»   » ದರ್ಶನ್ ವೃತ್ತಿ ಜೀವನದ 5 ಸೂಪರ್ ಹಿಟ್ ಚಿತ್ರಗಳು

ದರ್ಶನ್ ವೃತ್ತಿ ಜೀವನದ 5 ಸೂಪರ್ ಹಿಟ್ ಚಿತ್ರಗಳು

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಬಜೆಟ್ ಚಿತ್ರ ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಿಡುಗಡೆಯ ಹೊಸ್ತಿಲಲ್ಲಿದೆ. ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಕಿಂಗ್ ಎಂದು ಅಭಿಮಾನಿಗಳು ನೀಡಿರುವ ಬಿರುದಿನಿಂದ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ದರ್ಶನ್ ಅವರಿಗಿರುವ ಅಭಿಮಾನಿ ಬಳಗ ದೊಡ್ಡದು.

ಮಾಸ್ ಚಿತ್ರಕ್ಕೆ ಹೆಸರಾಗಿರುವ ದರ್ಶನ್ ತನ್ನ ವಿಶಿಷ್ಟ ಡೈಲಾಗ್ ಡೆಲಿವರಿ, ಬಾಡಿ ಮ್ಯಾನರಿಸಂನಿಂದ ಹೆಸರು ಪಡೆದವರು. ಖ್ಯಾತ ಖಳನಟನಾಗಿ ಗುರುತಿಸಿಕೊಂಡಿದ್ದ ತೂಗುದೀಪ ಶ್ರೀನಿವಾಸ್ ಅವರ ಮಗ ಎನ್ನುವ ಹಿನ್ನಲೆಯಿದ್ದರೂ ಚಿತ್ರರಂಗದಲ್ಲಿ ನೆಲೆಯೂರಲು ಸ್ವಪ್ರಯತ್ನದಿಂದಲೇ ಯಶಸ್ಸು ಕಂಡ ಕೆಲ ನಟರ ಸಾಲಿನಲ್ಲಿ ದರ್ಶನ್ ಕೂಡ ಒಬ್ಬರು.

ಬೆಳ್ಳಿತೆರೆ ಪ್ರವೇಶಿಸುವ ಮುನ್ನ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ದರ್ಶನ್ 'ಮೆಜಿಸ್ಟಿಕ್ ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಗುರುತಿಸಿಕೊಂಡರು. 17.02.1977ರಲ್ಲಿ ಮೈಸೂರಿನಲ್ಲಿ ಜನಿಸಿದ ದರ್ಶನ್ 1997 ರಿಂದ 2001ರ ವರೆಗೆ ಮಹಾಭಾರತ, ದೇವರಮಗ, ಭೂತಯ್ಯನ ಮಕ್ಕಳು, ಮಿ. ಹರಿಶ್ಚಂದ್ರ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಮೆಜೆಸ್ಟಿಕ್ ನಿಂದ ಚಿಂಗಾರಿವರೆಗೆ 40 ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ದರ್ಶನ್ ಹಲವು ಚಿತ್ರಗಳಲ್ಲಿ ಅತಿಥಿ ನಟನಾಗಿ ಕೂಡ ಕಾಣಿಸಿಕೊಂಡಿದ್ದರು. 2006ರಲ್ಲಿ ತಮ್ಮದೇ ಸ್ವಂತ 'ತೂಗುದೀಪ ಪ್ರೊಡಕ್ಷನ್' ಬ್ಯಾನರ್ ಹುಟ್ಟು ಹಾಕಿದ ದರ್ಶನ್ ಮೊದಲ ಚಿತ್ರವಾಗಿ ಕನ್ನಡ ಚಿತ್ರರಂಗದ ಖಳನಟರ ಮಕ್ಕಳನ್ನು ಹಾಕಿ ತೆಗೆದ ನವಗ್ರಹ ಎನ್ನುವ ಚಿತ್ರವನ್ನು ತೆಗೆದರು. ಆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಯಶಸ್ಸುನ್ನು ಕಂಡಿತು.

ತಮ್ಮ ಸ್ವಂತ ಬ್ಯಾನರಿನ ಮುಂದಿನ ಚಿತ್ರ ದರ್ಶನ್, ಅಂಬರೀಶ್ ಮುಖ್ಯ ಭೂಮಿಕೆಯಲ್ಲಿರುವ 'ಬುಲ್ ಬುಲ್'. ದರ್ಶನ್ ನಟಿಸಿದ 40 ಚಿತ್ರಗಳಲ್ಲಿ ಸಕ್ಸಸ್ ಆದ ಚಿತ್ರಗಳನ್ನು ಪಟ್ಟಿಮಾಡುವುದಾದರೆ ಹತ್ತು ಚಿತ್ರಗಳು. ಆ ಹತ್ತು ಚಿತ್ರಗಳ ಪೈಕಿ ನಿರ್ಮಾಪಕರಿಗೆ ಹಣದ ಹೊಳೆ ಹರಿಸಿದ ಚಿತ್ರಗಳೆಂದರೆ ಮೆಜೆಸ್ಟಿಕ್, ಕರಿಯ, ಕಲಾಸಿಪಾಳ್ಯ, ಗಜ, ಮತ್ತು ಸಾರಥಿ.

ಭೂಗತಲೋಕದ ಸತ್ಯವನ್ನು ತೆರೆದಿಟ್ಟ ಮೆಜೆಸ್ಟಿಕ್ ಚಿತ್ರ

2001 ರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ ಚಿತ್ರದಲ್ಲಿ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡರು. ತನ್ನ ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸು ಕಂಡ ಈ ಚಿತ್ರವನ್ನು ನಿರ್ದೇಶಿಸಿದವರು ಪಿ ಎನ್ ಸತ್ಯಾ. ರೇಖಾ ನಾಯಕನಟಿಯಾಗಿ ಕಾಣಿಸಿಕೊಂಡಿದ್ದ ಈ ಚಿತ್ರದಲ್ಲಿ ವನಿತಾ ವಾಸು, ಜೈ ಜಗದೀಶ್ ಮುಖ್ಯ ಭೂಮಿಕೆಯಲ್ಲಿದ್ದರು. ಭೂಗತಲೋಕದ ಕಟುಸತ್ಯವನ್ನು ತೆರೆಗೆ ತರುವಲ್ಲಿ ನಿರ್ದೇಶಕರು ಗೆದ್ದಿದ್ದರು. ಭಾ. ಮಾ. ಹರೀಶ್ ಮತ್ತು ಎಂ ಜಿ ರಾಮಮೂರ್ತಿ ಚಿತ್ರದ ನಿರ್ಮಾಪಕರು.

ಕೆಂಚಾಲೋ ಮಚಾಲೋ ಹಿಂಗವ್ಳಾ ನಿನ್ ಡವ್ ಗಳು

ಪ್ರೇಮ್ ನಿರ್ದೇಶಿಸಿದ ಕರಿಯ ಚಿತ್ರ 2003ರಲ್ಲಿ ಬಿಡುಗಡೆಯಾಯಿತು. ದರ್ಶನ್ ಮತ್ತು ಅಭಿನಯಶ್ರೀ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದರು. ಆನೇಕಲ್ ಬಾಲರಾಜ್ ನಿರ್ಮಿಸಿದ್ದ ಈ ಚಿತ್ರದ ಯಶಸ್ಸು ನಿರ್ದೇಶಕ ಪ್ರೇಮ್ ಮತ್ತು ದರ್ಶನ್ ಗೆ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರುವಂತೆ ಮಾಡಿತು.

ಮಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಚಿತ್ರ

ಓಂ ಪ್ರಕಾಶ್ ರಾವ್ ನಿರ್ದೇಶನದ ಕಲಾಸಿಪಾಳ್ಯ ಚಿತ್ರ 2004ರಲ್ಲಿ ಬಿಡುಗಡೆಗೊಂಡಿತ್ತು. ದರ್ಶನ್, ರಕ್ಷಿತಾ, ಸಾಧು ಕೋಕಿಲಾ, ಬುಲೆಟ್ ಪ್ರಕಾಶ್, ಅವಿನಾಶ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಸಾಧು ಕೋಕಿಲಾ ಸಂಗೀತ ನೀಡಿದ್ದರು. ಕೋಟಿ ನಿರ್ಮಾಪಕ ರಾಮು ನಿರ್ಮಿಸಿದ್ದ ಈ ಚಿತ್ರ ಬೆಂಗಳೂರು ಕಲಾಸಿಪಾಳ್ಯದ ಜನನಿಬಿಡ ಪ್ರದೇಶದಲ್ಲಿ ಸಾವಿರಾರು ಮಂದಿ ಸಾರ್ವಜನಿಕರ ಎದುರು ಶೂಟಿಂಗ್ ನಡೆಸಲಾಗಿತ್ತು. ಚಿತ್ರದಲ್ಲಿ ರಕ್ಷಿತಾ ತುಂಡು ಉಡುಗೆ ಪಡ್ಡೆಗಳಿಗೆ ಸಖತ್ ಮಜಾ ನೀಡಿತ್ತು.

ಮಾದೇಶ ನಿರ್ದೇಶಿಸಿದ ರಿಮೇಕ್ ಚಿತ್ರ

ತೆಲುಗಿನ ಭದ್ರ, ತಮಿಳಿನ ಶರವಣ ಚಿತ್ರದ ರಿಮೇಕ್ 'ಗಜ'. 2008ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ದರ್ಶನ್, ನವ್ಯಾ ನಾಯರ್, ದೇವರಾಜ್, ಶೋಭರಾಜ್ ಪ್ರಮುಖ ತಾರಾಗಣದಲ್ಲಿದ್ದರು. ವಿ ಹರಿಕೃಷ್ಣ ಸಂಗೀತ ನೀಡಿದ್ದ ಈ ಚಿತ್ರವನ್ನು ಶ್ರೀನಿವಾಸ ಮೂರ್ತಿ ಮತ್ತು ಸುರೇಶ ಗೌಡ ನಿರ್ಮಿಸಿದ್ದರು. ಚಿತ್ರದಲ್ಲಿನ ಹಾಡುಗಳು ಒಂದಕ್ಕೊಂದು ಜನಪ್ರಿಯಗೊಂಡಿದ್ದವು. ಐತಲಕಡಿ, ಬಂಗಾರಿ ಯಾರೇ ನೀ ಬುಲ್ ಬುಲ್ ಹಾಡುಗಳಂತೂ ಮನೆಮಾತಾಗಿದ್ದವು.

ದಿನಕರ್ ನಿರ್ದೇಶಿಸಿದ ಅತಿರಥ ಮಾಹಾರಥ ಸಾರಥಿ

ಕೈಮುಗಿದು ಏರು ಇದು ಕನ್ನಡದ ತೇರು ಎಂದು ಗಳಿಕೆಯಲ್ಲಿ ದಾಖಲೆ ಸೃಷ್ಟಿಸಿದ ಚಿತ್ರ 'ಸಾರಥಿ'. ದರ್ಶನ್ ಜೈಲುವಾಸ ಅನುಭವಿಸುತ್ತಿದ್ದಾಗಲೇ ಬಿಡುಗಡೆಯಾದ ಈ ಚಿತ್ರ ನಿರೀಕ್ಷೆಗೂ ಮೀರಿ ಯಶಸನ್ನು ಕಂಡಿತ್ತು. ದರ್ಶನ್ ಸಹೋದರ ದಿನಕರ್ ತೂಗುದೀಪ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ದರ್ಶನ್ ಜೊತೆಯಾಗಿ ದೀಪಾ ಸನ್ನಿಧಿ, ರಂಗಾಯಣ ರಘು, ಬುಲೆಟ್ ಪ್ರಕಾಶ್ ಮತ್ತು ತಮಿಳಿನ ಶರತ್ ಕುಮಾರ್ ನಟಿಸಿದ್ದರು. ಹೊರ ರಾಜ್ಯದಲ್ಲಿ ಮತ್ತು ವಿದೇಶದಲ್ಲಿ ಕೂಡಾ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಂಡ ಚಿತ್ರ.

English summary
Biggest hit movies of Challenging Star Darshan filmy career. He has acted as Hero in 40 films, out of that five films are in Super Hit category.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada