»   » ಚಿತ್ರ ವಿಮರ್ಶೆ: 'ಜೈ ಭಜರಂಗಬಲಿ' ಪ್ರೇಕ್ಷಕರು ವಿಲಿವಿಲಿ

ಚಿತ್ರ ವಿಮರ್ಶೆ: 'ಜೈ ಭಜರಂಗಬಲಿ' ಪ್ರೇಕ್ಷಕರು ವಿಲಿವಿಲಿ

Posted By:
Subscribe to Filmibeat Kannada

ಚಿತ್ರದ ಶೀರ್ಷಿಕೆ ನೋಡಿ ಇದ್ಯಾವುದೋ ಭಕ್ತಿಪ್ರಧಾನ ಚಿತ್ರ ಎಂದುಕೊಂಡರೆ ಅದು ನಿಮ್ಮ ತಪ್ಪಲ್ಲ. ಹಾಗಂತ ಇದು ಸೋಷಿಯೋ ಫ್ಯಾಂಟಸಿ ಚಿತ್ರವೂ ಅಲ್ಲ. ಹೋಗಲಿ ಒಂದು ಚೇತೋಹಾರಿ ಚಿತ್ರವೇ ಎಂದರೆ ಊಹೂಂ. ಯಾವುದೇ ಕ್ಯಾಟಗರಿಗೆ ಸೇರದ ಪ್ರೇಕ್ಷಕರ ಸಹನೆಯನ್ನು ಸಿಕ್ಕಾಪಟ್ಟೆ ಪರೀಕ್ಷಿಸುವ ಚಿತ್ರ.

'ಸಂಗಮ'ದಂತಹ ಹಿಟ್ ಚಿತ್ರ ಕೊಟ್ಟ ರವಿವರ್ಮ ಅವರ ನಿರ್ದೇಶನದ ಚಿತ್ರ ಇದು ಎಂದು ಅನ್ನಿಸುವುದೇ ಇಲ್ಲ. ಚಿತ್ರದ ಮೊದಲರ್ಧ ಧಾರಾವಾಹಿ ತರಹ ಸಾಗುತ್ತದೆ. ಚಿತ್ರದಲ್ಲಿ ಸಾಕಷ್ಟು ನುರಿತ ಕಲಾವಿದರಿದ್ದರೂ ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ನಿರ್ದೇಶಕರು ಸೋತಿದ್ದಾರೆ. [ರೋಸ್ ಚಿತ್ರ ವಿಮರ್ಶೆ]

Kannada movie Jai Bajrangbali review1

ಸ್ಯಾಂಡಲ್ ವುಡ್ ಕೃಷ್ಣ ಎನ್ನಿಸಿಕೊಂಡಿರುವ ಅಜೇಯ್ ರಾವ್ ಅವರ ಪಾತ್ರಕ್ಕೂ ಇಲ್ಲಿ ಸರಿಯಾಗಿ ನ್ಯಾಯ ಸಿಕ್ಕಿಲ್ಲ. ಇರುವುದರಲ್ಲಿ ಅಲ್ಪಸ್ವಲ್ಪ ಗಮನಸೆಳೆಯುವುದೆಂದರೆ ಅನಂತನಾಗ್ ಹಾಗೂ ರವಿಶಂಕರ್ ಪಾತ್ರಗಳು ಮಾತ್ರ. ಚಿತ್ರದ ಅಸಲಿ ಕಥೆ ಶುರುವಾಗುವುದೇ ಮುಕ್ಕಾಲು ಸಮಯ ಕಳೆದ ನಂತರ.

ಮಲೇಷ್ಯಾದಿಂದ ತಂದೆಯನ್ನು ನೋಡಲು ಬರುವ ಅಂಬು ಯಾನೆ ಅಂಬುಜಾಗೆ (ಸಿಂಧು ಲೋಕನಾಥ್) ಅಜ್ಜು ಯಾನೆ ಅಜಯ್ (ಅಜೇಯ್ ರಾವ್) ಪರಿಚಯವಾಗುತ್ತದೆ. ಇವರಿಬ್ಬರ ನಡುವೆ ಪ್ರೇಮ ಚಿಗುರುವಷ್ಟರಲ್ಲಿ ಪ್ರೇಕ್ಷಕರ ಪಾಡು ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ ನನ್ನ ತಮ್ಮ ಮಂಕುತಿಮ್ಮನಂತಾಗಿರುತ್ತದೆ.

ಆದರೆ ಪ್ರೇಕ್ಷಕರನ್ನು ಎಚ್ಚರಿಸುವುದು ಮಾತ್ರ ಭರ್ಜರಿ ಹಿನ್ನೆಲೆ ಸಂಗೀತ. ವಿನಾಯಕರಾಮ್ ಕಲಗಾರು ಅವರ ಸಂಭಾಷಣೆ ಕಿವಿಗೆ ಬೀಳದಷ್ಟು ಮೇಲುಗೈ ಸಾಧಿಸಿದೆ ಹಿನ್ನೆಲೆ ಸಂಗೀತ. ಮಲೇಷ್ಯಾದಲ್ಲಿರುವ ತನ್ನ ತಾಯಿ (ಶ್ರುತಿ ನಾಯ್ಡು) ಹಾಗೂ ಭಾರತದಲ್ಲಿರುವ ತನ್ನ ತಂದೆಯನ್ನು ಒಂದು ಮಾಡಬೇಕೆಂಬ ಅಂಬುಜಾ ಆಶಯ, ಅಜ್ಜು ಜೊತೆಗಿನ ಪ್ರೀತಿ ಕೊನೆಗೆ ಏನಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು.

Kannada movie Jai Bajrangbali review2

ಏನೇನು ವಿಶೇಷ, ಕುತೂಹಲ ಇಲ್ಲದ ಕಥೆಯನ್ನು ನಿರ್ದೇಶಕರು ಅದು ಹೇಗೋ ಒಂದಷ್ಟು ಹಾಡುಗಳು, ಇನ್ನೊಂದಿಷ್ಟು ಸಾಹಸ ಸನ್ನಿವೇಶಗಳಿಂದ ಮೇನೇಜ್ ಮಾಡಿದ್ದಾರೆ. ಅಜಯ್ ರಾವ್ ಅವರು ಸಾಹಸ ಸನ್ನಿವೇಶಗಳಲ್ಲಿ ಗಮನಸೆಳೆದಷ್ಟು ರೋಮ್ಯಾಂಟಿಕ್ ಸನ್ನಿವೇಶಗಳಲ್ಲಿ ವಿಫಲರಾಗಿದ್ದಾರೆ.

ಇನ್ನು ಸಿಂಧು ಲೋಕನಾಥ್ ಅವರ ಪಾತ್ರವೂ ಅಷ್ಟೇನು ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ. ಮಲೇಷ್ಯಾದಿಂದ ಬಂದ ಹುಡುಗಿಗೆ ಲೈನ್ ಹೊಡೆಯುವುದು ಅಂದ್ರೇನು ಎಂಬುದನ್ನೂ ನಾಯಕ ನಟ ತೋರಿಸಬೇಕಾಗುತ್ತದೆ. ಪ್ರೇಕ್ಷಕರೂ ನಿಟ್ಟುಸಿರು ಬಿಡುತ್ತಾ ಮುಂದಿನ ಸನ್ನಿವೇಶಗಳಿಗೆ ಕಾಯಬೇಕಾಗುತ್ತದೆ.

ಚಿತ್ರದಲ್ಲಿ ಸಾಕಷ್ಟು ಹಾಸ್ಯ ಕಲಾವಿದರಿದ್ದಾರೆ ಮಿತ್ರ, ಟೆನ್ನಿಸ್ ಕೃಷ್ಣ, ಬುಲೆಟ್ ಪ್ರಕಾಶ್. ಆದರೆ ಅಲ್ಲೂ ಭರಪೂರ ಹಾಸ್ಯವನ್ನು ನಿರೀಕ್ಷಿಸುವಂತಿಲ್ಲ. ಅರುಣ್ ಸಾಗರ್, ಶ್ರುತಿ ನಾಯ್ಡು, ಆದಿಲೋಕೇಶ್ ಪಾತ್ರಗಳು ಪರ್ವಾಗಿಲ್ಲ. ವಿ ಹರಿಕೃಷ್ಣ ಅವರ ಸಂಗೀತದ ಮೋಡಿಯನ್ನು ಎರಡು ಹಾಡುಗಳಲ್ಲಿ ಆನಂದಿಸಬಹುದು. ಛಾಯಾಗ್ರಹಣ ಓಕೆ.

Kannada movie Jai Bajrangbali review3

ಒಟ್ಟಾರೆಯಾಗಿ ಅಜೇಯ್ ರಾವ್ ಅವರು ಈ ಬಾರಿ ನಿರಾಸೆ ಮೂಡಿಸಿದ್ದಾರೆ. ಚಿತ್ರದಲ್ಲಿ ಪ್ರೇಕ್ಷಕರನ್ನು ಸೀಟಿಗೆ ಅಂಟಿ ಕುಳಿತುಕೊಳ್ಳುವಂತೆ ಮಾಡುವ ಸನ್ನಿವೇಶಗಳಾಗಲಿ, ಕಥೆಯಾಗಲಿ ಇಲ್ಲದಿರುವುದು 'ಜೈ ಭಜರಂಗಬಲಿ' ಚಿತ್ರದ ಅತಿದೊಡ್ಡ ನ್ಯೂನತೆ ಎಂಬ ಮಾತನ್ನು ಬೇಸರದಿಂದಲೇ ಹೇಳಬೇಕಾಗಿದೆ.

Rating:
2.0/5

ಚಿತ್ರ: ಜೈ ಭಜರಂಗಬಲಿ
ನಿರ್ಮಾಪಕರು: ಎಸ್ ಟಿ ವಿಜಯ್ ಪಾಲ್ ರಾಜ್
ಚಿತ್ರಕಥೆ, ನಿರ್ದೇಶನ: ರವಿವರ್ಮ
ಸಂಗೀತ: ವಿ ಹರಿಕೃಷ್ಣ
ಛಾಯಾಗ್ರಹಣ: ಎ ವೆಂಕಟೇಶ್
ಸಾಹಸ ನಿರ್ದೇಶನ: ಡಿಫರೆಂಟ್ ಡ್ಯಾನಿ
ಹಾಡುಗಳು
: ಯೋಗರಾಜ್ ಭಟ್
ಸಂಭಾಷಣೆ: ವಿನಾಯಕರಾಮ್ ಕಲಗಾರು
ಪಾತ್ರವರ್ಗ: ಕೃಷ್ಣ ಅಜೇಯ್ ರಾವ್, ಸಿಂಧೂಲೋಕನಾಥ್, ಅನಂತನಾಗ್, ರವಿಶಂಕರ್, ಶೋಭಾರಾಜ್, ಆದಿಲೋಕೇಶ್, ಬುಲೆಟ್ ಪ್ರಕಾಶ್, ಮಿತ್ರ, ಅರುಣ್ ಸಾಗರ್, ಶ್ರುತಿನಾಯ್ಡು, ಟೆನ್ನಿಸ್ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

English summary
Kannada movie Jai Bajrangbali review. It's not an extraordinary film. The main problem with Jai Bajrangbali is that it does not value the viewer's time.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada