»   » ಚಿತ್ರವಿಮರ್ಶೆ: ವಿಭಿನ್ನ ಚಿತ್ರಕತೆವುಳ್ಳ ಪೆರೋಲ್

ಚಿತ್ರವಿಮರ್ಶೆ: ವಿಭಿನ್ನ ಚಿತ್ರಕತೆವುಳ್ಳ ಪೆರೋಲ್

Posted By: *ಮಹೇಶ್ ದೇವಶೆಟ್ಟಿ,
Subscribe to Filmibeat Kannada

ಹೊಸ ಹುಡುಗರನ್ನು ಬಳಸಿ ಸಿನಿಮಾ ಮಾಡುವುದು ಎಂದರೆ ಸುಲಭದ ಮಾತಲ್ಲ. ಅಲ್ಲಿ ಒಂದಷ್ಟು ಶ್ರಮ, ಹೇಳಿಕೊಳ್ಳಲಾರದ ನೋವು, ಒದ್ದಾಟ ಇದ್ದೇ ಇರುತ್ತದೆ. ಅವರಿಂದ ಪ್ರತೀ ಹಂತದಲ್ಲೂ ಕೆಲಸ ತೆಗೆಸಬೇಕಾದ್ದು ಅನಿವಾರ್ಯ. ಅದನ್ನು ಶ್ರದ್ಧೆಯಿಟ್ಟು ಮಾಡಿದ್ದಾರೆ ನಿರ್ದೇಶಕ ರಾಜಶೇಖರ್. ಅವರ ಹಿಂದಿನ ಚಿತ್ರಕ್ಕೆ ಹೋಲಿಸಿದರೆ ಇದು ನಿಜಕ್ಕೂ ಗಮನಾರ್ಹ. ಒಂದಷ್ಟು ಹುಡುಗರಿಗೆ ಹೊಸ ರೂಪ ಕಟ್ಟಿಕೊಡುವ ಪರಿ ಇಷ್ಟವಾಗುತ್ತದೆ.

ಇದು ಕೆಲವು ಹುಂಬ ಹುಡುಗರ ವಯಸ್ಸಿನ ಅಮಲಿನಲ್ಲಿ ಏನೋ ಮಾಡಲು ಹೋದವರ ಕತೆ. ಅದಕ್ಕೆ ಭಿನ್ನ ರೀತಿಯ ಚಿತ್ರಕತೆ ಮಾಡಲಾಗಿದೆ. ಕತೆಯ ಮಧ್ಯೆ ಒಂದಷ್ಟು ತಿರುವುಗಳಿವೆ. ಅಲ್ಲಲ್ಲಿ ಪ್ರೇಮಪ್ರಲಾಪ ಇಣುಕಿ ಹೋಗುತ್ತವೆ. ಅಲ್ಲಲ್ಲಿ ಹೊಡೆದಾಟಗಳಿಗೆ ಕಂಬಳಿ ಹಾಸಲಾಗುತ್ತದೆ. ಮತ್ತೆ ನಾಯಕಿಯರು ಕಣ್ಣರಳಿಸಿಕೊಂಡು ಬರುತ್ತಾರೆ. ಅಲ್ಲಿಗೆ ಎಲ್ಲ ಮುಗಿಯಿತು ಎನ್ನುವ ಹೊತ್ತಿಗೆ ಹಾಡು, ಸಸ್ಪೆನ್ಸ್ ಇತ್ಯಾದಿ...

ಹಾಡುಗಳು ಮದುವೆ ಮನೆಯ ವಾಲಗವನ್ನು ನೆನಪಿಸುತ್ತವೆ. ಸಂಕಲನದಲ್ಲಿ ಕೆಲವು ಕಡೆ ನ್ಯೂನತೆ ಕಾಣುತ್ತದೆ. ಒಂದು ಕೊಲೆಯಲ್ಲಿ ಚಿತ್ರ ಶುರುವಾಗುತ್ತದೆ. ಅದು ನಾಲ್ಕಾಗುವ ಹೊತ್ತಿಗೆ ಒಂದಷ್ಟು ಮಸಾಲೆ ಆಫ್ ಇಂಡಿಯಾ. ಪೊಲೀಸ್ ತನಿಖೆಯ ಮಧ್ಯೆ ಮಧ್ಯೆ ತಂದೆ ಮಕ್ಕಳ ಸೆಂಟಿಮೆಂಟ್, ಬೋಲ್ಡ್ ಹುಡುಗಿಯರ ಕಾಂಡಿಮೆಂಟ್‌ನಿಂದ ಒಂದಷ್ಟು ಮಜಾ ಸಿಗುತ್ತದೆ. ಹೊಸ ಹುಡುರಲ್ಲಿ ಸೂರಜ್, ಲಿಖಿತ್ ನಟನೆ ಬೋರ್ ಹೊಡೆಸುವುದಿಲ್ಲ. ಉಳಿದ ಹುಡುಗರು ಅಷ್ಟಕ್ಕಷ್ಟೇ. ಪ್ರದೀಪ್, ವಿಶ್ವಾಸ್ ಮೊದಲಾದವರು ಪಳಗಬೇಕಿದೆ. ನಾಯಕಿಯರಲ್ಲಿ ಸುಪ್ರೀತಾ ಪ್ರೆಟಿ ಆಗಿ ಕಾಣುತ್ತಾಳೆ. ರಾಣಿಗೆ ನಗುವುದಷ್ಟೇ ಗೊತ್ತಿರುವುದು. ಬಿ.ಸುರೇಶ್ 'ಕಾಮಿಡಿ' ಮೆಚ್ಚುವಂತದ್ದೇ !

ಕಿಶೋರ್‌ಗೆ ಇನ್ನಷ್ಟು ಗಟ್ಟಿ ಪಾತ್ರ ಕೊಡಬಹುದಿತ್ತು. ಹೀಗಿದ್ದೂ ಅವರದ್ದು ಸಹಜ ನಟನೆ. ಸುಚೇಂದ್ರ ಪ್ರಸಾದ್ ಮಾತು ಅರ್ಥವಾವುದಿಲ್ಲ ಎನ್ನುವುದೇ ಒಂದು ಮುತ್ತಿನ ಕತೆ. ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣದಲ್ಲಿ ಒಂದು ಮೂಡ್ ಸೃಷ್ಟಿಯಾಗುತ್ತದೆ. ಒಟ್ಟಾರೆ ಪೆರೋಲ್ ನೋಡಬಹುದು, ನೋಡದೆಯೂ ಇರಬಹುದು...ಯಾಕೆ ನೋಡಬೇಕೆಂದು ಹೇಳುವುದಕ್ಕೆ ಒಂದು ಕಾರಣ...ಬೇಡ ಎನ್ನುವುದಕ್ಕೆ ನೂರು... ಚಾಯ್ಸ್ ಈಸ್ ಯುವರ್‍ಸ್ .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada