For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ಶರಣ್ ಅಭಿನಯದ, ಹರ್ಷ ನಿರ್ದೇಶನದ 'ಜೈ ಮಾರುತಿ 800'

  |

  ಹಾಸ್ಯ ನಟನಿಂದ ನಾಯಕ ನಟನಾಗಿ ಭಡ್ತಿ ಪಡೆದ ನಂತರ ಶರಣ್, ಆಯ್ಕೆ ಮಾಡಿಕೊಂಡಿರುವ ಕಥೆಗಳು ಅವರ ಇಮೇಜಿಗೆ ಸೂಟ್ ಅಗುವಂತದ್ದು. ಅದು ವಿಕ್ಟರಿ ಚಿತ್ರವಾಗಿರಲಿ, ಅಧ್ಯಕ್ಷ ಅಥವಾ ಬುಲೆಟ್ ಬಸ್ಯಾ ಚಿತ್ರವಿರಲಿ, ಆ ಸಾಲಿಗೆ ಇನ್ನೊಂದು ಸೇರ್ಪಡೆ 'ಜೈ ಮಾರುತಿ 800'.

  ಇನ್ನು ಪವನಸುತನ ಪರಮಭಕ್ತನಾಗಿರುವ ನಿರ್ದೇಶಕ ಎ ಹರ್ಷ, ಆಂಜನೇಯನ ಮೇಲಿರುವ ತನ್ನ ನಂಬಿಕೆಯನ್ನು ಜೈ ಮಾರುತಿ ಚಿತ್ರದಲ್ಲೂ ಮುಂದುವರಿಸಿದ್ದಾರೆ. ಆದರೆ, ಭಜರಂಗಿ ಮತ್ತು ವಜ್ರಕಾಯ ಚಿತ್ರದ ಹಾಗೇ, ಈ ಚಿತ್ರವೂ ಬಾಕ್ಸಾಫೀಸಿನಲ್ಲಿ ಸದ್ದು ಮಾಡುತ್ತೋ ಎನ್ನುವುದು ಚಿತ್ರಪ್ರೇಮಿಗಳ ಕೈಯಲ್ಲಿದೆ.

  ಈ ಚಿತ್ರದಲ್ಲಿ ಭರಪೂರ ಹಾಸ್ಯ ದೃಶ್ಯಗಳಿಗೆ, ಸೆಂಟಿಮೆಂಟ್ ಸನ್ನಿವೇಶಕ್ಕೆ ಕೊರತೆಯಿಲ್ಲ, ಡಬಲ್ ಮೀನಿಂಗ್ ಡೈಲಾಗುಗಳು, ಕಲಾವಿದರ ಉತ್ತಮ ನಟನೆಯೂ ಇವೆ. ಆದರೂ, ಚಿತ್ರದ ಮಧ್ಯೆ ಮಧ್ಯೆ ಪ್ರೇಕ್ಷಕ ಆಕಳಿಸುತ್ತಾನೆಂದರೆ ಅದು ಸಂಕಲನಕಾರ ಕತ್ತರಿಯನ್ನು ಸರಿಯಾಗ ಪ್ರಯೋಗಿಸದೇ ಇದ್ದದ್ದು.

  ಹದಿನಾರನೇ ಶತಮಾನದ ಚಂದ್ರವರ್ಮನ ಕಾಲದಲ್ಲಿ ಇಬ್ಬರು ಮಲ್ಲಯುದ್ದ ಪಟುಗಳ ವೈಷಮ್ಯ ಆಖಾಡಕ್ಕೆ ಸೀಮಿತವಾಗದೇ, ಎರಡು ಊರಿಗೂ ವಿಸ್ತರಿಸಿ, ಹೊಡೆದಾಟ ಬಡಿದಾಟ, ರಕ್ತಪಾತ ನಡೆದು, ಊರಿನ ಗ್ರಾಮಸ್ಥರು ಪರಸ್ಪರ ದ್ವೇಷ ಸಾಧಿಸುವ ಕಥೆಯೊಂದಿಗೆ ಕಿಚ್ಚ ಸುದೀಪ್ ವಾಯ್ಸ್ ಓವರ್ ಮೂಲಕ ಚಿತ್ರ ಆರಂಭ ಪಡೆಯುತ್ತದೆ.

  ಚಿತ್ರದ ಫುಲ್ ವಿಮರ್ಶೆಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

  Rating:
  3.5/5
  Star Cast: ಶರಣ್, ಶ್ರುತಿ ಹರಿಹರನ್, ಶುಭ ಪೂಂಜಾ, ಸಾಧು ಕೋಕಿಲ, ಮಧು ಗುರುಸ್ವಾಮಿ
  Director: ಹರ್ಷ ಎ

  ಕುಸ್ತಿಪಟುಗಳ ವೈಷಮ್ಯ

  ಕುಸ್ತಿಪಟುಗಳ ವೈಷಮ್ಯ

  ಸಿಂಹರಾಯನದುರ್ಗದ ವೀರಪ್ಪ ಮತ್ತು ಗಜಸೀಮೆಯ ನರಸಿಂಹ ಎನ್ನುವ ಗ್ರಾಮದ ಇಬ್ಬರು ಕುಸ್ತಿಪಟುಗಳ ಕುಟುಂಬ ವೈಷಮ್ಯ ಊರನ್ನೆಲ್ಲಾ ಆವರಿಕೊಂಡಿರುತ್ತದೆ. ಬಾಲ್ಯದಲ್ಲಿ ನಡೆದ ಘಟನೆಯೊಂದರಲ್ಲಿ ನರಸಿಂಹನ ಸಹೋದರ ಮೃತ ಪಟ್ಟಿರುತ್ತಾನೆ. ಸಹೋದರನ ಸಾವಿಗೆ ವೀರಪ್ಪನ ಕಡೆಯವರು (ಶರಣ್ ಸ್ನೇಹಿತ) ಕಾರಣ ಎನ್ನುವ ತಪ್ಪು ಕಲ್ಪನೆಯಲ್ಲಿ ನರಸಿಂಹ ಇದ್ದಿದ್ದೇ ಎರಡು ಕುಟುಂಬಗಳ ನಡುವಣ ವೈಷಮ್ಯ ಬೆಳೆಯಲು ಕಾರಣವಾಗಿರುತ್ತದೆ.

  ಸಾವನ್ನಪ್ಪುವ ಶರಣ್ ಸ್ನೇಹಿತ

  ಸಾವನ್ನಪ್ಪುವ ಶರಣ್ ಸ್ನೇಹಿತ

  ಶರಣ್ ಸ್ನೇಹಿತ ಅಪಘಾತದಲ್ಲಿ ಸಾವನ್ನಪ್ಪಿದ ನಂತರ ಮತ್ತು ಆತನಿಗೆ ನೀಡಿದ ಭಾಷೆಯಂತೆ ಜೀವಾ (ಶರಣ್) ಎರಡು ಕುಟುಂಬವನ್ನು ಒಂದು ಮಾಡಲು ಮತ್ತು ನರಸಿಂಹನ ಬಳಿ ಅಡಿಯಾಳಾಗಿರುವ ಸ್ನೇಹಿತನ ತಾಯಿ ಮತ್ತು ಸಹೋದರರಿಯರನ್ನು ರಕ್ಷಿಸಲು ಆ ಊರಿಗೆ ಎಂಟ್ರಿ ಕೊಡುತ್ತಾನೆ.

  ಇಬ್ಬರು ನಾಯಕಿಯರು

  ಇಬ್ಬರು ನಾಯಕಿಯರು

  ಅಲ್ಲಿ ನರಸಿಂಹನ ಸಹೋದರಿ ಸ್ಮಿತಾ (ಶುಭಾ ಪೂಂಜಾ) ಮತ್ತು ವೀರಪ್ಪನ ಮಗಳು ಗೀತಾ (ಶೃತಿ ಹರಿಹರನ್) ಇಬ್ಬರಿಗೂ ನಾಯಕನ ಮೇಲೆ ಪ್ರೇಮಾಂಕುರವಾಗುತ್ತದೆ. ಒಬ್ಬರನ್ನು ಶರಣ್ ಪಟಾಯಿಸಿದರೆ, ಇನ್ನೊಬ್ಬಳು ನಾಯಕನ ಹಿಂದೆ ಗಿರಿಗಿಟ್ಲೆ ಹೊಡೆಯುತ್ತಿರುತ್ತಾಳೆ.

  ನಾಯಕ ಯಶಸ್ವಿಯಾಗುತ್ತಾನಾ?

  ನಾಯಕ ಯಶಸ್ವಿಯಾಗುತ್ತಾನಾ?

  ಎರಡು ಕುಟುಂಬವನ್ನು ಒಂದು ಮಾಡಲು ಹರಸಾಹಸ ಪಡುವ ನಾಯಕ, ಕೊನೆಗೆ ಕುಟುಂಬವನ್ನು ಒಂದು ಮಾಡುತ್ತಾನಾ? ಇಬ್ಬರು ನಾಯಕಿಯರಲ್ಲಿ ಯಾರು ನಾಯಕನಿಗೆ ಒಲಿಯುತ್ತಾರೆ ಎನ್ನುವುದನ್ನು ನಾವು ಹೇಳುವುದಿಲ್ಲ, ಥಿಯೇಟರ್ ನಲಿ ವೀಕ್ಷಿಸಿ ಆಯ್ತಾ..

  ಸಂಕಲನ

  ಸಂಕಲನ

  ಮೇಲೆ ಹೇಳಿದಂತೆ ಚಿತ್ರ ಅಲ್ಲಲ್ಲಿ ಬೋರ್ ಹೊಡೆಸುವುದು ದೀಪು ಎಸ್ ಕುಮಾರ್ ಅವರ ಎಡಿಟಿಂಗ್ ಕೆಲಸ ಸರಿಯಾಗಿ ಕೆಲಸ ಮಾಡದೇ ಇದ್ದದ್ದು. ಸುಮಾರು 160 ನಿಮಿಷದ ಸಿನಿಮಾದಲ್ಲಿ ಅಲ್ಲಲ್ಲಿ ಬರುವ ಕೆಲವು ದೃಶ್ಯಗಳಿಗೆ ಮುಲಾಜಿಲ್ಲದೇ ಕತ್ತರಿ ಪ್ರಯೋಗಿಸಬಹುದಾಗಿತ್ತು.

  ಹಾಡುಗಳು

  ಹಾಡುಗಳು

  ಇನ್ನು ಚಿತ್ರದ ಹಾಡುಗಳು ಇನ್ನೊಂದು ಮೈನಸ್ ಡ್ರಾಬ್ಯಾಕ್. ಪುನೀತ್ ಹಾಡಿರುವ ಇಂಟ್ರಡಕ್ಷನ್ ಹಾಡೊಂದನ್ನು ಬಿಟ್ಟರೆ, ಅರ್ಜುನ್ ಜನ್ಯ ನೀಡಿರುವ ಯಾವ ಹಾಡುಗಳೂ ಮನಸಲ್ಲಿ ಉಳಿಯುವುದಿಲ್ಲ. ಆದರೆ ಹಾಡಿಗೆ ಬಳಸಿಕೊಂಡ ಲೋಕೇಶನ್ ಚೆನ್ನಾಗಿವೆ. ರಘು ನಿಡುವಳ್ಳಿಯವರ ಸಂಭಾಷಣೆ, ಸ್ವಾಮಿ ಜೆ ಅವರ ಫೋಟೋಗ್ರಾಫಿ, ಸಾಹಸ ದೃಶ್ಯಗಳು, ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಚಿತ್ರಕ್ಕೆ ಪೂರಕವಾಗಿವೆ.

  ಕಲಾವಿದರ ಬಗ್ಗೆ

  ಕಲಾವಿದರ ಬಗ್ಗೆ

  ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ಅರುಣ್ ಸಾಗರ್, ಭಜರಂಗಿ ಲೋಕಿ, ಮಧು ಗುರುಸ್ವಾಮಿ, ಕುರಿ ಪ್ರತಾಪ್, ಸಾಧು ಕೋಕಿಲಾ, ಮೈಕೋ ನಾಗರಾಜ್, ಜಹಾಂಗೀರ್, ಪದ್ಮಜಾ ರಾವ್ ಮುಂತಾದವರು ನಿರ್ದೇಶಕರು ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅದರಲ್ಲೂ, ಮಧು ಗುರುಸ್ವಾಮಿ ನಟನೆ ಮಾತ್ರ ಅಚ್ಚಳಿಯದೇ ಉಳಿಯುತ್ತದೆ, ನಮ್ಮ ಕಡೆಯಿಂದ ಅವರ ನಟನೆಗೊಂದು ಶಹಬ್ಬಾಸ್..

  ನಿರ್ದೇಶಕರಿಗೊಂದು ಕಿವಿಮಾತು

  ನಿರ್ದೇಶಕರಿಗೊಂದು ಕಿವಿಮಾತು

  ಕುಟುಂಬ ಸಮೇತ ಸಿನಿಮಾ ನೋಡಲು ಬರುವವರಿಗೆ ಚಿತ್ರದಲ್ಲಿನ ಅರುಣ್ ಸಾಗರ್, ಸಾಧು, ಶುಭಾ ಪೂಂಜಾ ನಡುವಿನ ಡಬಲ್ ಮೀನಿಂಗ್ ಡೈಲಾಗ್/ ದೃಶ್ಯಗಳು ಮುಜುಗರ ಉಂಟುಮಾಡುತ್ತದೆ ಎಂದರೆ ಹರ್ಷ ಬೇಸರಿಸಿಕೊಳ್ಳಬಾರದು. ಇನ್ನು ಆಕ್ಷನ್ ಚಿತ್ರದಿಂದ, ಕಾಮಿಡಿ ಪ್ರಧಾನ ಚಿತ್ರ ನಿರ್ದೇಶಿಸುವುದು ಸುಲಭದ ಮಾತಲ್ಲ, ಒಟ್ಟಾರೆಯಾಗಿ ನಿರ್ದೇಶಕರು ಚಿತ್ರವನ್ನು ಚೆನ್ನಾಗಿ ದಡ ಸೇರಿಸಿದ್ದಾರೆ.

  ಚಿತ್ರ ಹೇಗಿದೆ?

  ಚಿತ್ರ ಹೇಗಿದೆ?

  ಶರಣ್ ಅಭಿನಯ ಲೀಲಾಜಾಲ, ಶೃತಿ ಮತ್ತು ಶುಭಾ ಪೂಂಜಾ ನಟನೆ ಚೆನ್ನಾಗಿದೆ. ಶರಣ್ ಸಿಕ್ಸ್ ಪ್ಯಾಕ್ ಕ್ಲೈಮ್ಯಾಕ್ಸಿನಲ್ಲಿ ಅಷ್ಟಾಗಿ ವರ್ಕೌಟ್ ಆಗಿಲ್ಲ. ಚಿತ್ರದಲ್ಲಿ ಅಲ್ಲಲ್ಲಿ ಲೋಪದೋಷಗಳಿದ್ದರೂ, ಚಿತ್ರ ನೋಡಲು ಏನೂ ತೊಂದರೆಯಿಲ್ಲ. ಹಬ್ಬದ ರಜೆಯಲ್ಲಿ ಪುರುಷೊತ್ತು ಮಾಡಿಕೊಂಡು ಚಿತ್ರ ನೋಡಿ, ಚಿತ್ರತಂಡದ ಬೆನ್ನುತಟ್ಟಿ.

  English summary
  Kannada movie review : Sharan starer and Harsha directed Jai Maruthi 800.
  Saturday, September 29, 2018, 16:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X