For Quick Alerts
  ALLOW NOTIFICATIONS  
  For Daily Alerts

  ದುನಿಯಾ ಸೂರಿ ನಿರ್ದೇಶನದ ಕಡ್ಡಿಪುಡಿ ಚಿತ್ರವಿಮರ್ಶೆ

  By Rajendra
  |

  Rating:
  4.5/5

  ಚಿತ್ರದಲ್ಲಿ ಎಲ್ಲೂ ನಾಯಕನಟನ ವೈಭವೀಕರಣ ಕಾಣುವುದಿಲ್ಲ. ಹಾಡುಗಳನ್ನೂ ಅಷ್ಟೇ ಬಲವಂತವಾಗಿ ತುರುಕುವ ಪ್ರಯತ್ನವನ್ನು ನಿರ್ದೇಶಕ ದುನಿಯಾ ಸೂರಿ ಮಾಡಿಲ್ಲ. ಕಥೆಯೇ ಇಲ್ಲಿ ಮುಖ್ಯ. ಪಾತ್ರಗಳು ಆ ಕಥೆಗೆ ಜೀವ ತುಂಬುತ್ತವೆ. ಎರಡೂವರೆ ಗಂಟೆಗಳ ಕಾಲ ಪ್ರೇಕ್ಷಕ ಮೈಮರೆಯುತ್ತಾನೆ.

  ಈ ಹಿಂದಿನ ಅವರ ಚಿತ್ರಗಳ ಛಾಯೆ ಎಲ್ಲೂ ಬೀಳದಂತೆ ಎಚ್ಚವಹಿಸಿದ್ದಾರೆ ಸೂರಿ. ಹಾಗಾಗಿ ಈ ಚಿತ್ರ ಪ್ರೇಕ್ಷಕನಿಗೆ ಭಿನ್ನ ಅನುಭವ ನೀಡುತ್ತದೆ. ಕಡ್ಡಿಪುಡಿ ಅಲಿಯಾಸ್ ಆನಂದ್ ಪಾತ್ರದಲ್ಲಿ ಶಿವರಾಜ್ ಕುಮಾರ್ ಲವಲವಿಕೆಯ ಅಭಿನಯ ನೀಡಿದ್ದಾರೆ.

  ರೌಡಿಯಿಸಂ ಬಿಟ್ಟವರು ಏನು ಮಾಡಬಹುದು? ಪತ್ರಿಕೆ ಮಾಡಬಹುದು, ಇಲ್ಲಾ ರಾಜಕೀಯ, ಸಮಾಜಸೇವೆ ಎಂದು ಗುರುತಿಸಿಕೊಂಡು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದು. ಅಧಿಕಾರ ಇಲ್ಲದೆ ಈ ಸಮಾಜದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂಬ ಮಾತನ್ನು ಉನ್ನತ ಪೊಲೀಸ್ ಅಧಿಕಾರಿಯಾಗಿ ಅನಂತನಾಗ್ ಹೇಳುತ್ತಾರೆ. (ದುನಿಯಾ ಸೂರಿ ಸಂದರ್ಶನ)

  ಚಿತ್ರದಲ್ಲಿನ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ ಅನ್ನಿಸಿದರೂ ಇಂದಿನ ಸನ್ನಿವೇಶಗಳ ಮೇಲೆ ಬೆಳಕು ಚೆಲ್ಲುತ್ತದೆ. ಆನಂದ್ ಮಚ್ಚು ಹಿಡಿಯುತ್ತಾನಾದರೂ ಕಡೆಗೆ ಅಧಿಕಾರ ಇಲ್ಲದಿದ್ದರೆ ತಾನು ಒಮ್ಮೆ ಬೀದಿ ಹೆಣವಾಗುತ್ತೇನೆ ಎಂಬ ಸತ್ಯ ಅವನಿಗೆ ಗೊತ್ತಿರುತ್ತದೆ. ಅದಕ್ಕಾಗಿ ತನ್ನ ಪತ್ನಿಯನ್ನು ರಾಜಕೀಯಕ್ಕೆ ಇಳಿಸುತ್ತಾನೆ. ಆಕೆಯ ಹಿಂದೆ ನಿಂತು ಗೆಲ್ಲಿಸುತ್ತಾನೆ.

  ಚಿತ್ರ: ಕಡ್ಡಿಪುಡಿ
  ನಿರ್ದೇಶನ, ಕಥೆ, ಚಿತ್ರಕಥೆ, ಸಂಭಾಷಣೆ: ದುನಿಯಾ ಸೂರಿ
  ನಿರ್ಮಾಪಕ: ಎಂ.ಚಂದ್ರು
  ಛಾಯಾಗ್ರಹಣ: ಕೃಷ್ಣ
  ಸಂಕಲನ: ದೀಪು ಎಸ್ ಕುಮಾರ್
  ಪಾತ್ರವರ್ಗ: ಶಿವರಾಜ್ ಕುಮಾರ್, ರಾಧಿಕಾ ಪಂಡಿತ್, ಅನಂತನಾಗ್, ಶರತ್ ಲೋಹಿತಾಶ್ವ, ರಂಗಾಯಣ ರಘು, ಅವಿನಾಶ್, ಗಿರಿಜಾ ಲೋಕೇಶ್, ರೇಣುಕಾ ಪ್ರಸಾದ್, ಐಂದ್ರಿತಾ ರೇ.

  ಹಾಲಿವುಡ್ 'ಗಾಡ್ ಫಾದರ್' ಚಿತ್ರದ ಅನುಭವ

  ಹಾಲಿವುಡ್ 'ಗಾಡ್ ಫಾದರ್' ಚಿತ್ರದ ಅನುಭವ

  ಕಥೆ ಹೀಗೆ ಭಿನ್ನ ಹಾದಿ ತುಳಿಯುತ್ತದೆ. ಕಡೆಗೆ ಹಾಲಿವುಡ್ ನ 'ಗಾಡ್ ಫಾದರ್' ಚಿತ್ರದ ಒಂದೇ ಒಂದು ಸಣ್ಣ ಎಳೆ ಇಲ್ಲಿ ಸುಳಿದ ಅನುಭವವಾಗುತ್ತದೆ. ಕೆಳಮಧ್ಯಮವರ್ಗದ ಹೆಣ್ಣುಮಗಳಾಗಿ ಉಮಾ ಪಾತ್ರದಲ್ಲಿ ರಾಧಿಕಾ ಪಂಡಿತ್ ಅವರದು ಮನೋಜ್ಞ ಅಭಿನಯ.

  ರಾಧಿಕಾ ಪಂಡಿತ್ ಮನಮಿಡಿಯುವ ಪಾತ್ರ

  ರಾಧಿಕಾ ಪಂಡಿತ್ ಮನಮಿಡಿಯುವ ಪಾತ್ರ

  ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಉಮಾಗೆ ಅಚಾನಕ್ ಆಗಿ 'ಕಡ್ಡಿಪುಡಿ' ಪರಿಚಯವಾಗುತ್ತದೆ. ಆಗಲೋ ಈಗಲೋ ಎಂಬಂತಿರುವ ತಮ್ಮ ತಾಯಿಯ ಕೊನೆ ಆಸೆಯನ್ನು ಪೂರೈಸಲು ಕಡ್ಡಿಪುಡಿಯನ್ನು ಮದುವೆಯಾದಂತೆ ನಂಬಿಸುತ್ತಾರೆ. ಕಡೆಗೆ ಅದು ಇಬ್ಬರ ಬಾಳಬಂಧನಕ್ಕೆ ದಾರಿ ಮಾಡಿಕೊಡುತ್ತದೆ.

  ರಾಧಿಕಾ ಪಂಡಿತ್ ಪಾತ್ರದಲ್ಲಿ ತಲ್ಲೀನ

  ರಾಧಿಕಾ ಪಂಡಿತ್ ಪಾತ್ರದಲ್ಲಿ ತಲ್ಲೀನ

  ಒಂದಷ್ಟು ಮಗ್ಗಲುಗಳನ್ನು ಬದಲಿಸುತ್ತಾ ಸಾಗುವ ಕಥೆಯಲ್ಲಿ ಉಮಾ ಪಾತ್ರದಲ್ಲಿ ರಾಧಿಕಾ ಅವರು ಶಿವಣ್ಣನಿಗೆ ಸಾಥ್ ಜೊತೆಗೆ ಪೈಪೋಟಿ ನೀಡಿದ್ದಾರೆ. ಅಭಿನಯವೇ ಕಾಣದಷ್ಟು ಲೀಲಾಜಾಲವಾಗಿ ಅವರು ಪಾತ್ರದಲ್ಲಿ ಒಂದಾಗಿರುವುದನ್ನು ಕಾಣಬಹುದು. ಚಿತ್ರದ ಕೆಲವು ರೊಮ್ಯಾಂಟಿಕ್ ಸನ್ನಿವೇಶಗಳು, ಕೊನೆಗೆ ರಾಜಕೀಯ ಮಹಿಳೆಯಾಗಿ ಅವರದು ಮನಮಿಡಿಯುವ ಪಾತ್ರ.

  ಗ್ಲಾಮರ್ ಗಷ್ಟೇ ಸೀಮಿತವಾದ ಐಂದ್ರಿತಾ ರೇ

  ಗ್ಲಾಮರ್ ಗಷ್ಟೇ ಸೀಮಿತವಾದ ಐಂದ್ರಿತಾ ರೇ

  ಇನ್ನು ಐಂದ್ರಿತಾ ರೇ ಚಿತ್ರದಲ್ಲಿ ಗ್ಲಾಮರ್ ಗಷ್ಟೇ ಸೀಮಿತ. ಒಂದು ಹಾಡಿನಲ್ಲಿ ಬೆತ್ತಲೆ ಬೆನ್ನು ತೋರಿಸುವ, ಒಂದಷ್ಟು ಅರೆಬೆತ್ತಲೆ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಲೈಂಗಿಕ ಕಾರ್ಯಕರ್ತೆಯಾಗಿ ಅವರ ಪಾತ್ರ ಹಾಗೆ ಬಂದು ಹೀಗೆ ಹೋಗುತ್ತದಷ್ಟೆ.

  ಹಳೆ ಪಾತ್ರೆ ಹಳೆ ಕಬ್ಬಿಣದಂತಹ ಹಾಡುಗಳು ಇಲ್ಲಿಲ್ಲ

  ಹಳೆ ಪಾತ್ರೆ ಹಳೆ ಕಬ್ಬಿಣದಂತಹ ಹಾಡುಗಳು ಇಲ್ಲಿಲ್ಲ

  ಚಿತ್ರದ ಹಾಡುಗಳು ಅಷ್ಟೆ ಕಥೆ ಪೂರಕವಾಗಿವೆ. ವಿ ಹರಿಕೃಷ್ಣ ಅವರ ಸಂಗೀತ ಹಾಗೂ ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಅವರ ಸಾಹಿತ್ಯ "ಹಳೆ ಪಾತ್ರ ಹಳ್ಳೆ ಕಬ್ಬಿಣ" ಎಂಬಂತಿಲ್ಲದೆ ಗಂಭೀರವಾಗಿದೆ. ದ್ವಿತೀಯಾರ್ಧ ಒಂಚೂರು ಎಳೆದಂತೆ ಭಾಸವಾದರೂ ಕೊನೆಗೆ ಒಂದು ಮಹತ್ತರ ಹಂತಕ್ಕೆ ಬಂದು ನಿಲ್ಲುತ್ತದೆ.

  ಮುಂದಿನ ಕಥೆ ಪ್ರೇಕ್ಷಕರಿಗೆ ಬಿಟ್ಟದ್ದು

  ಮುಂದಿನ ಕಥೆ ಪ್ರೇಕ್ಷಕರಿಗೆ ಬಿಟ್ಟದ್ದು

  ಕಥೆ ಇನ್ನೂ ಇದೆಯೇನೋ ಎಂದು ಪ್ರೇಕ್ಷಕ ನಿರೀಕ್ಷಿಸುತ್ತಾನೆ. ಆದರೆ "ಅಲ್ಪವಿರಾಮ..." ಎಂಬ ಶುಭಂ ಫಲಕ ಮೂಲಕ ಕಥೆ ಮುಗಿಯುತ್ತದೆ. ಪ್ರೇಕ್ಷಕರ ತಲೆಯಲ್ಲಿ ಕಡ್ಡಿಪುಡಿ ಭಾಗ ಎರಡು ಬರುತ್ತಾ? ಮುಂದೇನಾಗುತ್ತದೆ ಎಂಬ ಪ್ರಶ್ನೆಗಳ ಸರಮಾಲೆ ಬಿಚ್ಚಿಕೊಳ್ಳುತ್ತದೆ. ಸೂರಿ ಅಲ್ಲಿಗೆ ಫುಲ್ ಸ್ಟಾಪ್ ಹಾಕಿದ್ದಾರೆ. ಮುಂದಿನದನ್ನು ಪ್ರೇಕ್ಷಕರ ಊಹೆಗೆ ಬಿಟ್ಟಿದ್ದಾರೆ.

  ರೌಡಿಯಿಸಂ ಬಿಟ್ಟರೆ ಏನು ಮಾಡಬಹುದು?

  ರೌಡಿಯಿಸಂ ಬಿಟ್ಟರೆ ಏನು ಮಾಡಬಹುದು?

  ರೌಡಿಯೊಬ್ಬ ರೌಡಿಯಿಸಂ ಬಿಟ್ಟರೆ ಏನು ಮಾಡುತ್ತಾನೆ ಎಂಬುದೇ ಚಿತ್ರದ ಕಥಾಹಂದರ. ಇದಕ್ಕೆ ಒಂದಷ್ಟು ಮಾಸ್ ಟಚ್ ನೀಡಿ ಕೊನೆಯ ತನಕ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ದುನಿಯಾ ಸೂರಿ ಗೆದ್ದಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಮೇಲಿನ ಹಿಡಿತವನ್ನೂ ಅವರು ಎಲ್ಲೂ ಸಡಿಲ ಬಿಟ್ಟಿಲ್ಲ.

  ಕಣ್ಮನ ಸೆಳೆಯುವ ಕೃಷ್ಣ ಛಾಯಾಗ್ರಹಣ

  ಕಣ್ಮನ ಸೆಳೆಯುವ ಕೃಷ್ಣ ಛಾಯಾಗ್ರಹಣ

  ಚಿತ್ರದ ಇನ್ನೊಂದು ಪ್ರಮುಖ ಅಂಶ ಎಂದರೆ ಕೃಷ್ಣ ಅವರ ಕಣ್ಮನ ಸೆಳೆಯುವ ಛಾಯಾಗ್ರಹಣ. ದೀಪು ಎಸ್ ಕುಮಾರ್ ಅವರ ಸಂಕಲನವೂ ಅಷ್ಟೇ ಲೆಕ್ಕಾಚಾರ ತಪ್ಪಿಲ್ಲ. ರವಿವರ್ಮ ಅವರ ಸಾಹಸ ನಿರ್ದೇಶನ ಅಬ್ಬರಕ್ಕಷ್ಟೇ ಸೀಮಿತವಾಗದೆ ಡಿಫರೆಂಟ್ ಫೈಟ್ ಗಳಿಂದ ನೈಜವಾಗಿ ಮೂಡಿಬಂದಿವೆ.

  ಚಿತ್ರದಲ್ಲಿ ಯಾರ ಅಭಿನಯ ಹೇಗಿದೆ?

  ಚಿತ್ರದಲ್ಲಿ ಯಾರ ಅಭಿನಯ ಹೇಗಿದೆ?

  ರಾಧಿಕಾ ಅವರ ತಾಯಿಯಾಗಿ ಗಿರಿಜಾ ಲೋಕೇಶ್ ಅವರು ಚಿತ್ರದಲ್ಲಿ ಗಮನಸೆಳೆಯುತ್ತಾರೆ. ಉಳಿದಂತೆ ಶರತ್ ಲೋಹಿತಾಶ್ವ, ಸ್ವಯಂವರ ಚಂದ್ರು, ರೇಣುಕಾ ಪ್ರಸಾದ್ ಅವರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಒಟ್ಟಾರೆಯಾಗಿ ಚಿತ್ರ ಮತ್ತೊಮ್ಮೆ ನೋಡುವಂತಿದೆ.

  English summary
  Duniya Soori directed Kannada film Kaddipudi review. Shivaraj Kumar is outstanding with his role of Kaddipudi. Radhika Pandit has come out with best performance till date. The film won the praises for bringing in fresh elements in the screenplay and bringing out best in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X