»   » ದರ್ಶನ್, ಅಂಬಿ ಜೋಡಿಯ ಬುಲ್ ಬುಲ್ ವಿಮರ್ಶೆ

ದರ್ಶನ್, ಅಂಬಿ ಜೋಡಿಯ ಬುಲ್ ಬುಲ್ ವಿಮರ್ಶೆ

Posted By:
Subscribe to Filmibeat Kannada

ಎಲ್ಲ ವರ್ಗದ ಪ್ರೇಕ್ಷಕರನ್ನು ಉದ್ದೇಶದಲ್ಲಿಟ್ಟುಕೊಂಡು ಹೆಣೆದ ಚಿತ್ರ ಇದು. ಚಿತ್ರದಲ್ಲಿ ಕಾಮಿಡಿ ಇದೆ, ಭರ್ಜರಿ ಫೈಟ್ಸ್ ಇವೆ. ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಸಹ ಇದೆ. ತಂದೆ-ಮಗನ ಅನುಬಂಧವಿದೆ. ಹೆಂಗೆಳೆಯರ ಕರುಳು ಚಿವುಟುವಷ್ಟರಲ್ಲದಿದ್ದರೂ ಕಣ್ಣಂಚಲಿ ಎರಡು ಹನಿ ನೀರು ಬರಿಸುವ ಸನ್ನಿವೇಶಗಳು ಇವೆ.

'ಬುಲ್ ಬುಲ್' ತೆಲುಗಿನ 'ಡಾರ್ಲಿಂಗ್' ಚಿತ್ರದ ರೀಮೇಕ್ ಆದರೂ ತನ್ನದೇ ಶೈಲಿಯಲ್ಲಿ ಪ್ರೇಕ್ಷಕರಿಗೆ ಹತ್ತಿರವಾಗುತ್ತದೆ. ತೆಲುಗಿನಲ್ಲಿ ಫ್ಯಾಕ್ಷನ್ ಚಿತ್ರಗಳು ಅತಿ ಅನ್ನಿಸಿದಾಗ ಆ ಏಕತಾನತೆಗೆ ಬ್ರೇಕ್ ಹಾಕಲು ಹಲವು ಚಿತ್ರಗಳು ಬಂದವು. ಆ ಚಿತ್ರಗಳ ಸಾಲಿಗೆ ಡಾರ್ಲಿಂಗ್ ಚಿತ್ರವೂ ಸೇರುತ್ತದೆ.

ಕಥೆ ಬಗ್ಗೆ ಇಲ್ಲಿ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ. ಒಂದೆರಡು ಸಾಲಿನಲ್ಲಿ ಹೇಳಲೇಬೇಕೆಂದರೆ, ಇದೊಂದು ಅಪ್ಪಟ ಕೌಟುಂಬಿಕ ಚಿತ್ರ. ಹಾಗಂತ ತೀರಾ 'ಯಜಮಾನ' ಚಿತ್ರಕ್ಕೆ ಹೋಲಿಸುವಂತಿಲ್ಲ. ಮಾಸ್, ಕ್ಲಾಸ್, ಕಾಮಿಡಿ, ಸೆಂಟಿಮೆಂಟ್ ಎಲ್ಲ ಮಸಾಲೆಗಳನ್ನು ಸಮನಾಗಿ ಅರೆದು ಸಿದ್ಧಪಡಿಸಿರುವ ಮಸ್ಸೊಪ್ಪು ಸಾರು.

ಚಿತ್ರ: ಬುಲ್ ಬುಲ್
ನಿರ್ಮಾಪಕಿ: ಮೀನ ತೂಗುದೀಪ ಶ್ರೀನಿವಾಸ್
ಸಹ ನಿರ್ಮಾಪಕ : ದಿನಕರ್ ಎಸ್
ನಿರ್ದೇಶಕ: ಎಂ ಡಿ ಶ್ರೀಧರ್
ಸಂಗೀತ ನಿರ್ದೇಶನ: ವಿ ಹರಿಕೃಷ್ಣ
ಛಾಯಾಗ್ರಾಹಕ: ಎ ವಿ ಕೃಷ್ಣಕುಮಾರ್
ಸಾಹಿತ್ಯ ಮತ್ತು ಸಂಭಾಷಣೆ: ಕವಿರಾಜ್
ಸಂಕಲನ: ಸೌಂದರ್ ರಾಜ್
ಸಾಹಸ ನಿರ್ದೇಶನ : ರವಿವರ್ಮ
ಕಲಾ ನಿರ್ದೇಶನ : ಈಶ್ವರಿ ಕುಮಾರ್
ನೃತ್ಯ ನಿರ್ದೇಶಕ : ಹರ್ಷ
ವಸ್ತ್ರಾಲಂಕಾರ: ಶಾಂತಾರಾಮ್
ಪಾತ್ರವರ್ಗ: ದರ್ಶನ್, ರಚಿತಾ ರಾವ್, ಅಂಬರೀಶ್, ಟೆನ್ನಿಸ್ ಕೃಷ್ಣ, ಶರತ್ ಲೋಹಿತಾಶ್ವ, ಅಶೋಕ್, ರಮೇಶ್ ಭಟ್, ಶರಣ್, ಸ್ಫೂರ್ತಿ ಸುರೇಶ್ ಮುಂತಾದವರು.

ಬುಲ್ ಬುಲ್ ಕಥೆ ಏನಪ್ಪಾ ಅಂದ್ರೆ

ಹಳೆಯ ಗೆಳೆಯರೆಲ್ಲಾ ಹತ್ತು ವರ್ಷಗಳ ಬಳಿಕ ಒಂದೆಡೆ ಕಲೆತು ಕಷ್ಟಸುಖ ಹಂಚಿಕೊಳ್ಳಲು ಬಯಸುತ್ತಾರೆ. ಸ್ವಿಟ್ಜರ್ ಲ್ಯಾಂಡ್ ನಲ್ಲಿ ಸೆಟ್ಲ್ ಆದ ತನ್ನ ಗೆಳೆಯನ (ಅಶೋಕ್) ಮಗಳು ಕಾವೇರಿಯನ್ನು (ರಚಿತಾ ರಾಮ್) ಮತ್ತೊಬ್ಬ ಗೆಳೆಯನ (ಅಂಬರೀಶ್) ಮಗ ವಿಜಯ್ (ದರ್ಶನ್) ಪ್ರೀತಿಸುತ್ತಿರುತ್ತಾನೆ.

ಕುತೂಹಲ ತ್ರಿಕೋನ ಪ್ರೇಮಕಥೆ

ಆದರೆ ಇತ್ತ ವಿಜಯ್ ಹಿಂದೆ ಮತ್ತೊಬ್ಬ ಗೆಳತಿ (ರಮ್ಯಾ ಬಾರ್ನಾ) ಬಿದ್ದಿರುತ್ತಾಳೆ. ಆಕೆಯ ಪ್ರೇಮ ನಿವೇದನೆಯನ್ನು ಒಲ್ಲೆ ಎಂದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿರುತ್ತಾಳೆ. ಅವರ ತಂದೆ ದೊಡ್ಡ ಡಾನ್. ತನ್ನ ಮಗಳನ್ನು ಮದುವೆಯಾಗು ಎಂದು ಬೆದರಿಕೆ ಹಾಕುತ್ತಾನೆ. ವಿಜಯ್ ಏನೇನೋ ಹೇಳಿ ಎಸ್ಕೇಪ್ ಆಗುತ್ತಾನೆ. ಹಲವಾರು ತಿರುವುಮುರುವುಗಳ ಬಳಿಕ ಈ ತ್ರಿಕೋನ ಪ್ರೇಮಕಥೆ ಏನಾಗುತ್ತದೆ ಎಂಬ ಕುತೂಹಲದಲ್ಲಿ ಕಥೆ ಸಾಗುತ್ತದೆ.

ಮಧ್ಯಂತರದಲ್ಲಿ ಹೊಸ ತಿರುವು ಪಡೆಯುವ ಕಥೆ

ಚಿತ್ರದ ಮೊದಲರ್ಧದಲ್ಲಿ ವೇಗ ಇಲ್ಲ ಅನ್ನಿಸಿದರೂ ಮಧ್ಯಂತರದ ಸಮಯಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತದೆ. ದ್ವಿತೀಯಾರ್ಧದಲ್ಲಿ ಕಥೆ ಆಸಕ್ತಿಭರಿತವಾಗಿ ಸಾಗುತ್ತದೆ. ಅಪ್ಪ ಮಗನ ಸೆಂಟಿಮೆಂಟ್, ಒಂದಷ್ಟು ನಾಟಕೀಯ ಬೆಳವಣಿಗೆಗಳು, ಗೆಳೆಯರ ಕಾಮಿಡಿ ಸನ್ನಿವೇಶಗಳಿಂದ ಚಿತ್ರ ಪ್ರೇಕ್ಷಕನನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.

ಲವರ್ ಬಾಯ್ ಪಾತ್ರದಲ್ಲಿ ದರ್ಶನ್ ಮಿಂಚಿಂಗ್

'ಡಾರ್ಲಿಂಗ್' ಚಿತ್ರ ನೋಡದವರಿಗೆ 'ಬುಲ್ ಬುಲ್' ಹೊಸ ಅನುಭವ ನೀಡುತ್ತದೆ. ಮಾಸ್ ಹೀರೋ ಅನ್ನಿಸಿಕೊಂಡಿದ್ದ ದರ್ಶನ್ ಇಲ್ಲಿ ಲವರ್ ಬಾಯ್ ಪಾತ್ರದಲ್ಲಿ ಮಿಂಚಿದ್ದಾರೆ. ಕಾಮಿಡಿ ಸನ್ನಿವೇಶಗಳನ್ನೂ ಚೆನ್ನಾಗಿ ನಿಭಾಯಿಸಿದ್ದಾರೆ.

ಅಂಬಿ ಇಲ್ಲಿ ಮಗನಿಗೆ ತಕ್ಕ ತಂದೆ

ಕೆಂಡದಂತಹ ಕಣ್ಣುಗಳು, ದಪ್ಪದಪ್ಪನೆಯ ಕೆನ್ನೆಗಳು, ದಢೂತಿ ದೇಹದ ರೆಬೆಲ್ ಸ್ಟಾರ್ ಅಂಬರೀಶ್ ಇಲ್ಲಿ ಮಗನಿಗೆ ತಕ್ಕ ತಂದೆ. ದರ್ಶನ್ ಸಹ ಅಷ್ಟೇ ತಂದೆಗೆ ತಕ್ಕ ಮಗ. ಇಬ್ಬರೂ ಒಂಥರಾ ಕುಚಿಕು ಕುಚಿಕು. ಅಲ್ಲಲ್ಲಿ ಡೈಲಾಗ್ ಗಳು ಮಂಡ್ಯ ಪ್ರಜೆಗಳ ಶಿಳ್ಳೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿವೆ.

ಅಭಿನಯದಲ್ಲಿ ರಚಿತಾ ರಾಮ್ ಅಪ್ಪಾಲೆ ತಿಪ್ಪಾಲೆ

ಇನ್ನು ರಚಿತಾ ರಾಮ್ ಅವರು ನೋಡಲು ಚೂರ್ ಚೆಂಡಿನಂತಿದ್ದರೂ ಅಭಿನಯದಲ್ಲಿ ಅಪ್ಪಾಲೆ ತಿಪ್ಪಾಲೆ. ಕಥಕ್ ನೃತ್ಯಪಟುವಾದರೂ ಅವರನ್ನು ಇಲ್ಲಿ ಸಮರ್ಥವಾಗಿ ಬಳಸಿಕೊಂಡಿಲ್ಲ. ಆದರೂ ಒಂಚೂರು ಭರವಸೆ ಮೂಡಿಸಿದ್ದಾರೆ.

ಎಂಡಿ ಶ್ರೀಧರ್ ನಿರ್ದೇಶನ ಓಕೆ

ಎಂಡಿ ಶ್ರೀಧರ್ ಅವರು ಈಗಾಗಲೆ 'ಪೊರ್ಕಿ' ರೀಮೇಕ್ ಚಿತ್ರವನ್ನು ದರ್ಶನ್ ಜೊತೆ ಮಾಡಿದ್ದಾರೆ. ಬುಲ್ ಬುಲ್ ಚಿತ್ರವನ್ನು ಅಷ್ಟೇ ಸರಾಗವಾಗಿ ತೆರೆಗೆ ತಂದಿದ್ದಾರೆ. ಚಿತ್ರದಲ್ಲಿ ಛಾಯಾಗ್ರಾಹಣಕ್ಕೆ ಹೆಚ್ಚು ಒತ್ತು, ಸವಾಲುಗಳು ಇಲ್ಲದಿದ್ದರೂ ಎ ವಿ ಕೃಷ್ಣಕುಮಾರ್ ಛಾಯಾಗ್ರಹಣ ಗಮನಸೆಳೆಯುತ್ತದೆ.

ಕವಿರಾಜ್ ಸಾಹಿತ್ಯ, ಸಂಭಾಷಣೆ

ಇನ್ನು ವಿ ಹರಿಕೃಷ್ಣ ಸಂಗೀತದ ಎರಡು ಹಾಡುಗಳ ಚಿತ್ರೀಕರಣ ಹಾಗೂ ಮೇಕಿಂಗ್ ಚೆನ್ನಾಗಿದೆ. ಉಳಿದಂತೆ ಸಂಗೀತ ಹಾಗೂ ಸಾಹಿತ್ಯ ಎರಡು ನೆನಪಿನಲ್ಲಿ ಉಳಿಯಲ್ಲ. ಅಲ್ಲಲ್ಲಿ ಸಂಭಾಷಣೆ ಶಿಳ್ಳೆ ಗಿಟ್ಟಿಸುವಂತಿದೆ. ಸಾಹಿತ್ಯ ಸಂಭಾಷಣೆ ಎರಡನ್ನೂ ನಿಭಾಯಿಸಿರುವ ಕವಿರಾಜ್ ಅವರಿಗೆ ಎರಡಕ್ಕೂ ಸಂಪೂರ್ಣ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ.

ಒಮ್ಮೆ ನೋಡಬಹುದಾದ ಚಿತ್ರ

ರವಿವರ್ಮ ಅವರ ಭರ್ಜರಿ ಫೈಟ್ಸ್ ಮಾಸ್ ಪ್ರೇಕ್ಷಕರಿಗೆ ಟ್ವೆಂಟಿ ಟ್ವೆಂಟಿ ಮ್ಯಾಚ್ ನೋಡಿದ ಅನುಭವ ನೀಡುತ್ತವೆ. ದರ್ಶನ್ ಅವರು ಅಂತಹ ಡಾನ್ಸರ್ ಅಲ್ಲದಿದ್ದರೂ ಹೇಗೋ ಮ್ಯಾನೇಜ್ ಮಾಡುವಲ್ಲಿ ಹರ್ಷ ಅವರ ನೃತ್ಯ ನಿರ್ದೇಶನ ಸಹಕರಿಸಿದೆ. ಶಾಂತಾರಾಮ್ ಅವರ ವಸ್ತ್ರಾಲಂಕಾರವೂ ಗಮನಸೆಳೆಯುತ್ತದೆ. ಡಾರ್ಲಿಂಗ್ ಚಿತ್ರವನ್ನು ನೋಡದವರು, ನೋಡಿರುವವರು ಬುಲ್ ಬುಲ್ ಚಿತ್ರವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.

English summary
Kannada film Bulbul review. The film directed by M. D. Shridhar. Bulbul is the remake of Telugu film Darling. Bulbul is a complete family entertainer with all the mass elements. It is treat for Darshan's fans.
Please Wait while comments are loading...