»   » ಪ್ರೀತಿ-ಸಮರಗಳ ನಡುವೆ ನಜ್ಜುಗುಜ್ಜಾಗುವ 'ರಿಕ್ಕಿ'ಗೆ ಸಲಾಂ

ಪ್ರೀತಿ-ಸಮರಗಳ ನಡುವೆ ನಜ್ಜುಗುಜ್ಜಾಗುವ 'ರಿಕ್ಕಿ'ಗೆ ಸಲಾಂ

Posted By: ಸುನೀತಾ ಗೌಡ
Subscribe to Filmibeat Kannada

ಹಿಂದೆ ನಮ್ಮನ್ನು ಬ್ರಿಟಿಷರು ಹೇಗೆ ಆಳಿದರು ತದನಂತರ ಕಮ್ಯನಿಸ್ಟ್ ಪಕ್ಷದವರು ಸಾಮಾನ್ಯ ಜನರನ್ನು ಯಾವ ರೀತಿ ನೋಡಿಕೊಂಡರು ಎಂಬುದರ ಬಗ್ಗೆ ಪರದೆಯ ಮೇಲೆ ಒಂದೊಂದಾಗಿ ದೃಶ್ಯಗಳು ಮೂಡುತ್ತಿದ್ದರೆ, ಅದಕ್ಕೆ ತಕ್ಕುದಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಖಡಕ್ ಧ್ವನಿಯಲ್ಲಿ ಆಗಿನ ಕಾಲದಲ್ಲಿ ಕಮ್ಯುನಿಸಂ ಹೇಗಿತ್ತು ಎಂಬುದರ ಬಗ್ಗೆ ವಿವರಣೆ ನೀಡುತ್ತಿದ್ದರು.

'ಮೋಸಕ್ಕೆ ಮೋಸ, ಹಲ್ಲಿಗೆ ಹಲ್ಲು, ರಕ್ತಕ್ಕೆ ರಕ್ತ ಎಂಬ ಆದರ್ಶ ತತ್ವಗಳನ್ನಾಧರಿಸಿದ ಹೋರಾಟಕ್ಕೆ ಸಾಥ್ ಕೊಡುವ ಕೆಂಪು ಬಾವುಟ. ಜೊತೆಗೆ 'ಲಾಲ್ ಸಲಾಮ್ ಎಂಬ ಉದ್ಘೋಷ'. ಒಂದು ಬದುಕಿನ ದುರಂತ, ಒಂದು ಬದುಕಿನ ಸಂಘರ್ಷ, ಒಂದು ಅಂತಿಮ ಸಮರ ಇದೆಲ್ಲಾ ನಿಮಗೆ 'ರಿಕ್ಕಿ' ಸಿನಿಮಾದುದ್ದಕ್ಕೂ ಕಾಣಸಿಗುತ್ತದೆ.[ರಿಕ್ಕಿ ಮೇನಿಯಾ ಶುರು, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಗುರೂ]

ಇಡೀ ಚಿತ್ರದುದ್ದಕ್ಕೂ ಸಾಗುವ ಮಲೆನಾಡು ಪ್ರದೇಶವಾದ ನೇರ ಬೈಲ್ ನ ಸುಂದರ ಹಸಿರು ಪರಿಸರ ಮತ್ತು "ಬರಡಾದ ಆಗಸಕೆ ಕಾಡಿರುವುದು ಒಂದು ನೆನಪು, ಹುಡುಕಾಟದ ನೆಪದಲ್ಲಿ ಭುವಿಗೆ ಬಂದಿಳಿದು" ಅನ್ನೋ ಸುಂದರವಾದ ಅರ್ಥಪೂರ್ಣ ಡೈಲಾಗ್ ಗಳು ನೀವು ಥಿಯೇಟರ್ ನಿಂದ ಹೊರಬಂದ ಮೇಲೂ ನಿಮಗೆ ಕಾಡಲಾರಂಭಿಸುತ್ತವೆ.

Rating:
4.0/5

ಚಿತ್ರ: 'ರಿಕ್ಕಿ'
ನಿರ್ಮಾಣ: ಎಸ್.ವಿ ಬಾಬು
ಕಥೆ-ಚಿತ್ರಕಥೆ-ನಿರ್ದೇಶನ: ರಿಶಬ್ ಶೆಟ್ಟಿ
ಛಾಯಾಗ್ರಹಣ : ವೆಂಕಟೇಶ್ ಅಂಗುರಾಜ್
ಸಂಗೀತ : ಅರ್ಜುನ್ ಜನ್ಯ
ಸಂಕಲನ : ಎನ್.ಎಮ್ ವಿಶ್ವ
ತಾರಾಗಣ : ರಕ್ಷಿತ್ ಶೆಟ್ಟಿ, ಹರಿಪ್ರಿಯಾ, ವೀಣಾ ಸುಂದರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ರವಿ ಕಾಳೆ, ಶಶಿಕಲಾ, ಸಾಧುಕೋಕಿಲಾ, ಮಂಜುನಾಥ್, ದಿನೇಶ್ ಮಂಗಳೂರು, ರಘು ಪಾಂಡೇಶ್ವರ ಮತ್ತು ಇತರರು.
ಬಿಡುಗಡೆ: ಜನವರಿ 22[ಇದಪ್ಪಾ ರಕ್ಷಿತ್ ಶೆಟ್ಟಿ ಅಲಿಯಾಸ್ 'ರಿಕ್ಕಿ' ವರಸೆ ಅಂದ್ರೆ]

ಚಿತ್ರದ ನಾಯಕ-ನಾಯಕಿ ರಿಕ್ಕಿ ಮತ್ತು ರಾಧಾಳ ಪ್ರೇಮಕಥೆಯ ಪಯಣ ಆರಂಭವಾಗೋದು ಬಾಲ್ಯದಿಂದಲೇ..ಮುಂದೇನಾಗುತ್ತೆ ಓದಿ ಕೆಳಗಿನ ಸ್ಲೈಡುಗಳಲ್ಲಿ....

ಚಿತ್ರದ ಕಥಾ ಹಂದರ

ಸುಂದರವಾದ ಎರಡು ಮನಸ್ಸುಗಳಲ್ಲಿ ಪ್ರೀತಿ ಬಾಲ್ಯದಿಂದಲೇ ಚಿಗುರೊಡೆದಿರುತ್ತೆ, ಅದಕ್ಕೆ ಮನೆಯವರ ಸಾಥ್ ಕೂಡ ಅಷ್ಟೇ ಇರುತ್ತೆ. ಸಾಮಾನ್ಯವಾಗಿ ಯಾರಾದರೂ ಹವ್ಯಾಸಗಳನ್ನು ತಮ್ಮ ಗೀಳು ಅಂದುಕೊಂಡರೆ, ಇಲ್ಲಿ ನಾಯಕ ರಿಕ್ಕಿ ಅಲಿಯಾಸ್ ರಾದಾಕೃಷ್ಣ ತನ್ನ ಮುದ್ದು ಹುಡುಗಿ ರಾಧೆಯನ್ನು ಬೆಳೆಯುತ್ತಾ ಬೆಳೆಯುತ್ತಾ ಗೀಳಾಗಿ ಮೈಗೂಡಿಸಿಕೊಳ್ಳುತ್ತಾನೆ.

ಎರಡು ಮನೆಯಲ್ಲಿ ಒಪ್ಪಿಗೆ

ಇವರಿಬ್ಬರ ಈ ಪ್ರೀತಿಗೆ ಎರಡು ಮನೆಯವರು 'ಮದುವೆ' ಎಂಬ ಬೆಸುಗೆ ಹಾಕಲು ನಿರ್ಧರಿಸಿ ನಿಶ್ಚಿತಾರ್ಥ ಮಾಡುತ್ತಾರೆ. ಇದೇ ಸಂಭ್ರಮದಲ್ಲಿರಬೇಕಾದರೆ, ಈ ಸುಂದರವಾದ ಬದುಕಿಗೆ SEZ (Special Economic Zone) ಎಂಬ ಬಿರುಗಾಳಿ ಬೀಸುತ್ತದೆ. ಮೊದಲೇ ಮಲೆನಾಡಿನ ಹಳ್ಳಿಯ ಪ್ರದೇಶ ಕಾಡಿಗೆ ತುಂಬಾ ಹತ್ತಿರದ ಊರುಗಳು ಆಗಿರುವುದರಿಂದ ಕೇಂದ್ರ ಸರ್ಕಾರದ ಈ ಯೋಜನೆಗೆ ಹಳ್ಳಿ ಬಲಿಪಶು ಆಗುತ್ತವೆ.

ಮುಂದೆ.....

ತದನಂತರ ಈ ಬಿರುಗಾಳಿ ನಾಯಕಿಯ ಬದುಕಿಗೂ ಬೀಸುತ್ತದೆ. ತನ್ನ ಅಸ್ತಿತ್ವದ ಜೊತೆಗೆ ತನ್ನವರನ್ನು ಕಳೆದುಕೊಳ್ಳುವ ನಾಯಕಿ ರಾಧೆಯ ಸುಂದರ ಬದುಕು ವಿಭಿನ್ನ ತಿರುವು ಪಡೆದುಕೊಳ್ಳುತ್ತದೆ. ಅಷ್ಟಕ್ಕೂ ಏನಾಯಿತು?, ಕರ್ನಾಟಕದಲ್ಲಿರುವ ಪಶ್ಚಿಮ ಘಟ್ಟ ಪ್ರದೇಶಕ್ಕೆ ಮುಳುವಾಗಿರುವ ನಕ್ಸಲಿಸಂಗೂ ರಾಧೆಗೂ ಏನು ಸಂಬಂಧ?, ಆನಂತರ ಅವಳ ಮದುವೆ ಆಯ್ತಾ ಅಥವಾ ಕನಸಾಗಿಯೇ ಉಳಿಯಿತೇ?, ನಾಯಕ ರಿಕ್ಕಿ ಏನಾದ? ನಕ್ಸಲಿಸಂ ವಿರುದ್ಧ ರಿಕ್ಕಿ ಹೋರಾಡುತ್ತಾನ? ಮುಂತಾದ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಥಿಯೇಟರ್ ನಲ್ಲಿ ಉತ್ತರ ದೊರೆಯುತ್ತದೆ.

ರಕ್ಷಿತ್ ಶೆಟ್ಟಿ ನಟನೆ ಹೇಗಿದೆ?

'ಉಳಿದವರು ಕಂಡಂತೆ' ಚಿತ್ರದ ನಂತರ ಮತ್ತದೇ ಶೇಡ್ ನಲ್ಲಿ ಭಾಷೆ ಸಾಗಿದೆ. ಕೊಂಚ ಮಂಗಳೂರು ಕನ್ನಡದಲ್ಲಿ ಮಾತನಾಡಿ ರಕ್ಷಿತ್ ಶೆಟ್ಟಿ ಅವರು ಪ್ರೇಕ್ಷರಿಂದ ವಿಶಲ್ ಗಿಟ್ಟಿಸಿಕೊಂಡಿದ್ದಾರೆ. ಪ್ರತಿಯೊಂದು ಮಾತನ್ನು ಯೋಚಿಸಿ ಅರ್ಥಪೂರ್ಣವಾಗಿ ಮಾತನಾಡುವ ರಕ್ಷಿತ್ ನಟನೆಗೆ ಫುಲ್ ಮಾರ್ಕ್ಸ್ ಕೊಡಬಹುದು. ಕಾಡಿನ ಮತ್ತು ಕಾಡಿನ ಜೀವಿಗಳ ಬಗ್ಗೆ ಅಧ್ಯಯನ ಮಾಡುವ 'ರಿಕ್ಕಿ' ಗೆ ಕಾಡಿನ ಮೇಲೆ ತುಂಬಾ ಅಕ್ಕರೆ ಇದೆ ಎಂಬುದನ್ನು ಅವರ ಈ ಡೈಲಾಗ್ ('ಈ ಕಾಡೇನು ನಿಮ್ಮ ಅಪ್ಪನ ಮನೆ ಆಸ್ತಿನಾ'?) ತಿಳಿಸಿಕೊಡುತ್ತದೆ.

ನಟಿ ಹರಿಪ್ರಿಯಾ ನಟನೆ

ನಟಿ ಹರಿಪ್ರಿಯಾ ಅವರು ಈ ಸಿನಿಮಾದಲ್ಲಿ ಎರಡು ಶೇಡ್ ನಲ್ಲಿ ಮಿಂಚಿದ್ದು ಫಸ್ಟ್ ಹಾಫ್ ನಲ್ಲಿ ಫುಲ್ ನಾಚಿಕೆ ಸ್ವಭಾವ, ತುಂಬಾ ಸೆನ್ಸಿಟೀವ್ ಆಗಿ ತನ್ನ ಇನಿಯನ ಜೊತೆ ಮುದ್ದು ಮುದ್ದಾಗಿ ಕಾಣಿಸಿಕೊಂಡರೆ, ಸೆಕೆಂಡ್ ಹಾಫ್ ನಲ್ಲಿ ನಿಮಗೆ ಒಂದು ಅಚ್ಚರಿ ಕಾದಿರುತ್ತದೆ. ಫಸ್ಟ್ ಹಾಫ್ ನಲ್ಲಿ ನೀವು ನೋಡಿದ ಹರಿಪ್ರಿಯಾ ಇವರೇನಾ ಅನ್ನೋ ಅನುಮಾನ ನಿಮಗೆ ಕಾಡಿದ್ರು ಕಾಡಬಹುದು. ಒಟ್ನಲ್ಲಿ ಹರಿಪ್ರಿಯಾ ಅವರು ತಮ್ಮ ಪಾತ್ರದ ಒಳಗೆ ಪರಕಾಯ ಪ್ರವೇಶ ಮಾಡಿದ್ದಾರೆ ಅಂದ್ರು ತಪ್ಪಿಲ್ಲ.

ನಕ್ಸಲೈಟ್ ಪ್ರಮೋದ್ ಶೆಟ್ಟಿ

ನಕ್ಸಲೈಟ್ ಗುಂಪಿನ ನಾಯಕ ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಪ್ರಮೋದ್ ಶೆಟ್ಟಿ ಅವರು ಪಕ್ಕಾ ನಕ್ಸಲೈಟ್ ಥರಾನೇ ಮಿಂಚಿದ್ದಾರೆ. ತಮ್ಮ ಜೀವನಕ್ಕೆ ಯಾರಿಂದ ಅನ್ಯಾಯ ಆಗಿದೆಯೋ ಅವರಿಗೆ ತಮ್ಮದೇ ಮಾರ್ಗದಲ್ಲಿ ಪಾಠ ಕಲಿಸಲು ಹೊಂಚು ಹಾಕಿರುವ ಈತ ತನ್ನದೇ ರೀತಿಯಲ್ಲಿ ನೊಂದಿರುವ ಬೇರೆಯವರನ್ನು ತನ್ನ ಗುಂಪಿಗೆ ಸೇರಿಸಿ ಮುಯ್ಯಿಗೆ ಮುಯ್ಯಿ ಎಂಬ ಸಿದ್ಧಾಂತವನ್ನು ಕಲಿಸಿರುತ್ತಾನೆ. ಕಾಡಿನ ಮಧ್ಯೆ ಕೆಂಪು ಬಾವುಟ ಮತ್ತು 'ಲಾಲ್ ಸಲಾಮ್' ಎಂಬ ಉದ್ಘೋಷ ಈತನ ಧ್ಯೇಯ. ಪ್ರಮೋದ್ ಶೆಟ್ಟಿ ಅವರ ನಟನೆಯಲ್ಲಿ ಎರಡು ಮಾತಿಲ್ಲ.

ಉಳಿದವರು

ಇನ್ನುಳಿದಂತೆ ಅಚ್ಯುತ್ ಕುಮಾರ್, ವೀಣಾ ಸುಂದರ್, ಸಾಧು ಮಹಾರಾಜ್, ಶಶಿಕಲಾ ಸೇರಿದಂತೆ ಎಲ್ಲರೂ ತಮ್ಮ ತಮ್ಮ ಪಾತ್ರವನ್ನು ಚೆನ್ನಾಗೇ ನಿಭಾಯಿಸಿದ್ದಾರೆ. ಚಿಕ್ಕದಾಗಿ ಚೊಕ್ಕ ರೋಲ್ ಮಾಡಿ ಮನಸ್ಸಲ್ಲಿ ಉಳಿಯುತ್ತಾರೆ.

ಸಂಗೀತ

ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಎಲ್ಲಾ ಹಾಡುಗಳು ಸೂಪರ್ ಹಿಟ್. ಇಡೀ ಚಿತ್ರದುದ್ದಕ್ಕೂ ಸಾಗುವ ಮೇಕಿಂಗ್ ಹಾಗು ವಿಭಿನ್ನ ಕಥಾಹಂದರಗಳ ನಡುವೆ ಸಂಗೀತ ಕೂಡ ಪ್ಲಸ್ ಪಾಯಿಂಟ್. ಸಂದರ್ಭಕ್ಕೆ ಅನುಸಾರವಾಗಿ ಹಾಡುಗಳನ್ನು ಬಳಸಲಾಗಿದೆ. ಎಲ್ಲೂ ಅಲ್ಲಲ್ಲಿ ತುರುಕಿದಂತೆ ಕಂಡು ಬರಲ್ಲ. ಹಿನ್ನಲೆ ಸಂಗೀತಗಳೂ ಸಂದರ್ಭಕ್ಕೆ ಹೇಳಿಮಾಡಿಸಿದಂತಿದೆ. 'ಮಲಗೆ ಮಲಗೆ' ಹಾಡು ನಿಮ್ಮನ್ನು ರೊಮ್ಯಾಂಟಿಕ್ ಲೋಕಕ್ಕೆ ಕರೆದೊಯ್ದರೆ 'ಜೀವ ನೀನು' ಹಾಡು ನಿಮ್ಮ ಕಣ್ಣಲ್ಲಿ ನೀರು ತರಿಸುತ್ತದೆ.

'ಫೈಟ್-ಆಕ್ಷನ್' ಇದ್ಯಾ?

ಫಸ್ಟ್ ಹಾಫ್ ನಲ್ಲಿ ನಿಮಗೆ ಬೇಕು ಅಂದ್ರು ಎಲ್ಲೂ ಪೈಟ್ ಆಕ್ಷನ್ ಗಳ ಸುಳಿವಿಲ್ಲ. ಅದೇ ಸೆಕೆಂಡ್ ಹಾಫ್ ನಲ್ಲಿ ಊಟಕ್ಕೆ ಉಪ್ಪಿನಕಾಯಿ ಇರಲೇಬೇಕು ಅನ್ನುವಂತೆ ಸಂದರ್ಭಕ್ಕೆ ಅನುಸಾರವಾಗಿ ಫೈಟ್ ಆಕ್ಷನ್ ಇದೆ. ಮಿಕ್ಕಂತೆ ಕಾಮ್ ಆಗಿ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಾ ಸಿನಿಮಾ ಸಾಗುತ್ತದೆ. ಅದು ಬಿಟ್ಟರೆ ಆಗಾಗ ಕೇಳಿ ಬರುವ ಢಿಂ ಢಿಂ ಎಂದು ಗನ್ ನಿಂದ ಹೊರಡುವ ಬುಲೆಟ್ ಗಳ ಸದ್ದು.

ನಿಜಾಯಿತಿಗೆ ಹತ್ತಿರವಿದ್ಯಾ?

ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈಗಲೂ ನಕ್ಸಲಿಸಂ ಸಮಸ್ಯೆ ಇದ್ದು ಅಲ್ಲಿರುವ ಕೆಲವೊಂದು ಏರಿಯಾವನ್ನು ಕರ್ನಾಟಕ ಸರ್ಕಾರ ನಕ್ಸಲೈಟ್ ಏರಿಯಾ ಎಂಬುದಾಗಿ ಪರಿಗಣಿಸಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಸವಣಾಲು, ಕಾರ್ಕಳ ತಾಲೂಕಿನ ನಾರಾವಿಯ 'ಈದು' ಎಂಬ ಪ್ರದೇಶದಲ್ಲಿ ಪೊಲೀಸರಿಗೆ ಸವಾಲಾದ 'ನಕ್ಸಲಿಸಂ' ಈಗಲೂ ಇದೆ. ಇನ್ನು ಅದೇ ಮಾದರಿಯಲ್ಲಿ ನೈಜವಾಗಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ತುಂಬಾ ಕಷ್ಟಕರವಾದ ಒಂದು ವಿಷಯವನ್ನು ಎತ್ತಿಕೊಂಡು ತುಂಬಾ ನಾಜೂಕಾಗಿ ಯಾರಿಗೂ ನೋವಾಗದಂತೆ, ಯಾವುದೇ ವಿಷಯಕ್ಕೆ ಚ್ಯುತಿ ಬರದಂತೆ ಸಿನಿಮಾ ಮಾಡಿರುವ ನಿರ್ದೇಶಕ ರಿಶಬ್ ಶೆಟ್ಟಿ ಅವರನ್ನು ಮೆಚ್ಚಲೇಬೇಕು.

ಕ್ಯಾಮರಾ ಹೇಗೆ?

ಇಡೀ ಸಿನಿಮಾದ ಪ್ಲಸ್ ಪಾಯಿಂಟ್ ಕ್ಯಾಮರಾ ಕೆಲಸ. ಒಂದು ದಟ್ಟ ಕಾಡಲ್ಲಿ ಯಾವುದೇ ಆಂಗಲ್ ನಲ್ಲಿ ಯಾವ ರೀತಿ ಬೇಕಾದರೂ ಚಿತ್ರೀಕರಣ ಮಾಡಬಹುದು ಎಂಬುದನ್ನು ಛಾಯಾಗ್ರಾಹಕ ವೆಂಕಟೇಶ್ ಅಂಗುರಾಜ್ ತೋರಿಸಿಕೊಟ್ಟಿದ್ದಾರೆ. ಜೊತೆಗೆ ಪಶ್ಚಿಮ ಘಟ್ಟದ ಹಸಿರು ಹೊದಿಕೆಯನ್ನು ಕ್ಯಾಮಾರ ಕಣ್ಣಲ್ಲಿ ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಕಾಡಿನ ಹಾದಿಯಲ್ಲಿ ಕಾಲುವೆಯಲ್ಲಿ ಹರಿಯುವ ನೀರಿನ ಮಧ್ಯೆ ಬೈಕ್ ಓಡಿಸುವ ದೃಶ್ಯಗಳನ್ನು ಸಲೀಸಾಗಿ ಚಿತ್ರೀಕರಿಸಲಾಗಿದೆ.

ಕಡೆಯವರೆಗೂ ಪ್ರೇಕ್ಷಕರನ್ನು ಹಿಡಿದು ಕೂರಿಸುವ ಪಾಯಿಂಟ್

ರಿಕ್ಕಿಯ ಎದೆಯ ಗೂಡಲ್ಲಿ ಬೆಚ್ಚಗೆ ಇದ್ದ ರಾಧ ಎಂಬ ಪಾರಿವಾಳ ಕಾಡಿಗೆ ಸೇರಿರುತ್ತೆ ಅದು ಮತ್ತೆ ಎದೆಯ ಗೂಡನ್ನು ಸೇರುತ್ತಾ? ನಕ್ಸಲರ ಅಟ್ಟಹಾಸಕ್ಕೆ ಕೊನೆ ಹಾಡುವವರು ಯಾರು ಎಂಬಿತ್ಯಾದಿ ಪ್ರಶ್ನೆಗಳಿಗೆ ಪ್ರೇಕ್ಷಕರಿಗೆ ಉತ್ತರ ದೊರೆಯುವುದು ಕಡೆಗೆ. ಕ್ಷಣ ಕ್ಷಣಕ್ಕೂ ಕುತೂಹಲ ಹುಟ್ಟಿಸುವ ಚಿತ್ರದಲ್ಲಿ ಪ್ರೇಕ್ಷಕರಿಗೆ ಬೋರ್ ಎಂಬ ಪದವೇ ಇಲ್ಲ.

ಚಿತ್ರದ ಪ್ಲಸ್ ಪಾಯಿಂಟ್

ಎಲ್ಲಾ ಸಿನಿಮಾಗಳಲ್ಲಿ ತೋರಿಸುವ ಅದೇ ಪ್ರೀತಿ-ಪ್ರೇಮವನ್ನು ಇಲ್ಲಿ ನಿರ್ದೇಶಕರು ಅತ್ಯಂತ ವಿಭಿನ್ನವಾಗಿ ಸಿಂಪಲ್ ಆಗಿ ತೋರಿಸಿದ್ದಾರೆ. ನಾಚಿಕೆ ಸ್ವಭಾವದ ಹುಡುಗಿ ತನ್ನ ತಂದೆ ತಾಯಿ ಮತ್ತು ತನ್ನ ಇನಿಯನ ಪ್ರೀತಿ ಅಂತ ಇದ್ದ ನಾಯಕಿ ಮುಂದೆ ಪರಿಸ್ಥಿತಿಯ ರುದ್ರನರ್ತನಕ್ಕೆ ಹೇಗೆ ಬಲಿಯಾಗುತ್ತಾಳೆ ಅನ್ನೋದನ್ನ ಸುಂದರವಾಗಿ ತೋರಿಸಿದ್ದು, ಮತ್ತು ಕಾಮಿಡಿಗೂ ಅಷ್ಟಾಗಿ ಒತ್ತು ಕೊಡದೇ ಕೇವಲ ಪ್ರೇಕ್ಷಕರಿಗೆ ಬೋರಾಗದೆ ಇರಲಿ ಅನ್ನೋ ಕಾರಣಕ್ಕೆ ಅಲ್ಲಲ್ಲಿ ಎಷ್ಟು ಬೇಕೋ ಅಷ್ಟೇ ಕಾಮಿಡಿ ದೃಶ್ಯಗಳು, ಎಲ್ಲವೂ ಇತಿಮಿತಿಯಲ್ಲಿ ಸಾಗುವುದೇ ಇಡೀ ಚಿತ್ರದ ಪ್ಲಸ್ ಪಾಯಿಂಟ್.

ಮೈನಸ್ ಪಾಯಿಂಟ್

ನಾಯಕ ನಾಯಕಿರ ಕಾಸ್ಟ್ಯೂಮ್ ನಿಂದ ಹಿಡಿದು ಚಿತ್ರದ ಮೇಕಿಂಗ್ ವರೆಗೂ ಎಲ್ಲವೂ ಒಂದು ಬೌಂಡರಿ ಒಳಗೆ ಇರುವುದರಿಂದ ಎಲ್ಲೂ ನಿಮಗೆ ಮೈನಸ್ ಪಾಯಿಂಟ್ ಅಂತ ಅನ್ನಿಸೋದಿಲ್ಲ. ಪ್ರೇಕ್ಷಕರ ಅಭಿಪ್ರಾಯದ ಮೇರೆಗೆ ಕ್ಲೈಮ್ಯಾಕ್ಸ್ ಹಾಗಿರಬಾರದಿತ್ತು ಅನ್ನೋದು ಬಿಟ್ಟರೆ ಮಿಕ್ಕಂತೆ ಎಲ್ಲವೂ ಓಕೆ.

ಒಟ್ಟಾರೆ 'ರಿಕ್ಕಿ'

'ಉಳಿದವರು ಕಂಡಂತೆ' ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರ ಗೆಳೆಯನ ಪಾತ್ರ ವಹಿಸಿದ್ದ ನಟ ಕಮ್ ನಿರ್ದೇಶಕ ರಿಶಬ್ ಶೆಟ್ಟಿ ಅವರು ಮೊಟ್ಟ ಮೊದಲ ಬಾರಿಗೆ ಆಕ್ಷನ್ -ಕಟ್ ಹೇಳಿರುವ 'ರಿಕ್ಕಿ' ಸಿನಿಮಾ ಖಂಡಿತ ನೋಡಲೇಬೇಕಾದ ಸಿನಿಮಾ. ಮೊದಲ ನಿರ್ದೇಶನದಲ್ಲೇ ತುಂಬು ಭರವಸೆ ಮೂಡಿಸಿದ್ದಾರೆ ರಿಶಬ್ ಶೆಟ್ಟಿ. 'ಉಳಿದವರು ಕಂಡಂತೆ'ಯಲ್ಲಿ 'ಎಂತದ ಶೂಟ್ ಮಾಡ್ಬೇಕಾ'? ಅಂತ ಕೈಯಲ್ಲಿ ಹಿಡಿದಿದ್ದ ಅದೇ ಗನ್ ಇಲ್ಲೂ ಬಂದಿದೆ. ಇನ್ನೊಂದು ವಿಶೇಷ ಅಂದರೆ ಚಿತ್ರದಲ್ಲಿ ರಿಶಬ್ ಅವರು ನಟಿಸಿದ್ದಾರೆ. ಒಟ್ನಲ್ಲಿ ಸಿನಿಮಾ ನೋಡಿ. ಹಸಿರು ಪರಿಸರ ಮತ್ತು ಸಿಂಪಲ್ ಆಗಿರುವ ಲವ್ ಸ್ಟೋರಿ ಇರುವುದರಿಂದ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.

English summary
Kannada Movie 'Ricky' Review. Kannada Actor Rakshit Shetty, Actress Haripriya in the lead role. The movie is directed by Rishab Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada