»   » 'ಫೇರ್ ಅಂಡ್ ಲವ್ಲಿ' ಫಿಲ್ಮಿಬೀಟ್ ಚಿತ್ರ ವಿಮರ್ಶೆ

'ಫೇರ್ ಅಂಡ್ ಲವ್ಲಿ' ಫಿಲ್ಮಿಬೀಟ್ ಚಿತ್ರ ವಿಮರ್ಶೆ

Posted By:
Subscribe to Filmibeat Kannada

'ಚೆಲುವೆಯೇ ನಿನ್ನ ನೋಡಲು' ಚಿತ್ರದ ಬಳಿಕ ನಾಲ್ಕು ವರ್ಷ ಗ್ಯಾಪ್ ತೆಗೆದುಕೊಂಡ ರಘುರಾಮ್ ಅವರ ಎರಡನೇ ಇನ್ನಿಂಗ್ಸ್ ಇದು. ಇಲ್ಲಿ ಅವರು ಆದಷ್ಟು ಚೆನ್ನಾಗಿಯೇ ಆಟ ಆಡಲು ಪ್ರಯತ್ನಿಸಿದ್ದಾರೆ. ಈ ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ಕಥೆ ಮತ್ತು ಸಂಭಾಷಣೆ. ಚಿತ್ರವನ್ನು ಸಾಕಷ್ಟು ಲವ್ಲಿಯಾಗಿಯೇ ತೋರಿಸುವಲ್ಲಿ ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ.

ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರವಾದರೂ ಮಾಸ್ ಮತ್ತು ಕ್ಲಾಸ್ ಗೆ ಇಷ್ಟವಾಗುವಂತೆ ರಘುರಾಮ್ ತೆರೆಗೆ ತಂದಿದ್ದಾರೆ. ಕಥೆ ಎಲ್ಲೋ ಕೇಳಿದಂತೆ ಅನ್ನಿಸಿದರೂ ಸಾಗುತ್ತಾ ಹೋದಂತೆ ಹೊಸಹೊಸ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಕೊನೆಗೆ ಕ್ಲೈಮ್ಯಾಕ್ಸ್ ನಲ್ಲಿ ಇನ್ನೊಂದು ಅಚ್ಚರಿಯನ್ನು ಪ್ರೇಕ್ಷಕರಿಗೆ ದಯಪಾಲಿಸುತ್ತಾರೆ ನಿರ್ದೇಶಕರು. [ನಮಸ್ತೇ ಮೇಡಂ ಚಿತ್ರ ವಿಮರ್ಶೆ]

ಸಮಾಜದಲ್ಲಿ ಪ್ರತಿಷ್ಠಿತ ಮಹಿಳೆ ಎನ್ನಿಸಿಕೊಂಡಿರುವ ಭೂಮಿಕಾರನ್ನು (ಶ್ವೇತಾ ಶ್ರೀವಾತ್ಸವ್) ಸಾವಿರಾರು ಮಂದಿಯ ಸಮ್ಮುಖದಲ್ಲಿ ಸನ್ಮಾನಿಸಲಾಗುತ್ತದೆ. ಈ ಭೂಮಿಕಾ ಯಾರು? ವೈದ್ಯರಾಗುವುದಕ್ಕೂ ಮುನ್ನ ಅವರೇನಾಗಿದ್ದರು, ಅವರ ಯಶಸ್ಸಿನ ಹಿಂದಿನ ವ್ಯಕ್ತಿ ಯಾರು? ಎಂಬ ಪ್ರಶ್ನೆಗಳಿಗೆ ಉತ್ತರವಾಗಿ ಕಥೆ ಫ್ಲ್ಯಾಶ್ ಬ್ಯಾಕ್ ಗೆ ಸರಿಯುತ್ತದೆ.

Rating:
3.0/5

ಚಿತ್ರ: ಫೇರ್ ಅಂಡ್ ಲವ್ಲಿ
ನಿರ್ಮಾಪಕರು: ಡಾ.ಶಿಲ್ಪ ರಮೇಶ್ ರಮಣಿ (ಜೇಡ್ ಪ್ಲಾಂಟ್ ಲಾಂಛನ)
ಚಿತ್ರದ ಅವಧಿ: 130 ನಿಮಿಷಗಳು
ಸೆನ್ಸಾರ್ ಸರ್ಟಿಫಿಕೇಟ್: ಯು/ಎ
ನಿರ್ದೇಶನ: ರಘುರಾಮ್ ಡಿ.ಪಿ
ಸಂಗೀತ: ವಿ ಹರಿಕೃಷ್ಣ
ಛಾಯಾಗ್ರಹಣ: ಜಗದೀಶ್ ವಾಲಿ
ಸಂಕಲನ: ಜೋ.ನಿ.ಹರ್ಷ
ಚಿತ್ರಕಥೆ, ಸಂಭಾಷಣೆ: ಆನಂದಪ್ರಿಯ
ಕಥೆ: ಯತಿರಾಜ್
ಪಾತ್ರವರ್ಗ: ಪ್ರೇಮ್, ಶ್ವೇತಾ ಶ್ರೀವಾತ್ಸವ್, ನಕ್ಷತ್ರಾ, ಅನುಪ್ರಭಾಕರ್, ವಿಜಯ್ ರಾಘವೇಂದ್ರ, ನೀತೂ ಮುಂತಾದವರು.

ಮಹತ್ತರ ಸಂದೇಶ ನೀಡುವ ಚಿತ್ರ

ಮೈಮಾರಿಕೊಳ್ಳುವ ಹೆಣ್ಣೊಬ್ಬಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲವೇ? ಒಂದು ವೇಳೆ ಬಂದರೆ ಸಮಾಜ ಅವರನ್ನು ಸ್ವೀಕರಿಸುತ್ತಾ? ಅವರ ಭವಿಷ್ಯ ನಾಲ್ಕು ಗೋಡೆಗಳ ನಡುವೆಯೇ ಕಳೆದುಹೋಗಬೇಕಾ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಮಹತ್ತರ ಸಂದೇಶವನ್ನು ನೀಡುತ್ತಾರೆ ಚಿತ್ರದ ನಿರ್ದೇಶಕರು.

ಆದರೆ ಇದೆಲ್ಲವೂ ಸಾಧ್ಯವೇ?

ಇದೆಲ್ಲವೂ ಸಾಧ್ಯವೇ ಎಂಬ ಪ್ರಶ್ನೆ ಪ್ರೇಕ್ಷಕರನ್ನು ಕಾಡದೆ ಬಿಡದು. ನಿರ್ದೇಶಕರ ಆಶಯವೇನೋ ಚೆನ್ನಾಗಿದೆ. ಆದರದು ತೆರೆಯ ಮೇಲೆ ನೋಡಲಷ್ಟೇ ಸೊಗಸಾಗಿ ಕಾಣುಸುತ್ತದೆ. ನಿಜಕ್ಕೂ ಆಚರಿಸಲು ಸಾಧ್ಯವೇ ಎಂಬ ಪ್ರಶ್ನೆ ಮಾತ್ರ ಪ್ರಶ್ನೆಯಾಗಿಯೇ ಉಳಿಯುತ್ತದೆ.

ಪ್ರೇಮ್ ಅವರ ಲವ್ಲಿ ಅಭಿನಯ

ಮನು ಯಾನೆ ಮನೋಜ್ ಪಾತ್ರಕ್ಕೆ ಪ್ರೇಮ್ ಲವ್ಲಿ ಅಭಿನಯ ನೀಡಿದ್ದಾರೆ. ಪ್ರೇಕ್ಷಕರು ಅವರನ್ನು ಈ ರೀತಿಯ ಪಾತ್ರದಲ್ಲಿ ನೋಡಲು ಬಯಸುವುದು ಸಹಜ. ಅದಕ್ಕೆ ತಕ್ಕಂತೆಯೇ ಅವರ ಪಾತ್ರ ಸಾಗುತ್ತದೆ.

ಅಲ್ಲಲ್ಲಿ 'ಸಿಂಪಲ್ಲಾಗ್ ಒಂದ್' ನೆರಳು

ಇನ್ನು ಸಿಂಪಲ್ ಕ್ವೀನ್ ಶ್ವೇತಾ ಶ್ರೀವಾತ್ಸವ್ ಅವರೂ ಅಷ್ಟೇ, ಪಾತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡು ಅಭಿನಯಿಸಿರುವುದು ಗೊತ್ತಾಗುತ್ತದೆ. ಅಲ್ಲಲ್ಲಿ ಚಿತ್ರದ ಡೈಲಾಗ್ ಗಳು 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರವನ್ನು ನೆನಪಿಸುವಂತಿವೆ.

ಚಿತ್ರದಲ್ಲಿ ಗಮನಸೆಳೆವ ಸಂಭಾಷಣೆ

ಇದೊಂದು ಸೀದಾಸಾದಾ ಕಥೆಯಾಗಿ ಉಳಿದುಬಿಡುವ ಸಾಧ್ಯತೆಗಳೇ ಹೆಚ್ಚಾಗಿದ್ದವು. ಆದರೆ ಚಿತ್ರದ ಸಂಭಾಷಣೆ ಅದಕ್ಕೆ ಬ್ರೇಕ್ ಹಾಕಿ ತಡೆಯುವಲ್ಲಿ ಯಶಸ್ವಿಯಾಗಿದೆ. ಹಾಡುಗಳು ಸಹ ಪ್ರೇಕ್ಷಕರಿಗೆ ಮತ್ತೊಂದು ಫೀಲ್ ಕೊಡುವಲ್ಲಿ ಯಶಸ್ವಿಯಾಗಿವೆ.

ಒಂದೆರಡು ಸಂಭಾಷಣೆಗಳು ಹೀಗಿವೆ

"ನನ್ನ ಲೈಫ್ ಗೆ ಬೆಲೆ ಇದೆಯೋ ಇಲ್ಲವೋ ನನ್ನ ದೇಹಕ್ಕಂತೂ ಬೆಲೆ ಇದ್ದೇ ಇದೆ, ನಾವು ದೇಹ ಮಾರಿಕೊಂಡು ಬದುಕುತ್ತಿದ್ದೇವೆ ಕೆಲವರು ಮನಸ್ಸನ್ನು ಮಾರಿಕೊಂಡು ಬದುಕುತ್ತಿದ್ದಾರೆ, ನಾವು ಈ ಮನೆಯಲ್ಲಿರೋ ಡಸ್ಟ್ ಬಿನ್ ಗಳು...ನಾವು ಇರೋದ್ರಿಂದಲೇ ಸಮಾಜ ಕ್ಲೀನ್ ಆಗಿರೋದು..." ಎಂಬಂತಹ ಡೈಲಾಗ್ ಗಳೂ (ಸಂಭಾಷಣೆ ಆನಂದಪ್ರಿಯ) ಸಾಕಷ್ಟಿವೆ.

ಕಣ್ಣಿಗೆ ತಂಪೆರೆಯುವ ಛಾಯಾಗ್ರಹಣ

ಜಗದೀಶ್ ವಾಲಿ ಅವರ ಛಾಯಾಗ್ರಹಣ ಕಣ್ಣಿಗೆ ತಂಪೆರೆಯುತ್ತದೆ. ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳ ಚಿತ್ರೀಕರಣ ಕಣ್ಣಿಗೆ ಹಬ್ಬದಂತಿದೆ. ಈ ಚಿತ್ರಕ್ಕೆ ಅತ್ಯಾಧುನಿಕ 7.1 ಧ್ವನಿ ತಂತ್ರಜ್ಞಾನ ಇದ್ದರೂ ಧ್ವನಿಯಲ್ಲಿ ಅಷ್ಟೇನು ವ್ಯತ್ಯಾಸ ಕಂಡುಬರಲಿಲ್ಲ. ಪ್ರೇಮ್ ಅಭಿನಯ, ಚಿತ್ರದ ಸಂಭಾಷಣೆ, ಇಂಪಾದ ಹಾಡುಗಳು ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿವೆ.

ವೇಶ್ಯೆಯ ಪಾತ್ರ ಹೇಗೆ ಮೂಡಿಬಂದಿದೆ?

ಚಿತ್ರದಲ್ಲಿ ಸಾಕಷ್ಟು ಕಲಾವಿದರಿದ್ದರೂ ಪ್ರೇಮ್ ಮತ್ತು ಶ್ವೇತಾ ಶ್ರೀವಾತ್ಸವ್ ಅವರ ಪಾತ್ರಗಳನ್ನು ಬಿಟ್ಟರೆ ಉಳಿದ ಪಾತ್ರಗಳ್ಯಾವುವೂ ನೆನಪಿನಲ್ಲಿ ಉಳಿಯುವಂತಿಲ್ಲ. ಶ್ವೇತಾ ಅವರು ವೇಶ್ಯೆಯ ಪಾತ್ರವನ್ನು ಹೇಗೆ ನಿಭಾಯಿಸಿದ್ದಾರೆ, ಎಷ್ಟರ ಮಟ್ಟಿಗೆ ನ್ಯಾಯ ಸಲ್ಲಿಸಿದ್ದಾರೆ ಎಂಬ ಕುತೂಹಲಕ್ಕೆ ಉತ್ತರ ಸಿಗಬೇಕಾದರೆ ಚಿತ್ರವನ್ನು ಒಮ್ಮೆ ನೋಡಿ.

English summary
Kannada film 'Fair and Lovely' review. The story revolves around a simple-hearted couple. Shwetha Srivastav of Simple Aagi Ondhu Love Story fame, played the role of a sex worker. It is one time entertainer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada