Don't Miss!
- Sports
ಭಾರತ vs ನ್ಯೂಜಿಲೆಂಡ್: ನಿರ್ಣಾಯಕ ಟಿ20 ಪಂದ್ಯಕ್ಕೆ ಅಡ್ಡಿಯಾಗಲಿದೆಯಾ ಮಳೆ?
- News
7th Pay Commission; ವೇತನ ಶ್ರೇಣಿ, ಹೊಸ ವೇತನ ರಚನೆ ಮಾನದಂಡಗಳು
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Mane Maratakkide Review: ದೆವ್ವದ ಮನೆಯಲ್ಲಿ ನಗುವಿನ ಜಾತ್ರೆ
ದೆವ್ವಗಳು ತುಂಬಿದ ಮನೆ. ಆ ದೆವ್ವಗಳು ಮನೆಯಿಂದ ಹೊರಹಾಕುವ ಸಾಹಸಕ್ಕೆ ಕೈಹಾಕುವ ರಘುಪತಿ-ರಾಘವ-ರಾಜ-ರಾಮ್. ದೆವ್ವಗಳು ಜೊತೆ ಈ ಕಾಮಿಡಿ ಕಲಾವಿದರ ಜುಗಲ್ ಬಂದಿ ಸಖತ್ ಮಜಾ ಕೊಡುತ್ತೆ. ಪೂರ್ತಿ ವಿಮರ್ಶೆ ಮುಂದೆ ಓದಿ....
(ಮಾಹಿತಿ: ತಮಿಳಿನ 'ಪೆಟ್ರೋಮ್ಯಾಕ್ಸ್' ಚಿತ್ರದ ರೀಮೇಕ್)
ಚಿತ್ರ: ಮನೆ ಮಾರಾಟಕ್ಕಿದೆ
ನಿರ್ದೇಶಕ: ಮಂಜು ಸ್ವರಾಜ್
ನಿರ್ಮಾಪಕ: ಎಸ್ ವಿ ಬಾಬು
ಕಲಾವಿದರು: ಚಿಕ್ಕಣ್ಣ, ಸಾಧುಕೋಕಿಲಾ, ಕುರಿ ಪ್ರತಾಪ್, ರವಿಶಂಕರ್ ಗೌಡ, ಶ್ರುತಿ ಹರಿಹರನ್, ಗಿರಿ, ಶಿವರಾಂ, ರಾಜೇಶ್ ನಟರಂಗ ಮತ್ತು ಇತರರು
ಬಿಡುಗಡೆ: ನವೆಂಬರ್ 15, 2019

ದೆವ್ವಗಳು ತುಂಬಿದ ಮನೆಯ ನಾಟಕ ಇದು
ವಿದೇಶದಲ್ಲಿ ನೆಲೆಸಿರುವ ಶ್ರವಣ, ತಮ್ಮ ತಂದೆ-ತಾಯಿ ವಾಸವಾಗಿದ್ದ ಮನೆಯನ್ನು ಮಾರಾಟ ಮಾಡಬೇಕು ಎಂದು ನಿರ್ಧರಿಸುತ್ತಾನೆ. ಆದರೆ, ಆ ಮನೆಯನ್ನು ಖರೀದಿ ಮಾಡಲು ಬರುವವರು ಮನೆಯಲ್ಲಿ ದೆವ್ವದ ಕಾಟ ಇದೆ ಎಂದು ಓಡಿ ಹೋಗ್ತಾರೆ. ಯಾರೂ ಈ ಬಂಗಲೆ ತೆಗೆದುಕೊಳ್ಳಲು ಮುಂದೆ ಬರಲ್ಲ. ಆಗ, ಈ ಮನೆಯನ್ನ ಮಾರಲು ನಾವು ಸಹಾಯ ಮಾಡುತ್ತೇವೆ ಎಂದು ಆ ಮನೆ ಸೇರುವ ನಾಲ್ಕು ಕಲಾಕಾರರು ರಘುಪತಿ (ಚಿಕ್ಕಣ್ಣ), ರಾಘವ (ಸಾಧುಕೋಕಿಲಾ), ರಾಜ (ಕುರಿ ಪ್ರತಾಪ್), ರಾಮ (ರವಿಶಂಕರ್ ಗೌಡ). ಆ ಮನೆಯಲ್ಲಿರುವ ದೆವ್ವಗಳು ಓಡಿಸುತ್ತಾರಾ? ಮನೆ ಮಾರಾಟ ಮಾಡಲು ಈ ನಾಲ್ವರು ಹೇಗೆ ಸಹಾಯ ಮಾಡ್ತಾರೆ ಎನ್ನುವುದೇ ಎರಡೂವರೆ ಗಂಟೆ ಸಿನಿಮಾ.
'ಮನೆ ಮಾರಾಟಕ್ಕಿದೆ' ಟ್ರೈಲರ್: ಕುಂತರೂ ಕಾಮಿಡಿ, ನಿಂತರೂ ಕಾಮಿಡಿ

ದೆವ್ವಗಳು vs ಮನುಷ್ಯರು
ಮನೆ ಮಾರಾಟ ಮಾಡಬೇಕು ಎಂಬ ರಘುಪತಿ-ರಾಘವ-ರಾಜ-ರಾಮ್, ಮನೆ ಮಾರಾಟ ಮಾಡಲು ಬಿಡುವುದಿಲ್ಲ ಎನ್ನುವ ದೆವ್ವಗಳ ಮಧ್ಯೆ ನಡೆಯುವ ಕಾದಾಟ ಭರಪೂರ ಮನರಂಜನೆಯಿಂದ ಕೂಡಿದೆ. ಅದರಲ್ಲೂ ಚಿತ್ರದ ಸೆಕೆಂಡ್ ಹಾಫ್ ನಲ್ಲಿರುವ ದೃಶ್ಯಗಳು ಪ್ರೇಕ್ಷಕರಿಗೆ ಹೊಟ್ಟೆ ನೋವು ಬರಿಸುವಷ್ಟು ನಗು ತರಿಸುತ್ತೆ. ಕುರಿ ಪ್ರತಾಪ್ ಡಬ್ ಸ್ಮ್ಯಾಶ್ ಡೈಲಾಗ್ ಗಳು, ಸಾಧು ಕೋಕಿಲಾ-ರವಿಶಂಕರ್ ಗೌಡ ಆಕ್ಟಿಂಗ್, ಚಿಕ್ಕಣ್ಣನ ಎಕ್ಸ್ ಪ್ರೆಶನ್ ಸಿನಿಮಾಗೆ ನಾಲ್ಕು ಪಿಲ್ಲರ್ ಇದ್ದಂತೆ. ಇವರಿಗೆ ಸಾಥ್ ನೀಡುವ ಶ್ರುತಿ ಹರಿಹರನ್, ಶಿವರಾಂ, ಗಿರಿ ಕೂಡ ಭರ್ಜರಿ ಕಾಮಿಡಿ ಕಿಕ್ ಕೊಡ್ತಾರೆ.

ಕಥೆ, ಲಾಜಿಕ್ ಬಿಟ್ಟಾಕಿ 2 ಗಂಟೆ ನಗಬಹುದು
ಕಥೆ ಏನು, ಅದು ಹಾಗೆ ಇದು ಹಾಗೆ ಎಂಬ ಲಾಜಿಕ್ ಬಿಟ್ಟು ಬರಿ ಸನ್ನಿವೇಶಗಳನ್ನ ಎಂಜಾಯ್ ಮಾಡಿದ್ರೆ ಎರಡೂವರೆ ಗಂಟೆ ಸಖತ್ ಆಗಿ ನಗಬಹುದು. ದೆವ್ವಗಳು ಹೀಗೂ ಇರುತ್ತಾ, ದೆವ್ವಗಳು ಹೀಗಿದ್ದರೆ ಎಷ್ಟು ಮಜಾ ಇರುತ್ತೆ ಎನಿಸುವ ದೃಶ್ಯಗಳು ಕೂಡ ಗಮನ ಸೆಳೆಯುತ್ತೆ. ಬಹುತೇಕ ಕಥೆ ಒಂದೆ ಮನೆಯಲ್ಲಿ ನಡೆಯುವುದರಿಂದ ಅದಕ್ಕೆ ತಕ್ಕಂತೆ ಸಿನಿಮಾಟೋಗ್ರಫಿ (ಸುರೇಶ್ ಬಾಬು), ಹಿನ್ನಲೆ ಸಂಗೀತ (ಅಭಿಮಾನ್ ರಾಯ್) ವರ್ಕೌಟ್ ಆಗಿದೆ. ಇದು ಭಯಂಕರ ಹಾರರ್ ಅಲ್ಲದೇ ಹೋದರು, ಅಲ್ಲೊಂದು ಇಲ್ಲೊಂದು ದೃಶ್ಯದಲ್ಲಿ ಭಯ ಪಡಿಸುವ ಅನುಭವವೂ ಆಗುತ್ತೆ.

ಶ್ರುತಿ ಹರಿಹರನ್ ಪಾತ್ರವೇನು?
ಶ್ರುತಿ ಹರಿಹರನ್ ಪಾತ್ರವೇನು ಎಂಬುದು ಕುತೂಹಲವಾಗಿಯೇ ಉಳಿಯಲಿ. ಬಟ್, ನಗಿಸುವ ಈ ಗ್ಯಾಂಗ್ ನಲ್ಲಿ ಶ್ರುತಿ ಅವರದ್ದು ಪಾಲು ಇದೆ. ಹೊಸ ರೀತಿ ಅವರನ್ನ ನೋಡಬಹುದು. ಕಾರುಣ್ಯ ರಾಮ್ ಹಾಗೆ ಬಂದು ಒಂದು ಹಾಡಿಗೆ ಹೆಜ್ಜೆ ಹಾಕಿ ಹೀಗೆ ಹೋಗ್ತಾರೆ. ಕರಿ ಸುಬ್ಬು, ಉಗ್ರಂ ಮಂಜು, ನೀನಾಸಂ ಅಶ್ವಥ್ ಸೇರಿದಂತೆ ಹಲವರು ನಟಿಸಿದ್ದಾರೆ.

ಮಂಜು ಸ್ವರಾಜ್ ಕಾಮಿಡಿ ಸೂತ್ರ ವರ್ಕೌಟ್ ಆಗಿದೆ
ಶಿಶಿರ, ಶ್ರಾವಣಿ ಸುಬ್ರಮಣ್ಯ, ಶ್ರೀಕಂಠ, ಪಟಾಕಿ ಚಿತ್ರಗಳಿಗೆ ಹೋಲಿಸಿಕೊಂಡರೆ ನಿರ್ದೇಶಕ ಮಂಜು ಸ್ವರಾಜ್ ಅವರದ್ದು ಕಂಪ್ಲೀಟ್ ಹೊಸ ಸ್ಟೈಲ್ ಸಿನಿಮಾ. ಔಟ್ ಅಂಡ್ ಔಟ್ ಕಾಮಿಡಿ. ಕಲಾವಿದರ ಸಂಖ್ಯೆಯೂ ಹೆಚ್ಚಿದೆ. ಶ್ರವಣನಾಗಿ ರಾಜೇಶ್ ನಟರಂಗ (ಮನೆ ಮಾಲೀಕ) ಅವರದ್ದು ಚಿತ್ರಕ್ಕೆ ತಿರುವು ನೀಡುವ ಪಾತ್ರದಲ್ಲಿ ಗಮನಾರ್ಹ ಅಭಿನಯ.

ಅಂತಿಮವಾಗಿ ಹೇಳುವುದೇನಂದರೆ...
ದೆವ್ವಗಳನ್ನ ಕಾಮಿಡಿಯಾಗಿ ತೋರಿಸಿರುವ ಅನೇಕ ಸಿನಿಮಾಗಳು ಬಂದಿವೆ. ಇದು ಅದೇ ಜಾನರ್ ಗೆ ಸೇರುವ ಸಿನಿಮಾ. ಭಾರಿ ವಿಶೇಷತೆಗಳು ಇಲ್ಲದೇ ಹೋದರೂ, ಕಾಮಿಡಿ ಕಲಾವಿದರೇ ತುಂಬಿದ ಈ ಚಿತ್ರ ಅಂತಿಮವಾಗಿ ಪ್ರೇಕ್ಷಕನಿಗೆ ಖುಷಿ ಕೊಡುತ್ತೆ. ಟೆನ್ಷನ್, ತಲೆ ನೋವು, ಕೆಲಸದ ಒತ್ತಡ ಇದೆಲ್ಲವನ್ನ ಮರೆಸುವಂತಹ ಚಿತ್ರ ಇದಾಗಿದೆ. ಮನರಂಜನೆ ದೃಷ್ಟಿಯಿಂದ ಮನೆ ಮಾರಾಟಕ್ಕಿದೆ ಸಿನಿಮಾ ಒಳ್ಳೆಯ ಆಯ್ಕೆ. ಫ್ಯಾಮಿಲಿ ಹಾಗೂ ಸ್ನೇಹಿತರ ಜೊತೆ ಈ ಸಿನಿಮಾ ನೋಡಿದ್ರೆ ಮಜಾವೋ ಮಜಾ.