»   » ಚಿತ್ರವಿಮರ್ಶೆ: ಮಂಗನ ಕೈಲಿ ಮಾಣಿಕ್ ಚಂದ್ !

ಚಿತ್ರವಿಮರ್ಶೆ: ಮಂಗನ ಕೈಲಿ ಮಾಣಿಕ್ ಚಂದ್ !

By: ಉದಯರವಿ
Subscribe to Filmibeat Kannada

ಈ ಚಿತ್ರಕ್ಕೆ 'ಮಂಗನ ಕೈಲಿ ಮಾಣಿಕ್ಯ' ಎಂಬುದಕ್ಕಿಂತ ಮಂಗನ ಕೈಲಿ ಮಾಣಿಕ್ ಚಂದ್ ಎಂದು ಇಟ್ಟಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು! ಕಾಮಿಡಿ ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ರಮೇಶ್ ಅರವಿಂದ್ ಅವರ ಮತ್ತೊಂದು ಕಾಮಿಡಿ ಕಮಾಲ್ 'ಮಂಗನ ಕೈಲಿ ಮಾಣಿಕ್ಯ'. ಕುರುಡು ನಿರ್ದೇಶಕನೊಬ್ಬ ಸಿನಿಮಾ ಮಾಡಿದರೆ ಹೇಗಿರುತ್ತದೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ.

ಈ ರೀತಿಯ ವಿಭಿನ್ನ ಆಲೋಚನೆಯನ್ನು ಇಟ್ಟುಕೊಂಡು ರಾಜೇಂದ್ರ ಕಾರಂತ್ ಒಂದು ಒಳ್ಳೆಯ ಚಿತ್ರ ಕೊಟ್ಟಿದ್ದಾರೆ. ಆದರೆ ನಿರೂಪಣೆಯಲ್ಲಿ ಎಡವಿದ್ದಾರೆ. ರಾಜೇಂದ್ರ ಕಾರಂತ್ ಅವರು ಈಗಾಗಲೆ ಸಂಭಾಷಣೆಯಲ್ಲಿ ಒಂದು ಕೈ ನೋಡಿರುವ ಕಾರಣ, ಇಲ್ಲಿನ ಸಂಭಾಷಣೆ ಮೇಲೂ ಏಕಚಕ್ರಾಧಿಪತ್ಯ ಸಾಧಿಸಿದ್ದಾರೆ. [ಮಂಗನ ಕೈಲಿ ಮಾಣಿಕ್ಯ ಗ್ಯಾಲರಿ]

ಇಂದಿನ ಚಿತ್ರಗಳ ಬಗ್ಗೆ ವಿಡಂಬನೆ, ಪ್ರಚಾರಕ್ಕಾಗಿ ಏನೆಲ್ಲಾ ಮಾಡುತ್ತಾರೆ ಎಂಬ ಅಂಶಗಳೂ ಚಿತ್ರದಲ್ಲಿ ಸ್ಥಾನ ಪಡೆದಿವೆ. ಕುರುಡು ನಿರ್ದೇಶನಕನಾಗಿ ರಮೇಶ್ ಅವರು ಅದ್ಭುತವಾಗಿ ಅಭಿನಯಿಸಿದ್ದಾರೆ. ಆರಂಭದಲ್ಲಿ ಉತ್ತಮ ಟೇಕ್ ತೆಗೆದುಕೊಳ್ಳುವ ಚಿತ್ರದ ಕಥೆ ಮುಂದೆ ಸಾಗುತ್ತಾ ಸಾಗುತ್ತಾ ಪ್ರೇಕ್ಷಕರ ನಿದ್ದೆಗೆ ಲಾಲಿ ಹಾಡಾಗುತ್ತದೆ.

ಚಿತ್ರ: ಮಂಗನ ಕೈಲಿ ಮಾಣಿಕ್ಯ
ನಿರ್ದೇಶನ: ರಾಜೇಂದ್ರ ಕಾರಂತ್
ನಿರ್ಮಾಪಕ: ಸಂದೇಶ್ ನಾಗರಾಜ್
ಸಂಗೀತ: ರಾಜೇಶ್ ರಾಮನಾಥ್
ಛಾಯಾಗ್ರಹಣ: ಜೆಜಿ ಕೃಷ್ಣ
ಸಂಕಲನ: ನಾಗೇಂದ್ರ ಅರಸ್
ತಾರಾಗಣ: ರಮೆಶ್ ಅರವಿಂದ್, ರವಿಶಂಕರ್, ರಂಗಾಯಣ ರಘು, ಹರ್ಷಿಕಾ ಪೂಣಚ್ಚ, ಸೋನಿಯಾ ಗೌಡ, ಖುಷಿ ಮುಂತಾದವರು.

'ಕತ್ರಿಗುಪ್ಪೆ' ಎಂಬ ಟೈಟಲ್ ಸಿನಿಮಾ ಕಥೆ

ಇನ್ನೊಬ್ಬ ನಿರ್ದೇಶಕ ಕೈಬಿಟ್ಟ ತಮ್ಮ 'ಕತ್ರಿಗುಪ್ಪೆ' ಎಂಬ ಟೈಟಲ್ ಚಿತ್ರವನ್ನು ಹೇಗಾದರೂ ಮಾಡಿ ನಿರ್ಮಿಸಲೇಬೇಕು ಎಂಬುದು ನಿರ್ಮಾಪಕ ಪ್ರಭುಗೆ (ರಂಗಾಯಣ ರಘು) ಪ್ರತಿಷ್ಠೆಯ ಪ್ರಶ್ನೆಯಾಗುತ್ತದೆ. ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಭಸ್ಮಾಸುರ ಅಲಿಯಾಸ್ ಮನೋಹರ (ರಮೇಶ್ ಅರವಿಂದ್) ನಿಗೆ ಬರುತ್ತದೆ. ಆದರೆ ಅವರ ಒಂದೇ ಒಂದು ಚಿತ್ರವೂ ಕಂಪ್ಲೀಟ್ ಆಗಿರುವುದಿಲ್ಲ.

ದೃಷ್ಟಿ ಕಳೆದುಕೊಳ್ಳುವ ನಿರ್ದೇಶಕ ಮನೋಹರ್

ಈ ಚಿತ್ರವನ್ನು ಮನೋಹರನಿಗೆ ಕೊಡಲು ನಿರ್ಮಾಪಕನಿಗೆ ಇಷ್ಟವಿರಲ್ಲ. ಕಡೆಗೆ ನಿರ್ದೇಶನಕನ ಗರ್ಲ್ ಫ್ರೆಂಡ್ ಸುಪ್ರೀತಾ (ಹರ್ಷಿಕಾ ಪೂಣಚ್ಚ) ಮಧ್ಯಪ್ರವೇಶದಿಂದ ಅವನಿಗೆ ಅವಕಾಶ ಸಿಗುತ್ತದೆ. ಇನ್ನೇನು ಚಿತ್ರ ನಿರ್ದೇಶಿಸಬೇಕು ಎಂಬ ಹೊತ್ತಿಗೆ ದೃಷ್ಟಿ ಕಳೆದುಕೊಳ್ಳುತ್ತಾನೆ ಮನೋಹರ. ಮುಂದೇನು ಎಂಬುದೇ ಚಿತ್ರದ ಕಥಾಹಂದರ.

ಹರ್ಷಿಕಾ ಪೂಣಚ್ಚಗೆ ಪಾಸಿಂಗ್ ಮಾರ್ಕ್ಸ್

ಚಿತ್ರದಲ್ಲಿ ಗಮನಸೆಳೆಯುವ ಅಂಶ ಎಂದರೆ ರಾಜೇಂದ್ರ ಕಾರಂತ್ ಅವರ ಸಂಭಾಷಣೆ. ರವಿಶಂಕರ್, ರಂಗಾಯಣ ರಘು ಅವರ ಅಭಿನಯವೂ ಚಿತ್ರದಲ್ಲಿ ಪ್ಲಸ್ ಪಾಯಿಂಟ್. ಆದರೆ ಹರ್ಷಿಕಾ ಪೂಣಚ್ಚ ಅವರ ಪಾಸಿಂಗ್ ಮಾರ್ಕ್ಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಉಳಿದ ಇಬ್ಬರು ನಾಯಕಿಯರು ಗ್ಲಾಮರ್ ಗಷ್ಟೇ ಸೀಮಿತ.

ಡಬಲ್ ಮೀನಿಂಗ್ ಡೈಲಾಗ್ಸ್ ಸಾಕಪ್ಪಾ ಸಾಕು

ಜಾಳುಜಾಳಾದ ಚಿತ್ರಕಥೆ, ಕೆಲವೊಂದು ಡಬಲ್ ಮೀನಿಂಗ್ ಡೈಲಾಗ್ ಗಳು ಫ್ಯಾಮಿಲಿ ಆಡಿಯನ್ಸ್ ಗೆ ಇರುಸುಮುರುಸುಗೊಳಿಸುತ್ತವೆ. ಆರಂಭದ ಅರ್ಧಗಂಟೆ ಚಿತ್ರಕಥೆ ಮೇಲಿರುವ ಹಿಡಿತ ಕೊನೆಕೊನೆಗೆ ಸಡಿಲವಾಗುತ್ತಾ ಸಾಗುತ್ತದೆ.

ರಮೇಶ್ ಕಾಮಿಡಿ ಟೈಮಿಂಗ್ ಮೆಚ್ಚಲೇಬೇಕು

ರಮೇಶ್ ಅರವಿಂದ್ ಅವರ ಕಾಮಿಡಿ ಟೈಮಿಂಗ್ ಮೆಚ್ಚಲೇಬೇಕು. ಇನ್ನು ಹರ್ಷಿಕಾ ಪೂಣಚ್ಚ ಅವರು ಓಕೆ ಎಂಬಂತೆ ನಟಿಸಿದ್ದಾರೆ. ರವಿಶಂಕರ್, ರಂಗಾಯಣ ರಘು ಪಾತ್ರಗಳು ಉತ್ತಮವಾಗಿ ಮೂಡಿಬಂದಿವೆ.

ರಾಜೇಶ್ ರಾಮನಾಥ್ ಸಂಗೀತ ಹೇಗಿದೆ?

ರಾಜೇಶ್ ರಾಮನಾಥ್ ಅವರ ಸಂಗೀತದ "ಸದಾ ಸುಪ್ರಭಾತ " ಸೇರಿದಂತೆ ಎರಡು ಹಾಡುಗಳು ಮತ್ತೆ ಗುನುಗುವಂತಿವೆ. ಜೆಜಿ ಕೃಷ್ಣ ಅವರ ಛಾಯಾಗ್ರಹಣ ಓಕೆ. ನಾಗೇಂದ್ರ ಅರಸ್ ಅವರ ಶ್ರಮ ಸಂಕಲನದಲ್ಲಿ ಎದ್ದು ಕಾಣುತ್ತದೆ.

ಮಂಗನ ಕೈಲಿ ಮಾಣಿಕ್ಯ; ಕೊನೆ ಮಾಣಿಕ್ಯ

ನಮ್ಮ ಕೊನೆಯ ಮಾಣಿಕ್ಯ. ಮಂಗನ ಕೈಲಿ ಮಾಣಿಕ್ಯ ಚಿತ್ರದಲ್ಲಿ ಸಾಕಷ್ಟು ದೋಷಗಳಿದ್ದರೂ ಚಿತ್ರವನ್ನು ಸೀರಿಯಸ್ಸಾಗಿ ನೋಡದೆ, ಕಾಮಿಡಿ ನಿರೀಕ್ಷಿಸಿ ಹೋಗುವ ಪ್ರೇಕ್ಷಕರಿಗೆ ಒಂಚೂರು ರಿಲೀಫ್ ಸಿಗುತ್ತದೆ. ಕಾಮಿಡಿ ಚಿತ್ರಗಳನ್ನು ನೋಡಬೇಕು ಎಂದು ಬಯಸುವವರಿಗೆ ನಿರಾಸೆ ಮಾಡುವುದಿಲ್ಲ.


English summary
Ramesh Aravind and Harshika Poonacha lead Kannada film Mangana Kaili Manikya review, directed by Rajendra Karanth. The film may have its drawbacks but the film is nothing but a fun ride. If you are a fan of comedy movies, then the film should not be missed.
Please Wait while comments are loading...