For Quick Alerts
  ALLOW NOTIFICATIONS  
  For Daily Alerts

  ರಾಜ್ ವಿಮರ್ಶೆ:ಮಚ್ಚು ಪ್ರಿಯರು ಮೆಚ್ಚುವ ಚಿತ್ರ

  By *ರಾಜೇಂದ್ರ ಚಿಂತಾಮಣಿ
  |

  ಕನಸು ಕಾಣ ಬೇಡ, ಅದು ಯಾವತ್ತಿಗೂ ನನಸಾಗಲ್ಲ ಎಂದು ಬುದ್ಧಿ ಹೇಳುವ ಪಾಪ, ಅಪ್ಪ. ಚಿತ್ರ ನಟನಾಗಬೇಕೆಂದು ಕನಸು ಕಾಣುತ್ತಾ ಅಪ್ಪನಿಗೇ ತಿರುಮಂತ್ರ ಹೇಳುವ ಕಿಲಾಡಿ ಮಗ. ಕುರಿ ಕಾಯುತ್ತಲೇ ಬಣ್ಣದ ಜಗತ್ತಿನ ಕನಸು ಕಾಣುವ ಹುಡುಗ ಮುತ್ತು, ಸಿನಿಮಾ ಮುಗಿಯುವ ಹೊತ್ತಿಗೆ ಹೇಗೆ ಮುತ್ತುರಾಜನಾಗುತ್ತಾನೆ ಎಂಬ ಕತೆಯೇ ರಾಜ್ ದಿ ಶೋಮ್ಯಾನ್! ಇದಿಷ್ಟನ್ನು ಹೇಳಲು ನಿರ್ದೇಶಕರು ಅದೇ ತುಕ್ಕು ಹಿಡಿದ ಮಚ್ಚಿನ ಕತೆಗೆ ಶರಣಾದರಲ್ಲಾ ಎಂದು ಪ್ರೇಮ್ ಅಭಿಮಾನಿಗಳು ತಲೆಚಚ್ಚಿಕೊಳ್ಳಬೇಕು.

  ಚಿತ್ರ ಆರಂಭವಾಗುತ್ತಿದ್ದಂತೆ ಅಯ್ಯೋ ಇದು 'ಜೋಗಿ' ಚಿತ್ರದಂತೆಯೇ ಇದೆಯಲ್ಲಾ ಅನ್ನಿಸಿದರೆ ಆಶ್ಚರ್ಯಪಡಬೇಕಾಗಿಲ್ಲ! ಚಿತ್ರದ ಸನ್ನಿವೇಶಗಳು ಬದಲಾಗುತ್ತಿದ್ದಂತೆ ಉಪೇಂದ್ರ ನಿರ್ದೇಶನದ 'ಎ' ಚಿತ್ರ ನೆನಪಾಗುವುದೂ ಉಂಟು! ಸ್ವಲ್ಪ ಸಮಯದ ಬಳಿಕ 'ಎ' ಚಿತ್ರದ ನೆನಪೂ ಅಳಿಸಿಹೋಗುತ್ತದೆ. ಚಿತ್ರ ತೆರೆಕಾಣುವುದಕ್ಕೂ ಮುನ್ನ ಹುಟ್ಟಿಸಿದ್ದ ಭರವಸೆ, ಕುತೂಹಲ, ನಿರೀಕ್ಷೆಗಳು ಚದುರಿದ ಚಿತ್ರಗಳಾಗುತ್ತವೆ.''ಪ್ರೇಮ್ ಹೈಪ್ ಮಾಡುತ್ತಾರೆ'' ಎಂಬ ಪ್ರೇಕ್ಷಕರ ಅನಿಸಿಕೆಯನ್ನು ನಿರ್ದೇಶಕ ಪ್ರೇಮ್ ಪ್ರಾಮಾಣಿಕವಾಗಿ ನಿಜಮಾಡಿದ್ದಾರೆ.

  ಚೂರು ಕತೆ : ಅಪ್ಪನ ಮಾತಿಗೆ ಬೆಲೆ ಕೊಡದೆ ಮನೆ ಬಿಟ್ಟ್ಟು ಓಡಿ ಹೋಗುತ್ತಾನೆ ಮುತ್ತು. ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ನಾಯಕ ನಟನಾಗಬೇಕೆಂದು ದೊಡ್ಡ ಕನಸು ಕಾಣುತ್ತಾನೆ. ಈ ಕನಸಿಗೆ ಸಹ ನಿರ್ದೇಶಕನೊಬ್ಬ ನೀರೆರೆಯುತ್ತಾನೆ. ನಾನು ನಿನ್ನನ್ನು ಹೀರೋ ಮಾಡುತ್ತೇನೆ. ನನ್ನ ಮುಂದಿನ ಚಿತ್ರಕ್ಕೆ ನೀನೇನಾಯಕ ನಟ ಎನ್ನುತ್ತಾನೆ. ಇನ್ನೇನು ಕನಸು ನನಸಾಯಿತು ಎಂದುಕೊಳ್ಳುವಷ್ಟರಲ್ಲಿ ಸಮಸ್ಯೆಯೊಂದು ಎದುರಾಗುತ್ತದೆ.

  ಚಿತ್ರದ ನಾಯಕಿಗೆ 'ಐ ಲವ್ ಯು' ಎಂದು ಹೇಳಲು ಏನೋ ಮುಜುಗರ. ನಾನು ಈ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಮುತ್ತು ಕನಸಿಗೆ ತಣ್ಣೀರೆರಚುತ್ತಾಳೆ. ಹೋಗಲಿ ಬೇರೊಬ್ಬ ನಾಯಕಿಯನ್ನು ಹಾಕಿಕೊಂಡು ಚಿತ್ರ ತೆಗೆಯೋಣವೆಂದರೆ ನಿರ್ಮಾಪಕ ಒಪ್ಪುವುದಿಲ್ಲ. ತನ್ನ ಚಿತ್ರಕ್ಕೆ ಆಕೆಯೇ ನಾಯಕಿಯಾಗಬೇಕು ಎಂದು ಪಟ್ಟುಹಿಡಿಯುತ್ತಾನೆ.ಅವಳಿಗೋ ಇಬ್ಬರು ಮಾವಂದಿರ ಕಾಟ. ತಾನು ಮದುವೆಯಾಗಬೇಕು ಅಂತ ಒಬ್ಬ. ಇಲ್ಲ, ಅವಳಿಗೆ ತಾಳಿ ಕಟ್ಟುವ ಗಂಡು ನಾನೇ ಎಂದು ಮಗದೊಬ್ಬ.

  ಇವಳನ್ನು ಮದುವೆಯಾಗಲು ಇಬ್ಬರಲ್ಲೂ ಪೈಪೋಟಿ. ಸದಾ ಹೊಡೆದಾಟ, ಮಚ್ಚಿನಲ್ಲೇ ಕಾದಾಟ. ಇದರ ಫಲಿತವೇ ಇಬ್ಬರಿಗೂ ಪರಪ್ಪನ ಅಗ್ರಹಾರದ ಊಟ. ಜೈಲಿನಿಂದ ಬಿಡುಗಡೆಯಾಗಿ ಬಂದರೆ ಸಾಕು ಮತ್ತೆ ಮಚ್ಚಿನಾಟ. ಇಬರಿಬ್ಬರ ಜಗಳದಲ್ಲಿ ಬಡವಾಗುವ ನಾಯಕಿ. ಅವಳನ್ನು ಕರೆತರಲು ಹರಸಾಹಸ ಮಾಡುವ ನಾಯಕ ನಟ. ಈ ನಡುವೆ ಪ್ರೇಕ್ಷಕ ಹೈರಾಣ. ಕಡೆಗೂ ಆಕೆ ಉದ್ದೇಶಿತ 'ಪೋಲಿ' ಚಿತ್ರದಲ್ಲಿ ನಟಿಸಲು ಒಪ್ಪುತ್ತಾಳಾ ಇಲ್ಲವೇ ಎಂಬುದು ನಮ್ಮ ವಿಮರ್ಶೆಯಲ್ಲಿರುವ ಸೀಕ್ರೆಟ್ಟು.

  ಹಾಡುಗಳಲ್ಲಿ ಬರುವ ದಕ್ಷಿಣಾ ಆಫ್ರಿಕಾ ಮತ್ತು ಲಡಾಕ್ ನ ಸುಂದರ ತಾಣಗಳು ಗಮನ ಸೆಳೆಯುತ್ತವೆ. ಎಸ್ ಕೃಷ್ಣಅವರ ಕ್ಯಾಮೆರಾ ಕೈಚಳಕ ಕೊಂಚ ಸಮಾಧಾನ ತರುತ್ತದೆ. ನಾಯಕಿ ನಿಶಾ ಕೊಠಾರಿ (ಪ್ರಿಯಾಂಕ ಕೊಠಾರಿ) ನಟನೆ ಕೀಲಿ ಕೊಟ್ಟ ಗೊಂಬೆಯಂತಿದೆ. ಕೊಠಾರಿಯ ಅಂಗಸೌಷ್ಠವಕ್ಕೆ ನಾವು ಅಬ್ಬಬ್ಬಾ ಎಂದರೆ, ನಟನೆ ಬಗ್ಗೆ ತಬ್ಬಿಬ್ಬಾಗುತ್ತೇವೆ. ಅವರ ಅಭಿನಯವನ್ನು ಹೇಳಿಕೊಂಡು ಊರೆಲ್ಲ ತಿರುಗುವಂತಿಲ್ಲ. ಹರಿಕೃಷ್ಣ ಅವರ ಸಂಗೀತ ಕೇಳಲು ಇಂಪಾಗಿದೆ, ಹಾಡುಗಳ ಚಿತ್ರೀಕರಣ ತಂಪಾಗಿಲ್ಲ.

  ಹಾಡೊಂದರಲ್ಲಿ ಜಯಂತಿ, ಭಾರತಿ, ಜಯಪ್ರದಾ,ಜಯಮಾಲಾ ಹಾಗೂ ಊರ್ವಶಿ ಅವರಂತಹ ಹಿರಿಯ ಕಲಾವಿದರು ಹೆಜ್ಜೆ ಹಾಕಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿ. ಹಾಡೊಂದರಲ್ಲಿ ಇಣುಕುವ ರಂಗಾಯಣ ರಘು, ಸಾಧುಕೋಕಿಲ ಹಾಡಿನೊಂದಿಗೇ ನಾಪತ್ತೆಯಾಗುತ್ತಾರೆ. ಪುನೀತ್ ರಾಜ್ ಕುಮಾರ್ ಕೈಗೆ ಮಚ್ಚು ಕೊಟ್ಟು ಪ್ರೇಕ್ಷಕರ ಸಹನೆಯನ್ನು ಮತ್ತೆ ಚುಚ್ಚಿದ್ದಾರೆ ನಿರ್ದೇಶಕ ಪ್ರೇಮ್. ಒಟ್ಟಾರೆ ಸಾರವಿಲ್ಲದ ಕತೆಯನ್ನು ಪ್ರೇಕ್ಷಕರಿಗೆ ಪ್ರೇಮ್ ಉಣಬಡಿಸಿದ್ದಾರೆ.

  Saturday, June 30, 2012, 14:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X