Don't Miss!
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಗೇಮ್' ವಿಮರ್ಶೆ; ಕುಡಿದು ಗಾಡಿ ಓಡಿಸುವ ಎಲ್ರೂ ನೋಡ್ಲೇಬೇಕ್!
'ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ' ಎಂಬ ಸಾಮಾಜಿಕ ಸಂದೇಶ ಸಾರುತ್ತಾ, ಒಂದು ಅಪಘಾತ ಹಾಗೂ ಒಂದು ಕೊಲೆ ಸುತ್ತ ಹೆಣೆದಿರುವ ಸೇಡಿನ ಕಥೆ 'ಗೇಮ್'.
'ಸೈನೈಡ್' ಹಾಗೂ 'ಅಟ್ಟಹಾಸ' ಚಿತ್ರಗಳಲ್ಲಿ ನೈಜ ಘಟನೆಗಳಿಗೆ ದೃಶ್ಯ ರೂಪಕ ನೀಡಿದ್ದ ನಿರ್ದೇಶಕ ಎ.ಎಂ.ಆರ್.ರಮೇಶ್, 'ಗೇಮ್' ಸಿನಿಮಾದಲ್ಲಿ ಕಾಲ್ಪನಿಕ ಹೈ ಪ್ರೋಫೈಲ್ ಕೊಲೆ ಕೇಸ್ ಬೆನ್ನತ್ತಿ, ಅದಕ್ಕೆ ಸಸ್ಪೆನ್ಸ್ ಟಚ್ ಕೊಟ್ಟು ಪ್ರೇಕ್ಷಕರ ಕೌತುಕ ಕ್ಷಣ ಕ್ಷಣಕ್ಕೂ ಹೆಚ್ಚಾಗಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಬಾಲಿವುಡ್ ನಟಿ ಮನೀಷಾ ಕೊಯಿರಾಲಾ, ಅರ್ಜುನ್ ಸರ್ಜಾ, ಕಾಲಿವುಡ್ ನಟ ಶ್ಯಾಮ್ ಅಭಿನಯಿಸಿರುವ 'ಗೇಮ್' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

ಕಥಾಹಂದರ
ವಿಧಿ ವಿಜ್ಞಾನ ಪ್ರಯೋಗಾಲಯದ ಸೆಕ್ಯೂರಿಟಿಗೆ ಆಕ್ಸಿಡೆಂಟ್ ಆಗುವುದರಿಂದ 'ಗೇಮ್' ಶುರುವಾಗುತ್ತದೆ. ಅಪಘಾತವಾದ ನಂತರ ಫೊರೆನ್ಸಿಕ್ ಲ್ಯಾಬ್ ನಲ್ಲಿ ಒಂದು ಮೃತ ದೇಹ ಮಿಸ್ಸಿಂಗ್.!!

ಯಾರ ಮೃತ ದೇಹ?
ಹೃದಯಾಘಾತಕ್ಕೆ ಒಳಗಾದ ಉದ್ಯಮಿ ಮಾಯಾ (ಮನೀಷಾ ಕೊಯಿರಾಲಾ) ಮೃತ ದೇಹ, ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಮಾಯವಾಗಿರುತ್ತೆ. ಅಸಲಿ 'ಗೇಮ್' ಶುರುವಾಗುವುದೇ ಇಲ್ಲಿಂದ!

ಬಾಕಿ ಸ್ಟೋರಿ....
ಸೆಕ್ಯೂರಿಟಿ ಅಪಘಾತಕ್ಕೂ, ಮಾಯಾ ಮೃತ ದೇಹ ಮಾಯವಾಗುವುದಕ್ಕೂ ಏನು ಸಂಬಂಧ? ಮಾಯಾರದ್ದು ಸಹಜ ಸಾವೋ ಇಲ್ಲ ಕೊಲೆಯೋ? ಕೊಲೆ ಮಾಡಿದವರೇ ಮಾಯಾ ಮೃತ ದೇಹ ಕಳುವು ಮಾಡಿದ್ರಾ? ಅಥವಾ ಮಾಯಾ ಸತ್ತಂತೆ ನಟಿಸಿದ್ಲಾ? ಯಾರ 'ಗೇಮ್' ಬಲೆಯಲ್ಲಿ ಯಾರು ಬಿದ್ದರು? ಈ ಎಲ್ಲಾ ಪ್ರಶ್ನೆಗಳಿಗೆ ನೀವು ಚಿತ್ರಮಂದಿರದಲ್ಲಿ 'ಗೇಮ್' ಚಿತ್ರ ನೋಡಿ ಉತ್ತರ ಕಂಡುಕೊಳ್ಳಬೇಕು.

ಅರ್ಜುನ್ ಸರ್ಜಾ 'ಗೇಮ್' ಪ್ಲಾನ್ ಸೂಪರ್!
ಖಡಕ್ ಪೊಲೀಸ್ ಆಫೀಸರ್ (ಶರತ್ ಚಂದ್ರ) ಪಾತ್ರದಲ್ಲಿ ಅರ್ಜುನ್ ಸರ್ಜಾ ಗತ್ತು, ಗೈರತ್ತಿನ ಬಗ್ಗೆ ತುಟಿ ಎರಡು ಮಾಡುವ ಹಾಗೇ ಇಲ್ಲ. ಒಂದ್ಕಡೆ ಪೊಲೀಸ್ ತನಿಖಾಧಿಕಾರಿಯಾಗಿ, ಇನ್ನೊಂದ್ಕಡೆ ಸೇಡು ತೀರಿಸಿಕೊಳ್ಳುವ ಕಾಮನ್ ಮ್ಯಾನ್ ಆಗಿ ಅರ್ಜುನ್ ಸರ್ಜಾ ಇಷ್ಟವಾಗುತ್ತಾರೆ.

ಮನೀಷಾ ಕೊಯಿರಾಲಾ ಚಾರ್ಮ್ ಹೇಗಿದೆ?
ಮನೀಷಾ ಕೊಯಿರಾಲಾ ರವರ ಕಮ್ ಬ್ಯಾಕ್ ಸಿನಿಮಾ ಅಂತಲೇ ಖ್ಯಾತಿ ಗಳಿಸಿರುವ 'ಗೇಮ್' ಚಿತ್ರದಲ್ಲಿ ಮನೀಷಾರ ಹಳೆಯ ಚಾರ್ಮ್ ಇಲ್ಲ ಅನ್ನೋದಷ್ಟೇ ಬೇಸರ. ಕನ್ನಡ ಭಾಷೆ ಬಾರದೆ ಇರುವುದರಿಂದ ಇಡೀ ಚಿತ್ರದಲ್ಲಿ ಮನೀಷಾರ ಲಿಪ್ ಸಿಂಕ್ ಆಗೇ ಇಲ್ಲ.

ಕಾಲಿವುಡ್ ನಟ ಶ್ಯಾಮ್ ಹೇಗೆ?
ಐಶಾರಾಮಿ ಜೀವನ ನಡೆಸುತ್ತಿದ್ದರೂ, ಪತ್ನಿಯನ್ನೇ ಕೊಲೆ ಮಾಡುವ ಸೈಲೆಂಟ್ ಕಿಲ್ಲರ್ (ಅಕ್ಷಯ್) ಪಾತ್ರದಲ್ಲಿ ಶ್ಯಾಮ್ ಗಮನ ಸೆಳೆಯುತ್ತಾರೆ. ಪಾತ್ರವೇ ತಾವಾಗಿ ಹೋಗಿರುವ ಶ್ಯಾಮ್, ಲ್ಯಾವೆಟ್ರಿ ಪ್ಯಾನ್ ಒಳಗೆ ಕೈ ಹಾಕಿ ಪೇಪರ್ ತೆಗೆದು ನುಂಗುವುದಕ್ಕೂ ಅಸಹ್ಯ ಪಟ್ಟುಕೊಂಡಿಲ್ಲ.!!

ಇತರರ ಕಥೆ
ನಿರ್ದೇಶನದ ಜೊತೆಗೆ ಎ.ಸಿ.ಪಿ ಪಾತ್ರ ನಿರ್ವಹಿಸಿರುವ ಎ.ಎಮ್.ಆರ್.ರಮೇಶ್, ತಾಯಿಯ ಸಾವಿನ ಸೇಡು ತೀರಿಸಿಕೊಳ್ಳುವ ಮಗಳಾಗಿ ಅಕ್ಸಾ ಭಟ್ ಹಾಗೂ ಅರ್ಜುನ್ ಸರ್ಜಾ ಪತ್ನಿಯಾಗಿ ನೇಹಾ ಸಕ್ಸೇನಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಕಡೆವರೆಗೂ ಬರೀ ಡೌಟ್!
ಒಂದು ಅಪಘಾತ, ಒಂದು ಕೊಲೆ ಹಾಗೂ ಒಂದು ಮೃತ ದೇಹ ನಾಪತ್ತೆ ಸುತ್ತ ಒಂದು ಇಡೀ ರಾತ್ರಿ ನಡೆಯುವ ತನಿಖೆ ಈ ಸಿನಿಮಾ. ಕಡೆವರೆಗೂ ಸಸ್ಪೆನ್ಸ್ ನಲ್ಲಿ ಸಾಗುವ ಈ ಚಿತ್ರ ಒಮ್ಮೆ 'ಹಾರರ್' ಫೀಲ್ ಕೊಟ್ಟರೆ, ಮತ್ತೊಮ್ಮೆ ಟೆನ್ಷನ್ ನಿಂದ ಉಗುರು ಕಚ್ಚುವಂತೆ ಮಾಡುತ್ತೆ. ಅಷ್ಟರಮಟ್ಟಿಗೆ, ಪ್ರೇಕ್ಷಕರನ್ನ ಕಡೆವರೆಗೂ ಹಿಡಿದಿಡುವಲ್ಲಿ ಚಿತ್ರ ಯಶಸ್ವಿ ಆಗಿದೆ.

ರೀಮೇಕ್ ಚಿತ್ರ?!
'ಗೇಮ್' ರೀಮೇಕ್ ಚಿತ್ರ ಅಂತ ನಿರ್ದೇಶಕರು ಎಲ್ಲೂ ಹೇಳಿಕೊಂಡಿಲ್ಲ. ಆದರೂ, 'ಗೇಮ್' ಸಿನಿಮಾ ಸ್ಪ್ಯಾನಿಶ್ ಭಾಷೆಯಲ್ಲಿ 2012ರಲ್ಲಿ ತೆರೆಕಂಡ El Cuerpo (The Body) ಚಿತ್ರದಂತೆಯೇ ಇದೆ.

ಟೆಕ್ನಿಕಲಿ ಸಿನಿಮಾ ಹೇಗಿದೆ?
ವಿಧಿ ವಿಜ್ಞಾನ ಪ್ರಯೋಗಾಲಯದಲ್ಲೇ ಚಿತ್ರದ ಮುಕ್ಕಾಲು ಭಾಗ ಚಿತ್ರೀಕರಣಗೊಂಡಿದೆ. ಹೀಗಿದ್ದರೂ, ಹೊನಲು ಬೆಳಕಿನ ಆಟದಲ್ಲಿ ಕೃಷ್ಣ ಶ್ರೀರಾಮ್ ಕೈಚಳಕ ಮೆಚ್ಚಲೇಬೇಕು. ಇಳಯರಾಜ ಸಂಗೀತ ಕಿವಿಗೆ ಇಂಪು. ಕೃಷ್ಣ ರೆಡ್ಡಿ ಕತ್ರಿ ಕೆಲಸ ಕೂಡ ಚುರುಕಾಗಿದೆ.

ಫೈನಲ್ ಸ್ಟೇಟ್ ಮೆಂಟ್.!
ಕೊಂಚ ನಿಧಾನಗತಿಯಲ್ಲಿ ಸಿನಿಮಾ ಸಾಗಿದರೂ, ಕ್ಷಣ ಕ್ಷಣಕ್ಕೂ ಕುತೂಹಲ ಇರುವ 'ಗೇಮ್' ಸಿನಿಮಾ ನಿಜಕ್ಕೂ ಒಂದೊಳ್ಳೆ ಪ್ರಯತ್ನ. ಸಸ್ಪೆನ್ಸ್-ಥ್ರಿಲ್ಲರ್ ಚಿತ್ರಗಳನ್ನ ಇಷ್ಟಪಟ್ಟು ನೋಡುವವರಿಗೆ 'ಗೇಮ್' ಸಿನಿಮಾ ಖಂಡಿತ ಇಷ್ಟವಾಗುತ್ತೆ. ಜೊತೆಗೆ ಸಾಮಾಜಿಕ ಸಂದೇಶ ಇರುವ ಕಾರಣ 'ಕುಡಿದು ಅಡ್ಡಾದಿಡ್ಡಿ ಗಾಡಿ ಓಡಿಸುವ' ಎಲ್ಲರೂ ಈ ಚಿತ್ರವನ್ನ ನೋಡಲೇಬೇಕು.