»   » ಕನ್ನಡದ ಕರಣ್ ಜೋಹರ್, ಬರಿಸಿದ ಜ್ವರ !

ಕನ್ನಡದ ಕರಣ್ ಜೋಹರ್, ಬರಿಸಿದ ಜ್ವರ !

Posted By: Staff
Subscribe to Filmibeat Kannada

ಇತ್ತೀಚಿನ ದಿನಗಳಲ್ಲಿ ಗಾಂಧಿನಗರ ಪ್ರಕಾಶಮಾನವಾಗಿ ಫಳಫಳಿಸುತ್ತಿದೆ. ಅದರಂತೆ ರಿಮೇಕ್ ಹಾವಳಿ ಹೆಚ್ಚುತ್ತಿದೆ. ಕಾರಣ ನಿರ್ದೇಶಕರ ಬುದ್ಧಿ ವಂತ' ಮೆದುಳು. ಕನ್ನಡ ಪ್ರೇಕ್ಷಕರೇ ಹಾಗೆ. ಒಂದಿಷ್ಟು ಫೈಟು, ಹಾಡು, ಡ್ಯಾನ್ಸು ಇದ್ದರೆ ಸಾಕು. ಜತೆಗೆ ದೊಡ್ಡ ಸ್ಟಾರ್ ಇರಬೇಕು. ಇದ್ದರೆ, ಸಿನಿಮಾ ಸೂಪರ್ ಹಿಟ್... ಇದು ಇಂದಿನ ಟ್ರೆಂಡ್ ಎಂದುಕೊಂಡರೆ ತಪ್ಪು. ಪ್ರೇಕ್ಷಕರನ್ನು ಅಷ್ಟು ಸುಲಭವಾಗಿ ಕುರಿ ಮಾಡಲಾಗುವುದಿಲ್ಲ. ಅದಕ್ಕೆ ಈ ವರ್ಷ ಎಷ್ಟು ಚಿತ್ರಗಳು ಕಸದ ಬುಟ್ಟಿ ಸೇರಿವೆ ಎನ್ನುವುದೇ ಸಾಕ್ಷಿ!

*ವಿನಾಯಕರಾಮ್ ಕಲಗಾರುಆದರೆ ಈ ಕಹಿಸತ್ಯ ಕನ್ನಡದ ಕರಣ್ ಜೋಹರ್, ನಿರ್ದೇಶಕ ಪ್ರಕಾಶ್‌ಗೆ ಗೊತ್ತೋ, ಇಲ್ಲವೊ ಗೊತ್ತಿಲ್ಲ. ಆದರೆ ಖಂಡಿತಾ ಗೊತ್ತಿಲ್ಲ ಎನ್ನುವುದು ವಂಶಿ ವೀಕ್ಷಿಸಿದ ನಂತರ ಬಿಕರಿಗೊಳ್ಳುತ್ತದೆ. ಅಪ್ಪಟ ಸ್ವಮೇಕ್ ಕತೆಯೊಂದನ್ನು ಹೆಣೆಯಲು ಹೆಣಗಾಡುವುದಕ್ಕಿಂತ ರಿಮೇಕ್ ಮಾಡೋದೇ ಬೆಸ್ಟು ಎಂದು ಪ್ರೇಕ್ಷಕರಿಗೆ ಬೆರಳು ಚೀಪಿಸಿದ್ದಾರೆ ಪ್ರಕಾಶ್. ತೆಲುಗಿನ ನಂದ ಸಿನಿಮಾದ ಎಳೆ ಕದಿಯೋದು ಎಂದರೇನು? ಅದನ್ನು ಪುನೀತ್ ಮ್ಯಾನರಿಸಂಗೆ ಸರಿಹೊಂದುವಂತೆ ತಿದ್ದುವುದು ಎಂದರೇನು? ಕೆಲವು ದೃಶ್ಯಗಳನ್ನು ನೀಟಾಗಿ ಬದಲಾಯಿಸುವುದು ಎಂದರೆ ಸುಲಭದ ಮಾತೇನು? ಅಲ್ಲಿ ಮಗ, ತನ್ನ ರೌಡಿ ತಂದೆಯನ್ನು ಕೊಲೆ ಮಾಡಿ, ಜೈಲು ಸೇರುತ್ತಾನೆ. ಇಲ್ಲಿ ಮತ್ತೊಬ್ಬ ಪುಡಿ ರೌಡಿ ಅದನ್ನು ಮಾಡುತ್ತಾನೆ... ಅಲ್ಲಲ್ಲ ಪ್ರಕಾಶ್ ಮಾಡಿಸುತ್ತಾರೆ. ಅಲ್ಲಿ ತಾಯಿ, ಮಗ ರೌಡಿಯಾದ ಎಂದು ಊಟದಲ್ಲಿ ವಿಷ ಬೆರೆಸಿ, ಉಸಿರು ನಿಲ್ಲಿಸುತ್ತಾಳೆ. ಇಲ್ಲಿ ಪುನೀತ್ ಅಭಿಮಾನಿಗಳಿಗೆ ಬೇಸರವಾಗಬಾರದು ಎಂಬ ಉದ್ದೇಶದಿಂದ 'ವಂಶಿ' ಉಪ್ಪು ತಿಂದು, ನೀರು ಕುಡಿದು ಬಚಾವಾಗುತ್ತಾನೆ. ಈ ಮಧ್ಯೆ ರೌಡಿ ಮಕ್ಕಳಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸವಿಲ್ಲ. ಅವನೇನಿದ್ದರೂ ಪೋಲಿ ತಿರುಗಿ, ಅಪ್ಪನ ಹಾಗೇ ಫೋಸ್ ಕೊಡಬೇಕೆಂಬ ದಿವ್ಯಸಂದೇಶ'!

ಹಾಗಂತ ಪುನೀತ್ ಅಭಿನಯದ ಬಗ್ಗೆ ಅನ್ಯಥಾ ಬರೆದರೆ ತಪ್ಪಾಗುತ್ತದೆ. ಇಡೀ ಸಿನಿಮಾಕ್ಕೆ ಎರಡು ಸ್ಟಾರ್ ಕೊಟ್ಟರೆ ಅದರಲ್ಲಿ ಒಂದೂವರೆ ಪುನೀತ್‌ಗೇ ಸಂದಾಯವಾಗಬೇಕು. ಇನ್ನರ್ಧ ಲಕ್ಷ್ಮಿ ಅವರಿಗೆ ಸಲ್ಲಬೇಕು. ಮಗನನ್ನು ತೊಡೆ ಮೇಲೆ ಮಲಗಿಸಿಕೊಂಡು, ತುತ್ತು ತಿನ್ನಿಸುವ ದೃಶ್ಯ ಎದೆಯ ಕದ ತಟ್ಟುತ್ತದೆ. ಅಸಹಾಯಕ ಅಮ್ಮನಾಗಿ ರಿಯಲಿ ವಂಡರ್‌ಫುಲ್.

ಪುನೀತ್, 'ವಂಶಿ'ಯಿಂದ ಪೂರ್ಣ ಪ್ರಮಾಣದ ಮಚ್ಚು ಹಿಡಿಯುವ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಆ ಮೂಲಕ ಶಿವಣ್ಣನ ಹೊಡಿಮಗ... ಸಾಂಗ್‌ಗೇ ಸವಾಲು ಹಾಕಿದ್ದಾರೆ. ಮಚ್ಚನ್ನು ಉಲ್ಟಾ ಹಿಡಿದು, ಕೊಚ್ಚಿ ಬಿಸಾಡುವುದು ಅವರ ಹೊಸ ಪ್ರಯತ್ನ. ಆದರೆ ಆ ಮೂಲಕ ಅವರು ಫ್ಯಾಮಿಲಿ ಪ್ರೇಕ್ಷಕರನ್ನು ಕಳೆದುಕೊಂಡಿದ್ದಾರಾ? ಉತ್ತರಕ್ಕೆ ವಂಶಿಯನ್ನು ಒಮ್ಮೆ ನೋಡಿ...

ನಾಯಕಿ ನಿಖಿತಾ ಹಲ್ಲುಗಿಂಜುವಾಗ ಮಾತ್ರ ಹೈಲೈಟ್. ಉಳಿದ ಕಡೆ ಹಳಸು ಹಳಸು. ಖಳನ ಪಾತ್ರ ರಾಜೇಂದ್ರ ಕಾರಂತ್‌ಗೆ ಹೊಂದಿಕೊಳ್ಳುತ್ತದೆ. ರವಿ ಕಾಳೆ ಖದರ್ ಕೂಡ ಕಮ್ಮಿ ಇಲ್ಲ. ಕಾಮಿಡಿಯಲ್ಲಿ ಕೂಸುಮರಿಗಳ ಕಿಡ್ನ್ಯಾಪ್ ದೃಶ್ಯ ಒ. ಹೆನ್ರಿಯ ಸಣ್ಣಕತೆ 'ದಿ ರ್‍ಯಾನ್ಸಂ ಆಫ್ ರೆಡ್ ಚೀಫ್ನ ಪಡಿಯಚ್ಚು. ಆದರೂ ಕೋಮಲ್ ಕಮಾಲ್ ಬಗ್ಗೆ ಕೆಮ್ಮುವ ಹಾಗಿಲ್ಲ.

ಆರ್.ಪಿ. ಪಟ್ನಾಯಕ್ ಸಂಗೀತ ಆಯೋಮಯ. ಆದರೂ ಭುವನಂ ಗಗನಂ... ಹಾಡು ಇಳೆಯನ್ನೇ ತಂಪಾಗಿಸುವಂತಿದೆ. ಜೊತೆಜೊತೆಯಲಿ...ಹಾಡು ಹಿಂದಿಯ ಗ್ಯಾಂಗ್‌ಸ್ಟರ್ ಚಿತ್ರದ ತು ಹಿ ಮೇರಿ ಶಬ್‌ಹೈ... ಹಾಡಿನ ರೀಮೇಕು. ಆದರೆ ಪುನೀತ್- ನಿಖಿತಾ ಕುಣಿತದ ಮುಂದೆ ಅದು ಗೊತ್ತಾಗುವುದಿಲ್ಲ. ಸಂಕಲನಕಾರ ದೀಪು ಇಡೀ ಸಿನಿಮಾದ ತೂತನ್ನು ಮುಚ್ಚಿ, ನಿದ್ದೆ ಬರದಂತೆ ನಿಗಾವಹಿಸಿದ್ದಾರೆ. ಕೃಷ್ಣ ಕುಮಾರ್ ಕ್ಯಾಮೆರಾದಲ್ಲಿ ಮಚ್ಚೇ ಹೆಚ್ಚು ಮಿಂಚುತ್ತದೆ. ಸಿನಿಮಾದ ಅದ್ಧೂರಿತನದ ಬಗ್ಗೆ ಕಾಮೆಂಟ್ ಮಾಡುವುದು ಅನಗತ್ಯ. ಬದಲಾಗಿ ಇದು ಡಾ.ರಾಜ್‌ಕುಮಾರ್ ಅವರ ಚಕ್ರೇಶ್ವರಿ ಕಂಬೈನ್ಸ್‌ನ ಚಿತ್ರ ಎಂದರೆ ಎಲ್ಲವೂ ಅರ್ಥವಾಗಿಬಿಡುತ್ತದೆ.

ಕೊನೆ ಹನಿ: 'ನಾವು ಕನ್ನಡಿಗರು, ಬೇರೆ ಭಾಷೆ ಚಿತ್ರದ ಕತೆಯನ್ನೇ ಆ(ಹಾ)ರಿಸಿ, ಕನ್ನಡಿಗರ ಅಭಿರುಚಿಗೆ ತಕ್ಕಂತೆ ಹೇಗೆ ಬೇಕೋ ಹಾಗೆ ಮಾಡಬಲ್ಲೆವು' ಇದು ಬುದ್ಧಿವಂತ' ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಇತ್ತೀಚೆಗೆ ಒಗಾಯಿಸಿದ ಹೇಳಿಕೆ. ಆದರೆ ಪ್ರಕಾಶ್, ಅಷ್ಟೇ ಅಲ್ಲ, ಇನ್ನೊಂದಿಷ್ಟು ಕತೆಗಳನ್ನು ಕಲಸುಮೇಲೋಗರ ಮಾಡಿ, ನೋಡಿ ನೋಡಿ ಎಂದು ಹೇಳಬಲ್ಲ ತಾಕತ್ತೂ ತಮಗಿದೆ' ಎನ್ನುವುದನ್ನು ಸಾಬೀತುಮಾಡಿದ್ದಾರೆ ಮಾರಾಯ್ರೆ!

English summary
Kannada movie vamshi review

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada