»   » ನಾ ನೋಡಿದ ಸಿನಿಮಾ - ಶಿವಣ್ಣ ಅಭಿನಯದ 'ಶಿವ'

ನಾ ನೋಡಿದ ಸಿನಿಮಾ - ಶಿವಣ್ಣ ಅಭಿನಯದ 'ಶಿವ'

By: ವಿಠಲ ಸಾಲ್ಯಾನ್
Subscribe to Filmibeat Kannada
Kannada movie Shiva reader review
Rating:
2.5/5
ಮುಕ್ಕಾಲು ತುಂಬಿದ ಚಿತ್ರಮಂದಿರದಲ್ಲಿ ಬೆಳಗಿನ ಪ್ರದರ್ಶನ ನೋಡಲು ಹೋದಾಗ ಅಲ್ಲಿ ಗಮನ ಸೆಳೆದ ಅಂಶವೇನಂದರೆ ಶಿವರಾಜ್ ಕುಮಾರ್ ಅಭಿಮಾನಿಗಳ ಸಡಗರ ಸಂಭ್ರಮ. ಅಭಿಮಾನಿಗಳನ್ನು 'ಅಭಿಮಾನಿ ದೇವರುಗಳು' ಎಂದು ಅಣ್ಣಾವ್ರು ಕರೆಯುತ್ತಿದ್ದದ್ದು ಇದಕ್ಕೇ ಇರಬೇಕು.

ಇಪ್ಪತ್ತು ನಿಮಿಷದ ನಂತರ ಶಿವಣ್ಣ ತೆರೆಗೆ ಎಂಟ್ರಿ ಕೊಟ್ಟಾಗಿನಿಂದ ಕ್ಲೈಮ್ಯಾಕ್ಸ್ ವರೆಗೂ ಶಿವಣ್ಣನ ಒಂದೊಂದು ಡೈಲಾಗ್, ಫೈಟ್, ಡ್ಯಾನ್ಸ್ ಗಳಿಗೆ ಅಭಿಮಾನಿಗಳಿಂದ ಸಿಗುವ ಕರತಾಡನ, ಸಿಳ್ಳೆ, ಚಪ್ಪಾಳೆ ನೋಡಿದರೆ ಇಂಥಹ ಅಭಿಮಾನಿಗಳನ್ನು ಪಡೆದ ನಮ್ಮ ಕನ್ನಡದ ನಾಯಕರುಗಳೇ ಧನ್ಯರು.

ಚಿತ್ರದಲ್ಲಿ ಇರುವ ಬಹಳಷ್ಟು ಮೈನಸ್ ಪಾಯಿಂಟ್ ಗಳ ನಡುವೆ ಚಿತ್ರದಲ್ಲಿರುವ ಒಳ್ಳೆಯ ಅಂಶವೇನಂದರೆ ಚಿತ್ರದುದ್ದಕ್ಕೂ ಶಿವಣ್ಣ ಅವರ ಲೀಲಾಜಾಲ ಅಭಿನಯ. ಪರಕಾಯ ಪ್ರವೇಶ ಮಾಡಿದ ಅವರ ಮಾಗಿದ ನಟನೆ. ಸಾಹಸ ದೃಶ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಪರಿ, ಎಲ್ಲದ್ದಕ್ಕೂ ಮಿಗಿಲಾಗಿ ಐವತ್ತರ ವಯಸಿನಲ್ಲೂ ಅವರ ಡ್ಯಾನ್ಸ್.

ಯುವಕರನ್ನೂ ನಾಚಿಸುವಂತೆ ಅವರು ಹಾಕಿರುವ ಸ್ಟೆಪ್ ನೋಡಿದರೆ ಸ್ಯಾಂಡಲ್ ವುಡ್ ಸ್ಟಾರ್ ಶಿವಣ್ಣನಿಗೆ ಯಾರೂ ಪೈಪೋಟಿ ಇಲ್ಲ ಎಂದರೆ ಶಿವಣ್ಣನ ವಿರೋಧಿಗಳು ಯಾರಾದರೂ ಇದ್ದರೆ ಬೇಸರಿಸಿ ಕೊಳ್ಳಬಾರದು.

60% ಮನೋರಂಜನೆ, 40% ಬೋರ್ ಎನ್ನಬಹುದಾದ ಈ ಚಿತ್ರದಲ್ಲಿ ಶಿವಣ್ಣನ ಜೊತೆ ತೆರೆ ಮೇಲೆ ರವಿಶಂಕರ್, ಬುಲೆಟ್ ಪ್ರಕಾಶ್, ಶೋಭರಾಜ್ ಇದ್ದಾಗ ಚಿತ್ರ ಒಳ್ಳೆ ಮನೋರಂಜನೆಯಲ್ಲಿ ಸಾಗುತ್ತೆ. ರವಿಶಂಕರ್ ಅವರ ಅಬ್ಬರದ ಡೈಲಾಗ್ ಮುಂದುವರಿದ ಭಾಗ ಈ ಚಿತ್ರದಲ್ಲಿ ಮುಂದುವರಿದಿದ್ದರೂ ಅದು ಚಿತ್ರಕಥೆಗೆ ಪೂರಕವಾಗಿದೆ.

ಮಕ್ಕಳನ್ನು ಮತ್ತು ವೃದ್ದರನ್ನು ಭಿಕ್ಷಾಟನೆಗೆ ದೂಡುವ ಸಮಾಜಘಾತುಕರ ವಿರುದ್ದ ಮತ್ತು ಅದಾದ ಸ್ವಲ್ಪ ಹೊತ್ತಿನಲ್ಲೇ ಕ್ರೈಸ್ತರ ಸ್ಮಶಾನದಲ್ಲಿ ನಡೆಯುವ ಸಾಹಸ ಸನ್ನಿವೇಶಗಳು ರೋಮಾಂಚನಕಾರಿಯಾಗಿದೆ.

ಸತ್ಯ ಹೆಗಡೆ ಅವರ ಕ್ಯಾಮೆರ ಕೈಚಳಕ, ಇಮ್ರಾನ್ ಮತ್ತು ಹರ್ಷ ಅವರ ನೃತ್ಯ ಸಂಯೋಜನೆ, ಗುರುಕಿರಣ್ ಅವರ ಎರಡು ಹಾಡುಗಳು, ಲೋಕೇಶನ್, ಚಿತ್ರದ ಶ್ರೀಮಂತಿಕೆಯ ಬಗ್ಗೆ ದೂಸ್ರಾ ಮಾತೇ ಬೇಡ.

ಆದರೂ ಚಿತ್ರ ಶಿವಣ್ಣ ಅಭಿಮಾನಿಗಳ ಹೃದಯ ಹೌಸ್ ಫುಲ್ ಮಾಡುವಲ್ಲಿ ಎಡವಿದೆಯೇ ಎನ್ನುವುದು. ಚಿತ್ರಕ್ಕೆ ಏನೇನು ಬೇಕೋ ಎಲ್ಲವೂ ಇದೆ. ಆದರೆ ಮಿಸ್ ಆಗಿರೋದು ಚಿತ್ರಕಥೆ ಮತ್ತು ನಿರೂಪಣೆ. ನಾಯಕನಿಗೆ ಸಮನಾಗಿ ನಾಯಕಿಗೂ ಚಿತ್ರದಲ್ಲಿ ಪಾತ್ರವಿದೆ. ಆದರೆ ಈ ಪಾತ್ರಕ್ಕೆ ರಾಗಿಣಿ ಆಯ್ಕೆ ಮಾಡಿರುವುದು ಅಷ್ಟೇನೂ ಸರಿಯಿಲ್ಲ ಎನ್ನುವುದು ನನ್ನ ಅಭಿಪ್ರಾಯ.

ಒಂದು ವೇಳೆ ಈ ಪಾತ್ರಕ್ಕೆ ರಾಧಿಕಾ ಪಂಡಿತ್, ಗೋಲ್ಡನ್ ಗರ್ಲ್ ರಮ್ಯಾ ಅವರನ್ನು ಚಿತ್ರತಂಡ ಆಯ್ಕೆ ಮಾಡಿದ್ದರೆ ಶಿವಣ್ಣಗೆ ಪೈಪೋಟಿ ನೀಡುವಷ್ಟು ನಟನೆ ಹೊರ ತೆಗೆಯಬಹುದಾಗಿತ್ತು. ಐಟಂ ಸಾಂಗಿನಲ್ಲಿ ಬರುವ ಸಹ ನೃತ್ಯಗಾತಿಗರಿಗಿಂತ ಕಡಿಮೆ ಉಡುಪಿನಲ್ಲಿ ಚಿತ್ರಾದ್ಯಂತ ಆವರಿಸಿಕೊಳ್ಳುವ ರಾಗಿಣಿಯ ಗ್ಲಾಮರ್ ಲುಕ್ ಓಕೆ ಆದರೆ ಇಷ್ಟು ಕಡಿಮೆ ಬಟ್ಟೆಬರೆಗಳು ಮೈಮೇಲೆ ಯಾಕೆ? ಬಹುಷಃ ಚಿತ್ರದಲ್ಲಿ ರಾಗಿಣಿ ಹಾಕಿರುವ ಬಟ್ಟೆಗಳನ್ನು ಒಗೆಯಲು ವಾಷಿಂಗ್ ಮೆಷಿನ್ ಅವಶ್ಯಕೆ ಬೇಕಾಗದು ಮಿಕ್ಸಿ ಸಾಕಾಗಬಹುದೇನೋ..

ರಂಗಾಯಣ ರಘು ನಟನೆ ಸ್ವಲ್ಪ ಅವಶ್ಯಕತೆಗಿಂತ ಜಾಸ್ತಿಯಿದೆ. ಕನ್ನಡ ಚಿತ್ರವೊಂದಕ್ಕೆ ತೆಲುಗನ್ನು ಇಷ್ಟು ಬಳಸಿಕೊಂಡಿದ್ದು ಅತಿರೇಕ ಅನಿಸದೇ ಇರದು. ದೀಪು ಅವರ ಎಡಿಟಿಂಗ್ ವರ್ಕ್ ಚಿತ್ರದ ಇನ್ನೊದು ವೀಕ್ ಪಾಯಿಂಟ್.

ಚಿತ್ರದ ಎರಡನೇ ಹಾಡು ತೆರೆಗೆ ತಂದಿದ್ದು ಪಕ್ಕಾ unprofessional. ಚಿತ್ರಕಥೆಗೆ ಯಾವ ರೀತಿಯಲ್ಲೂ ಈ ಹಾಡು ಪೂರಕವಾಗಿರಲಿಲ್ಲ. ಕ್ಲೈಮ್ಯಾಕ್ಸ್ ನಲ್ಲಿ ಬಳಸಿದ ಶಿವನ ಬೃಹತ್ ವಿಗ್ರಹ ಕೂಡಾ ಅಷ್ಟೇನೂ ಗಮನ ಸೆಳೆಯುವುದಿಲ್ಲ. ಚಿತ್ರದಲ್ಲಿ ಶಿವಣ್ಣ ಬಳಸಿದ ಕೆಲವೊಂದು ಸಂಭಾಷಣೆಗಳು ಸನ್ನಿವೇಶಕ್ಕೆ ಹೋಲಿಕೆಯಾಗದೆ ಯಾರಿಗೋ ಟಾರ್ಗೆಟ್ ಮಾಡಿದ ಹಾಗಿದೆ.

ಶಿವಣ್ಣ ಎನ್ನುವ ಮಾಸ್ ಹೀರೋ, ಬೇಕಾದನ್ನು ಕೊಟ್ಟ ನಿರ್ಮಾಪಕ, ಒಳ್ಳೆ ತಂತ್ರಜ್ಞಾನರ ನಡುವೆ ನಿರ್ದೇಶಕ ಓಂ ಪ್ರಕಾಶ್ ರಾವ್ 24 ಕ್ಯಾರೆಟ್ ಚಿತ್ರ ನೀಡುವಲ್ಲಿ ಎಡವಿದ್ದಾರೆ ಎಂದರೆ ಯಾರೂ ಅನ್ಯಥಾ ಭಾವಿಸಬಾರದು ಮುಖ್ಯವಾಗಿ ಶಿವಣ್ಣ ಅಭಿಮಾನಿಗಳು.

English summary
Kannada movie user review by Sri. Vittal Saliyan. Its amazing to watch Shivarajkumar dance like a teenager in movie Shiva. Except for week screenplay the movie promise entertainment, especially for fans of Shivarajkumar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada