»   » ಗಾಡ್ ಫಾದರ್ ಚಿತ್ರವಿಮರ್ಶೆ: ಕಾಡುತ್ತಾನೆ ಫಾದರ್

ಗಾಡ್ ಫಾದರ್ ಚಿತ್ರವಿಮರ್ಶೆ: ಕಾಡುತ್ತಾನೆ ಫಾದರ್

By: ವಿನಾಯಕರಾಮ್ ಕಲಗಾರು
Subscribe to Filmibeat Kannada

'ಕಠಾರಿವೀರ ಸುರಸುಂದರಾಂಗಿ' ಚಿತ್ರದ ನಂತರ ಬಿಡುಗಡೆಯಾಗಿರುವ ಉಪೇಂದ್ರ ಅಭಿನಯದ 'ಗಾಡ್ ಫಾದರ್' ಸ್ವಲ್ಪ ಮಟ್ಟಿಗೆ ಉಪ್ಪಿ ಅಭಿಮಾನಿಗಳನ್ನು ರುಚಿಸುತ್ತದೆ. ಚಿತ್ರದಲ್ಲಿ ಉಪ್ಪಿ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜಯಮಾಲಾ ಪುತ್ರಿ ಸೌಂದರ್ಯಾ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದಿದ್ದಾಳೆ ಎಂಬುದು ಬಿಟ್ಟರೆ ಮಿಕ್ಕಿದ್ದೆಲ್ಲಾ ಹಳೆಯ ವಿಷಯ. ಕಾರಣ ಇದು ತಮಿಳಿನ 'ವರಲಾರು' ಚಿತ್ರದ ರೀಮೇಕ್. ಅಲ್ಲಿ ಅಜಿತ್ ಮಾಡಿದ ಪಾತ್ರವನ್ನು ಇಲ್ಲಿ ಉಪ್ಪಿ ನಿಭಾಯಿಸಿದ್ದಾರೆ.


ಉಪ್ಪಿಯ ರೆಗ್ಯುಲರ್ ಪ್ಯಾರ್ಟನ್ ನಲ್ಲಿ ಸಿನಿಮಾ ಇಲ್ಲವಾದರೂ, ದ್ವಿತೀಯಾರ್ಧದಲ್ಲಿ ಗಮನ ಸೆಳೆಯುವಂತೆ ಮಾಡಿದೆ. ಶ್ರೀರಾಮ್ ನಿರ್ದೇಶನಕ್ಕೆ ಫುಲ್ ಮಾರ್ಕ್ಸ್ ಕೊಡಬಹುದು. ಚಿತ್ರದಲ್ಲಿ ಗಟ್ಟಿಯಾದ ನಿರೂಪಣೆಯಿದೆ. ಥಿಯೇಟರ್ ನಿಂದ ಹೊರಬಂದ ಮೇಲೂ ಗುನುಗುವಂತ ಹಾಡಿಲ್ಲವಾದರೂ ಒಮ್ಮೆ ಕೇಳಲು ಅಡ್ಡಿಯಿಲ್ಲ.

ಆದರೆ ರೀರೆಕಾರ್ಡಿಂಗ್ ನಲ್ಲಿ ಇನ್ನಷ್ಟು ಶ್ರಮ ಹಾಕಿದ್ದರೆ ಸಿನಿಮಾ ಮತ್ತಷ್ಟು ಸೊಗಸಾಗಿರುತ್ತಿತ್ತು. ಕ್ಯಾಮೆರಾ ಕೆಲಸ ಅಚ್ಚುಕಟ್ಟಾಗಿದೆ. ಆದರೂ ಚಿತ್ರದಲ್ಲಿ ಏನೋ ಒಂದು ಸಣ್ಣ ಕೊರತೆ ಎದ್ದು ಕಾಣುತ್ತದೆ; ಅದು ಉಪ್ಪಿಯ ಅಭಿನಯದಲ್ಲಾಗಿರಬಹುದು. (ಡ್ಯಾನ್ಸರ್ ಪಾತ್ರ ಹೊರತುಪಡಿಸಿದರೆ ಉಳಿದೆರಡು ಪಾತ್ರ ಒಂದೇ ರೀತಿ ಕಾಣುತ್ತದೆ.)

ಎ.ಆರ್.ರೆಹಮಾನ್ ಸಂಗೀತದಲ್ಲಿ ಅಷ್ಟೇನು ಧಮ್ ಇಲ್ಲ. "ಲಾಲಿ ಲಾಲಿ ಅಮ್ಮ..." ಹಾಡು ಪರ್ವಾಗಿಲ್ಲ. ಇಡೀ ಚಿತ್ರದಲ್ಲಿ ಉಪ್ಪಿ ರಾರಾಜಿಸಿದ್ದಾರೆ. ಆದರೆ ಸಂಭಾಷಣೆ ಕೈಕೊಟ್ಟಿದೆ. ಡೈಲಾಗ್ ಗಳಲ್ಲಿ ಪಂಚ್ ಇಲ್ಲ. ಆದರೂ ಅದನ್ನು ಒಂದಷ್ಟು ಕಡೆ ಉಪ್ಪಿ ನಿಭಾಯಿಸಿರುವುದು ಎದ್ದು ಕಾಣುತ್ತದೆ.

ಸೌಂದರ್ಯಾ ಅಭಿನಯದಲ್ಲಿ ಮತ್ತಷ್ಟು ಮಾಗಬೇಕಿದೆ. ಭೂಮಿಕಾ ಚಾವ್ಲಾ ಒಂದು ಹಾಡಿಗೆ ಹೆಜ್ಜೆ ಹಾಕಿ ಹೋಗುತ್ತಾರಷ್ಟೆ. ಮೂರೂ ಪಾತ್ರಗಳಿಗೆ ಹೋಲಿಸಿದರೆ ಕೊನೆಗೆ 'ಗಾಡ್ ಫಾದರ್' ಆಗಿ ಉಳಿಯುವ ಉಪ್ಪಿ ಇಷ್ಟವಾಗುತ್ತಾನೆ. ಸಿನಿಮಾ ಮುಗಿದ ಮೇಲೂ ಕಾಡುತ್ತಾನೆ !! ತಮಿಳಿನ 'ವರಲಾರು' ನೋಡಿರದವರು ಕನ್ನಡದ ಗಾಡ್ ಫಾದರ್ ಅನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.

English summary
Read Kannada film Godfather review by Vinayakaram Kalagaru. The movie is a remake of Tamil movie Varalaaru. This movie completely belongs to Upendra, who has played a triple role. The movie follow the same old path of a wealthy father, who has excessive fondness for one son and furrow the other one for his unpleasant looks.
Please Wait while comments are loading...