»   » ರೋಡ್ ರೋಮಿಯೋ ಓಕೆ! ಅಶಿತಾ ಡಬ್ಬಲ್ ಓಕೆ!

ರೋಡ್ ರೋಮಿಯೋ ಓಕೆ! ಅಶಿತಾ ಡಬ್ಬಲ್ ಓಕೆ!

By: * ದೇವಶೆಟ್ಟಿ ಮಹೇಶ್
Subscribe to Filmibeat Kannada
Actress Ashita
ರೋಡಿಗೆ ಬಂದರೆ ರೋಮಿಯೋ ಏನು ಮಾಡುತ್ತಾನೆ? ಆತ ಏನೆಂದರೆ ಏನೂ ಮಾಡಬಲ್ಲ. ಒಂದು ಹುಡುಗಿಯ ಇಷ್ಟವಿಲ್ಲದ ಮದುವೆಯನ್ನು ಮುರಿಯಬಲ್ಲ, ಅಪ್ಪನ ಮರ್ಯಾದೆಯನ್ನು ಬಿಂದಾಸ್ ಉಡಾಯಿಸಬಲ್ಲ, ಚೆಂದದ ಹುಡುಗಿಯರಿಗೆ ಲೈನ್ ಹೊಡೆಯಬಲ್ಲ, ಯಾರಿಗೊ ತರಲೆ ತಂದು ಹಾಕಿ ಮಜಾ ಮಾಡಬಲ್ಲ.. ಇವನೂ ಅವನೇ. ಇವನಿಗೆ ಬದುಕಿನ ಬಗ್ಗೆ ಸೀರಿಯಸ್ ನೆಸ್ ಇಲ್ಲ, ಹಣದ ಕಿಮ್ಮತ್ತು ಗೊತ್ತಿಲ್ಲ, ಅಪ್ಪನ ಕಷ್ಟ ಗೊತ್ತಿಲ್ಲ, ಮನೆಯ ಮರ್ಯಾದೆ ಗೊತ್ತಿಲ್ಲ, ತಿನ್ನುವುದು ಮತ್ತು ಬೈಕ್ ಸಿಕ್ಕರೆ ಸಾಕು ಇನ್ನೇನು ಬೇಡ. ಇಂಥವನ ಜೀವನದಲ್ಲಿ ಒಬ್ಬ ಹುಡುಗಿ ಬರುತ್ತಾಳೆ.. ಮದುವೆ ವಿಷಯ ಬಂದಾಗ ತಿರುಗಿ ಬೀಳುತ್ತಾಳೆ. ನನ್ನ ಸಾಕಲು ಕಾಸು ಬೇಕು. ಮೊದಲು ಸಂಪಾದಿಸು, ಆಮೇಲೆ ಮದುವೆ ಅನ್ನುತ್ತಾಳೆ ಹುಡುಗಿ.

ಉಂಡಾಡಿಗುಂಡನಂತಿರುವ ಮಗ ಪ್ರೀತಿ ಪ್ರೇಮ ಎಂದು ತಿರುಗುವುದ ಕಂಡು ಮನೆಯವರು ದೂರ ಇಡುತ್ತಾರೆ. ಹೀಗಾದಾಗ ತಾನೇ, ಒಬ್ಬ ಹೀರೋ ತನ್ನ ತಾಕತ್ತು ತೋರಿಸಲು ಸಾಧ್ಯ? ಏನೇನೋ ಮಾಡಿ ಒಂದು ಹಂತಕ್ಕೆ ಬರುತ್ತಾನೆ. ಕೊನೆಯಲ್ಲಿ ಪ್ರೀತಿ ಮಾಡಿದ ಹುಡುಗಿಯನ್ನೇ ನಿರಾಕರಿಸುತ್ತಾನೆ! ಅದು ಏಕೆ ಎಂಬುದನ್ನು ನೀವೇ ನೋಡಬೇಕು.

ಸಾಯಿ ಪ್ರಕಾಶ್ ಇದುವರೆಗೆ ಸೆಂಟಿಮೆಂಟ್ ಚಿತ್ರಗಳಿಗೆ ಕ್ಯಾಮರಾ ಹಿಡಿಯುತ್ತಿದ್ದರು. ಆದರೆ ಫಾರ್ ಎ ಚೇಂಜ್ ಪ್ರೇಮಕತೆಗೆ ಇಳಿದಿದ್ದಾರೆ. ತುಸು ಗೆದ್ದಿದ್ದಾರೆ. ನಾಯಕ ದಿಲೀಪ್ ಗೆ ಇದು ಮೊದಲ ಚಿತ್ರ. ಒಬ್ಬ ನಾಯಕನ ಅರಂಗೇಟ್ರಂ ಹೇಗಿರಬೇಕು ಎಂಬುದು ಅವರಿಗೆ ಗೊತ್ತು. ಅದಕ್ಕೆ ತಕ್ಕಂತೆ ಫೈಟಿಂಗ್, ಕಾಮಿಡಿ, ಹಾಡು, ಡ್ಯಾನ್ಸ್ ಗಳಲ್ಲಿ ಮಿಂಚಿದ್ದಾರೆ.

ಅದ್ಭುತ ಎನ್ನದಿದ್ದರೂ ಮೊದಲ ಪ್ರಯತ್ನದಲ್ಲಿ ದಿಲೀಪ್ ಇಷ್ಟವಾಗುತ್ತಾರೆ. ಪ್ರಯತ್ನ ಪಟ್ಟರೆ ಕನ್ನಡಕ್ಕೆ ಈತ ಒಳ್ಳೆಯ ಹೀರೋ ಆಗಬಹುದು. ಅವಿನಾಶ್ ಕೊನೆಯ ದೃಶ್ಯಗಳಲ್ಲಿ ಚೆನ್ನಾಗಿ ನಟಿಸಿದ್ದಾರೆ. ಪದ್ಮಾ ವಾಸಂತಿ, ನಾಯಕನ ತಂಗಿ ಪಾತ್ರಧಾರಿ ಕೂಡ ಗಮನ ಸೆಳೆಯುತ್ತಾರೆ. ವಿಶೇಷವಾಗಿ ನಾಯಕಿ ಆಶಿತಾ  ಅಚ್ಚರಿಮೂಡಿಸುತ್ತಾಳೆ. ಈಕೆ ಅಭಿನಯಕ್ಕೆ ನೂರಕ್ಕೆ ನೂರಹತ್ತು ಅಂಕಗಳ ನೀಡಬಹುದು. ಕುಣಿಯುವ ಜೋಶ್ ನೋಡಿದರೆ ಸಾಕು, ಈಕೆಯ ಕೆಪಾಸಿಟಿ ಅರ್ಥವಾಗುತ್ತದೆ. ಕನ್ನಡದಲ್ಲಿ ಹುಡುಗಿಯರಿಲ್ಲ ಎಂಬ ಕೊರತೆಯನ್ನು ಅಶಿತಾ ಉತ್ರ್ಪೇಕ್ಷೆ ಇಲ್ಲದೆ ಸುಳ್ಳು ಮಾಡಿದ್ದಾಳೆ. ಶೀ ಈಸ್ ವಂಡರ್ ಫುಲ್!

ಉಳಿದಂತೆ ಆನಂದ್ ಮತ್ತು ಹುಡುಗರು ಓಕೆ. ಮೂರು ಹಾಡುಗಳು ನಿಜಕ್ಕೂ ಖುಷಿ ಕೊಡುತ್ತವೆ. 'ನಿನ್ನ ಯೋಗ್ಯತೆಗೆ ಲ್ಯಾಂಡ್ ಲೈನ್ ಸಾಕು. ಮೊಬೈಲ್ ಯಾಕೆ ಬೇಕು..'ಅನ್ನೋ ವಿಚಿತ್ರ ಮಾತುಗಳು ನಗೆ ಹುಟ್ಟಿಸುತ್ತವೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada