»   » ಹಳೇ ಕತೆಗೆ ಸುಣ್ಣಬಣ್ಣ :'ಶುಕ್ರ'ದೆಸೆ ನಿರೀಕ್ಷೆಯಲ್ಲಿ ವಿನೋದ್!

ಹಳೇ ಕತೆಗೆ ಸುಣ್ಣಬಣ್ಣ :'ಶುಕ್ರ'ದೆಸೆ ನಿರೀಕ್ಷೆಯಲ್ಲಿ ವಿನೋದ್!

By: * ದೇವಶೆಟ್ಟಿ ಮಹೇಶ್
Subscribe to Filmibeat Kannada
Vinod and Leelavathi
ಒಟ್ಟಿನಲ್ಲಿ ಪಕ್ಕಾ ಮಾಸ್ ಚಿತ್ರವನ್ನು ಹೇಗೆ ನೋಡಬೇಕೋ, ಹಾಗೆ ನೋಡಿದರೆ 'ಶುಕ್ರ' ಇಷ್ಟವಾಗುತ್ತದೆ. ವಿನೋದ್ ರಾಜ್ ಚಿತ್ರ ಗೆಲ್ಲುತ್ತದೆ.. ಇಲ್ಲದಿದ್ದರೇ.. ???

ಇದು ಮುದ್ದುರಾಜ್ ನಿರ್ದೇಶಿಸಿದ ಸಿನಿಮಾನಾ? ಹೀಗೊಂದು ಅನುಮಾನ ಕಾಡದಿದ್ದರೆ ಹೇಳಿ. ಹೌದು ಹಾಗೆ ಚಿತ್ರಿಸಿದ್ದಾರೆ ಮುದ್ದು ರಾಜ್. ಒಂದು ಸಾಮಾನ್ಯ ಅಂದರೆ ಅತಿಸಾಮಾನ್ಯ ಕತೆಯನ್ನು ಎರಡೂವರೆ ಗಂಟೆ ಕುಳಿತು ನೋಡುವಂತೆ ಮಾಡಿದ್ದಾರೆ. ಅದಕ್ಕೆ ಕಾರಣ ವಿನೋದ್ ರಾಜ್ ಪಕ್ವ ಅಭಿನಯ, ಅದಕ್ಕೆ ಬಳಸಿದ ಸ್ಟೈಲು,ಜೊತೆಗೆ ನಿರೂಪಣೆಯ ವೇಗ. ಇದಿಷ್ಟೇ ಚಿತ್ರವನ್ನು ಗೆಲ್ಲಿಸುತ್ತದೆ.

ಸುಮ್ಮನೆ ಕೇಳಿದರೆ ಇಲ್ಲಿ ಗಟ್ಟಿಯಾದ ಕತೆಯೇ ಇಲ್ಲ. ಬುದುಕಿನ ಸುತ್ತ ಕತೆ ಸಾಗುತ್ತದೆ. ಅಲ್ಲೊಬ್ಬ ವಿಲನ್ ಇರುತ್ತಾನೆ. ಆತನನ್ನು ಎದುರು ಹಾಕಿಕೊಂಡ ನಾಯಕ ಕೊಲೆಯಾಗುತ್ತಾನೆ. ಆಗ ರೌಡಿ ವಿನೋದ್ ರಾಜ್ ಹಾಜರಾಗುತ್ತಾನೆ. ಆತ ವಿಲನ್ ಪರವಾಗಿ ಇದ್ದರೂ ಕೊಲೆಯಾದ ವಿನೋದ್ ರಾಜ್ ಕುಟುಂಬಕ್ಕೆ ಹತ್ತಿರವಾಗುತ್ತಾನೆ. ಈ ನಡುವೆ ಲೀಲಾವತಿ ಮೊಮ್ಮಗಳು ಕಳೆದು ಹೋಗಿರುತ್ತಾಳೆ. ಆಕೆಯನ್ನು ಹುಡುಕಿ ಕೊಡುವ ಜವಾಬ್ದಾರಿ ವಿಲನ್ ವಿನೋದ್ ಮೇಲೆ ಬೀಳುತ್ತದೆ. ಕೊನೆಗೆ ಏನಾಗುತ್ತದೆ ಎಂದು ಎಲ್ಲರಿಗೂ ಗೊತ್ತು.

ಮೊದಲೇ ಹೇಳಿದಂತೆ ಸಾಮಾನ್ಯ ಕತೆಗೆ ಮುದ್ದುರಾಜ್ ಒಂದು ವೇಗವನ್ನು ಕಟ್ಟಿಕೊಟ್ಟಿದ್ದಾರೆ. ಹೊಸತನ ಅಂತ ಇಲ್ಲದಿದ್ದರೆ ಹಳೆಯತನವೂ ಕಾಣುವುದಿಲ್ಲ.

ಚಿತ್ರದುದ್ದಕ್ಕೂ ನಾಯಕನನ್ನು ತೋರಿಸಲು ಒಂದು ಸ್ಟೈಲ್ ರೂಪಿಸಿದ್ದಾರೆ. ಅದು ವಿನೋದ್ ಗೆ ಎಲ್ಲೂ ಓವರ್ ಅನ್ನಿಸುವುದಿಲ್ಲ. ಅವರದನ್ನು ಹಾಗೆ ನಿಭಾಯಿಸಿದ್ದಾರೆ. ಎಲ್ಲವೂ ನಾಯಕನ ಸುತ್ತ ಸುತ್ತುತ್ತದೆ. ಹೀಗಾಗಿ ಉಳಿದ ಪಾತ್ರಗಳು ಗೌಣವಾಗಿವೆ. ಆದರೂ ವಿಲನ್ ಪಾತ್ರಧಾರಿ ನಿನಾಸಂ ಅಶ್ವಥ್ ಮಾತಾಡುವ ಶೈಲಿ ಸೊಗಸಾಗಿದೆ. ನಾಯಕಿ ಪ್ರಿಯಾ ದೀಕ್ಷಿತ್ ಹಾಡಿಗೆ ಬರುತ್ತಾಳೆ. ಕುಣಿಯದಿದ್ದರೂ ಯಾರು ಕೇಳುತ್ತಿರಲಿಲ್ಲ. ಕಾಮಿಡಿ ಟ್ರಾಕ್ ನಲ್ಲಿ ಬಿರಾದಾರ್ ನಗೆ ಪಾಟಲಿಗೆ ಈಡಾಗಿದ್ದಾರೆ. ಅದು ಅವರ ತಪ್ಪಲ್ಲ, ಚೆಂದದ ಹಾಸ್ಯವನ್ನು ತೋರಿಸಲು ಸಾಧ್ಯವಾಗದ ನಿರ್ದೇಶಕರ ತಪ್ಪು.

ಮೂರು ಹಾಡುಗಳು ಕೇಳುವಂತಿವೆ. ಕ್ಯಾಮೆರಾ ಕೆಲಸ ಕೆಲವೊಂದು ಕಡೆ ಸೊಗಸಾಗಿದೆ. ಫೈಟಿಂಗ್ ಕೂಡ ವಿನೋದ್ ಅಭಿಮಾನಿಗಳಿಗೆ ಖುಷಿ ಕೊಡುತ್ತದೆ. ಇನ್ನು ವಿನೋದ್ ರಾಜ್ ಅವರಲ್ಲಿ ಈಗ ತಾನೇ ಬಂದ ಹೊಸ ಹುಡುಗನ ಶ್ರದ್ಧೆ, ಪ್ರೀತಿ ಕಾಣುತ್ತದೆ. ಪ್ರತಿ ಫ್ರೇಮ್ ನಲ್ಲೂ ಇದು ಗೋಚರ. ಎಲ್ಲೂ ಅತಿಯಾಗದಂತೆ ಎಚ್ಚರವಹಿಸಿದ್ದಾರೆ. 'ಕನ್ನಡದ ಕಂದ'ಚಿತ್ರದ ಗೆಲುವು ತಂದ ಖುಷಿಯನ್ನು ಅವರ ಅಭಿನಯದಲ್ಲಿ ಕಾಣಬಹುದು. ಕುಣಿಯುವಾಗಂತೂ ಹೀ ಈಸ್ ರಿಯಲಿ ಡಾನ್ಸ್ ಕಿಂಗ್.

ಒಟ್ಟಿನಲ್ಲಿ ಪಕ್ಕಾ ಮಾಸ್ ಚಿತ್ರವನ್ನು ಹೇಗೆ ನೋಡಬೇಕೋ, ಹಾಗೆ ನೋಡಿದರೆ ಶುಕ್ರ ಇಷ್ಟವಾಗುತ್ತದೆ.

;

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada