For Quick Alerts
  ALLOW NOTIFICATIONS  
  For Daily Alerts

  ವಿಷ್ಣು ಅಭಿಮಾನಿಗಳೇ, 'ರಾಮಾಚಾರಿ' ನೋಡಲು ಮರೆಯದಿರಿ..

  |

  Rating:
  3.5/5
  Star Cast: ಯಶ್, ರಾಧಿಕಾ ಪಂಡಿತ್, ಶ್ರೀನಾಥ್, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್
  Director: ಸಂತೋಷ್ ಆನಂದರಾಮ್

  ಸೀನ್ 1 : ಎಕ್ಸಾಂ ಹಾಲ್ ನಲ್ಲಿ ಸೊಕ್ಕಿನ ಬಾಲಕ 'ರಾಮಾಚಾರಿ' ಕಾಪಿ ಮಾಡುತ್ತಾನೆ. ಓದು ತಲೆಗೆ ಹತ್ತದಿದ್ದರೂ ಹೇಗಾದರೂ ಮಾಡಿ ಪಾಸ್ ಆಗಬೇಕು ಅನ್ನುವ ಕಾರಣಕ್ಕೆ ಥೇಟ್ 'ನಾಗರಹಾವು' ಚಿತ್ರದ 'ರಾಮಾಚಾರಿ'ಯಂತೆ ಕಾಲು ಮೇಲೆ ಕಾಪಿ ಚೀಟಿಗಳನ್ನು ಅಂಟಿಸಿಕೊಂಡು ಪರೀಕ್ಷೆ ಬರೆಯುವುದಕ್ಕೆ ಬರುತ್ತಾನೆ.

  ಸೀನ್ 2 : ಪ್ರೀತಿಸಿದ ಹುಡುಗಿ ಮಾರ್ಗರೇಟ್ ಸಿಕ್ಕರೂ, ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕೆ ಆಗದೆ 'ನಾಗರಹಾವು' ಚಿತ್ರದಲ್ಲಿ ಮಾರ್ಗರೇಟ್ ಜೊತೆ ರಾಮಾಚಾರಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಅಂದಿನ 'ರಾಮಾಚಾರಿ' ಮತ್ತು 'ಮಾರ್ಗರೇಟ್' ಪ್ರತಿಮೆ ಎದುರಿಗೆ ಇಂದಿನ 'ರಾಮಾಚಾರಿ' ಮತ್ತು 'ಮಾರ್ಗರೇಟ್' ಒಂದಾಗುತ್ತಾರೆ! [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

  ಇದು ಅಂದಿನ 'ರಾಮಾಚಾರಿ' ಮತ್ತು ಇಂದಿನ 'ರಾಮಾಚಾರಿ' ಮಧ್ಯೆ ಇರುವ ಸಾಮ್ಯತೆ ಮತ್ತು ವ್ಯತ್ಯಾಸ. ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ 'ನಾಗರಹಾವು' ಚಿತ್ರದ ಕಥನಾಯಕ 'ರಾಮಾಚಾರಿ'ಯನ್ನ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ವೈಭವೋಪೇತವಾಗಿ ತೆರೆಮೇಲೆ ಮರುಸೃಷ್ಟಿಸಿದೆ.

  'ರಾಮಾಚಾರಿ' ಅನ್ನುವ ಟೈಟಲ್ ಗೂ, 'ಕೋಟಿಗೊಬ್ಬ' ಡಾ.ವಿಷ್ಣುವರ್ಧನ್ ಇಮೇಜ್ ಗೂ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ನ್ಯಾಯ ಸಲ್ಲಿಸಿದೆ. ಅಷ್ಟರಮಟ್ಟಿಗೆ ಸಿನಿಮಾದಲ್ಲಿ 'ರಾಮಾಚಾರಿ' ವಿಜೃಂಭಿಸಿದ್ದಾನೆ. [ಜೂನಿಯರ್ ಸಾಹಸಸಿಂಹನಾಗಿ ಘರ್ಜಿಸಿದ ಯಶ್]

  'ರಾಮಾಚಾರಿ'ಯಾದ ರಾಕಿಂಗ್ ಸ್ಟಾರ್

  'ರಾಮಾಚಾರಿ'ಯಾದ ರಾಕಿಂಗ್ ಸ್ಟಾರ್

  'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಕಥಾನಾಯಕ ರಾಮಾಚಾರಿ (ಯಶ್). ಹೆಸರಿನ ಬಲವೋ, ಹುಟ್ಟು ಗುಣವೋ ಅಥವಾ ಅಭಿಮಾನದ ಪರಾಕಾಷ್ಟೆಯೋ ಗೊತ್ತಿಲ್ಲ. ಆದ್ರೆ, 'ನಾಗರಹಾವು' ಚಿತ್ರದ 'ರಾಮಾಚಾರಿ'ಯಲ್ಲಿರುವ ಎಲ್ಲಾ ಗುಣಗಳು ಈ 'ರಾಮಾಚಾರಿ'ಯಲ್ಲೂ ಇವೆ. ಅದೇ ಈ ಸಿನಿಮಾದ ವೈಶಿಷ್ಠ್ಯ.

  ಅಭಿಮಾನಿ 'ರಾಮಾಚಾರಿ'

  ಅಭಿಮಾನಿ 'ರಾಮಾಚಾರಿ'

  ಮೂಗಿನ ತುದಿಯಲ್ಲೇ ಕೋಪ, ಸೊಕ್ಕು, ಓದು ಅಂದ್ರೆ ಅಲರ್ಜಿ, ನೋಡೋಕೆ ಒರಟ ಆದ್ರೂ ಹೃದಯವಂತ. 'ರಾಮಾಚಾರಿ'ಯ ಕಟ್ಟಾ ಅಭಿಮಾನಿಯಾಗಿ ಹುಡುಗಿಯರಿಂದ ಮಾರುದ್ದ ದೂರ ನಿಲ್ಲುವ ಯುವ ರಾಮಾಚಾರಿಯ (ಯಶ್) ಹಿಂದೆ 'ಮಾರ್ಗರೇಟ್' ಬೀಳುತ್ತಾಳೆ.

  ರಾಮಾಚಾರಿ-ಮಾರ್ಗರೇಟ್ ಲವ್ ಸ್ಟೋರಿ

  ರಾಮಾಚಾರಿ-ಮಾರ್ಗರೇಟ್ ಲವ್ ಸ್ಟೋರಿ

  ''ನಾನು ಪಕ್ಕಾ ಮಾಸ್'' ಅಂತ ಬೀಗುವ ರಾಮಾಚಾರಿಗೆ ಕ್ಲಾಸ್ ಹುಡುಗಿ ಮಾರ್ಗರೇಟ್ (ರಾಧಿಕಾ ಪಂಡಿತ್) ಕ್ಲೀನ್ ಬೌಲ್ಡ್ ಆಗುತ್ತಾಳೆ. ಅಲ್ಲಿಂದ ನಡೆಯುವುದೇ ಇಬ್ಬರ ಲವ್ವಿ-ಡವ್ವಿ ಕಹಾನಿ. ['ರಾಮಾಚಾರಿ' ಅನ್ನುವ ಹೆಸರೇ ಪ್ರಾಬ್ಲಂ..!]

  ಪ್ರೀತಿನಾ...ಸ್ವಾಭಿಮಾನನಾ...?

  ಪ್ರೀತಿನಾ...ಸ್ವಾಭಿಮಾನನಾ...?

  ಪ್ರೀತಿಗೆ ಬಗ್ಗುವ ರಾಮಾಚಾರಿ ಅಷ್ಟೇ ಸ್ವಾಭಿಮಾನಿ. ಸಿಟ್ಟು, ಕೋಪ, ಹಠಕ್ಕೆ ಬಿದ್ದು ಏನು ಬೇಕಾದರೂ ಮಾಡುವ ರಾಮಾಚಾರಿ ತನ್ನ ಪ್ರೀತಿಯನ್ನ ಗೆಲ್ಲುತ್ತಾನಾ? ಸ್ವಾಭಿಮಾನದಿಂದ ತಂದೆಗೆ ಮಾತು ಕೊಡುವ ರಾಮಾಚಾರಿ ಅಪ್ಪನಿಗೆ ಬೆಲೆ ಕೊಡುತ್ತಾನೋ, ಇಲ್ಲಾ ಪ್ರೀತಿಯನ್ನು ಉಳಿಸಿಕೊಳ್ಳುತ್ತಾನೋ..? ಈ ಪ್ರಶ್ನೆಗಳಿಗೆ ನೀವು ಚಿತ್ರಮಂದಿರದಲ್ಲೇ ಉತ್ತರ ಕಂಡುಕೊಳ್ಳಬೇಕು.

  'ರಾಕಿಂಗ್' ರಾಕ್ ಸ್ಟಾರ್

  'ರಾಕಿಂಗ್' ರಾಕ್ ಸ್ಟಾರ್

  ಥೇಟ್ 'ಅಭಿನವ ಭಾರ್ಗವ' ಡಾ.ವಿಷ್ಣುವರ್ಧನ್ ರಂತೆ ತೆರೆಮೇಲೆ ಅಕ್ಷರಶಃ ಘರ್ಜಿಸಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಎದೆ ಮೇಲೆ 'ರಾಮಾಚಾರಿ'ಯ ಚಿತ್ತಾರ ಹೊತ್ತು, ಸಿಂಹ ಘರ್ಜನೆಯೊಂದಿಗೆ ಎಂಟ್ರಿಕೊಡುವ ಯಶ್, ಫೈಟ್ ಸೀನ್ ಗಳಲ್ಲಿ 'ಸಾಹಸಸಿಂಹ'ನನ್ನ ನೆನಪಿಸುತ್ತಾರೆ. ಕೈಗೆ ಖಡಗ ತೊಟ್ಟು, 'ಹಾವಿನ ದ್ವೇಷ' ಹಾಡು ಹಾಡಿ, ಅಲ್ಲಲ್ಲಿ ವಿಷ್ಣುವರ್ಧನ್ ಅನುಕರಣೆ ಕೂಡ ಮಾಡಿದ್ದಾರೆ. ಎಲ್ಲೋ ಅತಿಯಾಯ್ತು, ಅಬ್ಬರವಾಯ್ತು ಅನ್ನುವ ಹಾಗಿಲ್ಲದೆ, ಮಾಸ್ ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸಿಕೊಳ್ಳುವ ಮಟ್ಟಿಗೆ ಮೆರೆದಿದ್ದಾರೆ ರಾಕಿಂಗ್ ಸ್ಟಾರ್ ಯಶ್.

  ರಾಧಿಕಾ ಮ್ಯಾಜಿಕ್

  ರಾಧಿಕಾ ಮ್ಯಾಜಿಕ್

  ಆರು ವರ್ಷಗಳ ನಂತ್ರ ಯಶ್ ಜೊತೆಯಾಗಿರುವ ರಾಧಿಕಾ, ಚಿತ್ರದಲ್ಲಿ ಸರಳ, ಸುಂದರ. ತಮ್ಮ ಎಂದಿನ ಮುದ್ದಾದ ಅಭಿನಯ ನೀಡಿರುವ ರಾಧಿಕಾ ಸಿಟ್ಟಲ್ಲಿ ಮುಖ ತಿರುವುದರಿಂದ ಹಿಡಿದು ಕುಡಿದು ಆವಾಜ್ ಹಾಕುವವರೆಗೂ ರಾಮಾಚಾರಿಯ ಜೋಡಿಯಾಗಿ ಸೂಪರ್. ಉಳಿದಂತೆ ಅಚ್ಯುತ್ ಕುಮಾರ್, ಶ್ರೀನಾಥ್, ಮಾಳವಿಕಾ ಅವಿನಾಶ್, ಧ್ಯಾನ್ ಕೊಟ್ಟ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

  ಯಶ್-ರಾಧಿಕಾ ಜೋಡಿಯ ಮೋಡಿ

  ಯಶ್-ರಾಧಿಕಾ ಜೋಡಿಯ ಮೋಡಿ

  ನಿಜಜೀವನದಲ್ಲಿ ಇಬ್ಬರ ಲವ್ ಸ್ಟೋರಿಯ 'ಗಾಸಿಪ್' ಇರುವ ಕಾರಣಕ್ಕೋ ಏನೋ, ತೆರೆಮೇಲೆ ಈ ಜೋಡಿಯ ಕೆಮಿಸ್ಟ್ರಿ 'ರಿಯಲ್' ಅಂತ ಭಾಸವಾಗುತ್ತೆ. ಅಭಿನಯ ಅನ್ನುವುದಕ್ಕಿಂತ ಹೆಚ್ಚಾಗಿ ಅನುಭವಿಸಿ ನಟಿಸಿದಂತೆ ಕಾಣುವ ಯಶ್ ಮತ್ತು ರಾಧಿಕಾ, ಚಿತ್ರದ ಮೂಲಕ ಯುವ ಪ್ರೇಮಿಗಳ ಮನಮುಟ್ಟುವುದು ಖಚಿತ.

  ಚಪ್ಪಾಳೆ ಗಿಟ್ಟಿಸುವ 'ಡೈಲಾಗ್ಸ್'

  ಚಪ್ಪಾಳೆ ಗಿಟ್ಟಿಸುವ 'ಡೈಲಾಗ್ಸ್'

  'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಮೇನ್ ಹೈಲೈಟ್ ಅಂದ್ರೆ ಚಿತ್ರದಲ್ಲಿರುವ ಡೈಲಾಗ್ ಗಳು. ಡಾ.ವಿಷ್ಣುವರ್ಧನ್ ಮತ್ತು ಯಶ್ ಇಮೇಜ್ ಗೆ ಹೇಳಿಮಾಡಿಸಿದಂತಿರುವ ಕೆಲ ಡೈಲಾಗ್ ಗಳು 'ರಿಯಲಿಸ್ಟಿಕ್' ಆಗಿವೆ. ಅಂತಹ ಡೈಲಾಗ್ಸ್ ನ ಕಡ್ಡಿ ತುಂಡು ಮಾಡಿದಂತೆ ಖಡಕ್ ಆಗಿ ಹೇಳಿರುವ ಯಶ್ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸುತ್ತಾರೆ.

  ಪಾತ್ರ ಪೋಷಣೆ

  ಪಾತ್ರ ಪೋಷಣೆ

  ಹಾಗ್ನೋಡಿದ್ರೆ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಹೇಳಿಕೊಳ್ಳುವ ಕಥೆ ಏನೂ ಇಲ್ಲ. 'ರಾಮಾಚಾರಿ'ಯ ಅಭಿಮಾನಿಯ ಸುತ್ತ ನಡೆಯುವ ಕಥೆಯಲ್ಲಿ 'ನಾಗರಹಾವು' ಚಿತ್ರದ ಕೆಲ ಟ್ವಿಸ್ಟ್ ಗಳನ್ನಿಟ್ಟುಕೊಂಡು ಮಾಡಿರುವ ಪಾತ್ರ ಪೋಷಣೆ ಪ್ರೇಕ್ಷಕರಿಗೆ ಇಷ್ಟವಾಗುತ್ತೆ. ಹಾಗಂತ ಇಡೀ ಸಿನಿಮಾದಲ್ಲಿ 'ನಾಗರಹಾವಿ'ನ ನೆರಳಿಲ್ಲ. ಆದರೂ 'ರಾಮಾಚಾರಿ'ಯನ್ನ ನೋಡುವಾಗ 'ನಾಗರಹಾವು' ನೆನಪಾಗದೇ ಇರುವುದಿಲ್ಲ.

  ಸಂತೋಷ್ ಲಾಜಿಕ್

  ಸಂತೋಷ್ ಲಾಜಿಕ್

  ಅಲ್ಲಲ್ಲಿ ಕೆಲ ಗಿಮಿಕ್ ಮಾಡಿದರೂ ಸಂತೋಷ್ ಅನಂದ್ ರಾಮ್ ನಿರ್ದೇಶನ ಅಚ್ಚುಕಟ್ಟಾಗಿದೆ. ವಿಭಿನ್ನ ಶೈಲಿಯ ಚಿತ್ರಕಥೆ ಮೂಲಕ ಸಂತೋಷ್, ಮೊದಲ ಪ್ರಯತ್ನದಲ್ಲೇ ಪಾಸ್ ಆಗಿದ್ದಾರೆ. ಯಶ್, ರಾಧಿಕಾ ಅಭಿನಯದಿಂದ ಚಿತ್ರಕ್ಕೆ ಹೆಚ್ಚು ಕಳೆ ಬಂದಿದೆ. ಇನ್ನೂ ವೈದಿ ಕ್ಯಾಮರಾ ವರ್ಕ್ ಸೊಗಸಾಗಿದೆ. ವಿ.ಹರಿಕೃಷ್ಣ ಸಂಗೀತ ಈಗಾಗ್ಲೇ ಜನಪ್ರಿಯವಾಗಿದೆ. ಕೆ.ಎಂ.ಪ್ರಕಾಶ್ ಕತ್ರಿ ಕೆಲಸ ಸ್ವಲ್ಪ ಚುರುಕಾಗಿದಿದ್ದರೆ, ಸೆಕೆಂಡ್ ಹಾಫ್ ನಲ್ಲಿ ಕೊಂಚ ವೇಗ ಇರುತ್ತಿತ್ತು. ['ಅಣ್ತಮ್ಮ' ಯಶ್ ಗಾನಬಜಾನ ಇಲ್ಲಿದೆ ನೋಡಿ]

  ವಿಷ್ಣು ಅಭಿಮಾನಿಗಳೇ...ಮಿಸ್ ಮಾಡ್ಬೇಡಿ...!

  ವಿಷ್ಣು ಅಭಿಮಾನಿಗಳೇ...ಮಿಸ್ ಮಾಡ್ಬೇಡಿ...!

  'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಯಶ್ ಅಭಿಮಾನಿಗಳಿಗಿಂತ ಸಾಹಸಸಿಂಹನ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗುತ್ತೆ. ಯಶ್-ರಾಧಿಕಾ ಕೆಮಿಸ್ಟ್ರಿ ಚೆನ್ನಾಗಿದೆ. ಈ ಚಿತ್ರವನ್ನ ಎಷ್ಟು ಬಾರಿ ನೋಡಿದರೂ ಬೋರ್ ಆಗಲ್ಲ. ಬೆಳ್ಳಿತೆರೆಮೇಲೆ 'ಸಿಂಹ ಘರ್ಜನೆ'ಯನ್ನ ಮಿಸ್ ಮಾಡಿಕೊಂಡವರು, ಮಿಸ್ ಮಾಡದೇ 'ರಾಮಾಚಾರಿ'ಯನ್ನ ನೋಡಿ.

  English summary
  MR and MRS Ramachari is a romantic-action movie. Yash's character is inspired by Dr.Vishnuvardhan's role in classic ''Nagarahaavu'. He is seen as a big fan of 'Ramachari'. MR and MRS Ramachari is a wholesome entertainer and a must watch for Dr.Vishnuvardhan fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X