For Quick Alerts
  ALLOW NOTIFICATIONS  
  For Daily Alerts

  ಮನಸೆಳೆವ ಮನರಂಜನೆಯ ಮೈಸೂರ್ ಪಾಕ್ 'ಸ್ನೇಹಿತರು'

  |

  Rating:
  3.5/5
  ಕೆ ರಾಮ್ ನಾರಾಯಣ್ ನಿರ್ದೇಶನದ 'ಸ್ನೇಹಿತರು' ಚಿತ್ರದ ಮೊದಲ ಶೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೌರವ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಶೇಷ ಡಾನ್ಸ್ ನಲ್ಲಿ ಬಹುಭಾಷಾ ತಾರೆ ನಿಖಿತಾ ತುಕ್ರಲ್ ಕಾಣಿಸಿಕೊಂಡಿರುವ ಬಹುತಾರಾಗಣದ ಈ ಚಿತ್ರದಲ್ಲಿ ಹಾಸ್ಯ ಹೇರಳವಾಗಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಿನಿಮಾ ನಿರೂಪಣೆ ಎಲ್ಲವೂ ಹಿತಮಿತವಾಗಿ ಸಂಗಮಿಸಿದ್ದು ಪ್ರೇಕ್ಷಕರು ಕೊಟ್ಟ ಕಾಸಿಗೆ ಮೋಸದ ಮಾತೇ ಇಲ್ಲ. ಮದುವೆಗಿಂತ ಮೆರವಣಿಗೆಗೇ ಹೆಚ್ಚು ಆದ್ಯತೆ ನೀಡಿದ್ದಾರೆ ಅನ್ನಿಸಿದರೂ ಮೆರವಣಿಗೆ ನೋಡುವಂತಿದೆ, ಮೆಚ್ಚುವಂತಿದೆ.

  ಅನಾಥ ಮಕ್ಕಳನ್ನು ಪ್ರೀತಿಸಬೇಕು, ಅಪ್ಪ-ಅಮ್ಮ ಇಲ್ಲದ ಅವರಿಗೆ ಆ ಪ್ರೀತಿಯನ್ನು ತೋರಿಸಿ ಮಾನವೀಯತೆ ಮೆರೆಯಬೇಕು ಎಂಬುದು ಕಥೆಯ ಒನ್ ಲೈನ್ ಸ್ಟೋರಿ. ಅನಾಥ ಮಕ್ಕಳಿಗೆ ಪ್ರೀತಿ, ದಯೆ, ಅನುಕಂಪ ತೋರಿಸದೇ ಬೇರೇನೋ ಮಾಡಲು ಹೊರಟರೆ ಏನೇನಾಗುತ್ತದೆ ಎಂಬುದು ಚಿತ್ರಕಥೆ. ಕೆಲಸವಿಲ್ಲದ, ಕೆಲಸಕ್ಕೆ ಬಾರದ ನಾಲ್ಕು 'ಟೋಪಿ'ವಾಲಾಗಳು ಇಂತಹ ವಿಷಯದಲ್ಲಿ ತಮ್ಮ ಮೂಗುಗಳನ್ನು ತೂರಿಸಿದರೆ ಆಗಬಾರದ್ದು ಆಗುತ್ತದೆ, ಆಗಬೇಕಿದ್ದು ಆಗುವುದಿಲ್ಲ.

  ಇಂಥ ಸೂಕ್ಷ್ಮ ಸಂಗತಿಗಳಲ್ಲಿ ದುರಂತ ಹೇಗೆಲ್ಲಾ ಆಗಬಹುದು ಎಂಬುದನ್ನು ತೋರಿಸಿ, ಹೇಗೆ ಆಗಬಾರದು ಎಂಬುದನ್ನು ತಿಳಿಸುತ್ತಾ ಸಾಗುವ 'ಸ್ನೇಹಿತ' ಎಂಬ ಅನಾಥ ಹುಡುಗನ ಕಥೆ ಹಾಗೂ 'ಸ್ನೇಹಿತರು' ಎಂಬ ನಾಲ್ಕು ನಾಯಕರ ಜೀವನ 'ಜರ್ನಿ'ಯ ವ್ಯಥೆಯನ್ನು ಚಿತ್ರಕಥೆ ಮೂಲಕ ಹೇಳುವ ಚಿತ್ರವೇ ಸ್ನೇಹಿತರು. ಅನಾಥ ಹುಡುಗ, ನಾಲ್ಕು ಖತರ್ನಾಕ್ ನಾಯಕರಿಗೆ ಜೊತೆಯಾಗುವ ಸುಂದರಿ, ಚಿತ್ರದ ಕಥೆಯ ಆರಂಭ ಹಾಗೂ ಅಂತ್ಯಕ್ಕೆ ಕಾರಣವಾಗುವ ಅವಳಿಗೊಬ್ಬ ವೀರ-ಶೂರ-ಹಮ್ಮೀರ ಎಸಿಪಿ, ಕಥೆಯಲ್ಲಿ ಆಟಕ್ಕೆ, ಓಟಕ್ಕೆ ಕಾರಣವಾಗುವ ಕೆಲವು ಪಾತ್ರಗಳ ಮೂಲಕ ವಿಶಿಷ್ಠವಾಗಿ ಹೆಣೆದ 'ಸ್ನೇಹಿತರು' ಚಿತ್ರ, ಪ್ರೇಕ್ಷಕರಿಗೆ ಮೆಚ್ಚುಗೆಯಾಗುತ್ತದೆ.

  ನಿರ್ದೇಶನದ ಬಗ್ಗೆ: ನಿರ್ದೇಶಕ ಕೆ ರಾಮ್ ನಾರಾಯಣ್, ನಿರ್ಮಾಪಕರ ಮಗ ಸೌಂದರ್ಯ ಜಗದೀಶ್ ಆರ್ ಅವರ ಮಗ ಮಾ ಸ್ನೇಹಿತ್ ಗೆ 'ಸ್ಕೋಪ್' ಕೊಡುವಂತೆ ಕಥೆ ಹೆಣೆದಿರುವುದು ಪಕ್ಕಾ ಆದರೂ ಎಲ್ಲೂ ಕಥೆಯನ್ನು ಕೆಡಿಸಿಲ್ಲ. ಅಷ್ಟೇ ಅಲ್ಲ, ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಎಲ್ಲದರಲ್ಲೂ ಬಿಗಿಹಿಡಿತ ಕಾಯ್ದುಕೊಂಡಿರುವ ನಿರ್ದೇಶಕರು ಪ್ರೇಕ್ಷಕರ ಮನರಂಜನೆ ಬಗ್ಗೆಯೇ ಎಲ್ಲಕ್ಕಿಂತ ಹೆಚ್ಚು ಒತ್ತುಕೊಟ್ಟಿದ್ದಾರೆ. ಹೀಗಾಗಿ ಯಾವುದೇ ಪಾತ್ರವೂ ಸೊರಗಿಲ್ಲ, ಚಿತ್ರ ಎಲ್ಲೂ ಹೆಚ್ಚಾಗಿ ಬೋರು ಹೊಡೆಸುವುದಿಲ್ಲ.

  ಕಲಾವಿದರ ಬಗ್ಗೆ: ಚಿತ್ರದಲ್ಲಿ ಗೌರವ ನಟರಾಗಿ 'ದರ್ಶನ' ನೀಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಎಲ್ಲರಿಗಿಂತ ಹೆಚ್ಚು ಶಿಳ್ಳೆ ಚಪ್ಪಾಳೆ ಗಿಟ್ಟಿಸಿದ್ದಾರೆ. ಸಮರ್ಥ ಎಸಿಪಿ ಪಾತ್ರದಲ್ಲಿ ಸಖತ್ ಮಿಂಚಿರುವ ದರ್ಶನ್, ಚಿತ್ರದ ಆರಂಭ ಹಾಗೂ ಅಂತ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಮಾತ್ರವಲ್ಲದೇ ಸಂಪೂರ್ಣ ಚಿತ್ರಕ್ಕೂ ನ್ಯಾಯ ಒದಗಿಸಿದ್ದಾರೆ. ವಿಶೇಷ ಡಾನ್ಸ್ ನಲ್ಲಿ ಕಾಣಿಸಕೊಂಡಿರುವ ನಿಖಿತಾ, ಚೆನ್ನಾಗಿ ಮೈಬಳುಕಿಸಿದ್ದಾರೆ. ಸ್ನೇಹಿತರು ಕೇಂದ್ರಬಿಂದು ಮಾ ಸ್ನೇಹಿತ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ದೇಹ ಹಾಗೂ ವಯಸ್ಸನ್ನು ಮರೆತು ಚೆನ್ನಾಗಿ ನಟಿಸುವಲ್ಲಿ ಸಫಲರಾಗಿದ್ದಾರೆ

  ಚಿತ್ರಕ್ಕೆ ನಾಯಕರಾಗಿ ನಟಿಸಿರುವ ತರುಣ್ ಚಂದ್ರ, ವಿಜಯರಾಘವೇಂದ್ರ, ರವಿಶಂಕರ್ ಗೌಡ ಹಾಗೂ ಸೃಜನ್ ಲೋಕೇಶ್ ಈ ನಾಲ್ವರೂ ಚೆನ್ನಾಗಿ ನಟಿಸಿದ್ದಾರೆ. ನಾಯಕಿ ಪ್ರಣೀತಾ ತಮ್ಮ ಆಕರ್ಷಕ ಕಣ್ಣನ್ನೇ ಪ್ರೇಕ್ಷಕರನ್ನು ಸೆಳೆದುಬಿಡುವ 'ಬ್ರಹ್ಮಾಸ್ತ್ರ' ಮಾಡಿಕೊಂಡಿದ್ದು ನಟನೆಯೂ ಮೆಚ್ಚುವಂತಿದೆ. ಪೋಷಕ ಪಾತ್ರಗಳಲ್ಲಿ ಕಾಣಿಸಕೊಂಡಿರುವ ನಾಗರಾಜ್ ಅರಸ್, ರಮೇಶ್ ಭಟ್, ಗಿರಿಜಾ ಲೋಕೇಶ್ ಹಾಗೂ ಪುಟ್ಟಪುಟ್ಟ ಪಾತ್ರಗಳಲ್ಲಿ ಬಂದು ಹೋಗುವ ಬುಲೆಟ್ ಪ್ರಕಾಶ್, ಸಾಧುಕೋಕಿಲ, ಶೋಭರಾಜ್, ಧರ್ಮ ಮುಂತಾದವರ ಪಾತ್ರ ಪೋಷಣೆ ಸೂಪರ್.

  ವಿ ಹರಿಕೃಷ್ಣ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಚೆನ್ನಾಗಿವೆ. ಸೋನು ನಿಗಮ್ ಹಾಡಿರುವ 'ಬಡಪಾಯಿ ಹೃದಯಕ್ಕೆ...'ಹಾಡು ಗಮನಸೆಳೆಯುತ್ತದೆ. ಎಂಆರ್ ಸೀನು ಛಾಯಾಗ್ರಹಣ, ಗಣೇಶ್ ಎಂ ಸಂಕಲನ ಹಿತಮಿತವಾಗಿದೆ. ತಮ್ಮ ಮಗನನ್ನೇ ಹಾಕಿಕೊಂಡು ಚಿತ್ರ ಮಾಡಿದ್ದಕ್ಕೋ ಅಥವಾ ನಿಜವಾದ ಸಿನಿಮಾ ಪ್ರೀತಿಯೋ, ಒಟ್ಟಿನಲ್ಲಿ ನಿರ್ಮಾಪಕ ಸೌಂದರ್ಯ ಆರ್ ಜಗದೀಶ್ ಒಂದು ಒಳ್ಳೆಯ ಮನರಂಜನಾತ್ಮಕ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಪಾತ್ರವರ್ಗದ ಮನಮುಟ್ಟುವ ಅಭಿನಯ ಹಾಗೂ ಮನರಂಜನಾತ್ಮಕ ಅಂಶಗಳ ಮೂಲಕ ಗಮನಸೆಳೆಯುವ 'ಸ್ನೇಹಿತರು', ಪ್ರೇಕ್ಷಕರು ಮೆಚ್ಚತಕ್ಕ ಒಂದು ಒಳ್ಳೆಯ ಚಿತ್ರವಾಗಿ ಮೂಡಿಬಂದಿದೆ.

  English summary
  K Ramnarayan Directed, a Comedy Entertainer Kannada movie 'Snehitaru' released today, on 05th October 2012 all over Karnataka. Tarun Chandra, Vijayaraghavendra, Ravishankar Gowda and Srujan Lokesh acted as Heros and Praneetha the Heroine. Read more in this Review...
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X