For Quick Alerts
  ALLOW NOTIFICATIONS  
  For Daily Alerts

  'ಬರ್ಫಿ' ಚಿತ್ರ ವಿಮರ್ಶೆ: ತಿನ್ನಂಗಿಲ್ಲ ಉಗುಳಂಗಿಲ್ಲ

  By Rajendra
  |

  ಇದು ಒಂಥರಾ ಡಿಫರೆಂಟ್ ಲವ್ ಸ್ಟೋರಿ. ಇದನ್ನು ನಿರ್ದೇಶಕ ಶೇಖರ್ ಅವರು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರದಲ್ಲಿ ಒಂದಷ್ಟು ಸಸ್ಪೆನ್ಸ್, ರೊಮ್ಯಾನ್ಸ್, ತಿರುವುಗಳನ್ನು ಇಟ್ಟು ಕಡೆಗೆ ಒಂದು ಮಹತ್ತರ ಸಂದೇಶದ ಪಾಕವನ್ನು ಹದವಾಗಿ ಬೆರೆಸಿ ತಾಜಾ 'ಬರ್ಫಿ'ಯನ್ನೇ ಕೊಟ್ಟಿದ್ದಾರೆ.

  ಚಿತ್ರದಲ್ಲಿನ ಸಣ್ಣಪುಟ್ಟ ದೋಷಗಳನ್ನು ಹೊರತುಪಡಿಸಿದರೆ 'ಬರ್ಫಿ' ಚಿತ್ರ ಹಲವು ವಿಶೇಷಗಳಿಂದ ಕೂಡಿದೆ. ಚಿತ್ರದ ನಾಯಕಿ ಭಾಮಾ ಮುಖವನ್ನು ತೋರಿಸಲು ಶೇಖರ್ ಸಿಕ್ಕಾಪಟ್ಟೆ ಸತಾಯಿಸುತ್ತಾರೆ. ಆದರೆ ಅದಾಗಲೆ ಚಿತ್ರದ ಪೋಸ್ಟರ್ ಗಳಲ್ಲಿ ನಾಯಕಿ ಇವರೇ ಎಂದು ಗೊತ್ತಾಗಿದ್ದ ಕಾರಣ ಇಷ್ಟೆಲ್ಲಾ ಸಸ್ಪೆನ್ಸ್ ಬೇಕಾಗಿರಲಿಲ್ಲ ಅನ್ನಿಸುತ್ತದೆ. ಪಂಜಾಬ್ ಲೇಖಕ ರವಿಂದರ್ ಸಿಂಗ್ ಅವರು ಬರೆದಿರುವ "I Too Had a Love Story" ಕೃತಿಯ ನೆರಳು ಬರ್ಫಿ ಚಿತ್ರದಲ್ಲೂ ಕಾಣುತ್ತದೆ.

  ಈ ರೀತಿಯ ಸಣ್ಣ ಲೋಪದೋಷಗಳನ್ನು ಬಿಟ್ಟರೆ ನಿಜವಾಗಿಯೂ 'ಬರ್ಫಿ' ರುಚಿಯಾಗಿದೆ. ಚಿತ್ರದ ಹೀರೋ ಸಂತೋಷ್ (ದಿಗಂತ್) ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಸಿಇಓ ಆಗಬೇಕೆಂದೂ ಕನಸು ಕಾಣುತ್ತಿರುತ್ತಾನೆ. ಅದರ ಜೊತೆಗೆ ಬೇಗ ಮದುವೆ ಮಾಡಿಕೊಳ್ಳುವಂತೆ ತಂದೆ ತಾಯಿ ಬಲವಂತ, ಇನ್ನೊಂದು ಕಡೆ ಸ್ನೇಹಿತರ ಒತ್ತಾಯದ ಕಿರಿಕಿರಿಯನ್ನೂ ಅನುಭವಿಸುತ್ತಿರುತ್ತಾನೆ.

  Rating:
  3.0/5

  ಚಿತ್ರ : ಬರ್ಫಿ

  ನಿರ್ಮಾಪಕ : ಕೆಎಂ ಶಂಕರ್

  ಕಥೆ, ಚಿತ್ರಕಥೆ, ನಿರ್ದೇಶನ : ಶೇಖರ್

  ಛಾಯಾಗ್ರಹಣ : ಗುಂಡ್ಲುಪೇಟೆ ಸುರೇಶ್

  ಸಂಗೀತ: ಅರ್ಜುನ್ ಜನ್ಯ

  ಸಂಭಾಷಣೆ : ಬಿ.ಎ.ಮಧು

  ತಾರಾಬಳಗ : ದಿಗಂತ್, ಭಾಮಾ, ಸುಧಾ ಬೆಳವಾಡಿ, ಜೈಜಗದೀಶ್, ಹರೀಶ್ ರಾಜ್, ದಿಲೀಪ್ ರಾಜ್, ಸುಚೇಂದ್ರ ಪ್ರಸಾದ್, ಪವಿತ್ರಾ ಲೋಕೇಶ್, ಸಂಯುಕ್ತ ಬೆಳವಾಡಿ, ಇಂದ್ರಜಿತ್ ಲಂಕೇಶ್ ಮುಂತಾದವರು.

  ಸಾಹಸ: ರವಿವರ್ಮ

  ಸಂಕಲನ : ಕೆ.ಎಂ. ಪ್ರಕಾಶ್

  ನೃತ್ಯ ನಿರ್ದೇಶನ : ಹರ್ಷ ಮತ್ತ್ತು ಕಂಬಿರಾಜ್

  ಸಾಹಿತ್ಯ : ಜಯಂತ್ ಕಾಯ್ಕಿಣಿ, ಕವಿರಾಜ್, ಹೃದಯಶಿವ

  ಹುಡುಗಿ ಹುಡುಕಲು ಆನ್ ಲೈನ್ ಮೊರೆ

  ಹುಡುಗಿ ಹುಡುಕಲು ಆನ್ ಲೈನ್ ಮೊರೆ

  ಅರೇಂಜ್ಡ್ ಮದುವೇನಾ ಅಥವಾ ಲವ್ ಮ್ಯಾರೇಜ್ ಎಂಬ ಗೊಂದಲದಲ್ಲಿ ತನಗೆ ಬೇಕಾದ ಹುಡುಗಿಯನ್ನು ತಾನೆ ಹುಡುಕಿಕೊಳ್ಳಲು ಹೊರಡುತ್ತಾನೆ. ಸಂತೋಷ್ ವಧುವಿನ ಅನ್ವೇಷಣೆಗೆ ಆನ್ ಲೈನ್ ಸೈಟ್ ವಿವಾಹ್.ಕಾಮ್ ಗೆ ಮೊರೆ ಹೋಗುತ್ತಾನೆ. ಆರಂಭದಲ್ಲಿ ತನಗೆ ನಿರಾಸೆಯಾದರೂ ಕಡೆಗೆ ತನ್ನ ನೆಚ್ಚಿನ ಹುಡುಗಿ ಖುಷಿ (ಭಾಮಾ) ಸಿಗುತ್ತಾಳೆ.

  ಇಬ್ಬರ ರುಚಿ ಅಭಿರುಚಿ ಒಂದೇ ಆಗಿರುತ್ತದೆ

  ಇಬ್ಬರ ರುಚಿ ಅಭಿರುಚಿ ಒಂದೇ ಆಗಿರುತ್ತದೆ

  ಇಬ್ಬರ ರುಚಿ, ಅಭಿರುಚಿ, ಬಣ್ಣ, ಹವ್ಯಾಸ, ವಿದ್ಯಾರ್ಹತೆ ಹೀಗೆ ಎಲ್ಲವೂ ಮ್ಯಾಚ್ ಆಗುತ್ತವೆ. ಆದರೆ ಹುಡುಗಿ ಪಂಜಾಬ್ ನಲ್ಲಿರುತ್ತಾಳೆ. ಬಳಿಕ ಮಾತುಕತೆಯಲ್ಲಿ ಹುಡುಗಿ ಮೂಲ ತೀರ್ಥಹಳ್ಳಿ ಎಂದು ಗೊತ್ತಾಗುತ್ತದೆ. ಎಲ್ಲವೂ ಓಕೆ ಆಗಿ ಹುಡುಗಿಯನ್ನು ನೋಡಲು ಪಂಜಾಬ್ ಗೆ ಹೋಗುತ್ತಾನೆ.

  ಕಡೆಗೂ ಸಂತೋಷ್ ಗೆ ಮದುವೆಯಾಗುತ್ತದೆಯೇ?

  ಕಡೆಗೂ ಸಂತೋಷ್ ಗೆ ಮದುವೆಯಾಗುತ್ತದೆಯೇ?

  ಹುಡುಗಿ ತಂದೆ (ಸುಚೇಂದ್ರ ಪ್ರಸಾದ್) ಐಪಿಎಸ್ ಅಧಿಕಾರಿ. ಸುಖ ಕುಟುಂಬ. ಹುಡುಗನನ್ನು ಎಲ್ಲರಿಗೂ ಇಷ್ಟವಾಗುತ್ತಾನೆ. ಎರಡೂ ಮನೆಯವರಿಗೂ ಮದುವೆ ಒಪ್ಪಿಗೆಯಾಗುತ್ತದೆ. ಆದರೆ ಇಬ್ಬರಿಗೂ ಮದುವೆಯಾಗುತ್ತದೆಯೇ ಇಲ್ಲವೇ ಎಂಬುದೇ ಚಿತ್ರದಲ್ಲಿನ ಸಸ್ಪೆನ್ಸ್. ಇದನ್ನು ನೀವು ಖಂಡಿತ ಚಿತ್ರಮಂದಿರದಲ್ಲೇ ನೋಡಬೇಕು.

  ಪ್ರೇಕ್ಷಕರನ್ನು ಸತಾಯಿಸುವ ಕಥೆ

  ಪ್ರೇಕ್ಷಕರನ್ನು ಸತಾಯಿಸುವ ಕಥೆ

  ಚಿತ್ರದ ಮೊದಲರ್ಧದಲ್ಲಿ ನಿರ್ದೇಶಕರು ಕಥೆಗೆ ಸ್ಪೀಡ್ ಬ್ರೇಕರ್ ಅಳವಡಿಸಿಬಿಟ್ಟಿದ್ದಾರೆ. ನಿಧಾನಗತಿಯಲ್ಲಿ ಸಾಗುವ ಕಥೆ ಪ್ರೇಕ್ಷಕರನ್ನು ಸತಾಯಿಸುತ್ತದೆ. ಬಿ.ಎ.ಮಧು ಅವರ ಸಂಭಾಷಣೆಯಲ್ಲಿ ಹೊಸತನ ಇಲ್ಲದಿದ್ದರೂ ತಾಜಾತನ ಇದೆ. ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣ ಹಿತವಾಗಿದೆ. ವಾಘಾ ಬಾರ್ಡರ್‌ ಪರೇಡ್‌, ಅಮೃತಸರದ ಗೋಲ್ಡನ್ ಟೆಂಪಲ್ ಮತ್ತು ಕಾಸರಗೋಡು ಸಮೀಪದ ಸಮುದ್ರ ತೀರವನ್ನು ಸೆರೆಹಿಡಿಯುವಲ್ಲಿ ಅವರ ಕ್ಯಾಮೆರಾ ಕಣ್ಣು ಕುಕ್ಕುತ್ತದೆ.

  ಅರ್ಜುನ್ ಜನ್ಯ ಸಂಗೀತ ಹೇಗಿದೆ?

  ಅರ್ಜುನ್ ಜನ್ಯ ಸಂಗೀತ ಹೇಗಿದೆ?

  ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಒಂದೆರಡು ಹಾಡುಗಳು ಮತ್ತೆ ಮತ್ತೆ ಗುನುಗುವಂತಿವೆ. ಕೈಲಾಶ್ ಖೇರ್ ಹಾಡಿರುವ ಕಾಗೆ ಕಣ್ಣು ಗೂಬೆ ಕಣ್ಣು ಹಾಡಿನ ಮೇಕಿಂಗ್ ಚೆನ್ನಾಗಿದೆ. ಕೆ.ಎಂ.ಪ್ರಕಾಶ್ ಅವರ ಸಂಕಲನ ಲೆಕ್ಕಾಚಾರ ತಪ್ಪಿಲ್ಲ.

  ದಿಗಂತ್ ಲವ್ಲಿ ಅಭಿನಯ, ಭಾಮಾ ಭಾವನಾತ್ಮಕ

  ದಿಗಂತ್ ಲವ್ಲಿ ಅಭಿನಯ, ಭಾಮಾ ಭಾವನಾತ್ಮಕ

  ಇನ್ನು ನಟನೆಯ ಪರವಾಗಿ ನೋಡಿದರೆ ದಿಗಂತ್ ಎಂದಿನಂತೆ ಲವ್ಲಿಯಾಗಿ ಅಭಿನಯಿಸಿದ್ದಾರೆ. ಎಲ್ಲಾ ಚಿತ್ರಗಳಲ್ಲಿರುವಂತೆ ಇಲ್ಲೂ ಅವರು ಚಾಕೋಲೇಟ್ ಬಾಯ್ ಗೆಟಪ್. ಕೆಲವು ಭಾವನಾತ್ಮಕ ಸನ್ನಿವೇಶಗಳಲ್ಲಿ ಭಾಮಾ ಅವರ ಅಭಿನಯವೂ ಮನಮಿಡಿಯುವಂತಿದೆ. ಉಳಿದಂತೆ ಸೀದಾ ಸಾದಾ ಅಭಿನಯ.

  ಸರ್ದಾಜಿಯಾಗಿ ದಿಲೀಪ್ ರಾಜ್ ಕಚಗುಳಿ

  ಸರ್ದಾಜಿಯಾಗಿ ದಿಲೀಪ್ ರಾಜ್ ಕಚಗುಳಿ

  ಚಿತ್ರದಲ್ಲಿ ಗಮನಸೆಳೆಯುವ ಉಳಿದ ಪಾತ್ರಗಳೆಂದರೆ ದಿಲೀಪ್ ರಾಜ್ ಅವರದು. ಪಂಜಾಬಿ ಸರ್ದಾಜಿಯಾಗಿ ಅವರು ಪ್ರೇಕ್ಷಕರಿಗೆ ಕಚಗುಳಿ ಇಡುತ್ತಾರೆ. ಇನ್ನು ಸುಚೇಂದ್ರ ಪ್ರಸಾದ್ ಹಾಗೂ ಪವಿತ್ರಾ ಲೋಕೇಶ್ ಅವರು ತೆರೆಯ ಮೇಲೂ ಗಂಡ ಹೆಂಡತಿ. ಕೆಲವು ಸನ್ನಿವೇಶಗಳಲ್ಲಿ ವಿಲನ್ ನಂತೆ ಮನಸ್ಸಿಗೆ ಅನ್ನಿಸುತ್ತಿದ್ದರೂ ಕಡೆಗೂ ಅವರು ಕರುಣಾಮಯಿಯಾಗಿ ಪ್ರೇಕ್ಷಕರ ಹೃದಯ ಗೆಲ್ಲುತ್ತಾರೆ.

  ಚಿತ್ರದಲ್ಲಿ ಯಾರ ಪಾತ್ರ ಹೇಗಿದೆ

  ಚಿತ್ರದಲ್ಲಿ ಯಾರ ಪಾತ್ರ ಹೇಗಿದೆ

  ಸುಧಾ ಬೆಳವಾಡಿ, ಜೈಜಗದೀಶ್, ಹರೀಶ್ ರಾಜ್, ಕುರಿ ಪ್ರತಾಪ್ ಪಾತ್ರಗಳು ಸಂದರ್ಭೋಚಿತವಾಗಿವೆ. ಚಿತ್ರದಲ್ಲಿನ ಇನ್ನೆರಡು ಗಮನಾರ್ಹ ಪಾತ್ರಗಳೆಂದರೆ ಇಂದ್ರಜಿತ್ ಲಂಕೇಶ್ ಹಾಗೂ ಸಂಯುಕ್ತ ಬೆಳವಾಡಿ. ಕಂಪನಿಯ ಬಾಸ್ ಆಗಿ ಇಂದ್ರಜಿತ್ ಕಾಣಿಸಿಕೊಂಡಿದ್ದಾರೆ. ಸಂಯುಕ್ತ ಬೆಳವಾಡಿಗೆ ಅತ್ತ ಎರಡನೇ ನಾಯಕಿಯೂ ಅಲ್ಲದ ಇತ್ತ ಪ್ರಮುಖ ಪಾತ್ರವೂ ಅಲ್ಲದ ಹತ್ತರಲ್ಲಿ ಹನ್ನೊಂದು ಎಂಬಂತಾಗಿದೆ.

  ಕೊನೆಗೆ ಯೋಚನೆಗೆ ಹಚ್ಚುವ 'ಬರ್ಫಿ'

  ಕೊನೆಗೆ ಯೋಚನೆಗೆ ಹಚ್ಚುವ 'ಬರ್ಫಿ'

  ಭಯೋತ್ಪಾದನೆಗೆ ಕೇವಲ ಜನಸಾಮಾನ್ಯರಷ್ಟೇ ಅಲ್ಲ ಪ್ರೇಮಿಗಳು ಬಲಿಯಾಗುತ್ತಿದ್ದಾರೆ. ಅಂತಹ ಭಯೋತ್ಪಾದಕರಿಗೆ ಧಿಕ್ಕಾರ ಧಿಕ್ಕಾರ ಎಂಬುದು ಚಿತ್ರದ ಮೆಸೇಜ್. ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕರು ಸಿಕ್ಕಿಬೀಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ 'ಬರ್ಫಿ' ಚಿತ್ರ ಯೋಚನೆಗೆ ಹಚ್ಚುತ್ತದೆ. ಅಷ್ಟರ ಮಟ್ಟಿಗೆ ಶೇಖರ್ ಅವರ ಪ್ರಯತ್ನ ಫಲಿಸಿದೆ.

  ಕಡೆಗೂ ಕಾಡುವ ಪ್ರಶ್ನೆ...

  ಕಡೆಗೂ ಕಾಡುವ ಪ್ರಶ್ನೆ...

  ಎಲ್ಲಾ ಓಕೆ ಅನ್ನಿಸಿದರೂ ಇನ್ನೊಂದು ಪ್ರಶ್ನೆ ಕಾಡುತ್ತದೆ. ಚಿತ್ರದ ಶೀರ್ಷಿಕೆ ಬರ್ಫಿ ಎಂದಿಟ್ಟಿದ್ದರೂ ಚಿತ್ರದ ಒಂದು ಸನ್ನಿವೇಶದಲ್ಲಿ ಕಾಣಿಸುವುದು ಕಳ್ಳೇಬೀಜ, ಬೆಲ್ಲ ಹಾಕಿ ತಯಾರಿಸಿದ ಸಿಹಿಖಾದ್ಯ ಚಿಕ್ಕಿ. ಇದೊಂದು ಪ್ರೇಮಕಾವ್ಯ ಎಂಬ ಕಾರಣಕ್ಕೋ ಏನೋ 'ಬರ್ಫಿ' ಎಂದು ಹೆಸರಿಟ್ಟಿದ್ದಾರೆ. ಆದರೆ ಪೋಸ್ಟರ್ ಗಳಲ್ಲಿ ಚಿಕ್ಕಿ ತೋರಿಸಿ ಪ್ರೇಕ್ಷಕರಿಗೆ ಗೊಂದಲ ಮೂಡುತ್ತದೆ.

  English summary
  Read Kannada film Barfi review. It's a truly delightful film. The romantic comedy film written and directed by Shekar. It stars Diganth and Bhama in the lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X