು ಒಟ್ಟಿಗೆ ಕೈಜೋಡಿಸುತ್ತಿರುವ ಚಿತ್ರ ಇದಾಗಿದೆ.

ಪತ್ರಕರ್ತೆಯ ಪಾತ್ರ ಸುಮನ್ ಗೆ ಹೊಸ ಥ್ರಿಲ್ ಕೊಟ್ಟಿದೆಯಂತೆ. ಡಬ್ಬದಲ್ಲಿ ಕಲ್ಲುಹಾಕಿ ಅಲ್ಲಾಡಿಸಿದಷ್ಟೆ ಸಲೀಸಾಗಿ ತಮಿಳನ್ನು ಸುಮನ್ ಮಾತನಾಡುತ್ತಾರೆ. ಹಾಗಾಗಿ ಈ ಪಾತ್ರವನ್ನು ಆಕೆ ಸಾಕಷ್ಟು ಎಂಜಾಯ್ ಮಾಡಿದ್ದಾರಂತೆ. ಸದ್ಯಕ್ಕೆ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ.

ಈ ಹಿಂದೆಯೇ ತಮಿಳಿನಲ್ಲಿ ಸುಮನ್ ತಮ್ಮ ಛಾಪನ್ನು ಮೂಡಿಸಿದ್ದರು. ಆದರೆ ತಮಿಳು ಚಿತ್ರರಂಗದಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ. ಈ ಬಾರಿ ಮಾತ್ರ ಆಕೆಗೆ ಹೊಸ ರೀತಿಯ ಪಾತ್ರ ಸಿಕ್ಕಿದೆ. ಈ ಪಾತ್ರವನ್ನು ಪ್ರೇಕ್ಷಕರು ಸ್ವೀಕರಿಸಿದರೆ ಸುಮನ್ ತಮಿಳು ಚಿತ್ರರಂಗದಲ್ಲಿ ಎರಡೂ ಪಾದ ಊರುವ ಅವಕಾಶಗಳು ಬಹಳಷ್ಟಿವೆ.

ಸಿಬಿಐ ಶಂಕರ್, ಸಂತ ಶಿಶುನಾಳ ಶರೀಫ, ನಮ್ಮೂರ ಹಮ್ಮೀರ, ಚಿಕ್ಕೆಜಮಾನ್ರು ಮತ್ತಿತರ ಚಿತ್ರಗಳಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದ ಸುಮನ್ ಮುಂಬೈಗೆ ಹಾರಿ, ಐಟಂ ಡ್ಯಾನ್ಸರ್ ಕೂಡ ಆಗಿದ್ದರು! ಆದರೆ ಎಲ್ಲೂ ನೆಲೆಯೂರಲು ಸಾಧ್ಯವಾಗಿರಲಿಲ್ಲ.

ಆ ನಂತರ ಬಿಂದಾಸ್, ಮಸ್ತ್ ಮಜಾ ಮಾಡಿ, ಅಂಜದಿರು, ಸವಾರಿ, ಕಲಾಕಾರ್, ಗನ್, ಹರಿಕಥೆ ಮುಂತಾದ ಚಿತ್ರಗಳಲ್ಲಿ ಅವಕಾಶ ಪಡೆದಿದ್ದಲ್ಲದೆ, ಕಿರುತೆರೆಯ ಕೆಲವು ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿಯೂ ಸುಮನ್ ಕಾಣಿಸಿಕೊಂಡರು. ವಯಸ್ಸು 38 ಆಗಿದ್ದರೂ 18ರ ಹುಡುಗಿಯರನ್ನು ನಾಚಿಸುವ ನಟನೆ. (ಒನ್ ಇಂಡಿಯಾ ಕನ್ನಡ)

English summary
Kannada actress Suman Ranganathan is shooting for Ajith’s next untitled flick which also includes Nayanthara, Arya and Tapasee. The team is currently shooting in Bangalore. The actress is back in Tamil films again after a long break.
Please Wait while comments are loading...