»   » ಚಿತ್ರವಿಮರ್ಶೆ: ಚಿತ್ರವಿಚಿತ್ರ ಐತಲಕ್ಕಡಿ

ಚಿತ್ರವಿಮರ್ಶೆ: ಚಿತ್ರವಿಚಿತ್ರ ಐತಲಕ್ಕಡಿ

By: * ದೇವಶೆಟ್ಟಿ ಮಹೇಶ್
Subscribe to Filmibeat Kannada

ಕ್ಯಾಕರಿಸಿ ನಗಬೇಕೆನಿಸುತ್ತದೆ. ಆದರೆ, ಸಂಕಟವಾಗುತ್ತದೆ. ಹಸಿವಾಗುತ್ತದೆ. ಆದರೆ, ಗಂಟಲು ಕಟ್ಟಿಕೊಂಡಿರುತ್ತದೆ. ಕಣ್ಣೀರು ಸುರಿಸಬೇಕೆನಿಸುತ್ತದೆ. ಆದರೆ, ಹೃದಯ ಕಲ್ಲಾಗಿರುತ್ತದೆ!

ಇದು'ಐತಲಕ್ಕಡಿ' ಮಹಿಮೆ. ನಿರ್ದೇಶಕ ಜೆಜಿ ಕೃಷ್ಣ ಇಲ್ಲಿ ಮಾತುಮಾತಿಗೆ ಲಗಾಟಿ ಹೊಡೆಯುತ್ತಾರೆ. ಸಾಲು ಸಾಲಾಗಿ ನಟರು ಮುಖ ತೋರಿಸಿ ಹೋಗುತ್ತಾರೆ. ಪರದೆ ತುಂಬಾ ಜನ. ಆದರೆ, ಏನು ಪ್ರಯೋಜನ? ಒಂದು ದೃಶ್ಯಕ್ಕಿಂತ ಇನ್ನೊಂದು ದೃಶ್ಯ ವಿಚಿತ್ರವಾಗಿದೆ. ಕತೆ ಇಲ್ಲಿಂದ ಶುರುವಾಗುತ್ತದೆ.

ಒಂದಷ್ಟು ಮಂದಿ ಕಷ್ಟ ಪಟ್ಟು ಕಾಮಿಡಿ ಮಾಡುತ್ತಾರೆ. ಆದರೆ, ಪ್ರೇಕ್ಷಕ ನಗುವುದಿಲ್ಲ. ಬದಲಾಗಿ ಕಣ್ಣೀರ ಧಾರೆ... ಇದೇಕೇ ಇದೇಕೇ... ಬುಲೆಟ್ ಪ್ರಕಾಶ್/ರಂಗಾಯಣ ರಘು ಕೊಟ್ಟ ಕೆಲಸಕ್ಕೆ ಕೈ ಕೊಟ್ಟಲ್ಲ. ಕುಣಿಯುತ್ತಾರೆ, ಕುಡಿಯುತ್ತಾರೆ. ಜಿಗಿಯು ತ್ತಾರೆ. ಹಾರುತ್ತಾ ಹಾರುತ್ತಾ ಹಾರಿಬಲ್ ಆಗುತ್ತಾರೆ. ನಗು ನಗೆಪಾಟಲಾಗುತ್ತದೆ. ಹಾಸ್ಯ ಅಪ ಹಾಸ್ಯವಾಗುತ್ತದೆ.

ನಿರ್ದೇಶಕರು ನೂರಾಎಂಟು ಮಂದಿಯನ್ನು ಮೂರೇ ತಾಸಿನಲ್ಲಿ ತೋರಿಸುತ್ತಾರೆ. ನಾಯಕಿ ನೀತು ರವಿಚಂದ್ರನ್ ಜತೆ ಕುಣಿಯುವಾಗ ಥೇಟ್ ಜ್ಯೂನಿಯರ್ ನಮಿತಾ! ಸುದೀಪ್ ಬಂದು ಹೋಗುತ್ತಾರೆ. ದುನಿಯಾ ವಿಜಯ್ ಹೊಡೆದಾಟಕ್ಕೆ ನಿಲ್ಲುತ್ತಾರೆ. ಮಠಾಧಿಪತಿಯಾಗಿ ಜಗ್ಗೇಶ್ ಕುಣಿಯುತ್ತಾರೆ. ರವಿಚಂದ್ರನ್ ಹಾಡಿಗೆ ಹೆಜ್ಜೆ ಹಾಕುತ್ತಾರೆ. ವಿಜಯರಾಘವೇಂದ್ರ ಬರುವ ಹೊತ್ತಿಗೆ ಕ್ಲೈಮ್ಯಾಕ್ಸ್...

ಇನ್ನು ಸಹ ಕಲಾವಿದರ ಪಟ್ಟಿ ಮಾಡುವುದೇ ಕಷ್ಟ. ಇಷ್ಟೆಲ್ಲಾ ಇದ್ದೂ ಸಿನಿಮಾ ಸೊರಗಿದೆ. ಹಾಸ್ಯ ಮಾಡುತ್ತಾ ಮಾಡುತ್ತಾ ಅಳಿಸಲು ಹೋಗಿ ಅದು ನಗೆಪಾಟಲಾಗುತ್ತದೆ. ಸಾಧುಕೋಕಿಲ ಸಂಗೀತದಲ್ಲಿ ಅಬ್ಬರವೇ ಹೆಚ್ಚು. ಛಾಯಾಗ್ರಹಣ ಮಾಮೂಲಿ. ಚಿತ್ರಕತೆ ಕೆಲವೆಡೆ ಗೊಂದಲ ಸೃಷ್ಟಿಸುತ್ತದೆ. ಮತ್ತೊಂದಿಷ್ಟು ಸನ್ನಿವೇಶಗಳು ಅರ್ಥವಾಗಲು ಸಮಯ ಹಿಡಿಯುತ್ತದೆ. ಒಟ್ಟಾರೆ ಐತಲಕಡಿ ಒಂದಷ್ಟು ನಟರ ಸಂಗಮ. ನೆಚ್ಚಿನ ನಟರ ದರ್ಶನ ಭಾಗ್ಯ ಬೇಕಿದ್ದರೆ ಸಿನಿಮಾ ನೋಡಿ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada