»   » ಬರ್ತಡೆ ಬಾಯ್ 'ಯಶ್' ಯಶಸ್ಸಿನ ಹಿಂದಿನ ರಹಸ್ಯ

ಬರ್ತಡೆ ಬಾಯ್ 'ಯಶ್' ಯಶಸ್ಸಿನ ಹಿಂದಿನ ರಹಸ್ಯ

Posted By:
Subscribe to Filmibeat Kannada

''ಕನ್ನಡ ಪ್ರೇಕ್ಷಕರು ಥಿಯೇಟರ್ ಗಳಿಗೆ ಬರ್ತಿಲ್ಲ. ಕನ್ನಡ ಚಿತ್ರರಂಗಕ್ಕೆ ಮಾರ್ಕೆಟ್ ಕಮ್ಮಿ. ಸ್ಟಾರ್ ಸಿನಿಮಾಗಳಿಗೆ ಬೇಡಿಕೆ ಇಲ್ಲ. ಕನ್ನಡ ಚಿತ್ರಗಳನ್ನ ಕೇಳೋರೂ ಇಲ್ಲ'' ಅಂತ ಕೊರಗುತ್ತಿದ್ದ ಸ್ಯಾಂಡಲ್ ವುಡ್ ನಿರ್ಮಾಪಕರಿಗೆ ಹೊಸ ಆಶಾಕಿರಣವಾಗಿದ್ದಾರೆ ರಾಕಿಂಗ್ ಸ್ಟಾರ್ ಯಶ್.

'ಕಿರಾತಕ' ಚಿತ್ರದಿಂದಲೂ ನಿರ್ಮಾಪಕರ ಡಾರ್ಲಿಂಗ್ ಆಗಿರುವ 'ಯಶ್', ತಮ್ಮ ಲೇಟೆಸ್ಟ್ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ವರೆಗೂ 'ಯಶ'ಸ್ಸಿನ ರಾಯಭಾರಿ. ಗಾಂಧಿನಗರದ ಸದ್ಯ ಗೆಲ್ಲುವ ಕುದುರೆಯಾಗಿರುವ 'ಯಶ್'ಗಿಂದು ಹುಟ್ಟುಹಬ್ಬದ ಸಂಭ್ರಮ.

29ನೇ ವಸಂತಕ್ಕೆ ಕಾಲಿಟ್ಟಿರುವ 'ಯಶ್' ತಮ್ಮ ಜನ್ಮದಿನವನ್ನ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿಯಿಂದಲೇ ಯಶ್ ಮನಮುಂದೆ ಅಭಿಮಾನಿಗಳ ದಂಡೇ ಜಮಾಯಿಸಿದೆ.

ಕೇವಲ ಏಳು ವರ್ಷಗಳ ಹಿಂದೆಯಷ್ಟೇ ಸಾಮಾನ್ಯ ಹುಡುಗನಾಗಿ, ಅವಕಾಶಕ್ಕೋಸ್ಕರ ನಿರ್ಮಾಪಕರ ಮನೆಗೆ ಅಲಿಯುತ್ತಿದ್ದ ನವೀನ್ ಕುಮಾರ್ ಗೌಡ, ಇಂದು 'ಸ್ಯಾಂಡಲ್ ವುಡ್ ಸುಲ್ತಾನ್' ಆಗಿರುವುದರ ಹಿಂದೆ ಒಂದು ರೋಚಕ ಕಥೆ ಇದೆ. [ಬಾಕ್ಸ್ ಆಫೀಸ್ ನಲ್ಲಿ 'ರಾಮಾಚಾರಿ' ತಕಧಿಮಿತ]

ಯಾವುದೇ ಗಾಡ್ ಫಾದರ್ ಇಲ್ಲದೇ ಚಿತ್ರರಂಗಕ್ಕೆ ಕಾಲಿಟ್ಟ 'ಯಶ್', ಯಶಸ್ಸಿನ ಬೆನ್ನತ್ತಿದ್ದು ಹೇಗೆ ಅನ್ನುವುದರ ಕುರಿತು ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ....ಮುಂದೆ ಓದಿ.....

'ಯಶ್' ಮುಟ್ಟಿದ್ದೆಲ್ಲಾ ಚಿನ್ನ..!

ಒಂದ್ಕಾಲದಲ್ಲಿ, 'ಒಂದು ಚಾನ್ಸ್ ಕೊಡಿ ಸಾರ್', ಅಂತ ಸೀರಿಯಲ್ ನಲ್ಲಿ ಅವಕಾಶಕ್ಕೋಸ್ಕರ ಎಲ್ಲರನ್ನ ಬೇಡುತ್ತಿದ್ದ 'ಯಶ್', 'ಜಂಬದ ಹುಡುಗಿ'ಯ ಕೃಪೆಯಿಂದ ಬೆಳ್ಳಿತೆರೆ ಮೇಲೆ ಎಂಟ್ರಿಕೊಟ್ಟೇಬಿಟ್ಟರು. ಅಲ್ಲಿಂದ ಶುರುವಾಗಿದ್ದೇ 'ಯಶ್' ಯಶಸ್ಸಿನ ನಾಗಲೋಟ. 'ನಂದಗೋಕುಲ'ದಲ್ಲಿ ಜೋಡಿಯಾಗಿದ್ದ ರಾಧಿಕಾ ಪಂಡಿತ್ ಜೊತೆ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ನಟಿಸಿದ್ದ ಯಶ್, ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಬಾಚಿಕೊಂಡಿದರು. ಅಲ್ಲಿಂದ, ಯಶ್ ಅದೃಷ್ಟವೇ ಬದಲಾಗಿ ಹೋಯ್ತು.

'ಕಿರಾತಕ'ನಾದ ಯಶ್

'ರಾಕಿ', 'ತಮಸ್ಸು', 'ಮೊದಲಾಸಲ', 'ಗೋಕುಲ', 'ರಾಜಧಾನಿ' ಚಿತ್ರಗಳಲ್ಲಿ ಅಭಿನಯಿಸಿದ್ದರೂ ಅಷ್ಟೇನು ಹೆಸರು ಮಾಡದ ಯಶ್, 'ಕಿರಾತಕ' ಚಿತ್ರದಿಂದ ಏಕ್ದಂ ಸ್ಟಾರ್ ಆಗ್ಬಿಟ್ಟರು. ಮಂಡ್ಯ ಭಾಷೆಯಲ್ಲಿ 'ಅಣ್ತಮ್ಮ'ರನ್ನ ಸೆಳೆದ ಯಶ್ ಮತ್ತಷ್ಟು 'ಲಕ್ಕಿ'ಯಾಗಿದ್ದು ಲಕ್ಕಿ ಸ್ಟಾರ್ ರಮ್ಯಾ ಜೊತೆಯಾದ್ಮೇಲೆ..!

ಯಶ್ 'ಡ್ರಾಮಾ' ಶುರುವಾಯ್ತು ನೋಡಿ..!

'ಡ್ರಾಮಾ' ಚಿತ್ರದಿಂದ ಯೋಗರಾಜ್ ಭಟ್ರ ಕ್ಯಾಂಪಿಗೆ ಸೇರಿದ ಯಶ್, ಅಂಬಿ ಮಾಮನ ಅಚ್ಚು ಮೆಚ್ಚಿನ ನಟನಾದರು. ಅಲ್ಲಿಂದಲೇ ಗಾಂಧಿನಗರದಲ್ಲಿ ಯಶ್ 'ಗೂಗ್ಲಿ' ಬಾಲ್ ಹಾಕೋಕೆ ಶುರುಹಚ್ಕೊಂಡಿದ್ದು. 'ಡ್ರಾಮಾ' ಚಿತ್ರದ ಸಣ್ಣ ಪಾತ್ರದಲ್ಲಿ ಅಂಬಿ ಕಾಣಿಸಿಕೊಂಡಿದ್ದಕ್ಕೆ ಚಿತ್ರಕ್ಕೆ ಅತಿ ಹೆಚ್ಚು ಹೈಪ್ ಸಿಕ್ತು. ಹಾಗೆ, 'ಡ್ರಾಮಾ' ಚಿತ್ರದಿಂದ ಯಶ್ ವೃತ್ತಿ ಬದುಕ್ಕಲ್ಲಿ ಮೊಟ್ಟ ಮೊದಲ ಬಾರಿಗೆ ಬಿಗ್ ಓಪನ್ನಿಂಗ್ ಕೂಡ ಸಿಕ್ತು. ಯಶ್ ಗೆ ಇಷ್ಟು ಸಾಕಾಗಿತ್ತು, ಯಶಸ್ಸಿನ ಫಾರ್ಮುಲಾವನ್ನ ಕಂಡುಹಿಡಿದುಕೊಳ್ಳುವುದಕ್ಕೆ!

'ಅಂಬಿ' ಆಯ್ತು, 'ಶಂಕ್ರಣ್ಣ' ಬಂದ್ರು..!

'ಅಂಬಿ' ಫಾರ್ಮುಲಾ ಸಕ್ಸಸ್ ಆಗ್ತಿದ್ದ ಹಾಗೆ, ಕರಾಟೆ ಕಿಂಗ್ ಶಂಕರ್ ನಾಗ್ ಹಿಂದೆ ಬಿದ್ದ ಯಶ್, 'ಗೂಗ್ಲಿ' ಚಿತ್ರದಲ್ಲಿ ಶಂಕ್ರಣ್ಣನನ್ನ 'ಸಾಂಗ್ಲಿಯಾನ' ರೂಪದಲ್ಲಿ ತೋರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು. ತೆರೆಮೇಲೆ 'ಶಂಕರಣ್ಣ'ನನ್ನ ಮಿಸ್ ಮಾಡಿಕೊಂಡಿದ್ದ ಅಭಿಮಾನಿಗಳು ಚಿತ್ರಮಂದಿರಕ್ಕೆ ನುಗ್ಗೋಕೆ ಇಷ್ಟು ಸಾಕಲ್ವಾ.

''ನಮಗೆ ನಾವೇ ಹೀರೋ''- ಯಶ್

''ಅಣ್ತಮ್ಮ, ಇಲ್ಲಿ ಯಾರು ಹೀರೋಗಳನ್ನ ಹುಟ್ಹಾಕಲ್ಲ. ನಮಗೆ ನಾವೇ ಹೀರೋ ಆಗ್ಬೇಕು'', ''ಹೀರೋಗಳು ಯಾವತ್ತಿದ್ರೂ ಲೇಟಾಗಿ, ಲೇಟೆಸ್ಟ್ ಆಗಿ ಎಂಟ್ರಿಕೊಡ್ಬೇಕು'', ''ಕಾಲೆಳೆಯೋರು ಯಾವತ್ತಿದ್ರೂ ಕಾಲು ಕೆಳಗಿರ್ತಾರೆ, ಪ್ರೀತಿ ಅಭಿಮಾನ ಇಟ್ಟಿರುವ ಜನರು ಹೃದಯದಲ್ಲಿರುತ್ತಾರೆ'', ಹೀಗೆ ಬೆಂಕಿಯುಂಡೆಯಂತಹ ಡೈಲಾಗ್ ಗಳಿಂದ ಆಡಿಕೊಂಡವರ ಬಾಯಿಗೆ ಬೀಗ ಜಡಿದ ಯಶ್, 'ನಮಗೆ ನಾವೇ ಹೀರೋ ಆಗ್ಬೇಕು' ಅಂತ ಎದೆತಟ್ಟಿಕೊಂಡಿದ್ದು ಮಾತ್ರವಲ್ಲ. ಬಾಕ್ಸಾಫೀಸ್ ನಲ್ಲೂ ''ನಾನೇ ಹೀರೋ'' ಅಂತ 'ರಾಜಾಹುಲಿ' ಮೂಲಕ ನಿರೂಪಿಸಿದರು. [ಬಾಕ್ಸ್ ಆಫೀಸಲ್ಲಿ 'ರಾಜಾಹುಲಿ' ಲುಂಗಿ ಡಾನ್ಸ್]

ನಟಸಾರ್ವಭೌಮ ಡಾ.ರಾಜ್ ಅಭಿಮಾನಿಯಾದ ಯಶ್

ಇನ್ನೂ 'ಗಜಕೇಸರಿ' ಸಿನಿಮಾ, ರಾಜಣ್ಣನ ಅಭಿಮಾನಿಗಳನ್ನ ಆಕರ್ಷಿಸಿದ್ದು, ಚಿತ್ರದಲ್ಲಿ ಯಶ್ ಅಣ್ಣಾವ್ರ ಅಭಿಮಾನಿಯಾಗಿದ್ದಕ್ಕೆ! 'ಗಂಧದ ಗುಡಿ' ಚಿತ್ರದಲ್ಲಿದ್ದ ಥೇಟ್ ಡಾ.ರಾಜ್ ರಂತೆ ಕಾಣಿಸಿಕೊಂಡಿದ್ದ ಯಶ್, ಚಿತ್ರಮಂದಿರದಲ್ಲಿ ಎಲ್ಲರ ಶಿಳ್ಳೆ ಗಿಟ್ಟಿಸಿದ್ದು ಸುಳ್ಳಲ್ಲ. 'ಅಣ್ಣಾವ್ರ'ರನ್ನ ಅನುಕರಣೆ ಕೂಡ ಮಾಡಿದ್ದ ಯಶ್, ಚಿತ್ರದ ನಂತ್ರ ದೊಡ್ಮನೆ ಕುಟುಂಬಕ್ಕೂ ಹತ್ತಿರವಾದರು. [ಬಾಕ್ಸ್ ಆಫೀಸ್ ಬ್ಲಾಸ್ಟ್ ಮಾಡಿದ ಯಶ್ 'ಗಜಕೇಸರಿ']

ಸಾಹಸಸಿಂಹ 'ರಾಮಾಚಾರಿ'ಯ ಭಕ್ತ ಯಶ್

ಇತ್ತೀಚೆಗಷ್ಟೇ ರಿಲೀಸ್ ಆಗಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಯಶ್, ಸಾಹಸಸಿಂಹ ಡಾ.ವಿಷ್ಟುವರ್ಧನ್ ಭಕ್ತ. 'ರಾಮಾಚಾರಿ' ಅನ್ನುವ ಹೆಸರಿಟ್ಟುಕೊಂಡು, ವಿಷ್ಣು ಟಾಟ್ಯೂವನ್ನ ಎದೆಮೇಲೆ ಅಚ್ಚಾಗಿಸಿಕೊಂಡು, ಸಾಹಸಸಿಂಹ ನಂತೆ 'ಹಾವಿನ ದ್ವೇಷ' ಹಾಡಲ್ಲಿ ರೌದ್ರಾವತಾರ ಮೆರೆದಿರುವ ಯಶ್ ಗೆ 'ಅಭಿನವ ಭಾರ್ಗವ'ನ ಅಭಿಮಾನಿಗಳು ಫಿದಾ ಆಗಿದ್ದಾರೆ. ತೆರೆಮೇಲೆ ಕಣ್ಮರೆಯಾಗಿದ್ದ ಸಾಹಸಸಿಂಹನನ್ನ ಚಿತ್ರದಲ್ಲಿ 'ರಾಮಾಚಾರಿ'ಯಾಗಿ ವಿಜೃಂಭಿಸಿರುವುದಕ್ಕೆ 'ವಿಷ್ಣು ದಾದಾ' ಬಳಗ ಚಿತ್ರಮಂದಿರಕ್ಕೆ ಪದೇ ಪದೇ ಭೇಟಿಕೊಡುತ್ತಿದೆ. [ವಿಷ್ಣು ಅಭಿಮಾನಿಗಳೇ, 'ರಾಮಾಚಾರಿ' ನೋಡಲು ಮರೆಯದಿರಿ..]

'ಯಶ'ಸ್ಸಿನ ದಾರಿಯೇ ಬೇರೆ!

ಚಾಲೆಂಜಿಂಗ್ ಸ್ಟಾರ್ ದರ್ಶನ್-ರೆಬೆಲ್ ಸ್ಟಾರ್ ಅಂಬರೀಷ್ ಗೆ, ಕಿಚ್ಚ ಸುದೀಪ್ -ಸಾಹಸ ಸಿಂಹ ವಿಷ್ಣುಗೆ ಮಾತ್ರ ಬ್ರ್ಯಾಂಡ್ ಆದ್ಹಾಗೆ ಆಗದೆ, ಅಂಬರೀಷ್, ಶಂಕರ್ ನಾಗ್, ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್... ಹೀಗೆ ಸಾಲಾಗಿ ಎಲ್ಲರಿಗೂ ತಮ್ಮ ಚಿತ್ರದ ಮೂಲಕ ಸಲಾಂ ಹೊಡೆದಿರುವ ಯಶ್, 'ಸೀನಿಯರ್'ಗಳ ಆಶೀರ್ವಾದದಿಂದ ಮುನ್ನುಗುತ್ತಿದ್ದಾರೆ. ಇದೇ ಅವರ ಯಶಸ್ಸಿನ ಗುಟ್ಟು..!

ಸೀಕ್ರೆಟ್ ಆಫ್ ಸಕ್ಸಸ್..!

'ಗಾಡ್ ಫಾದರ್' ಇಲ್ಲದೆ ಗಾಂಧಿನಗರಕ್ಕೆ ಬಂದು 'ದಿಗ್ಗಜ'ರನ್ನ ಆರಾಧಿಸುತ್ತಿರುವ ಯಶ್, ಅದೇ ಹಾದಿಯಲ್ಲಿ ಅವರೆಲ್ಲರ ಅಭಿಮಾನಿ ಬಳಗವನ್ನೂ ತಮ್ಮತ್ತ ಸೆಳೆಯುತ್ತಿರುವುದು ಅಷ್ಟೇ ಸತ್ಯ. ಅದಕ್ಕೆ ಈ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿರುವುದಕ್ಕಿಂತ ಮತ್ತೊಂದು ಉದಾಹರಣೆ ನಿಮಗೆ ಬೇಕಾ..? [ರಾಕಿಂಗ್ ಸ್ಟಾರ್ ಯಶ್ ಗೆಲುವಿನ ರಹಸ್ಯ ಮಂತ್ರ]

English summary
Rocking Star Yash is celebrating his 29th birthday today (Jan 8th). On this occasion, here is the special report on Secret of his consecutive Block Buster Hits.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada