»   » ಕೋಮಲ್ 'ನಮೋ ಭೂತಾತ್ಮ' ಚಿತ್ರ ವಿಮರ್ಶೆ

ಕೋಮಲ್ 'ನಮೋ ಭೂತಾತ್ಮ' ಚಿತ್ರ ವಿಮರ್ಶೆ

By: ಉದಯರವಿ
Subscribe to Filmibeat Kannada

ಹಾಸ್ಯ ಮತ್ತು ಭಯಾನಕ ರಸಗಳನ್ನು ಒಟ್ಟಿಗೆ ಬೆರೆಸುವುದು ಸ್ವಲ್ಪ ಕಷ್ಟದ ಕೆಲಸ. ಆದರೆ ಇವೆರಡೂ ರಸಗಳನ್ನು ಹದವಾಗಿ ಬೆರೆಸಿ ಒಂದು ರುಚಿಯಾದ ನಳಪಾಕವನ್ನು ಕೊಡುವಲ್ಲಿ ನಿರ್ದೇಶಕ ಮುರಳಿ ಗೆದ್ದಿದ್ದಾರೆ. ಇದು ಅವರ ಮೊದಲ ಪ್ರಯತ್ನ ಎಂಬುದು ವಿಶೇಷ.

ಹಾಗಂತ 'ನಮೋ ಭೂತಾತ್ಮ' ಚಿತ್ರವೇನು ಸ್ವಮೇಕ್ ಅಲ್ಲ. ತಮಿಳಿನ 'ಯಾಮಿರುಕ್ಕ ಭಯಮೇ' ಚಿತ್ರದ ನೆರಳಚ್ಚು. ಟೆಲಿಮಾರ್ಕೆಟರ್ ಒಬ್ಬನ ರೋಚಕ ಕಥೆಯೇ ನಮೋ ಭೂತಾತ್ಮ. ಡಾನ್ ಒಬ್ಬನ ಬಳಿ ಸಾಲ ತೆಗೆದುಕೊಂಡು ಎಸ್ಕೇಪ್ ಆಗುತ್ತಾನೆ ನಾಯಕ. [ಕನ್ನಡಕ್ಕೆ ಕೋಮಲ್ ಜೊತೆ ತೆಲುಗು ಹಾಸ್ಯನಟ ಆಲಿ]

ಆದರೆ ನಾಯಕನ ತಂದೆಗೆ ಹಳ್ಳಿಯಲ್ಲಿ ಭವ್ಯವಾದ ಬಂಗಲೆ ಇರುವುದು ಗೊತ್ತಾಗುತ್ತದೆ. ಈ ಮನೆಯನ್ನು ಹೋಟೆಲ್ ಆಗಿ ಪರಿವರ್ತಿಸುತ್ತಾನೆ. ಅಲ್ಲಿಂದ ಶುರುವಾಗುತ್ತದೆ ನೋಡಿ ಭೂತದ ಕಾಟ. ಬಚಾವಾಗಲು ನಾಯಕ ಏನೆಲ್ಲಾ ಕಸರತ್ತು ಮಾಡುತ್ತಾನೆ, ಭೂತ ಹೇಗೆಲ್ಲಾ ಕಾಡುತ್ತದೆ ಎಂಬುದನ್ನು ತೆರೆಯ ಮೇಲೆ ನೋಡಿಯೇ ಅನುಭವಿಸಬೇಕು.

ಕೋಮಲ್ ಅವರು ತಮ್ಮ ಪಾತ್ರಕ್ಕೆ ಅಕ್ಷರಶಃ ಜೀವ ತುಂಬಿದ್ದಾರೆ. ಅವರ ಕಾಮಿಡಿ ಟೈಮಿಂಗ್ ಗೆ ಪ್ರೇಕ್ಷಕರು ಫಿದಾ ಆಗಲೇಬೇಕು. ನಿರ್ದೇಶಕರು ಚಿತ್ರಕಥೆಯನ್ನು ಗರಿಗರಿಯಾಗಿ ಹೆಣೆದಿರುವ ಕಾರಣ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ಸಿಗುತ್ತದೆ.

ಚಿತ್ರದ ಮೊದಲರ್ಧ ಅದ್ಭುತವಾಗಿ ಮೂಡಿಬಂದಿದೆ. ದ್ವಿತೀಯಾರ್ಧದಲ್ಲಿ ಸ್ವಲ್ಪ ಹಿಡಿತ ತಪ್ಪಿದಂತೆ ಅನ್ನಿಸಿದರೂ ಆದ್ಯಂತ ಕುತೂಹಲ ಉಳಿಸಿಕೊಳ್ಳುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಪೋಷಕ ಪಾತ್ರಗಳನ್ನೂ ಮರೆಯುವಂತಿಲ್ಲ. ಆದರೆ ಕಡೆಗೂ ಮನಸ್ಸಿನಲ್ಲಿ ಉಳಿಯುವುದು ಕೋಮಲ್ ಪಾತ್ರ.

ಚಿತ್ರ ನೋಡಿದ ಬಳಿಕ ಕೊನೆಗೆ ಅನ್ನಿಸಿದ್ದೇನೆಂದರೆ ನಿರ್ದೇಶಕ ಮುರಳಿ ಅವರಿಗೆ ಸ್ವಮೇಕ್ ಚಿತ್ರ ಮಾಡುವ ಎಲ್ಲಾ ಶಕ್ತಿ ಸಾಮರ್ಥ್ಯಗಳು ಇವೆ. ಆದರೂ ಅವರು ರೀಮೇಕ್ ಗೆ ಯಾಕೆ ಜೋತು ಬಿದ್ದರೋ ಏನೋ. ನಮೋ ಭೂತಾತ್ಮ ಚಿತ್ರ ಒಂದಷ್ಟು ಭಯ, ಇನ್ನೊಂದಿಷ್ಟು ಹಾಸ್ಯವನ್ನು ಪ್ರೇಕ್ಷಕರಿಗೆ ಕೊಡುತ್ತದೆ. ಈ ವಾರಾಂತ್ಯದಲ್ಲಿ ನೋಡಲು ಒಂದು ಉತ್ತಮ ಮನರಂಜನಾತ್ಮಕ ಸಿನಿಮಾ.

English summary
Kannada movie Namo Boothatma review. Namo Boothatma will make you squirm with fear and laugh at the same time. It is a complete entertainer that could be watched over the weekend. Over all a good attempt.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada