For Quick Alerts
  ALLOW NOTIFICATIONS  
  For Daily Alerts

  ಬಾಲ್ ಪೆನ್: ದೊಡ್ಡವರ ಕಣ್ಣುತೆರೆಸುವ ಮಕ್ಕಳ ಚಿತ್ರ

  By Rajendra
  |

  Rating:
  3.0/5
  ಪಕ್ಕಾ ಕಮರ್ಷಿಯಲ್ ಚಿತ್ರ 'ಐಪಿಸಿ ಸೆಕ್ಷನ್ 300' ಕೊಟ್ಟಂತಹ ನಿರ್ದೇಶಕ ಶಶಿಕಾಂತ್ ಅವರ ಚಿತ್ರವಿದು. ಆದರೂ ಇಲ್ಲೆಲ್ಲೂ ಕಮರ್ಷಿಯಲ್ ಅಂಶಗಳ ನೆರಳಿಲ್ಲ. ಸಿದ್ಧಸೂತ್ರಗಳ ಜಾಡಿಲ್ಲ. ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಚಿತ್ರ ಮಾಡಿದ್ದರೂ ದೊಡ್ಡವರ ಕಣ್ಣೂ ತೆರೆಸುತ್ತದೆ.

  ಚಿತ್ರದಲ್ಲೊಂದು ಮನಸ್ಸಿಗೆ ನಾಟುವಂತಹ ಕಥಾ ಹಂದರವಿದೆ (ಕಥೆ ಕೆ.ಸಿ. ಮಂಜುನಾಥ್). ಕಿವಿಗೆ ಇಂಪಾದ ಹಾಡುಗಳಿವೆ. ದೊಡ್ಡವರ ಕಣ್ಣುತೆರೆಸುವ ಪುಟ್ಟ ಮಕ್ಕಳ ಸಾಹಸಗಾಥೆ ಇದೆ. ಇವೆಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಶಶಿಕಾಂತ್. ಅವರು ಕಮರ್ಷಿಯಲ್ ಚಿತ್ರದಿಂದ ಮಕ್ಕಳ ಚಿತ್ರಕ್ಕೆ ಹೊರಳಿರುವ ಪರಿ ಅಚ್ಚರಿ ಮೂಡಿಸುತ್ತದೆ.

  ಅದೊಂದು ಅನಾಥಾಶ್ರಮ. ಅಲ್ಲಿನ ಮಕ್ಕಳಿಗೆ ಅನಾಥಪ್ರಜ್ಞೆ ಕಾಡದಂತೆ ತನ್ನ ಮಕ್ಕಳಂತೆಯೇ ಬೆಳೆಸುತ್ತಿರುತ್ತಾರೆ ವಾರ್ಡನ್ ಶ್ರೀನಿವಾಸಯ್ಯ (ಸುಚೇಂದ್ರ ಪ್ರಸಾದ್). ಕೇಶವ, ಕೆಂಪ ಹಾಗೂ ಬಾಲಾ ಈ ಮೂವರು ಹುಡುಗರ ಸುತ್ತ ಕಥೆ ಸುತ್ತುತ್ತದೆ.

  ಕೇಶವನಿಗೆ ದಿನ ಪತ್ರಿಕೆಗಳನ್ನು ಓದುವುದರಲ್ಲಿ ಎಲ್ಲಿಲ್ಲದ ಆಸಕ್ತಿ. ಅನಾಥಾಶ್ರಮಕ್ಕೆ ಮುಂಜಾನೆ ಬರುವ ವರ್ತಮಾನ ಪತ್ರಿಕೆ ಓದಿದರೇನೇ ಕೇಶವನಿಗೆ ಸಮಾಧಾನ. ಇದು ಶ್ರೀನಿವಾಸಯ್ಯನಿಗೂ ಗೊತ್ತಿರುತ್ತದೆ. ಪೇಪರ್ ಬಾಯ್ ಕೆಲಸಕ್ಕೆ ಸೇರಿಕೊಂಡರೆ ಎಲ್ಲಾ ಪತ್ರಿಕೆಗಳನ್ನು ಓದಬಹುದಲ್ವಾ? ಎಂದು ಕೇಶವ ಯೋಚಿಸುತ್ತಾನೆ.

  ಇದಕ್ಕಾಗಿಯೇ ಆತ ವಾರ್ಡನ್ ಅನುಮತಿ ಕೇಳುತ್ತಾನೆ. 'ಓದಿನ ಕಡೆಗೆ ನಿನ್ನ ಗಮನಕೊಡು. ಕೆಲಸ ಮಾಡುವ ಆಲೋಚನೆ ಬಿಟ್ಟುಬಿಡು' ಎಂದು ವಾರ್ಡನ್ ಬುದ್ಧಿ ಹೇಳಿ ಕಳುಹಿಸುತ್ತಾರೆ. ಆದರೆ ಕೇಶವ ಕೇಳಬೇಕಲ್ಲ! ವಾರ್ಡನ್ ಕಣ್ಣು ತಪ್ಪಿಸಿ ತನ್ನ ಗೆಳೆಯರಾದ ಕೆಂಪ ಮತ್ತು ಬಾಲಾ ಜೊತೆ ಸೇರಿಕೊಂಡು ಪತ್ರಿಕೆ ಹಂಚುವ ಕೆಲಸಕ್ಕೆ ಸೇರುತ್ತಾನೆ.

  ಸರ್ಕಾರಿ ಕಚೇರಿಗಳಿಗೆ ಪತ್ರಿಕೆ ಹಾಕುವುದು ಇವರ ಡ್ಯೂಟಿ. ಪತ್ರಿಕೆ ಹಂಚುವ ಕೇಶವ ಗೃಹಮಂತ್ರಿಗಳ ಕಚೇರಿಗೆ ಪತ್ರಿಕೆ ಹಾಕುತ್ತಿರುತ್ತಾನೆ. ಕಚೇರಿ ಮುಂದೆ ರಾಶಿ ರಾಶಿ ಪತ್ರಗಳು. ಇವುಗಳಲ್ಲಿ ಏನಿರುತ್ತದೆ ಎಂಬ ಸಣ್ಣ ಕುತೂಹಲ ಕೇಶವನದು. ಪತ್ರಗಳನ್ನು ಕದ್ದು ಓದುತ್ತಾನೆ. ರಾಜ್ಯದ ನಾನಾ ಮೂಲಗಳಿಂದ ಬಂದಂತಹ ಜನರ ನೋವು, ಸಂಕಟಗಳ ಸರಮಾಲೆಯೇ ಅವನ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತದೆ.

  ಈ ಪತ್ರಗಳೆಲ್ಲಾ ಕಸದಬುಟ್ಟಿಗೆ ಸೇರುತ್ತಿರುವುದೂ ಅವನ ಗಮನಕ್ಕೆ ಬರುತ್ತದೆ. ಒಂದು ದಿನ ಅವನ ಕಣ್ಣಿಗೆ ಒಂದು ಅನಾಥ ಪತ್ರ ಸಿಗುತ್ತದೆ. ಆ ಪತ್ರದಲ್ಲಿನ ಕರುಣಾಜನಕ ಕಥೆ ಓದಿ ತನ್ನ ಗೆಳೆಯರೊಂದಿಗೆ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಹ್ಯಾಟೀ ಮಂದರಗಿ ಎಂಬ ಹಳ್ಳಿಗೆ ಹೋಗುತ್ತಾನೆ.

  ಅಲ್ಲೇನು ನಡೆಯುತ್ತದೆ? ಇಷ್ಟಕ್ಕೂ ಆ ಪತ್ರದಲ್ಲೇನಿತ್ತು? ಎಂಬುದು ಗೊತ್ತಾಗಬೇಕಾದರೆ ಖಂಡಿತ ನೀವು ಚಿತ್ರವನ್ನು ಒಮ್ಮೆ ನೋಡಲೇಬೇಕು! ಈ ಕುತೂಹಲವನ್ನು ಕಾಯ್ದಿಟ್ಟುಕೊಳ್ಳುವಲ್ಲಿ ಹಾಗೂ ಪ್ರೇಕ್ಷಕರನ್ನು ಸೀಟಿಗೆ ಅಂಟಿ ಕುಳಿತುಕೊಳ್ಳುವಂತೆ ಮಾಡುವಲ್ಲಿ ಶಶಿಕಾಂತ್ ಗೆದ್ದಿದ್ದಾರೆ.

  ಚಿತ್ರಕಥೆಯಲ್ಲಿ ವೇಗವಿದೆ. ಮಕ್ಕಳಿಂದ ಮುದುಕರವೆರೆಗೆ ಆಪ್ತವೆನಿಸುವ ಹಾಡುಗಳಿವೆ. ಸಿ.ಜೆ. ರಾಜ್ ಕುಮಾರ್ ಅವರ ಛಾಯಾಗ್ರಹಣವಂತೂ ಸೊಗಸಾಗಿದೆ. ಮಣಿಕಾಂತ್ ಕದ್ರಿ ಅವರ ಸಂಗೀತ ಚಿತ್ರಕಥೆ ಜೊತೆಗೆ ಹಾಲು ನೀರಿನಂತೆ ಬೆರೆತು ಹೋಗಿದೆ. ಉದಯೋನ್ಮುಖ ಗಾಯಕ ಆದಿತ್ಯ ರಾವ್ ಅವರ ಕಂಠಸಿರಿಯಲ್ಲಿ ಹೊರಹೊಮ್ಮಿರುವ "ಸಾವಿರ ಕಿರಣವ ಚೆಲ್ಲಿ" ಹಾಡು ಚಿತ್ರದಲ್ಲಿ ಪ್ರಮುಖ ಹೈಲೈಟ್.

  ಚಿತ್ರದ ನಿರ್ಮಾಪಕರೂ ಆಗಿರುವ ಶ್ರೀನಗರ ಕಿಟ್ಟಿ ಅವರದು ಚಿತ್ರದಲ್ಲಿ ಹಾಗೆ ಬಂದು ಹೀಗೆ ಹೋಗುವ ಪಾತ್ರವಷ್ಟೆ. ಅಮಲುಖೋರ ಕುಡುಕ ತಂದೆಯಾಗಿ ಬಿ.ಎಸ್. ಮಲ್ಲಾಪುರ್ ಮಠ್ ಅವರ ಪಾತ್ರ ಗಮನಸೆಳೆಯುತ್ತದೆ.

  ಪುಟ್ಟ ಮಕ್ಕಳು ತಮಗೆ ಅರಿವಿಲ್ಲದೆ ಕೊಳವೆಬಾವಿಗೆ ಬಿದ್ದು ಪ್ರಾಣ ಕಳೆದುಕೊಳ್ಳುದ್ದಾರೆಯೇ? ಅಥವಾ ಇದರಲ್ಲಿ ಹೆತ್ತವರ ಕೈವಾಡವಿದೆಯೆ? ಈ ರೀತಿಯಾಗಿ ಮತ್ತೊಂದು ಕೋನದಲ್ಲಿ ಆಲೋಚಿಸುವಂತೆ 'ಬಾಲ್ ಪೆನ್' ಚಿತ್ರ ಮಾಡುತ್ತದೆ. ಹಾಗಾಗಿ ಚಿತ್ರಮಂದಿರದಿಂದ ಹೊರಬಂದಾಗಲೂ ಇದೇ ಪ್ರಶ್ನೆ ಕಾಡುತ್ತಿರುತ್ತದೆ.

  English summary
  Kannada film 'Ball Pen' review. Movie reveals a story about children, who go forward to solve an issue, that which has been neglected by YOU, the elderly people. A movie by Bhavana Belagere and Srinagara Kitty, directed by Shashikanth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X