ಗೋಲ್ಡನ್ ಸ್ಟಾರ್ ಗಣೇಶ್, ಭಟ್ ಹ್ಯಾಟ್ರಿಕ್ ಕಾಂಬಿನೇಷನ್ ಚಿತ್ರ
ಪಟ ಪಟ ಅಂತ ಮಾತಲ್ಲೇ ಪಟಾಕಿ ಸಿಡಿಸುವ ಗೋಲ್ಡನ್ ಸ್ಟಾರ್ ಗಣೇಶ್....ಏನು ಮಾತನಾಡುತ್ತಿದ್ದಾರೆ ಅಂತ ಅರ್ಥ ಮಾಡಿಕೊಳ್ಳುವುದಕ್ಕೆ ತಲೆ ಕೆರ್ಕೊಬೇಕು! ಹಾಗೆ 'ಯಬಡ ತಬಡ' ಮಾತನಾಡುವ ಭಟ್ರು. ಈ ಇಬ್ಬರು ಭಿನ್ನ ವಿಭಿನ್ನ ಪ್ರತಿಭೆಗಳು ಸೇರಿ ಕೊಟ್ಟ ಮನಮಿಡಿಯುವ ಚಿತ್ರವೇ 'ಮುಂಗಾರು ಮಳೆ'.
ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಈ ಜೋಡಿ, 'ಮುಂಗಾರು ಮಳೆ' ಮತ್ತು 'ಗಾಳಿಪಟ' ಚಿತ್ರಗಳ ನಂತ್ರ ಮೂರನೇ ಬಾರಿ ಒಂದಾಗ್ತಿದ್ದಾರೆ. ಅಯ್ಯೋ...ಇದು ಹಳೇ ಸುದ್ದಿ ಅಲ್ಲವೇ...ಅಂತ ಮೂಗು ಮುರಿಯಬೇಡಿ. ಇಲ್ಲಿವರೆಗೂ ಮಾತುಕತೆ ಹಂತದಲ್ಲಿದ್ದ ಗಣೇಶ್-ಭಟ್ ಹ್ಯಾಟ್ರಿಕ್ ಕಾಂಬಿನೇಷನ್ ಇದೀಗ ಪಕ್ಕಾ ಆಗಿದೆ. [ಮತ್ತೆ 'ಮಳೆ'ಯಲ್ಲಿ ನೆನೆಯುತ್ತಾರಾ ಗಣಿ, ಭಟ್ರು..?]

ಸದಭಿರುಚಿಯ ಚಿತ್ರಗಳನ್ನು ನೀಡುತ್ತಾ ಬರುತ್ತಿರುವ 'ಮೀಡಿಯಾ ಹೌಸ್' ಲಾಂಛನದಲ್ಲಿ ಬಿ.ಸುರೇಶ್ ಮತ್ತು ಶೈಲಜಾ ನಾಗ್ ಗಣಿ ಮತ್ತು ಭಟ್ಟರ ಕಾಂಬಿನೇಷನ್ ನ ಮೂರನೇ ಚಿತ್ರಕ್ಕೆ ಬಂಡವಾಳ ಹಾಕ್ತಿದ್ದಾರೆ.
ಈ ಹಿಂದೆ ಗಣೇಶ್ ಅಭಿನಯದ 'ಸಕ್ಕರೆ' ಚಿತ್ರಕ್ಕೆ ಬಿ.ಸುರೇಶ್ ನಿರ್ಮಾಣದ ಹೊಣೆ ಹೊತ್ತಿದ್ದರು. ಹೇಳಿ ಕೇಳಿ ಗಣಿ ಮತ್ತು ಭಟ್ರಿಗೆ ಬಿ.ಸುರೇಶ್ ಆಪ್ತರು. ಹೀಗಾಗಿ ಈ ಚಿತ್ರಕ್ಕೂ ಅವರೇ ಬಂಡವಾಳ ಹಾಕುವುದಕ್ಕೆ ಮುಂದೆ ಬಂದಿದ್ದಾರೆ. [ಸದ್ದಿಲ್ಲದೇ ಶುರುವಾಯ್ತು 'ಮುಂಗಾರು ಮಳೆ' ಅಬ್ಬರ]

ಗಣೇಶ್ ಗಾಗಿ ಸ್ಪೆಷಲ್ಲಾಗಿ ಕಥೆ-ಚಿತ್ರಕಥೆ ಬರೆಯುವ ಕೆಲಸಕ್ಕೆ ಯೋಗರಾಜ್ ಭಟ್ ಚಾಲನೆ ನೀಡಿದ್ದಾರಂತೆ. ಹಳೇ ಕಾಮಿಡಿ ಟೈಮ್ ಗಣೇಶನನ್ನ ತಲೆಯಲ್ಲಿಟ್ಟುಕೊಂಡು ಕಥೆ ಯೋಚಿಸುತ್ತಿರುವ ಭಟ್ರು, ಚಿತ್ರಕ್ಕಿನ್ನೂ ನಾಯಕಿಯನ್ನ ಸೆಲೆಕ್ಟ್ ಮಾಡಿಲ್ಲ. ಹಾಗೆ ಟೈಟಲ್ ಕೂಡ ಫೈನಲ್ ಆಗಿಲ್ಲ.
'ಮುಂಗಾರು ಮಳೆ' ಮತ್ತು 'ಗಾಳಿಪಟ'ದಲ್ಲಿ ಮಳೆಯ ಅಬ್ಬರವಿದ್ದರಿಂದ, ಈ ಬಾರಿಯೂ ಗಣಿ ಮಳೆಯಲ್ಲಿ ನೆನೆಯುತ್ತಾರಾ ಅನ್ನೋದು ನಮಗಂತೂ ಗೊತ್ತಿಲ್ಲ. ಅದನ್ನ ಭಟ್ರು ಇನ್ನೂ ನಿರ್ಧಾರ ಮಾಡಿಲ್ಲ. ಆದ್ರೆ, ಚಿತ್ರಕ್ಕೆ ಸಂಗೀತ ನೀಡುವುದಕ್ಕೆ ವಿ.ಹರಿಕೃಷ್ಣ ಮಾತ್ರ ತಯಾರಾಗಿದ್ದಾರೆ. ಏಪ್ರಿಲ್ ನಲ್ಲಿ ಈ ಚಿತ್ರಕ್ಕೆ ಚಾಲನೆ ಸಿಗಲಿದೆ. ಅಲ್ಲಿಗೆ, ಬೇಸಿಗೆ ರಜದಲ್ಲಿ ಗಣಿ ಅಭಿಮಾನಿಗಳಿಗೆ ಮಜಾ ಗ್ಯಾರೆಂಟಿ ಆದ್ಹಾಗೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











