»   » ಶಿವಣ್ಣ ಅಭಿನಯದ 'ಭಜರಂಗಿ' ಚಿತ್ರ ವಿಮರ್ಶೆ

ಶಿವಣ್ಣ ಅಭಿನಯದ 'ಭಜರಂಗಿ' ಚಿತ್ರ ವಿಮರ್ಶೆ

Posted By:
Subscribe to Filmibeat Kannada

"ನಾನು ಒಂದು ಸಲ ಲಾಂಗ್ ಹಿಡಿದಿದ್ದಕ್ಕೇ ಗಾಂಧಿನಗರ ಹಾಳಾಗಿಬಿಟ್ತು" ಎಂದು ಶಿವಣ್ಣ ಒಂದು ಕಡೆ ಡೈಲಾಗ್ ಹೇಳುತ್ತಾರೆ. ಆ ಡೈಲಾಗೇ ಸಾಕು 'ಭಜರಂಗಿ' ಚಿತ್ರ ಲಾಂಗು, ಮಚ್ಚುಗಳಿಂದ ಹೊರತಾಗಿದೆ ಎನ್ನಲು. ಅಭಿಮಾನಿಗಳ ಬಯಕೆಯೂ ಇದೇ ಆಗಿತ್ತು ಅನ್ನಿ.

ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಅದನ್ನೇ. ಇಲ್ಲಿ ಶಿವಣ್ಣ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಿಲ್ಲ. ಇದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯ 105ನೇ ಚಿತ್ರ ಎಂದು ಅನ್ನಿಸುವುದೇ ಇಲ್ಲ. ಇನ್ನೂ ಮೊದಲ ಚಿತ್ರದಲ್ಲಿ ಅಭಿನಯಿಸಿದಷ್ಟೇ ಉತ್ಸಾಹವನ್ನು ಶಿವಣ್ಣನಲ್ಲಿ ಕಾಣಬಹುದು. ಮೂರು ಗಂಟೆಗಳು ಹೇಗೆ ಸರಿಯಿತು ಎಂಬುದೇ ಗೊತ್ತಾಗಲ್ಲ. [ಚಿತ್ರರಂಗಕ್ಕೇ ಗುಡ್ ಬೈ ಹೇಳುತ್ತೇನೆ ಎಂದ ಶಿವಣ್ಣ]

ಇದಕ್ಕೆ ಕಾರಣವಾಗಿರುವುದು ಚಿತ್ರದ ನಿರ್ದೇಶಕ ಎ.ಹರ್ಷ. ಕಥೆ ಹಾಗೂ ನಿರೂಪಣೆ ಮೇಲಿನ ಹಿಡಿತ ಎಲ್ಲೂ ತಾಳತಪ್ಪದಂದೆ ಪ್ರೆಸೆಂಟ್ ಮಾಡಿದ್ದಾರೆ. ಚಿತ್ರದಲ್ಲಿ ಕಾಮಿಡಿ, ರೊಮ್ಯಾನ್ಸ್, ಆಕ್ಷನ್ ಎಲ್ಲವನ್ನೂ ಸಮವಾಗಿ ತೂಗಿಸಿಕೊಂಡು ಹೋಗಿದ್ದಾರೆ. ಅದಕ್ಕೆ ತಕ್ಕಂತೆ ಶಿವಣ್ಣ ಅಭಿನಯವೂ ಇರುವುದು ಚಿತ್ರವನ್ನು ಇನ್ನಷ್ಟು ಕಲರ್ ಫುಲ್ ಆಗಿಸಿದೆ.

Rating:
3.5/5

ಚಿತ್ರ: ಭಜರಂಗಿ
ನಿರ್ಮಾಪಕರು: ಆರ್.ನಟರಾಜ್ ಗೌಡ, ಎಂ.ಮಂಜುನಾಥ್
ಕಥೆ, ನಿರ್ದೇಶನ, ನೃತ್ಯ ಸಂಯೋಜನೆ: ಎ.ಹರ್ಷ
ಸಂಗೀತ: ಅರ್ಜುನ್ ಜನ್ಯ
ಛಾಯಾಗ್ರಹಣ: ಜೈ ಆನಂದ್
ಸಂಕಲನ: ದೀಪು ಎಸ್. ಕುಮಾರ್
ಸಂಭಾಷನೆ: ಯೋಗಾನಂದ್ ಮುದ್ದಾನ್
ಪಾತ್ರವರ್ಗ: ಶಿವರಾಜಕುಮಾರ್, ಐಂದ್ರಿತಾ ರೇ, ಊರ್ವಶಿ, ರುಕ್ಮಿಣಿ ವಿಜಯಕುಮಾರ್, ಬುಲೆಟ್ ಪ್ರಕಾಶ್, ಸಾಧುಕೋಕಿಲಾ, ತಬಲನಾಣಿ, ಹೊನ್ನವಳ್ಳಿ ಕೃಷ್ಣ, ಶಿವರಾಂ, ಎಂ.ಎಸ್.ಉಮೇಶ್, ಬಿರಾದಾರ್, ಚಿಕ್ಕಣ್ಣ, ಎಂ.ಎನ್.ಲಕ್ಷ್ಮೀದೇವಿ, ಶ್ರುತಿ, ಸಿಲ್ಲಿಲಲ್ಲಿ ಆನಂದ್ ಹಾಗೂ ರಂಗಭೂಮಿ ಕಲಾವಿದರಾದ ಲೋಕಿ, ರಾಜಕುಮಾರ್, ಮಧು, ಚೇತನ್ ಮುಂತಾದವರಿದ್ದಾರೆ. [ಭಜರಂಗಿ ಗ್ಯಾಲರಿ]

ಜೋಗಿ ದಿನಗಳನ್ನು ನೆನಪಿಸುವ ಶಿವಣ್ಣ

ಚಿತ್ರದಲ್ಲಿ ಅಲ್ಲಲ್ಲಿ ಕೆಲವು ಸನ್ನಿವೇಶಗಳು ಕೃತಕವಾಗಿ ಕಂಡರೂ ಒಟ್ಟಾರೆ ಚಿತ್ರವನ್ನು ಗಮನಿಸಿದಾಗ ಅವು ನಗಣ್ಯ ಎನ್ನಿಸುತ್ತದೆ. ತಮ್ಮ 52ರ ಹರೆಯದಲ್ಲೂ ಶಿವಣ್ಣನ ಹುರುಪು, ಹುಮ್ಮಸ್ಸುಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಎಲ್ಲೂ ಅವರ ಪಾತ್ರ ಪೇಲವವಾಗಿ ಕಾಣದಂತೆ ನೋಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಶಿವಣ್ಣ ಅಭಿಮಾನಿಗಳಿಗೆ 'ಜೋಗಿ' ದಿನಗಳನ್ನು ನೆನಪಿಸುತ್ತದೆ.

ಐರನ್ ಲೆಗ್ ಅನ್ನಿಸಿಕೊಳ್ಳುವ ಜೀವ (ಶಿವಣ್ಣ)

ಇಷ್ಟಕ್ಕೂ ಚಿತ್ರದ ಕಥೆ ಏನೆಂದರೆ ಜೀವ (ಶಿವಣ್ಣ) ಎಲ್ಲಿ ಅಡಿಯಿಟ್ಟರೆ ಅಲ್ಲಿ ಏನೋ ಒಂದು ಅನಾಹುತ. ಇವನೊಬ್ಬ ಐರನ್ ಲೆಗ್. ಯಾವ ಕೆಲಸವೂ ಆಗಲ್ಲ ಎಂದು ಶಿವಣ್ಣ ತಂಗಿ (ಊರ್ವಶಿ) ಹೇಳುತ್ತಿತ್ತಾಳೆ. ಅದಕ್ಕೆ ತಕ್ಕಂತೆ ಕೆಲವು ಘಟನೆಗಳೂ ನಡೆಯುತ್ತಿರುತ್ತವೆ. ಆದರೆ ಜೀವ ಜಾತಕ ಮಹತ್ ಜಾತಕ ಎಂದು ಗೊತ್ತಾಗಿ ಅಲ್ಲಿಂದ ಕಥೆಗೆ ಮತ್ತೊಂದು ತಿರುವು ಸಿಗುತ್ತದೆ.

ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿ ಐಂದ್ರಿತಾ ರೇ

ಆ ಜಾತಕದ ಜಾಡು ಹಿಡಿದು ರಾಮದುರ್ಗಕ್ಕೆ ಹೋಗುತ್ತಾರೆ. ತನ್ನ ಪತ್ರಿಕೋದ್ಯಮದ ಪ್ರಾಜೆಕ್ಟ್ ಗಾಗಿ ಗೀತಾ (ಐಂದ್ರಿತಾ ರೇ) ಸಹ ಅದೇ ಊರಿಗೆ ಹೊರಡುತ್ತಾಳೆ. ತಮ್ಮ ಪ್ರಿನ್ಸಿಪಾಲ್ (ಉಮೇಶ್) ಕೊಟ್ಟ ವಾಮಾಚಾರ, ಮಾಟ ಮಂತ್ರದ ಪ್ರಾಜೆಕ್ಟ್ ಗೆ ಆಯ್ಕೆ ಮಾಡಿಕೊಳ್ಳುವ ಸ್ಥಳ ರಾಮದುರ್ಗ.

ಸಂಪೂರ್ಣ ಕಥೆ ಇಲ್ಲೇ ಹೇಳಿದರೆ ಅಷ್ಟು ಮಜಾ ಇರಲ್ಲ

ಅಲ್ಲಿಗೆ ಹೋದ ಮೇಲೆ ಏನಾಗುತ್ತದೆ? ಇಷ್ಟಕ್ಕೂ ಜೀವ ಯಾರು? ಅವನ ಜಾತಕದ ಮಹಾತ್ಮೆ ಏನು? ಎಂಬುದನ್ನು ತಿಳಿಯಬೇಕಾದರೆ ನೀವು 'ಭಜರಂಗಿ' ಚಿತ್ರ ನೋಡಲೇಬೇಕು. ಸಂಪೂರ್ಣ ಕಥೆ ಇಲ್ಲೇ ಹೇಳಿದರೆ ಅಷ್ಟು ಮಜಾ ಇರಲ್ಲ.

ಕಥೆಗೆ ಕೊಟ್ಟಷ್ಟೇ ಒತ್ತು ಹಾಸ್ಯ, ಸಂಭಾಷಣೆಗೂ ಇದೆ

ಇದೊಂದು ಮಾಟ, ಮಂತ್ರ, ತಂತ್ರ, ವಾಮಾಚಾರಕ್ಕೆ ಸಂಬಂಧಿಸಿದ ಕಥೆಯಾದರೂ ನಿರ್ದೇಶಕರು ತಮ್ಮ ಗಮನವನ್ನು ನಾನಾ ದಿಕ್ಕುಗಳಲ್ಲಿ ಹರಿಸಿ ನಿರೂಪಣೆಯಲ್ಲಿ ಹೊಸತನ ಕಾಯ್ದುಕೊಂಡಿದ್ದಾರೆ. ಚಿತ್ರದಲ್ಲಿ ಕಥೆಗೆ ಕೊಡುವಷ್ಟೇ ಒತ್ತನ್ನು ಹಾಸ್ಯ, ಹಾಡು, ಸಂಭಾಷಣೆ, ಸಾಹಸಕ್ಕೂ ಕೊಟ್ಟಿದ್ದಾರೆ.

ಕೆಲವು ಸನ್ನಿವೇಶಗಳು ಚಿತ್ರಕ್ಕೆ ಹೊಸ ಮೆರುಗು

ಶಿವರಾಜ್ ಕುಮಾರ್ ಎಂದಿನಂತೆ ತಮ್ಮ ಅಭಿನಯವನ್ನು ಧಾರೆ ಎರೆದಿದ್ದಾರೆ. 'ಭಜರಂಗಿ'ಯ ತಂದೆಯ ಪಾತ್ರ ಹಾಗೂ 'ಜೀವ' ಮಗನ ಪಾತ್ರಗಳಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ಅಲ್ಲಲ್ಲಿ ಸ್ವಾತಂತ್ರ್ಯಹೋರಾಟ, ಕುದುರೆ ಸವಾರಿ ಸನ್ನಿವೇಶಗಳು ಇವೆ. ಆ ರೀತಿಯ ಸನ್ನಿವೇಶಗಳು ಚಿತ್ರಕ್ಕೆ ಮತ್ತೊಂದು ತೂಕ, ಮೆರುಗನ್ನು ತಂದುಕೊಟ್ಟಿವೆ.

ಖಳನಾಗಿ ಬೆಚ್ಚಿ ಬೀಳಿಸುವ ಸೌರವ್ ಲೋಕೇಶ್

ಗೀತಾ ಪಾತ್ರದಲ್ಲಿ ಐಂದ್ರಿತಾ ರೇ ಗಮನಸೆಳೆಯುತ್ತಾರೆ. ಅಲ್ಲಲ್ಲಿ ಗಯ್ಯಾಳಿಯಾಗಿ, ಕಡೆಕಡೆಗೆ ವಯ್ಯಾರಿಯಾಗಿ ಪ್ರೇಕ್ಷಕರನ್ನು ರಂಜಿಸುತ್ತಾರೆ. ಖಳನಟನಾಗಿ ಸೌರವ್ ಲೋಕೇಶ್ ತನ್ನ ವಿಚಿತ್ರ ಮ್ಯಾನರಿಜಂ ಮೂಲಕ ಬೆಚ್ಚಿಬೀಳಿಸುತ್ತಾನೆ. ಅವರ ಪಾತ್ರ ಉಗಾಂಡಾದ ಅಧ್ಯಕ್ಷನಾಗಿದ್ದ ಈದಿ ಅಮೀನ್ ಎಂಬ ನರಭಕ್ಷಕರನ್ನು ನೆನಪಿಸುತ್ತದೆ.

ಚಿತ್ರದಲ್ಲಿ ಭರ್ಜರಿ ಕಾಮಿಡಿ ಇದೆ

ಇನ್ನು ಚಿತ್ರದಲ್ಲಿ ಭರ್ಜರಿ ಕಾಮಿಡಿ ಇದೆ. ಸಾಕಷ್ಟು ಹಾಸ್ಯನಟರಿದ್ದರೂ ಎಲ್ಲೂ ಅತಿ ಎನ್ನಿಸದೆ ಇತಿಮಿತಿಯಾಗಿ ಹಾಸ್ಯರಸವನ್ನು ಹರಿಸಿದ್ದಾರೆ. ಉಮೇಶ್, ಹೊನ್ನವಳ್ಳಿ ಕೃಷ್ಣ, ಬುಲೆಟ್ ಪ್ರಕಾಶ್, ಸಾಧು ಕೋಕಿಲ, ತಬಲಾ ನಾಣಿ ಹಾಸ್ಯ ಸೊಗಸಾಗಿ ಮೂಡಿಬಂದಿದೆ.

ಚಿತ್ರ ತಾಂತ್ರಿಕವಾಗಿ ಹೇಗೆ ಮೂಡಿಬಂದಿದೆ

ಇನ್ನು ಚಿತ್ರದ ತಾಂತ್ರಿಕ ಅಂಶಗಳನ್ನು ಗಮನಿಸುವುದಾದರೆ ಅರ್ಜುನ್ ಜನ್ಯಾ ಸಂಗೀತ ಭಜರಂಗಿ ಪಾತ್ರ ಹಾಗೂ ಸನ್ನಿವೇಶಗಳ ವೇಗಕ್ಕೆ ತಕ್ಕಂತೆ ಸದ್ದು ಮಾಡಿದೆ. ಹಿನ್ನೆಲೆ ಸಂಗೀತವೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಜೈ ಆನಂದ್ ಅವರ ಛಾಯಾಗ್ರಹಣವೂ ಗಮನಾರ್ಹವಾಗಿದೆ. ಯೋಗಾನಂದ್ ಮುದ್ದಾನ್ ಅವರ ಸಂಭಾಷಣೆ ಎಲ್ಲೂ ಹದ ತಪ್ಪಿಲ್ಲ.

ಮೂರು ಗಂಟೆಗಳ ಕಾಲ ರಂಜಿಸುತ್ತದೆ

ಒಟ್ಟಾರೆಯಾಗಿ ಚಿತ್ರ ಮೂರು ಗಂಟೆಗಳ ಕಾಲ ರಂಜಿಸುತ್ತದೆ. ಶಿವಣ್ಣನ ಸಿಕ್ಸ್ ಪ್ಯಾಕ್ ಕುತೂಹಲಕ್ಕೂ ಕ್ಲೈಮ್ಯಾಕ್ಸ್ ನಲ್ಲಿ ತೆರೆಬೀಳುತ್ತದೆ. ಕೊಟ್ಟ ಕಾಸಿಗೆ ಮೋಸವಿಲ್ಲ. ಶಿವಣ್ಣ ಅಭಿಮಾನಿಗಳಷ್ಟೇ ಅಲ್ಲ ಕನ್ನಡ ಚಿತ್ರಪ್ರೇಮಿಗಳು ನೋಡುವಂತಹ ಚಿತ್ರ. ಇಂದೇ ಟಿಕೆಟ್ ಸಿಕ್ಕಿದರೆ ನಿಮ್ಮ ಅದೃಷ್ಟ. ನೋಡಿ ಪ್ರಯತ್ನಿಸಿ, ಭರ್ಜರಿ ಭಜರಂಗಿ.

English summary
Kannada movie Bhajarangi review. Bhajarangi is the must watch movie for Shivaraj Kumar's fans. It is also a movie, which is to be admired by Kannada audience for its technical richness.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada