»   » ಬಹದ್ದೂರ್ ವಿಮರ್ಶೆ : ಅದ್ದೂರಿ, ಕಲರ್ ಫುಲ್ ಪ್ರೇಮ ಪಯಣ

ಬಹದ್ದೂರ್ ವಿಮರ್ಶೆ : ಅದ್ದೂರಿ, ಕಲರ್ ಫುಲ್ ಪ್ರೇಮ ಪಯಣ

Posted By: ಬಾಲರಾಜ್ ತಂತ್ರಿ
Subscribe to Filmibeat Kannada
Rating:
4.0/5
2012ರಲ್ಲಿ ಸೆಟ್ಟೇರಿದ್ದ ಚಿತ್ರವನ್ನು ಲೇಟಾದರೂ, ಲೇಟೆಸ್ಟಾಗಿ ತೆರೆಗೆ ತರುತ್ತೇವೆ ಎನ್ನುವುದು ಚಿತ್ರ ನಿರ್ಮಾಪಕರ ಖಚಿತ ವಿಶ್ವಾಸದ ಮಾತು. ಚಿತ್ರ ಬಿಡುಗಡೆಗೆ ಮುನ್ನ ವ್ಯವಸ್ಥಿತವಾಗಿ ಪ್ರಚಾರ ಮಾಡಿದ ಕೀರ್ತಿ ಚಿತ್ರತಂಡಕ್ಕೆ ಸಲ್ಲುತ್ತದೆ.

ಚಿತ್ರ ನೋಡಿ ಹೊರಬಂದವರಿಗೆ ನಿರ್ಮಾಪಕರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆಂದು ಅನಿಸದೇ ಇರದು. ಹೌದು, ಚಿತ್ರ ಅದ್ದೂರಿಯಾಗಿ ತೆರೆ ಮೇಲೆ ಬಂದಿದೆ. ಅದಕ್ಕಿಂತ ಹೆಚ್ಚಾಗಿ ರಿಮೇಕ್ ಚಿತ್ರದ ಹಾವಳಿಯ ಈ ಸಮಯದಲ್ಲಿ ಅಚ್ಚುಕಟ್ಟಾಗಿ ಸ್ವಮೇಕ್ ಚಿತ್ರವೊಂದನ್ನು ಕನ್ನಡ ಚಿತ್ರರಸಿಕರಿಗೆ ನೀಡಿರುವುದು ನವರಾತ್ರಿ ಬೋನಸ್.

ಕನ್ನಡ ಚಿತ್ರವೊಂದರಲ್ಲಿ ಇದೇ ಮೊದಲ ಬಾರಿಗೆ 7.1 ಸೌಂಡ್ ಡಿಸೈನ್ ಟೆಕ್ನಾಲಜಿಯನ್ನ ಚಿತ್ರದಲ್ಲಿ ಬಳಸಿಕೊಂಡಿರುವುದು ವಿಶೇಷ, ಪ್ರೇಕ್ಷಕರಿಗೆ ಇದರ ಅನುಭವವಾಗುವುದು ಅಷ್ಟೇ ನಿಜ. ಮೈಸೂರಿನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಚಿತ್ರ ಇದಾಗಿದೆ.

ಚಿತ್ರತಂಡದ ಪರಿಶ್ರಮಕ್ಕೆ ನಮ್ಮ ಅಭಿನಂದನೆಗಳು ಮತ್ತು 'ಒನ್ ಇಂಡಿಯಾ' ಪರವಾಗಿ ದಸರಾ ಹಬ್ಬದ ಶುಭಾಶಯಗಳು. ಪಾತ್ರಗಳನ್ನು ಪರಿಚಯಿಸುವ ಮತ್ತು ಚಿತ್ರದ ಕಥೆಯ ಎಳೆಯನ್ನು ವಿವರಿಸುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಾಯ್ಸ್ ಓವರ್ ಮೂಲಕ ಚಿತ್ರ ಅದ್ದೂರಿ ಆರಂಭ ಪಡೆಯುತ್ತದೆ. (ದುನಿಯಾ ವಿಜಿ ಅಭಿನಯದ ಸಿಂಹಾದ್ರಿ ವಿಮರ್ಶೆ)

ರಾಜ್ಯಾದ್ಯಂತ ಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಚೇತನ್ ಕುಮಾರ್ ನಿರ್ದೇಶನದ, ಧ್ರುವ್ ಸರ್ಜಾ, ರಾಧಿಕಾ ಪಂಡಿತ್ ಪ್ರಮುಖ ಭೂಮಿಕೆಯಲ್ಲಿರುವ 'ಬಹದ್ದೂರ್' ಚಿತ್ರ ಹೇಗಿದೆ. ವಿಮರ್ಶೆಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ಮೊದಲಿಗೆ ನಿರ್ಮಾಪಕರು, ತಂತ್ರಜ್ಞರು, ಕಲಾವಿದರ ಬಗ್ಗೆ

ಬ್ಯಾನರ್: ಆರ್ ಎಸ್ ಪ್ರೊಡಕ್ಷನ್ಸ್
ನಿರ್ಮಾಪಕರು: ಕನಕಪುರ ಶ್ರೀನಿವಾಸ್, ಶ್ರೀಕಾಂತ್
ಹಂಚಿಕೆದಾರರು: ಸಮರ್ಥ್ ವೆಂಚರ್ಸ್
ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ: ಚೇತನ್ ಕುಮಾರ್
ಸಂಗೀತ: ವಿ ಹರಿಕೃಷ್ಣ
ಸಿನಿಮಾಟೋಗ್ರಾಫಿ: ಶ್ರೀಶ ಕುಡುವಳ್ಳಿ
ಸಂಕಲನ: ದೀಪು ಎಸ್ ಕುಮಾರ್
ತಾರಾಗಣ: ಧ್ರುವ್ ಸರ್ಜಾ, ರಾಧಿಕಾ ಪಂಡಿತ್, ರವಿಶಂಕರ್, ಅಚ್ಯುತ್ ಕುಮಾರ್, ಶ್ರೀನಿವಾಸಮೂರ್ತಿ, ಜೈಜಗದೀಶ್, ರಾಜು ತಾಳಿಕೋಟೆ, ಗುರುರಾಜ್ ಹೊಸಕೋಟೆ, ತಬ್ಲಾ ನಾಣಿ, ಪವಿತ್ರಾ ಲೋಕೇಶ್, ಉದಯ್, ದತ್ತಣ್ಣ

ನಾಯಕಿಯ ಬಗ್ಗೆ

ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಳ್ಳುವ, ಕಾಲೇಜು ಓದುವ ಹೊತ್ತಿನಲ್ಲಿ ಅಕ್ಕಳನ್ನು ಕಳೆದುಕೊಳ್ಳುವ ನಾಯಕಿ ಅಂಜಲಿಗೆ (ರಾಧಿಕಾ ಪಂಡಿತ್) ತಂದೆಯೇ (ಶ್ರೀನಿವಾಸಮೂರ್ತಿ) ಎಲ್ಲಾ. ಪತ್ರಿಕೋದ್ಯಮದಲ್ಲಿ ತರಬೇತಿ ಪಡೆಯಲು ಮೈಸೂರು ಕಾಲೇಜಿಗೆ ಸೇರುವ ನಾಯಕಿ, ತನ್ನ ತಂದೆಗೆ ತಾನು ಪ್ರೇಮ ವಿವಾಹವಾಗುವುದಿಲ್ಲ ಎಂದು ಮಾತುಕೊಟ್ಟಿರುತ್ತಾಳೆ.

ನಾಯಕನ ಬಗ್ಗೆ

ನಾಯಕ ಅಶೋಕ್ ಆಲಿಯಾಸ್ ಅಶೋಕ್ ರಾಜ್ ಬಹದ್ದೂರ್ (ಧ್ರುವ್ ಸರ್ಜಾ) ರಾಜಮನೆತನದ ಹುಡುಗ. ನಾಯಕಿ ಪ್ರವಾಸಕ್ಕೆಂದು ಬೆಂಗಳೂರಿಗೆ ಬಂದಾಗ ನಾಯಕನಿಗೆ ಅಂಜಲಿ ಮೇಲೆ ಪ್ರೇಮಾಂಕುರವಾಗುತ್ತದೆ. ರಾಜಮನೆತನದ ದಿವಾನರಿಗೆ (ದತ್ತಣ್ಣ) ಆಕೆಯನ್ನು ಪ್ರೀತಿಸಿ ಕರೆದುಕೊಂಡು ಬರುತ್ತೇನೆ ಎಂದು ನಾಯಕ ಮೈಸೂರಿಗೆ ಬರುವುದು ಹಿನ್ನಲೆ.

ಹಾಸ್ಯಭರಿತ ನಿರೂಪಣೆ

ನಾನು ನಿಮ್ಮ ಅಭಿಮಾನಿಯೆಂದು ನಾಯಕ ಅಂಜಲಿ ಹಿಂದೆ ಡೈಲಾಗುಗಳ ಸುರಿಮಳೆಯನ್ನು ಸುರಿಸುತ್ತಾ ಅವಳ ಹಿಂದೆ ಸುತ್ತುತ್ತಿರುತ್ತಾನೆ. ಒಂದು ದಿನ ತನ್ನ ಪ್ರೀತಿಯನ್ನು ನಾಯಕಿಗೆ ತಿಳಿಸುತ್ತಾನೆ. ಆದರೆ ನಾಯಕಿ ಅದನ್ನು ನಿರಾಕರಿಸಿ, ಹತ್ತು ವರ್ಷ ಬಿಟ್ಟು ಬಂದರೂ ನನ್ನ ನಿಲುವಿನಲ್ಲಿ ಬದಲಾಗುವುದಿಲ್ಲ ಎನ್ನುವ ಹೊತ್ತಿಗೆ ಚಿತ್ರ ಇನ್ನೊಂದು ಮಜಲಿಗೆ ಬರುತ್ತದೆ. ಕೊನೆಗೆ ಅಶೋಕ್, ಅಂಜಲಿಯವರ ಪ್ರೀತಿಯ ಪಯಣ ಹ್ಯಾಪ್ಪಿ ಎಂಡಿಂಗ್ ಆಗುತ್ತಾ ಎನ್ನುವುದು ಚಿತ್ರದ ಕ್ಲೈಮ್ಯಾಕ್ಸ್.

ಡೈಲಾಗುಗಳೇ ಚಿತ್ರದ ಜೀವಾಳ

ನಿರ್ದೇಶನದ ಜೊತೆಗೆ, ಸಂಭಾಷಣೆಯನ್ನು ಬರೆದವರು ಚೇತನ್ ಕುಮಾರ್. ಇಡೀ ಚಿತ್ರದ ಜೀವಾಳವೇ ಡೈಲಾಗ್ ಎಂದರೆ ತಪ್ಪಾಗಲಾರದು. ಒಂದು ಉದಾಹರಣೆ, ನಾನು ಸಿಹಿ ತಿನ್ನಿಸಿದೆ, ನೀವು ಖಾರ ತಿನ್ನಿಸಿದ್ದೀರಾ, ಜಡೆಗೂ ಮೀಸೆಗೂ ಇಷ್ಟೇರಿ ವ್ಯತ್ಯಾಸ. ಹೀಗೆ ಡೈಲಾಗುಗಳ ಪುಂಖಾನುಪುಂಖವಾಗಿ ಚಿತ್ರದುದ್ದಕ್ಕೂ ಹರಿದು ಬರುತ್ತಲೇ ಇರುವಾಗ ಪ್ರೇಕ್ಷಕ ಫುಲ್ ಖುಷ್.

ನಾಯಕ ಧ್ರುವ್ ನಟನೆ

ಚಿತ್ರದುದ್ದಕ್ಕೂ ಧ್ರುವ್ ಸರ್ಜಾ ಅವರ ನಟನೆ ಸೂಪರ್. ಅವರ ಡೈಲಾಗ್ ಟೈಮಿಂಗ್ಸ್, ಹೊಡೆದಾಟದ ದೃಶ್ಯಗಳಲ್ಲಿ, ಡ್ಯಾನ್ಸ್ ನಲ್ಲಿ , ಪ್ರೇಮಿಯಾಗಿ ಧ್ರುವ್ ಸರ್ಜಾ ಅದ್ಭುತವಾಗಿ ನಟಿಸಿದ್ದಾರೆ. A Star is born.

ನಾಯಕಿ ಮತ್ತು ಇತರ ಕಲಾವಿದರು

ನಾಯಕಿ ರಾಧಿಕಾ ಪಂಡಿತ್ ಅವರದ್ದು ಎಂದಿನಂತೆ ಲೀಲಾಜಾಲ ಅಭಿನಯ. ಎರಡೇ ಸನ್ನಿವೇಶದಲ್ಲಿ ಬಂದರೂ ರವಿಶಂಕರ್ ನಟನೆ ಎಂದಿನಂತೆ ಜಬರ್ದಸ್ತ್. ನಾಯಕಿಯ ತಂದೆಯಾಗಿ ಶ್ರೀನಿವಾಸಮೂರ್ತಿ, ಚಿಕ್ಕಪ್ಪನಾಗಿ ಅಚ್ಯುತ್ ಕುಮಾರ್ ಮತ್ತು ತಬ್ಲಾ ನಾಣಿ, ರಾಜು ತಾಳಿಕೋಟೆ, ಗುರುರಾಜ್ ಹೊಸಕೋಟೆ ಮುಂತಾದವರ ನಟನೆ ಚಿತ್ರಕಥೆಗೆ ಪೂರಕವಾಗಿದೆ.

ಚಿತ್ರದ ಮೇಕಿಂಗ್ ಮತ್ತು ತಂತ್ರಜ್ಞರ ಬಗ್ಗೆ

ಬೆಂಗಳೂರು, ಬ್ಯಾಂಕಾಕ್, ಹುಬ್ಬಳ್ಳಿ, ಮೈಸೂರಿನಲ್ಲಿ ಚಿತ್ರದ ಹೆಚ್ಚಿನ ಚಿತ್ರೀಕರಣ ನಡೆದಿದೆ. ನಾಯಕ ಎಂಟ್ರಿ ಕೊಡುವ ಆಂಜನೇಯನ ಬೃಹತ್ ಪ್ರತಿಮೆಯ ಮುಂದಿನ ಸಾಹಸ ದೃಶ್ಯ ಅತ್ಯಂತ ಶ್ರೀಮಂತವಾಗಿ ಮೂಡಿಬಂದಿದೆ. ಸಿನಿಮಾಟೋಗ್ರಾಫಿಯಾಗಿ ಶ್ರೀಶ ಕುಡುವಳ್ಳಿ ಅವರ ಕೆಲಸ ಅಚ್ಚುಕಟ್ಟು. ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ವಿ ಹರಿಕೃಷ್ಣ ಅವರ ಸಂಗೀತ, ದೀಪು ಕತ್ತರಿ ಪ್ರಯೋಗ ಚೆನ್ನಾಗಿ ವರ್ಕೌಟ್ ಆಗಿದೆ.

ಕೊನೆಗೆ ಚಿತ್ರದ ಬಗ್ಗೆ

ಎಲ್ಲೋ ಕೆಲವೊಮ್ಮೆ ಡೈಲಾಗು ಒಸಿ ಜಾಸ್ತಿಯಾಯಿತು ಎನ್ನುವಷ್ಟರಲ್ಲಿ ಚಿತ್ರ ಮತ್ತೆ ಟ್ರ್ಯಾಕಿಗೆ ಬರುತ್ತದೆ. ರಿಮೇಕ್ ಚಿತ್ರಗಳ ಹಾವಳಿಯ ನಡುವೆ ಒಂದು ಸಿಂಪಲ್ ಲವ್ ಸ್ಟೋರಿಯನ್ನು ಎಲ್ಲೂ ಬೋರು ಹೊಡೆಸದೇ, ಮೇಕಿಂಗ್ ನಲ್ಲಿ ಎಲ್ಲೂ ರಾಜಿಯಾಗದೆ ಶ್ರೀಮಂತವಾಗಿ ಚಿತ್ರತಂಡ ತೆರೆಗೆ ತಂದಿದೆ. ಡೋಂಟ್ ಮಿಸ್ ಇಟ್

English summary
Dhruv Sarja, Radhika Pandit in lead role Kannada movie Bahaddur review. Movie Directed by Chetan Kumar, Kanakapura Srinivas and Srikanth is the producer of this movie. V Harikrishna has composed the songs. A worth watching flick.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada