For Quick Alerts
  ALLOW NOTIFICATIONS  
  For Daily Alerts

  83 Movie Review: 1983ರ ಹಿರೋಗಳಿಗೆ ಮತ್ತೊಮ್ಮೆ ಗೌರವ

  |

  2011 ರ ವಿಶ್ವಕಪ್ ಗೆಲುವನ್ನು ಸಂಭ್ರಮಿಸಿರುವ ಭಾರತದ 1980ರ ನಂತರದ ತಲೆಮಾರಿಗೆ, 1983ರ ವಿಶ್ವಕಪ್ ಏಕೆ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದು ಎಂಬುದು ತಿಳಿಯದು. ಕೇವಲ ಒಂದೇ ಒಂದು ವಿಶ್ವಕಪ್ ಮ್ಯಾಚ್ ಗೆದ್ದಿದ್ದ ತಂಡವೊಂದು ದೈತ್ಯ ತಂಡಗಳಿಗೆ ಸೆಡ್ಡು ಹೊಡೆದು ವಿಶ್ವಕಪ್ ಗೆದ್ದು ಬಂದ ರೋಚಕ ಕತೆಯದು. ಈ ಅದ್ಭುತ ಕತೆಗೆ ಭಾವುಕತೆಯ ಲೇಪ ಹೊದಿಸಿ ಸುಂದರವಾಗಿ ಕಟ್ಟಿಕೊಟ್ಟಿದೆ '83' ಸಿನಿಮಾ.

  ಕಪಿಲ್ ದೇವ್ ಹಾಗೂ ಅವರ ತಂಡ 1983ರಲ್ಲಿ ಅಸಾಧ್ಯವನ್ನು ಸಾಧ್ಯವಾಗಿಸಿದ ಅದ್ಭುತ ಕತೆಯನ್ನು ಪ್ರೇಕ್ಷಕರ ಮನಸ್ಸಿಗೆ ಇಳಿಸಿ ಭಾವುಕಗೊಳಿಸಿ ಕಪಿಲ್ ದೇವ್ ಮತ್ತು ತಂಡಕ್ಕೆ ಮತ್ತೊಮ್ಮೆ ಸಲಾಂ ಹೇಳುವಂತೆ ಮಾಡುತ್ತದೆ ಕಬೀರ್ ಖಾನ್ ನಿರ್ದೇಶನದ '83' ಸಿನಿಮಾ.

  Rating:
  3.5/5

  ಪ್ರೇಕ್ಷಕನಿಗೆ ಗೊತ್ತಿದೆ 1983 ರಲ್ಲಿ ಭಾರತ ವಿಶ್ವಕಪ್ ಗೆದ್ದಿದೆಯೆಂದು, ಹಾಗಿದ್ದರೂ ಸಹ '83' ಸಿನಿಮಾದಲ್ಲಿ ಭಾರತ ತಂಡ ಒಂದೊಂದೇ ಮ್ಯಾಚ್ ಗೆಲ್ಲುತ್ತಾ ಸಾಗಿದಂತೆ ಪ್ರೇಕ್ಷಕ ಮತ್ತಷ್ಟು ಕುತೂಹಲಗೊಳ್ಳುತ್ತಾ ಸಾಗುತ್ತಾನೆ. ವಿಶ್ವಕಪ್ ಗೆಲುವಿನ ಆ ಸವಿಯನ್ನು ಮತ್ತೊಮ್ಮೆ ಸವಿಯಲು ಕಾಯುತ್ತಾನೆ, ಈಗಾಗಲೇ ನಡೆದಿರುವ, ಎಲ್ಲರಿಗೂ ಗೊತ್ತಿರುವ ಘಟನೆಯನ್ನು ಮತ್ತೆ ಅದೇ ಕುತೂಹಲದಿಂದ, ಪ್ರೀತಿಯಿಂದ ನೋಡುವಂತೆ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಕಬೀರ್ ಖಾನ್.

  ಆಟಗಾರರ ಕಷ್ಟಗಳಿಗೆ ಹಾಸ್ಯದ ಲೇಪ

  ಆಟಗಾರರ ಕಷ್ಟಗಳಿಗೆ ಹಾಸ್ಯದ ಲೇಪ

  ಭಾರತದಲ್ಲಿ ಇಂದು ಕ್ರಿಕೆಟ್ ಅತಿದೊಡ್ಡ ಉದ್ಯಮ. ಒಂದೆರಡು ಟೂರ್ನಿ ಆಡಿದ ಆಟಗಾರರು ಸಹ ಮಾಲಾ-ಮಾಲ್ ಆಗಿಬಿಡುತ್ತಾರೆ. ಆದರೆ ಅಂದಿನ ಕ್ರಿಕೆಟ್ ಬೋರ್ಡ್‌ನ ಪರಿಸ್ಥಿತಿ, ಆಟಗಾರರ ಕಷ್ಟಗಳು, ಹಣವಿಲ್ಲದೆ ಪರದಾಟ, ಸರಿಯಾದ ಊಟ ಸಿಗದೆ ಬ್ರೆಡ್-ಉಪ್ಪಿನಕಾಯಿ-ಬಾದಾಮಿ ತಿಂದಿದ್ದು, ಆಟಗಾರರೇ ಬಟ್ಟೆಗಳನ್ನು ಬಾತ್‌ಟಬ್‌ನಲ್ಲಿ ತೊಳೆದುಕೊಂಡಿದ್ದು ಹೀಗೆ ಅಂದಿನ ಕ್ರಿಕೆಟ್ ಆಟಗಾರರ ಪರಿಸ್ಥಿತಿಯನ್ನು ತೋರಿಸುವ ದೃಶ್ಯಗಳು ಸಿನಿಮಾದಲ್ಲಿವೆ. ವಿಶ್ವಕಪ್ ಗೆದ್ದ ತಂಡ ಇಂಗ್ಲೆಂಡ್‌ನಲ್ಲಿ ಪಟ್ಟ ಕಷ್ಟವನ್ನು ಹಾಸ್ಯದ ಲೇಪದೊಂದಿಗೆ ಪ್ರೇಕ್ಷಕರಿಗೆ ದಾಟಿಸಿದ್ದಾರೆ ನಿರ್ದೇಶಕ ಕಬೀರ್ ಖಾನ್.

  ಮೈದಾನದ ಹೊರಗೆ ನಡೆದ ಘಟನೆಗಳ ಬಗ್ಗೆ ಮಾಹಿತಿ

  ಮೈದಾನದ ಹೊರಗೆ ನಡೆದ ಘಟನೆಗಳ ಬಗ್ಗೆ ಮಾಹಿತಿ

  'ಕಪಿಲ್ ಡೆವಿಲ್ಸ್‌'ನ ಸದಸ್ಯರ ತಮಾಷೆ, ಹಾಸ್ಯ ಪ್ರಸಂಗಗಳು, ಕಪಿಲ್ ಹಾಗೂ ಸುನಿಲ್ ಗವಾಸ್ಕರ್ ನಡುವಿನ ಸಂಬಂಧ, ವಿಶ್ವಕಪ್ ತಂಡದ ಮ್ಯಾನೇಜರ್ ಮಾನ್‌ಸಿಂಗ್‌ರ ಹಠ, ತಂಡದ ಮೇಲೆ ಅವರಿಗಿದ್ದ ನಂಬಿಕೆ, ಭಾರತ ತಂಡವನ್ನು ಕೀಳಾಗಿ ಕಂಡಿದ್ದ ಬೋರ್ಡ್ ಸದಸ್ಯರು, ಪತ್ರಕರ್ತರು, ಸೆಮಿಫೈನಲ್‌ಗೆ ಮುಂಚೆಯೇ ರಿಟರ್ನ್ ಟಿಕೆಟ್ ಬುಕ್ ಮಾಡಿದ್ದದ್ದು, ಲಾರ್ಡ್ಸ್‌ ಮೈದಾನದ ಪಾಸ್ ನೀಡದೇ ಹಿಯಾಳಿಸಿದ್ದು, ಹೀಗೆ ಹಲವು 'ಲೆಸ್ಸರ್ ನೋನ್ ಫ್ಯಾಕ್ಟ್'ಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಎಲ್ಲ ಅಂಶಗಳ ಮೂಲಕ 1983ರ ವಿಶ್ವಕಪ್‌ ಮಹತ್ವ ಏನೆಂಬುಬುದನ್ನು ಪ್ರೇಕ್ಷಕನಿಗೆ ವಿವರಿಸುವ ಯತ್ನ ಮಾಡಲಾಗಿದೆ. ಅದು ಯಶಸ್ವಿಯೂ ಆಗಿದೆ.

  ಎಲ್ಲ ಆಟಗಾರರಿಗೂ ಸಮಾನ ಅವಕಾಶ

  ಎಲ್ಲ ಆಟಗಾರರಿಗೂ ಸಮಾನ ಅವಕಾಶ

  ಸಿನಿಮಾದ ಕೇಂದ್ರ ಪಾತ್ರ ಕಪಿಲ್ ದೇವ್ ಆದರೂ ಇತರ ಆಟಗಾರರಿಗೂ ಸಾಕಷ್ಟು ಅವಕಾಶ, ಸ್ಕ್ರೀನ್ ಸ್ಪೇಸ್ ನೀಡಲಾಗಿದೆ. ಕಪಿಲ್ ದೇವ್ ಆಟವನ್ನು ಮಾತ್ರವೇ ಅಲ್ಲದೆ ವಿಶ್ವಕಪ್‌ನಲ್ಲಿ ಇತರ ಆಟಗಾರರು ಆಡಿದ ಒಳ್ಳೆಯ ಇನ್ನಿಂಗ್ಸ್‌ಗಳಿಗೂ ಸಿನಿಮಾದಲ್ಲಿ ಮಹತ್ವ ನೀಡಲಾಗಿದೆ. ಆದರೆ ಕಪಿಲ್‌ ದೇವ್‌ರ ಆಟಕ್ಕೆ ತುಸು ಹೆಚ್ಚಿನ ಸ್ಕ್ರೀನ್ ಸ್ಪೇಸ್ ನೀಡಲಾಗಿದೆ. ಅದರಲ್ಲಿಯೂ ಕಪಿಲ್‌ ದೇವ್‌ರ ಅತ್ಯದ್ಭುತ 175 ನಾಟ್‌ಔಟ್ ಇನ್ನಿಂಗ್ಸ್‌ ಅನ್ನು ಅದ್ಭುತವಾಗಿ ತೋರಿಸಲಾಗಿದೆ. ಈ ಇನ್ನಿಂಗ್ಸ್‌ ಅನ್ನು ಬಿಬಿಸಿ ಕವರ್ ಮಾಡಿರಲಿಲ್ಲವಾದ್ದರಿಂದ ಈ ಅದ್ಭುತ ಇನ್ನಿಂಗ್ಸ್‌ನ ಯಾವುದೇ ವಿಡಿಯೋ ಲಭ್ಯವಿಲ್ಲ. ಆದರೆ ಆ ಅದ್ಭುತ ಇನ್ನಿಂಗ್ಸ್‌ಗೆ ಸಿನಿಮಾದಲ್ಲಿ ಗೌರವ ಸಲ್ಲಿಸಲಾಗಿದೆ.

  ಅದ್ಭುತವಾಗಿ ನಟಿಸಿದ್ದಾರೆ ರಣ್ವೀರ್ ಸಿಂಗ್

  ಅದ್ಭುತವಾಗಿ ನಟಿಸಿದ್ದಾರೆ ರಣ್ವೀರ್ ಸಿಂಗ್

  ಕಪಿಲ್ ದೇವ್ ಪಾತ್ರದಲ್ಲಿ ನಟಿಸಿರುವ ರಣ್ವೀರ್‌ ಸಿಂಗ್ ನಟನೆ ಸಿನಿಮಾದ ಕಳಶ. ಇಡೀಯ ಸಿನಿಮಾದಲ್ಲಿ ಅವರು ಸ್ವತಃ ತಾವೇ ಕಪಿಲ್ ದೇವ್ ಆಗಿಬಿಟ್ಟಿದ್ದಾರೆ. ಕಪಿಲ್‌ ಶೈಲಿಯ ಬೌಲಿಂಗ್, ಅವರಂತೆ ಮಾತನಾಡುವುದು, ಅವರಂತೆ ದೇಹಭಾಷೆ ಎಲ್ಲವನ್ನೂ ಒಟ್ಟಿಗೆ ತಂದಿದ್ದಾರೆ ರಣ್ವೀರ್. ಕಪಿಲ್ ಹೊರತುಪಡಿಸಿದರೆ ಮ್ಯಾನೇಜರ್ ಮಾನ್‌ಸಿಂಗ್ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ಅದ್ಭುತವಾಗಿ ನಟಿಸಿದ್ದಾರೆ. ಕೃಷ್ಣಮಾಚಾರಿ ಶ್ರೀಕಾಂತ್ ಪಾತ್ರದಲ್ಲಿ ತಮಿಳು ನಟ ಜೀವ ನಟನೆಯೂ ಚೇತೋಹಾರೆಯಾಗಿದೆ. ಸಿನಿಮಾದ ಪ್ರತಿಯೊಬ್ಬ ನಟರ ನಟನೆಯೂ ಚೆನ್ನಾಗಿದೆ. ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಸಹ ಇದ್ದಾರೆ ಆದರೆ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯವೇನೂ ಇಲ್ಲ.

  ಸಿನಿಮಾದಲ್ಲಿ 1983ರ ವಿಶ್ವಕಪ್‌ನ ಕೆಲ ಚಿತ್ರಗಳು ವಿಡಿಯೋಗಳನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಲಾಗಿದೆ. ದೇಶಪ್ರೇಮ ಉಕ್ಕಿಸುವಂತೆ ಸಿನಿಮಾದ ಹಾಡುಗಳು, ಸಂಗೀತವಿದೆ. ಸಿನಿಮಾದ ಕ್ಯಾಮೆರಾ ಕೆಲಸ ಸಹ ಅದ್ಭುತವಾಗಿದೆ. ಒಟ್ಟಾರೆಯಾಗಿ '83' ಸಿನಿಮಾವು 1983 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಮತ್ತೊಮ್ಮೆ ಗೌರವ ಸಲ್ಲಿಸಿದೆ ಹಾಗೂ ಈಗಿನ ತಲೆಮಾರಿಗೆ 83ರ ವಿಶ್ವಕಪ್‌ನ ಮಹತ್ವವನ್ನು ಸಾರುತ್ತಿದೆ.

  English summary
  Ranveer Singh, Deepika Padukone starer 83 Hindi movie review in Kannada. Movie is directed by Khabir Khan.
  Friday, December 24, 2021, 19:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X