For Quick Alerts
  ALLOW NOTIFICATIONS  
  For Daily Alerts

  ಇಹದ ಗಾನ-ಯಾನ ಮುಗಿಸಿದ ಭಾಗವತ ಕೃಷ್ಣ ಭಂಡಾರಿ ಗುಣವಂತೆ

  By ಕಾರವಾರ ಪ್ರತಿನಿಧಿ
  |

  ಯಕ್ಷಗಾನ ಕಲಾವಿದರಾಗಿ ಮದ್ದಲೆಗಾರರಾಗಿ, ಭಾಗವತರಾಗಿ, ಕಲಾಸಕ್ತರ ಪಾಲಿನ ಗುರುವಾಗಿ ಸಂಪೂರ್ಣ ಯಕ್ಷ ರಂಗಕ್ಕೆ ತಮ್ಮನ್ನು ಮುಡಿಪಿಟ್ಟಿದ್ದ ಕೃಷ್ಣ ಭಂಡಾರಿ ಗುಣವಂತೆ ಅವರು ದೀರ್ಘ ಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳದೆ ಶನಿವಾರ ರಾತ್ರಿ ಇಹಲೋಕ ಯಾತ್ರೆ ಮುಗಿಸಿದ್ದಾರೆ.

  ಕಲಾಸರಸ್ವತಿಯ ಕೃಪಾಕಟಾಕ್ಷಕ್ಕೆ ಪಾತ್ರವಾಗಿದ್ದ ಕುಟುಂಬದ ಕುಡಿಯಾಗಿ 1961 ಸುಬ್ಬಿ ಮತ್ತು ಮಂಜ ಭಂಡಾರಿ ಅವರ ಪಂಚಮ ಪುತ್ರನಾಗಿ ಜನಿಸಿದ್ದರು. ಅಜ್ಜ ವೆಂಕಪ್ಪ ಭಂಡಾರಿ ಯಕ್ಷಗಾನ ಕಲಾವಿದರಾಗಿ ತೆಂಕು ಹಾಗೂ ಬಡಗು ತಿಟ್ಟಿನಲ್ಲಿ ಸಾಕಷ್ಟು ಹೆಸರು ಮಾಡಿದ ಕಲಾವಿದರಾದರೆ ತಂದೆ ಮಂಜ ಭಂಡಾರಿ ಖ್ಯಾತ ಮದ್ದಲೆಗಾರರಾಗಿದ್ದರು. ಕಲೆಯಲ್ಲಿ ಶ್ರೀಮಂತರಾಗಿದ್ದರೂ ಆರ್ಥಿಕವಾಗಿ ಬಡತನವೆಂಬ ಶಾಪ ಬೆಂಬಿಡದೇ ಕಾಡುತ್ತಿದ್ದಾಗ ಅಣ್ಣ ವೆಂಕಪ್ಪ ಭಂಡಾರಿ ಸಹಾಯದಿಂದ ಕಡಲತಡಿಯ ಭಾರ್ಗವ ಎಂದೇ ಹೆಸರಾದ ಶಿವರಾಮ ಕಾರಂತ ಅವರ ಗರಡಿಯಲ್ಲಿ ಪಳಗುವ ಅದೃಷ್ಟವನ್ನು ಪಡೆದುಕೊಂಡಿದ್ದರು.

  ಶಾಲೆಯಲ್ಲಿ ಗುರುಗಳ ಸಹಾಯದಿಂದ ಐದನೇತರಗತಿಯಲ್ಲಿ ಓದುತ್ತಿರುವಾಗಲೇ ಗುಣವತಿ ಪರಿಣಯ ಎನ್ನುವ ಪ್ರಸಂಗವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿ ತಾನೊಂದು ಜನ್ಮಜಾತ ಪ್ರತಿಭೆ ಎನ್ನುವುದನ್ನು ನಿರೂಪಿಸಿದ್ದ ಕಲಾವಿದ ಕೃಷ್ಣ ಭಂಡಾರಿ ಮುಂದೆ ಯಕ್ಷರಂಗದಲ್ಲಿಯೇ ಮುಂದುವರಿಯುವಂತಾಗಿದ್ದು ಮಾತ್ರ ಕಲಾಭಿಮಾನಿಗಳು ಕಲಾಸಕ್ತರ ಪಾಲಿನ ಅದೃಷ್ಟ ಎನ್ನಬಹುದು.

  ಪೌರಾಣಿಕ ಪ್ರಸಂಗಗಳನ್ನು ರಂಗದಲ್ಲಿ ಕಟ್ಟಿಕೊಡುವಲ್ಲಿ ಇಂದಿಗೂ ಗಟ್ಟಿಯಾದ ನೆಲೆಯನ್ನು ಹೊಂದಿರುವ ಇಡಗುಂಜಿ ಮೇಳದಲ್ಲಿ ಯಕ್ಷಲೋಕದ ಪಯಣವನ್ನು ಆರಂಭಿಸಿ ಉತ್ತರಪ್ರದೇಶ, ತಮಿಳುನಾಡು, ಮುಂಬೈ ಸೇರಿದಂತೆ ರಾಷ್ಟ್ರದ ಉದ್ದಗಲಕ್ಕೂ ಸಂಚರಿಸಿ ತಮ್ಮ ಕಂಚಿನ ಕಂಠದ ಭಾಗವತಿಕೆಯಿಂದ ಕಲಾವಿದರನ್ನು ಕುಣಿಸಿದ್ದಾರೆ.

  ಇಡಗುಂಜಿ, ಪೆರ್ಡೂರು, ಸಾಲಿಗ್ರಾಮ ಮೇಳಗಳು ಸೇರಿದಂತೆ ಬದುಕಿನುದ್ದಕ್ಕೂ ಸಾವಿರಾರು ಬಯಲಾಟದ ಪ್ರಸಂಗಗಳಲ್ಲಿ ಬರುವ ಪಾತ್ರಗಳ ಸೂತ್ರದಾರಿಯಾಗಿ, ಅವುಗಳಿಗೆ ಜೀವತುಂಬುವ ದ್ವನಿಯಾಗುವ ಮೂಲಕ ಕಲಾಸೇವೆ ಗೈದ ಕೃಷ್ಣ ಭಂಡಾರಿಯವರನ್ನು 2012-13 ನೇ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿಯೂ ಅರಸಿ ಬಂದಿತ್ತು.

  ತಮಗೆ ಹೆಸರು, ಯಶಸ್ಸು, ಕೀರ್ತಿ, ಬದುಕು ಕೊಟ್ಟ ಕಲೆಯನ್ನು ಮುಂದಿನ ಪೀಳಿಗೆಗೆ ಧಾರೆಯೆರೆಯಬೇಕು ಎನ್ನುವ ಉತ್ಕಟವಾದ ಅಭಿಲಾಷೆಯನ್ನು ಹೊಂದಿ ಶ್ರೀ ನಾಗಚೌಡೇಶ್ವರಿ ಯಕ್ಷಕಲಾ ಟ್ರಸ್ಟ್ ರಚಿಸಿಕೊಂಡು ಕಾರವಾರ, ಅಂಕೋಲಾ, ಕುಮಟಾ, ಗೋಕರ್ಣ, ಹೊನ್ನಾವರ, ಮುರ್ಡೇಶ್ವರ, ಶಿರಾಲಿ, ಗುಣವಂತೆ, ಹೊನ್ನಾವರ, ಭಟ್ಕಳ, ಮಂಗಳೂರು ಮುಂತಾದ ಕಡೆ ಯಕ್ಷಗಾನ ತರಬೇತಿ ಶಿಬಿರಗಳನ್ನು ತೆರೆದು ಸಾವಿರಾರು ಕಲಾಸಕ್ತರಿಗೆ ತಮ್ಮಲ್ಲಿರುವ ಜ್ಞಾನಸುಧೆಯನ್ನು ಹಂಚಿದ್ದರು.

  ಮಡದಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುವ ಯಕ್ಷಗುರು ಕೃಷ್ಣ ಭಂಡಾರಿ ಗುಣವಂತೆಯವರ ಅಗಲಿಕೆಗೆ ಅವರ ಅಪಾರ ಶಿಷ್ಯವರ್ಗ, ತೆಂಕು ಹಾಗೂ ಬಡುಗು ತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದರು, ಭಟ್ಕಳ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ತಾಲೂಕಾ ಪಂಚಾಯತ ಮಾಜಿ ಸದಸ್ಯ ಗಣಪಯ್ಯ ಕನ್ಯಾ ಗೌಡ, ಕೆಳಗಿನೂರು ಗ್ರಾಮಪಂಚಾಯತ ಅಧ್ಯಕ್ಷ ಗಂಗಾಧರ ಗೌಡ, ತಾಲೂಕಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮಪ್ಪ ಜಿ ಗೌಡ,ಇಡಗುಂಜಿ ಮೇಳದ ಸಂಚಾಲಕರಾದ ಶಿವಾನಂದ ಹೆಗಡೆ ಕೆರೆಮನೆ, ಒಕ್ಕಲಿಗರ ಯಕ್ಷಗಾನ ಬಳಗದ ಅಧ್ಯಕ್ಷ ರಾಮ ಗೌಡ ಸೇರಿದಂತೆ ಹಲವರು ತೀವೃ ಸಂತಾಪ ಸೂಚಿಸಿದ್ದಾರೆ.

  English summary
  Famous Yakshagana artist and teacher Krishna Bhandari Gunavanthe passed away. He was bed ridden from some months.
  Monday, September 6, 2021, 10:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X