»   » ಎಲೆಕ್ಷನ್ ಚಿತ್ರ ವಿಮರ್ಶೆ: ಸರ್ವಂ ಮಾಲಾಶ್ರೀ ಮಯಂ

ಎಲೆಕ್ಷನ್ ಚಿತ್ರ ವಿಮರ್ಶೆ: ಸರ್ವಂ ಮಾಲಾಶ್ರೀ ಮಯಂ

By: ಉದಯರವಿ
Subscribe to Filmibeat Kannada

ನಾನು ಇಂದಿರಾ ಆದರೆ ಗಾಂಧಿ ಅಲ್ಲ ಎಂದು ಅಬ್ಬರಿಸುತ್ತಾರೆ ಮಾಲಾಶ್ರೀ. ಅಡ್ಡ ಬಂದವರನ್ನು ಅಡ್ಡಡ್ಡ ಸೀಳಿ ಬಿಡುತ್ತಾರೆ. ಜಾಸ್ತಿ ಬಾಲ ಬಿಚ್ಚಿದರೆ ಅವರು ಮಾತನಾಡಲ್ಲ ಬದಲಾಗಿ ಗನ್ ಬಾಯ್ಬಿಡುತ್ತದೆ. ರಾಜಕಾರಣಿಗಳನ್ನು ಅಟ್ಟಾಡಿಸಿ ಹೊಡೆಯುತ್ತಾರೆ. ಸಿಕ್ಕಸಿಕ್ಕ ಕಡೆ ಲಾಠಿ ಚಾರ್ಜ್ ಮಾಡುತ್ತಾರೆ. ಆಗಾಗ ಗನ್ ಕೈಗೆತ್ತಿಕೊಳ್ಳುತ್ತಾರೆ.

ಇವರೇನಾದರೂ ಪೊಲೀಸ್ ಕಮಿಷನರಾ ಅಥವಾ ಎಲೆಕ್ಷನ್ ಕಮಿಷನರಾ ಎಂಬ ಸಂದೇಹ ಬಾರದೆ ಇರದು. ಆಕ್ಷನ್ ಪ್ರಿಯರಿಗೆ ಮಾಲಾಶ್ರೀ ಹೆಜ್ಜೆಹೆಜ್ಜೆಗೂ ಖಂಡಿತ ನಿರಾಸೆಪಡಿಸುವುದಿಲ್ಲ. ಅಷ್ಟರ ಮಟ್ಟಿಗೆ ಓಂ ಪ್ರಕಾಶ್ ರಾವ್ ಅವರು ಏಕತಾನತೆಯನ್ನು ಕಾಪಾಡಿಕೊಂಡಿದ್ದಾರೆ.


ಚಿತ್ರದಲ್ಲಿ ಐದು ರಾಜಕೀಯ ಪಕ್ಷಗಳನ್ನೂ ಬೇರೆಬೇರೆ ಹೆಸರು, ಚಿಹ್ನೆಗಳ ಮೂಲಕ ತೋರಿಸಿದ್ದರೂ ಪ್ರೇಕ್ಷಕನಿಗೆ ಅದು ಇದೇ ಪಕ್ಷ ಎಂದು ನೀರು ಕುಡಿದಷ್ಟೇ ಸಲೀಸಾಗಿ ಗೊತ್ತಾಗುತ್ತದೆ. ಚುನಾವಣೆ ಘೋಷಣೆಯಾಗುತ್ತದೆ. ರಾಜಕೀಯ ಪಕ್ಷಗಳ ರಂಗಿನಾಟ ಶುರುವಾಗುತ್ತದೆ.

ಆಗ ಎಂಟ್ರಿ ಕೊಡುತ್ತಾರೆ ನೋಡಿ ಇಂದಿರೆ. ಒಂದು ಕಡೆ ರಾಜಕೀಯ ಪಕ್ಷಗಳ ರಂಗಿನಾಟ, ಇನ್ನೊಂದು ಕಡೆ ಇಂದಿರೆಯ ಚಂಡಾಟ ಶುರುವಾಗುತ್ತದೆ. ಇಂದಿರೆ ಎಂಟ್ರಿ ಕೊಡುತ್ತಿದ್ದಂತೆ ಚಿತ್ರಮಂದಿರವೇ ನಡುಗಿದಂತಾಗುತ್ತದೆ. ಅಲ್ಲಿಂದ ಆರಂಭವಾಗುವ ಅವರ ಡಿಶುಂ ಡಿಶುಂ ಅಬ್ಬರ ನೋಡುತ್ತಿದ್ದರೆ ಎಲ್ಲಿ ಪರದೆ ಹರಿದು ಬಿಡುತ್ತದೋ ಎಂಬ ಭಯವೂ ಆದರೆ ಅಚ್ಚರಿಯಿಲ್ಲ.

ಚಿತ್ರದಲ್ಲಿ ಕೆಲವು ರಾಜಕೀಯ ಪಕ್ಷಗಳು ಸಿನಿಮಾ ತಾರೆಗಳನ್ನು ಕಣಕ್ಕಿಳಿಸುತ್ತವೆ. ಬುಲೆಟ್ ಪ್ರಕಾಶ್ ಹಾಗೂ ಸಾಧು ಕೋಕಿಲ ಆ ಪಾತ್ರಗಳನ್ನು ಪೋಷಿಸಿದ್ದು ಚಿತ್ರ ಸ್ವಲ್ಪ ಕಾಮಿಡಿಗೂ ಹೊರಳುತ್ತದೆ. ಎಲ್ಲಿ ರಾಜಕಾರಣಿಗಳ ಅಟ್ಟಹಾಸ ಮಿತಿಮೀರುತ್ತದೋ ಅಲ್ಲೆಲ್ಲಾ ಮಾಲಾಶ್ರೀ ಪ್ರತ್ಯಕ್ಷ. ಕಬಡ್ಡಿ ಆಟ ಶುರು.

ಹಂಸಲೇಖ ಅವರ ಸಂಗೀತ ಅಬ್ಬರದಲ್ಲೇ ಕಳೆದುಹೋಗಿದೆ. ಅದ್ದ್ಧೂರಿಯಾಗಿ ಚಿತ್ರ ಮೂಡಿಬರುವಂತೆ ರಾಮು ಯಾವುದಕ್ಕೂ ಕೊರತೆ ಇಲ್ಲದಂತೆ ನೋಡಿಕೊಂಡಿದ್ದಾರೆ. ಪಳನಿ ರಾಜ್ ಅವರ ಸ್ಟಂಟ್ಸ್ ಮೈನವಿರೇಳಿಸುವಂತಿವೆ.

ರವಿ ಶ್ರೀವತ್ಸ ಅವರ ಸಂಭಾಷಣೆ ಹಾಗೂ ರಾಜೇಶ್ (ಹೈದರಾಬಾದ್) ಅವರ ಛಾಯಾಗ್ರಹಣ ಚಿತ್ರದ ಪ್ರಮುಖ ಆಕರ್ಷಣೆ. ಚಿತ್ರದಲ್ಲಿನ ಸಾಹಸ ಸನ್ನಿವೇಶಗಳು ಒಂದಕ್ಕಿಂತ ಒಂದು ಅದ್ಭುತ. ಚಿತ್ರ ಸರ್ವಂ ಮಾಲಾಶ್ರೀ ಮಯಂ ಆಗಿದ್ದು ಆಕ್ಷನ್ ಪ್ರಿಯರಿಗೆ ನಿರಾಸೆ ಮೂಡಿಸಲ್ಲ.

ಚಿತ್ರ: ಎಲೆಕ್ಷನ್
ನಿರ್ದೇಶನ: ಓಂ ಪ್ರಕಾಶ್ ರಾವ್
ನಿರ್ಮಾಪಕ: ರಾಮು
ಪಾತ್ರವರ್ಗ: ಮಾಲಾಶ್ರೀ, ಶ್ರೀನಿವಾಸಮೂರ್ತಿ, ಪ್ರದೀಪ್ ರಾವತ್, ಶೋಭಾರಾಜ್, ಸಾಧುಕೋಕಿಲ, ಬುಲೆಟ್ ಪ್ರಕಾಶ್,ದೇವ್ ಗಿಲ್, ಸುಚೇಂದ್ರ ಪ್ರಸಾದ್ ಮುಂತಾದವರು.

English summary
Kannada film Election review. It is an enjoyable film if you discount Malashree unbelievable actions. Om Prakash Rao directed film filled with numerous stunts. Not disappoint action lovers.
Please Wait while comments are loading...